ಸನ್ಮಾರ್ಗ ವಾರ್ತೆ
ಲಂಡನ್ನಲ್ಲಿ ಭಾರತೀಯ ಮುಸ್ಲಿಂ ಯುವತಿಯರು ಸ್ವಾತಂತ್ರ್ಯ ದಿನವನ್ನು ಆಚರಿಸಿದ ವಿಡಿಯೋ ವೈರಲ್ ಆಗಿದೆ. ಲಂಡನ್ನಿನ ರಸ್ತೆಯಲ್ಲಿ ಈ ಯುವತಿಯರು ಸೇರಿದ್ದಾರೆ. ಭಾರತೀಯ ಧ್ವಜವನ್ನು ಹಾರಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮಂದಿ ಈ ಸಂಭ್ರಮವನ್ನು ಹಾಳುಗೆಡವಲು ಯತ್ನಿಸಿದ್ದಾರೆ. ಈ ಜಟಾಪಟಿಯ ವಿಡಿಯೋ ವೈರಲ್ ಆಗಿದೆ.
ಯುವತಿಯರು ಶಾಂತಿಯುತವಾಗಿ ಸಂಭ್ರಮಾಚರಣೆ ನಡೆಸುತ್ತಿದ್ದಾಗ ಪಾಕಿಸ್ತಾನಿಗಳು ಭಾರತದ ಧ್ವಜವನ್ನು ಈ ಯುವತಿಯರಿಂದ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಆದರೆ ಯುವತಿಯರು ಬಿಡಲಿಲ್ಲ. ಅವರು ವಿರೋಧಿಸಿದ್ರು. ಮಾತ್ರ ಅಲ್ಲ ಹಿಂದುಸ್ತಾನ್ ಜಿಂದಾಬಾದ್ ಎಂದು ಪದೇ ಪದೇ ಘೋಷಿಸಿದರು. ಈ ಕುರಿತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಯುವತಿಯರ ಧೈರ್ಯ ಮತ್ತು ದೇಶಪ್ರೇಮವನ್ನು ಸೋಶಿಯಲ್ ಮೀಡಿಯಾದಲ್ಲಿ ಶ್ಲಾಘಿಸಲಾಗಿದೆ.
ಭಾರತ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದರೆ ಪಾಕಿಸ್ತಾನ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ದಿನದ ವ್ಯತ್ಯಾಸದಲ್ಲಿ ಎರಡು ರಾಷ್ಟ್ರಗಳು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವುದರಿಂದಾಗಿ ವಿದೇಶಗಳಲ್ಲಿರುವ ಎರಡು ರಾಷ್ಟ್ರಗಳ ನಾಗರಿಕರ ನಡುವೆ ವಾಗ್ವಾದಗಳು ನಡೆಯುವುದು ಆಗಾಗ ಕಾಣಿಸುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಾಗರಿಕರ ನಡುವೆ ಲಂಡನ್ ನಲ್ಲಿ ಈ ಬಗೆಯ ವಾತಾವರಣ ಏರ್ಪಟ್ಟಿರುವುದು ಇದು ಮೊದಲಲ್ಲ. ಈ ಹಿಂದೆಯೂ ಇಂತಹ ಸನ್ನಿವೇಶಕ್ಕೆ ಈ ಎರಡು ದೇಶಗಳ ನಾಗರಿಕರು ಸಾಕ್ಷಿಯಾಗಿದ್ದಾರೆ. ಪುಲ್ವಾಮ ಭಯೋತ್ಪಾದನಾ ದಾಳಿ ನಡೆದಾಗ ಮತ್ತು ಆ ಬಳಿಕ ಆಪರೇಷನ್ ಸಿಂಧೂರ್ ನಡೆದಾಗಲೂ ಇಂತಹ ಘರ್ಷಣೆಯ ಸ್ಥಿತಿ ಏರ್ಪಟ್ಟಿತ್ತು. ಎರಡೂ ದೇಶಗಳ ನಾಗರಿಕರು ತಮ್ಮ ತಮ್ಮ ರಾಷ್ಟ್ರಗಳ ಪರವಾಗಿ ಬೆಂಬಲ ಘೋಷಿಸಿದ್ದು ಘರ್ಷಣೆಯ ಸ್ವರೂಪಕ್ಕೆ ಬಂದು ನಿಂತಿತ್ತು. ಆ ಬಳಿಕ ಪೊಲೀಸರು ಬಂದು ಘರ್ಷಣೆಯನ್ನು ತಪ್ಪಿಸಿದ್ದರು.












