ಸಂಬಂಧಗಳನ್ನು ಕೆಡಿಸುವ ವಾರೀಸು ಸೊತ್ತು

0
543

ಲೇಖಕಿ: ಖದೀಜ ನುಸ್ರತ್

ಮಕ್ಕಳ ಮಧ್ಯೆ ಸಮಾನತೆ ಪಾಲಿಸಲು ಇಸ್ಲಾಮ್ ಧರ್ಮವು ಬಹಳ ಪ್ರಾಮುಖ್ಯತೆ ನೀಡುತ್ತದೆ. ಇದು ಅವರ ನಡುವೆ ಉತ್ತಮ ಸಂಬಂಧವನ್ನುಂಟು ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಣ, ಉಡುಗೊರೆ, ಸಾಲ ಮತ್ತಿತರ ರೀತಿಯಲ್ಲಿ ಸಂಪತ್ತಿಗೆ ಹಲವು ಸಂಬಂಧಗಳನ್ನು ಕೆಡಿಸುವ ಹಾಗೂ ಜೋಡಿಸುವ ಶಕ್ತಿಯಿದೆ. ಸಂಪತ್ತನ್ನು ಪವಿತ್ರ ಕುರ್ ಆನ್ ಹಾಗೂ ಪ್ರವಾದಿ ವಚನಗಳಲ್ಲಿ ವಿವರಿಸಿದ ಹಾಗೆ ಖರ್ಚು ಮಾಡಿದಾಗ ಮಾತ್ರ ಅದಕ್ಕೆ ಸಮೃದ್ಧಿ, ಗೌರವ ಹಾಗೂ ವಿಜಯವಿರುತ್ತದೆ. ಅದರ ವಿರುದ್ಧವಾಗಿ ಮಾಡಿದಾಗ ಅಥವಾ ಅದರ ಬಗ್ಗೆ ನಿರ್ಲಕ್ಷ್ಯ ತೋರಿದಾಗ ಅದು ಹಲವು ಸಮಸ್ಯೆ, ಅಪಘಾತಗಳಿಗೆ ಕಾರಣವಾಗುವುದು. ಮಾತ್ರವಲ್ಲ ಪರಸ್ಪರರ ಮಧ್ಯೆ ದ್ವೇಷ, ಕೋಪ ಮತ್ತು ಹಗೆಯುಂಟಾಗಲು ಸಂಬಂಧ ಕೆಡಲು ಕಾರಣವಾಗುತ್ತದೆ.

ಜೀವಂತವಿರುವಾಗಲೇ ತಮ್ಮ ಎಲ್ಲಾ ಸಂಪತ್ತನ್ನು ಮಕ್ಕಳಿಗೆ ನೀಡಬಾರದು. ಹಲವು ರೋಗಗಳಿರುವ ಕಾಲದಲ್ಲಿ ನಾವು ವಾಸಿಸುತ್ತಿದ್ದೇವೆ. ಹೆಚ್ಚಿನವರಿಗೆ ಚಿಕಿತ್ಸೆ, ಔಷಧಿಗೆಂದು ದೊಡ್ಡ ಮೊತ್ತದ ಹಣದ ಆವಶ್ಯಕತೆಯಿರುತ್ತದೆ. ಮಕ್ಕಳ ಮನಸ್ಸು ಯಾವುದೇ ಸಮಯದಲ್ಲಿ ಬದಲಾಗುವ ಸಾಧ್ಯತೆ ಇದೆ. ಮಕ್ಕಳು ನೋಡುವರೆಂಬ ಅತಿಯಾದ ಭರವಸೆ ಇಡಬೇಡಿರಿ. ಕೆಲವೊಮ್ಮೆ ಮಕ್ಕಳು ಉದ್ಯೋಗ ಕಳೆದುಕೊಳ್ಳುವ, ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯ ಸಂಭವಿಸುವ ಸಾಧ್ಯತೆ ಇರುತ್ತದೆ. ಅವರಿಗೆ ಕುಟುಂಬ ಮತ್ತು ಮಕ್ಕಳ ವಿದ್ಯಾಭ್ಯಾಸದಂತಹ ಇತರ ಜವಾಬ್ದಾರಿಗಳೂ ಇರುತ್ತದೆ. ಒಬ್ಬ ವ್ಯಕ್ತಿಯ ಬಳಿ ತುಂಬಾ ಸಂಪತ್ತುಗಳಿದ್ದರೆ ಮಕ್ಕಳು ಕಷ್ಟದಲ್ಲಿರುವಾಗ ಮಕ್ಕಳ ಅಗತ್ಯ, ಅತ್ಯಾವಶ್ಯಕತೆ ನೋಡಿ ಸಹಾಯ ಮಾಡಬಹುದಾಗಿದೆ. ನಿಮ್ಮಲ್ಲಿ ಇಲ್ಲದ್ದನ್ನು ಮಕ್ಕಳಿಗೆ ನೀಡಲು ಪ್ರಯತ್ನಿಸಬೇಡಿರಿ.

ವಾರೀಸು ಸೊತ್ತಿನ ವಿತರಣೆ ಹಾಗೂ ತಂದೆ ತಾಯಿಯರು ಜೀವಂತವಿರುವಾಗ ಮಕ್ಕಳಿಗೆ ನೀಡುವಂತಹ ದುಬಾರಿ ಉಡುಗೊರೆಗಳು ಹಲವು ಕುಟುಂಬಗಳಲ್ಲಿ ಹಲವಾರು ಸಮಸ್ಯೆಗಳನ್ನುಂಟು ಮಾಡುತ್ತದೆ. ಹೆಚ್ಚಿನ ಕುಟುಂಬಗಳಲ್ಲಿ ವಾರೀಸು ಸೊತ್ತು ವಿತರಣೆಯ ವಿಷಯದಲ್ಲಿ ನಿರ್ಲಕ್ಷ್ಯತೆ, ತಪ್ಪು ಸಂಭವಿಸುತ್ತದೆ. ಅದಕ್ಕೆ ಹಲವು ಕಾರಣಗಳೂ ಇರುತ್ತದೆ. ಕೆಲವೊಂದು ಕಾರಣಗಳು ನ್ಯಾಯಪೂರ್ವಕವೂ ಆಗಿರುತ್ತದೆ. ಅದೇ ರೀತಿ ವಿವಾಹದಲ್ಲಿ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಚಿನ್ನ ಉಡುಗೊರೆ ನೀಡಲಾಗಿದೆಯೆಂದು ಪರಿಗಣಿಸಿ ಹೆಣ್ಣು ಮಕ್ಕಳನ್ನು ವಾರೀಸು ಸೊತ್ತಿನಿಂದ ವಂಚಿತಗೊಳಿಸಲಾಗುತ್ತದೆ.

ಜೀವಂತವಿರುವಾಗ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಏನಾದರೂ ಕೊಡುವುದಾದರೆ ಮಕ್ಕಳ ಮಧ್ಯೆ ಸಮಾನತೆ, ನ್ಯಾಯ ಪಾಲಿಸಲು ಪ್ರವಾದಿ ವಚನಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಆದರೆ ಪ್ರಸಕ್ತ ಸಮಾಜದಲ್ಲಿ ವಸ್ತ್ರಾಭರಣ ಮತ್ತು ವಿವಾಹಕ್ಕೆಂದು ಹೆಣ್ಣು ಮಕ್ಕಳಿಗೆ ದೊಡ್ಡ ಮೊತ್ತ ಖರ್ಚು ಮಾಡುವುದು ಅನಿವಾರ್ಯವಾಗಿದೆ. ಖರ್ಚು ಮಾಡದಿದ್ದರೆ ಹೆಚ್ಚಿನ ವಿವಾಹ ನಡೆಯದು, ಹೆಣ್ಣು ಮಕ್ಕಳು ಹೋದ ಮನೆಯಲ್ಲಿ ಅವರಿಗೆ ನೆಮ್ಮದಿಯಿಂದ ಜೀವಿಸಲು ಅಸಾಧ್ಯ, ಅದು ಅನಾವಶ್ಯಕ ಪ್ರತಿಷ್ಠೆಯ ವಿಷಯವಾಗಿ ಬಿಟ್ಟಿದೆ. ಚಿನ್ನವೆಂಬುದು ಹಣವಿದ್ದವರು ಮಾತ್ರವಲ್ಲ ಹಣವಿಲ್ಲದವರು ಕೂಡ ಸಾಲ ಮಾಡಿ, ಬೇಡಿಯಾದರೂ ಉಡುಗೊರೆ ನೀಡುವುದು ರೂಢಿಯಾಗಿದೆ.

ವಿವಾಹವು ಸಮಾಜದ ರೂಢಿಯಂತೆ ನಡೆಯಲಿ ಆದರೆ ವಾರೀಸು ಸೊತ್ತು ಮಾತ್ರ ಪವಿತ್ರ ಕುರ್ ಆನ್ ನಲ್ಲಿ ವಿವರಿಸದಂತೆ ವಿತರಿಸಬೇಕೆಂದು ಬಯಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಓರ್ವ ತಂದೆ ತನ್ನ ನಿವೃತ್ತ ಕಾಲ ಹತ್ತಿರ ಬರುತ್ತಿರುವಾಗ ತನ್ನ ಕೈಕಾಲು ದುರ್ಬಲವಾಗುವಾಗ ತನ್ನ ಉಳಿತಾಯವನ್ನೆಲ್ಲಾ ಅಥವಾ ಸಂಪಾದನೆಯ ದೊಡ್ಡ ಪಾಲನ್ನು ಹೆಣ್ಣುಮಕ್ಕಳ ವಿವಾಹದ ಹೆಸರಿನಲ್ಲಿ ಖರ್ಚು ಮಾಡಬೇಕೆಂದು ಸಮಾಜ ನಿರ್ಬಂಧಿಸುತ್ತದೆ. ಇಲ್ಲಿ ತಂದೆ ರೋಗಿಯೋ, ನಿರುದ್ಯೋಗಿಯೋ, ಸಾಲಗಾರನೋ ಇದು ಯಾವುದನ್ನೂ ಸಮಾಜ ಪರಿಗಣಿಸುವುದಿಲ್ಲ. ಸ್ವಇಚ್ಛೆಯಿಂದಲೋ, ಇಷ್ಟವಿಲ್ಲದಿದ್ದರೂ ತಮ್ಮ ಆಸೆ, ಆಕಾಂಕ್ಷೆಗಳನ್ನೆಲ್ಲ ಬದಿಗಿಟ್ಟು ತಂದೆತಾಯಿಯರು ಮಕ್ಕಳಿಗೆ ನೀಡಲು ನಿರ್ಬಂಧಿತರಾಗಿರುತ್ತಾರೆ. ಹೆಚ್ಚಿನ ತಂದೆತಾಯಿಯರು ಸುಸ್ಥಿತಿಯಲ್ಲಿದ್ದರೂ ತಮ್ಮ ಹೆಣ್ಣ ಮಕ್ಕಳ ವಿವಾಹವು ಅವರನ್ನು ಸಾಲಗಾರರನ್ನಾಗಿ ಮತ್ತು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಸುತ್ತದೆ. ತಂದೆ ಸಾಲಗಾರನಾದರೆ ಗಂಡು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ.

ತಂದೆ ಆರ್ಥಿಕವಾಗಿ ದುರ್ಬಲರಾಗಿದ್ದರೆ ಸಹೊದರರು ಸಹೋದರಿಯರ ವಿವಾಹಕ್ಕೆ ಖರ್ಚು ಮಾಡುವುದು ಅನಿವಾರ್ಯವಾಗಿರುತ್ತದೆ. ತಮ್ಮ ಸಂಪಾದನೆಯ ದೊಡ್ಡ ಪಾಲನ್ನು ಸಹೋದರ ಸಹೋದರಿಯರ ವಿವಾಹ ಮತ್ತು ವಿದ್ಯಾಭ್ಯಾಸಕ್ಕೆಂದು ಖರ್ಚು ಮಾಡುವವರಿದ್ದಾರೆ. ಕೆಲವೊಮ್ಮೆ ಸಹೋದರರು ಸ್ವತಃ ತಮ್ಮ ವಿವಾಹವನ್ನು ಮುಂದೂಡಬೇಕಾಗುತ್ತದೆ. ತಮ್ಮ ಕುಟುಂಬದಿಂದ ಪತ್ನಿ ಮಕ್ಕಳಿಂದ ದೂರವುಳಿದು ತನ್ನ ಜೀವನದ ಸುಖಗಳನ್ನು ತ್ಯಾಗಮಾಡಿ ವಿದೇಶಗಳಲ್ಲಿ ಕಷ್ಟಪಡುವವರೂ ಇದ್ದಾರೆ. ತಮ್ಮ ಪತ್ನಿಗೆ ನೀಡಿದ ಮಹ್ರ್ ಅಥವಾ ಅವರು ತವರು ಮನೆಯಿಂದ ತಂದ ಚಿನ್ನವನ್ನು ತನ್ನ ಸಹೋದರಿಯರಿಗೆ ನೀಡುವಂತಹ ಉದಾಹರಣೆಗಳೂ ಇದೆ. ಇಂತಹ ಸಹೋದರರ ವಿಷಯದಲ್ಲಿ ಕುಟುಂಬದಲ್ಲಿ ಆಪ್ತ ಸಮಾಲೋಚನೆ ನಡೆಯಬೇಕು. ತಂದೆಯಿಂದ ಸಿಕ್ಕಿದ ವಾರೀಸು ಸೊತ್ತಿನಲ್ಲಿ ಏನಾದರೂ ಬಿಟ್ಟುಕೊಡುವಂತಹ ದೊಡ್ಡಮನಸ್ಸು ಸಹೋದರಿಯರಲ್ಲಿ ಉಂಟಾಗಬೇಕು. ಅಥವಾ ಸಹೋದರನು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೆ ಸಹೋದರಿಯರ ವಿವಾಹಕ್ಕೆ ತಂದೆಗೆ ಸಹಾಯ ಮಾಡುವುದು ಒಂದು ಪುಣ್ಯಕರ್ಮವಾಗಿರುತ್ತದೆ. ಮಾತಾಪಿತರ ಭಾರವನ್ನು ಕಡಿಮೆಗೊಳಿಸಿದ ಪುಣ್ಯವು ಲಭಿಸುತ್ತದೆ. ಇಲ್ಲಿ ಯಾರು ಔದಾರ್ಯದಿಂದ ಬಿಟ್ಟು ಕೊಡುತ್ತಾರೆ ಅವರು ಶ್ರೇಷ್ಠರಾಗಿರುತ್ತಾರೆ.

ಇನ್ನು ತಂದೆತಾಯಿಯರು ತಮ್ಮ ಯಾವುದಾದರೂ ಹೆಣ್ಣು ಅಥವಾ ಗಂಡು ಮಕ್ಕಳು ತಮ್ಮ ಜವಾಬ್ದಾರಿಯನ್ನು ನೆರವೇರಿಸಲು ಯಾವುದೇ ರೂಪದಲ್ಲಿ ಸಹಾಯ ಮಾಡಿದ್ದರೆ ಅಥವಾ ಒಬ್ಬರು ಮಾತ್ರ ತಮ್ಮ ಬೇಡಿಕೆಗಳನ್ನೆಲ್ಲ ಪೂರೈಸುತ್ತಿದಾರೆಂದಾದರೆ ಅದನ್ನು ಪರಿಗಣಿಸಿ ಜೀವಂತವಿರುವಾಗಲೇ ಸ್ವ ಇಚ್ಛೆಯಿಂದ ಏನಾದರೂ ನೀಡುವುದು ಧರ್ಮಸಮ್ಮತವಾಗಿದೆ. ಆದರೆ ಯಾವುದಾದರೂ ಮಕ್ಕಳ ಜೊತೆ ಪ್ರೀತಿ ಮತ್ತು ದ್ವೇಷದಿಂದ ತಾರತಮ್ಯ ಮಾಡುವುದು ಸರಿಯಲ್ಲ. ಅದು ಹಲವು ಸಮಸ್ಯೆಗೆ ಕಾರಣವಾಗಬಹುದು. ಹೆಣ್ಣು ಮಕ್ಕಳಿಗೆ ಆಭರಣ ನೀಡುವಾಗ ನ್ಯಾಯಪೂರ್ವಕವಾಗಿಯೇ ನೀಡಿರಿ. ಹೆಚ್ಚಿನವರ ಬಳಿ ಚಿನ್ನ ಆಭರಣವಾಗಿ ಉಳಿಯುವುದಿಲ್ಲ. ಮನೆ ನಿರ್ಮಾಣ, ವ್ಯಾಪಾರದಲ್ಲಿ ಹೂಡಿಕೆ ಅಥವಾ ಇನ್ನಾವುದೇ ಕಷ್ಟ ಕಾಲದಲ್ಲಿ ಅದು ಅವರಿಗೆ ಪ್ರಯೋಜನವಾಗುತ್ತದೆ. ಈ ವಿಷಯದಲ್ಲಿ ವಿವಾಹಿತರಾಗುವ ಹೆಣ್ಣು ಮಕ್ಕಳಲ್ಲಿ ಹಾಗೂ ಹಿರಿಯ ಸ್ತ್ರೀಯರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ. ಆಧುನಿಕ ಕಾಲದಲ್ಲಿ ಸಮಾಜದಲ್ಲಿ ವಿವಾಹ, ಫೋಟೋ, ವಸ್ತ್ರಾಭರಣಗಳ ಜಾಹೀರಾತುಗಳಲ್ಲಿ ಮದುಮಗಳು ಮೈ ತುಂಬಾ ಆಭರಣಗಳನ್ನು ಹಾಕಿರುವುದನ್ನು ನೋಡಿರುತ್ತಾರೆ. ಹೆಣ್ಣು ಮಕ್ಕಳ ವಿವಾಹಕ್ಕೆ ತವರು ಮನೆಯಿಂದ ಚಿನ್ನ ಉಡುಗೊರೆಯಾಗಿ ಸಿಗಬೇಕೆಂದು ನಿರೀಕ್ಷಿಸುವುದು ಅಜ್ಞಾನವಾಗಿದೆ.

ವಿವಾಹವನ್ನೂ ಪವಿತ್ರ ಕುರ್ ಆನ್ ಮತ್ತು ಪ್ರವಾದಿಚರ್ಯೆಯ ಆಧಾರದಲ್ಲಿ ಮಾಡಿರಿ. ವಾರೀಸು ಸೊತ್ತನ್ನು ಪವಿತ್ರ ಕುರ್ ಆನ್ ಆದೇಶದ ಪ್ರಕಾರವೇ ಪಾಲು ಮಾಡಿರಿ. ಹೆಚ್ಚಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಎಲ್ಲ ಸಂಬಂಧಗಳೂ ಸುಂದರವಾಗಿ ಉಳಿಯುವುದು. ಹೆಣ್ಣು ಮಕ್ಕಳ ತಂದೆತಾಯಿಯಂದಿರು ಸುಖವಾಗಿ ನೆಮ್ಮದಿಯಿಂದ ಜೀವಿಸಬಹುದು.

ನಿಮ್ಮ ಕುಟುಂಬದಲ್ಲಿ ಯಾವುದೇ ವ್ಯವಹಾರ, ಸಂಪತ್ತಿನ ವಿಷಯದಲ್ಲಿ ಯಾವುದೇ ವಿವಾದವುಂಟಾದಾಗ ಅಥವಾ ವಾರೀಸು ಸೊತ್ತು ವಿತರಣೆಯಲ್ಲಿ ನಿಮ್ಮ ಕುಟುಂಬದ ಒಬ್ಬ ಹಿರಿಯ ವ್ಯಕ್ತಿಯಿಂದ ಪರಿಹಾರ ಪಡೆಯುವುದಕ್ಕಿಂತಲೂ ಪ್ರಸಕ್ತ ಪರಿಸ್ಥಿತಿ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಗಾಧ ಪಾಂಡಿತ್ಯ ಇರುವ ಹೊರಗಿನ ಮೂರನೆಯ ವ್ಯಕ್ತಿಯಿಂದ ಪರಿಹಾರವನ್ನು ಪಡೆಯಿರಿ. ಕುಟುಂಬದವರೇ ಆದರೆ ಕುಟುಂಬದ ಕೆಲವು ಸದಸ್ಯರ ಪರ ವಹಿಸುವ ಸಾಧ್ಯತೆ ಇರುತ್ತದೆ. ತೀರ್ಮಾನವಾದ ನಂತರ ಅದರಲ್ಲಿ ಸಮಸ್ಯೆಯನ್ನು ಹುಡುಕಬೇಡಿರಿ. ಒಬ ವ್ಯಕ್ತಿ ಮರಣ ಹೊಂದಿದ ತಕ್ಷಣವೇ ವಾರೀಸು ಸೊತ್ತು ವಿತರಣೆ ಮಾಡುವುದು ಉತ್ತಮವಾಗಿರುತ್ತದೆ. ಕಾಲಕಳೆದಂತೆ ಯಾವುದಾದರೂ ವಾರೀಸುದಾರನು ಮರಣ ಹೊಂದುವ ಮತ್ತು ಅದು ಇನ್ನಷ್ಟು ಜಠಿಲವಾಗುವ ಸಾಧ್ಯತೆ ಇದೆ. ಕೆಲವು ಸಮಯದ ನಂತರ ಎಲ್ಲರೂ ತಮ್ಮ ತಮ್ಮ ಸಮಸ್ಯೆಗಳೊಂದಿಗೆ ಬರುವರು.

ತಂದೆಯ ವ್ಯವಹಾರ ಮಗನು ನೋಡಿಕೊಳ್ಳುವುದು, ತಂದೆ ಅಥವಾ ತಾಯಿಯ ಜಮೀನಿನಲ್ಲಿ ಮಕ್ಕಳು ಮನೆ ನಿರ್ಮಿಸುವುದು, ಅಗತ್ಯವಿರುವಾಗ ತಂದೆಯ ವ್ಯವಹಾರ ಮನೆಗೆ ಮಗ, ತಾಯಿ, ಪತ್ನಿ ಹಣ ಖರ್ಚು ಮಾಡುವುದು ಇತ್ಯಾದಿ ಸಮಸ್ಯೆಗಳನ್ನು ತಂದೆ ತಾಯಿಯರು ಜೀವಂತವಿರುವಾಗಲೇ ಪರಿಹರಿಸಬೇಕು. ನಿಮ್ಮ ಕುಟುಂಬದಲ್ಲಿ ಎಲ್ಲರೂ ಸುಸ್ಥಿತಿಯಲ್ಲಿದ್ದು ಒಬ್ಬರು ಬಡವರು, ವಿಧವೆ ಅಥವಾ ಅನಾಥ ಮಕ್ಕಳಿದ್ದರೆ ಎಲ್ಲರ ವಾರೀಸು ಸೊತ್ತನ್ನು ಅವರಿಗೆ ನೀಡುವ ತೀರ್ಮಾನವನ್ನು ಒಬ್ಬರು ಕೈಗೊಳ್ಳಬಾರದು. ನಮಗರಿವಿಲ್ಲದೇ ಕಷ್ಟ ಅನುಭವಿಸುವವರಿರಬಹುದು. ಕುರ್ ಆನ್ ನ ಆದೇಶದಂತೆ ಪಾಲು ಮಾಡಿದ ನಂತರ ಸ್ವ ಇಚ್ಛೆಯಿಂದ ಬಿಟ್ಟು ಕೊಡಬಹುದು. ಅನ್ಯಥಾ ಹಲವು ವರ್ಷಗಳು ಕಳೆದ ನಂತರ ಅವರ ಮಕ್ಕಳು ಬಂದು ಹಕ್ಕು ಕೇಳುವ ಸಾಧ್ಯತೆ ಇದೆ. ಎಲ್ಲ ತೀರ್ಮಾನಗಳಿಗೂ ಲಿಖಿತ ಆಧಾರವೂ ಸಾಕ್ಷಿಗಳೂ ಇರಬೇಕು.