ಸನ್ಮಾರ್ಗ ವಾರ್ತೆ
ಅಲ್ವಾರ್ ಜಿಲ್ಲೆಯ ಕೊಲಾನಿ (ತೆಲಿಯಾ ಬಾಸ್, ರಘುನಾಥ್ಗಢ) ಗ್ರಾಮದಲ್ಲಿ ಮಾರ್ಚ್ 2ರಂದು ಭೀಕರ ಘಟನೆ ನಡೆದಿದ್ದು, ನೊಗವಾನ್ ಪೊಲೀಸ್ ಠಾಣೆಯ ಸಿಬ್ಬಂದಿ ಬೆಳಿಗ್ಗೆ 6:00 ಗಂಟೆಗೆ ವಾರಂಟ್ ಇಲ್ಲದೆ, ಮಹಿಳಾ ಅಧಿಕಾರಿಗಳ ಹಾಜರಾತಿಯಿಲ್ಲದೇ ದಾಳಿ ನಡೆಸಿದ್ದು, ಈ ವೇಳೆ ನವಜಾತ ಶಿಶುವನ್ನು ಬೂಟಿನಿಂದ ತುಳಿದು ಕೊಲ್ಲಲಾಗಿದೆ. ಸೈಬರ್ ಅಪರಾಧದ ನೆಪದಲ್ಲಿ ಈ ದಾಳಿ ನಡೆದಿದ್ದು, ಇದು ಗ್ರಾಮಸ್ಥರಲ್ಲಿ ಭಯ ಹಾಗೂ ಆಕ್ರೋಶವನ್ನು ಹುಟ್ಟುಹಾಕಿದೆ.
ಈ ಘಟನೆಯ ಹಿನ್ನೆಲೆಯಲ್ಲಿ, ಮಾರ್ಚ್ 10ರಂದು ಜಮಾಅತೆ-ಇಸ್ಲಾಮಿ ಹಿಂದ್ (JIH) ಉಪಾಧ್ಯಕ್ಷ ಪ್ರೊಫೆಸರ್ ಸಲೀಮ್ ಎಂಜಿನಿಯರ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಮೌಲಾನಾ ಶಫಿ ಮದನಿ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿತು. ಅವರು ಮೃತ ಕುಟುಂಬವನ್ನು ಸಾಂತ್ವನ ಹೇಳಿ, ಪರಿಸ್ಥಿತಿಯ ಕುರಿತು ಗ್ರಾಮಸ್ಥರು ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ರಾಜಸ್ಥಾನದ ಮಾಜಿ ಸಚಿವ ನಸ್ರುದ್ದೀನ್ ಅವರು, ಘಟನೆಗೆ ಸಂಬಂಧಿಸಿದ ವಿವರಗಳನ್ನು ನೀಡಿದರು. ನಿಯೋಗವು ದುಃಖಿತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯವನ್ನು ಒದಗಿಸುವುದಾಗಿ ಭರವಸೆ ನೀಡಿತು.
ನಂತರ, ನ್ಯಾಯಕ್ಕಾಗಿ ಜನರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿದ ನೀಡಿದ ಜಮಾಅತ್ ನಾಯಕರು, ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರೊಫೆಸರ್ ಸಲೀಮ್ ಎಂಜಿನಿಯರ್ ಅವರು, “ನ್ಯಾಯಕ್ಕಾಗಿ ಹೋರಾಟ ನಿರಂತರವಾಗಿರಬೇಕು. ದಬ್ಬಾಳಿಕೆಗಾರರು ಜನರ ದಣಿವನ್ನು ಲಾಭಕ್ಕೆ ಬಳಸಲು ಬಿಡಬಾರದು” ಎಂದು ಒತ್ತಿ ಹೇಳಿದರು. ಕಿಡಿಗೇಡಿಗಳು ಸಾಮಾಜಿಕ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದರೂ, ಒಗ್ಗಟ್ಟಿನ ಅಗತ್ಯ ಹೆಚ್ಚು ಇದೆ. ಜನರು ಹತಾಶೆಗೊಳಗಾಗದೇ ಧೈರ್ಯವಾಗಿ ನ್ಯಾಯಕ್ಕಾಗಿ ಹೋರಾಡಬೇಕೆಂದು ಅವರು ಕರೆ ನೀಡಿದರು.
ಕೊನೆಗೆ, ಜಮಾಅತ್ ನಿಯೋಗವು ನವಜಾತ ಶಿಶುವಿನ ಕ್ರೂರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು. ಈ ಸಂದರ್ಭದಲ್ಲಿ, ಮಾಜಿ ಸಚಿವ ನಸ್ರುದ್ದೀನ್, ವಕೀಲ ಲಿಯಾಕತ್, ಮೌಲಾನಾ ತಾಹಿರ್, ಒಬೈದೂರ್ ರೆಹಮಾನ್ (ಸಹಾಯಕ ನಾಜೀಮ್, ಜಿಲ್ಲಾ ಮೇವತ್, ಹರಿಯಾಣ) ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.












