ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಅ.4: ಭಾರತ ಪಾಕಿಸ್ತಾನದ ನಡುವೆ ಅಣ್ವಸ್ತ್ರ ಯುದ್ಧ ನಡೆದರೆ ಒಂದು ವಾರದಲ್ಲಿ 50 ರಿಂದ 125 ದಶ ಲಕ್ಷ ಜನರು ಹತ್ಯೆಯಾಗುವರು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ.
ಇದು ಎರಡನೆ ವಿಶ್ವ ಮಹಾಯುದ್ಧಕ್ಕಿಂತಲೂ ಹೆಚ್ಚು ಭೀಕರವಾಗಲಿದೆ. ಮಾತ್ರವಲ್ಲ ಜಾಗತಿಕ ಹವಾಮಾನವನ್ನೇ ಅಣು ಯುದ್ಧ ಅಡಿಮೇಲುಗೊಳಿಸುವುದು. ಎಂಬುದಾಗಿ ಅಮೆರಿಕದ ಕೊಲರಡೊ ಬೋಲಾರ್ ಯುನಿವರ್ಸಿಟಿ ಮತ್ತು ರಡ್ಗರ್ಸ್ ಯುನಿವರ್ಸಿಟಿಯ ಸಂಶೋಧಕರು ಮುನ್ನೆಚ್ಚರಿಕೆ ನೀಡಿದ್ದಾರೆ.
ಈಗ ಭಾರತ ಪಾಕಿಸ್ತಾನದ ಬಳಿ ತಲಾ 150 ಅಣ್ವಸ್ತ್ರಗಳಿವೆ. ಅದು 2025ಕ್ಕೆ ತಲಾ 200 ಆಗುತ್ತದೆ ಎಂದು ಸಯನ್ಸ್ ಅಡ್ವಾನ್ಸ್ ಎಂಬ ಜರ್ನಲ್ನಲ್ಲಿ ಯುನಿವರ್ಸಿಗಳ ಸಂಶೋಧಕರು ಲೇಖನದಲ್ಲಿ ತಿಳಿಸಿದ್ದಾರೆ. 2025ರಲ್ಲಿ ಭಾರತ ಪಾಕಿಸ್ತಾನ ಯುದ್ಧ ಮಾಡಿದರೆ ಆಗುವ ಪರಿಣಾಮವನ್ನು ಸಂಶೋಧಕರು ವಿವರಿಸಿದ್ದಾರೆ.
ಅಣು ಅಸ್ತ್ರಗಳು ಸ್ಫೋಟಗೊಂಡಾಗ ವಾತಾವರಣದಲ್ಲಿ ದಶಲಕ್ಷ ಟನ್ ಸೂಕ್ಷ್ಮ ಕಾರ್ಬೊನ್ ಧೂಳು ವಿಶ್ವಾದ್ಯಂತ ವ್ಯಾಪಿಸಿಕೊಳ್ಳಲಿದೆ. ಇದು ಭೂಮಿಗೆ ಬರುವ ಸೂರ್ಯ ಕಿರಣಗಳ ಶೇ.35ರಷ್ಟು ತಡೆಯುತ್ತದೆ. ಇದರಿಂದ ಭೂಮಿಯ ಉಷ್ಣತೆ ಕಡಿಮೆ ಯಾಗುತ್ತದೆ. ಜಗತ್ತಿನಲ್ಲಿ ಮಳೆಯ ಪ್ರಮಾಣ ಶೇ.15ರಿಂದ ಶೇ.30ರಷ್ಟು ಕಡಿಮೆಯಾಗುತ್ತದೆ. ಇದು ವಿವಿಧ ಕ್ಷೇತ್ರಗಳಿಗೆ ಹಾನಿಕರವಾಗಲಿದೆ.
ಇದು ಸಸ್ಯಗಳ ಬೆಳವಣಿಗೆಗೂ ಬಾಧಕವಾಗಲಿದ್ದು ಹತ್ತು ವರ್ಷವಾದರೂ ಈ ಕಾರ್ಬೊನ್ ಧೂಳು ವಾತಾವರಣದಲ್ಲಿ ಇರುತ್ತದೆ. ಈಗ ಒಂಬತ್ತು ದೇಶಗಳಲ್ಲಿ ಅಣು ಅಸ್ತ್ರಗಳಿವೆ. ಭಾರತ-ಪಾಕಿಸ್ತಾನ ಅಣ್ವಸ್ತ್ರಗಳ ಸಂಖ್ಯೆಯ ಕ್ರಮವನ್ನು ಮೀರಿ ಹೆಚ್ಚಿಸಿವೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.












