ವರದಕ್ಷಿಣೆಗಾಗಿ ಕೂಡಿಟ್ಟ 75 ಲಕ್ಷ ರೂ.ಯನ್ನು ಹೆಣ್ಮಕ್ಕಳ ಹಾಸ್ಟೆಲ್ ನಿರ್ಮಿಸಲು ದೇಣಿಗೆ ಕೊಟ್ಟ ನವವಧು

0
344

ಸನ್ಮಾರ್ಗ ವಾರ್ತೆ

ಜೈಪುರ: ಮದುವೆ ವೇದಿಕೆಯಲ್ಲಿ ಹೊಸ ಮಾದರಿ ಸೃಷ್ಟಿಸಲ್ಪಟ್ಟಿದೆ. ರಾಜಸ್ಥಾನದ ನವವಧು ವರದಕ್ಷಿಣೆ ಕೊಡಲು ತೆಗೆದಿಟ್ಟಿದ್ದ ಮೊತ್ತವನ್ನು ಹೆಣ್ಣು ಮಕ್ಕಳ ಹಾಸ್ಟೆಲ್ ನಿರ್ಮಿಸಲು ದೇಣಿಗೆ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಬರ್ಮರ್ ನಗರದ ಕಿಶೋರ್ ಸಿಂಗ್ ಕನೋದ್‍ರ ಮಗಳು ಅಂಜಲಿ ಕನ್ವರ್ ಹೀಗೆ ಮಾಡಿದ ಹೃದಯ ಶ್ರೀಮಂತೆ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ ಬೃಹತ್ ಮೊತ್ತ ದೇಣಿಗೆಯಾಗಿ ಕೊಟ್ಟಿದ್ದಾರೆ.

ನವೆಂಬರ್ 21ಕ್ಕೆ ಪ್ರವೀಣ್ ಸಿಂಗ್ ಎಂಬ ಯುವಕನೊಂದಿಗೆ ಅಂಜಲಿಯ ಮದುವೆ ನಡೆಯಿತು. ತನಗೆ ವರದಕ್ಷಿಣೆಗಾಗಿ ಇಟ್ಟ ಹಣವನ್ನು ಹಾಸ್ಟೆಲ್ ಕಟ್ಟಿಸಲು ದಾನ ಕೊಡಬೇಕೆಂದು ಅಂಜಲಿ ತಂದೆ ಮುಂದೆ ಕೋರಿಕೆ ಇಟ್ಟಳು. ಈಗ ನವ ವಿವಾಹಿತೆ ಮತ್ತು ಕುಟುಂಬ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ.

ಮದುವೆ ಕಾರ್ಯಕ್ರಮ ಮುಗಿದ ಬಳಿಕ ತಂದೆ ಕಿಶೋರ್ ಸಿಂಗ್ ಕನೊದ್ ಬ್ಲಾಂಕ್ ಚೆಕ್‍ನೊಂದಿಗೆ ಅಂಜಲಿಯ ಹತ್ತಿರ ಬಂದು ಹಣವನ್ನು ಬರೆದುಕೊಳ್ಳಲು ಹೇಳಿದರು. ಮದುವೆ ಆದ ಮೇಲೆ ಅಂಜಲಿ ವಿಲೇಜ್ ಆಫಿಸರ್ ಮಹಂತ್ ಪ್ರತಾಪ್ ಪುರಿಗೆ ಹಣ ಕೊಡುವ ವಿವರವನ್ನು ಪತ್ರದ ಮೂಲಕ ತಿಳಿಸಿದರು. ಮಹಂತ ಪ್ರತಾಪ್ ಪುರಿ ಮದುವೆಗೆ ಬಂದವರಿಗೆ ಈ ವಿಷಯ ತಿಳಿಸಿದರು. ಅಂಜಲಿ ಮತ್ತು ಅವಳ ಕುಟುಂಬವನ್ನು ಪುರಿ ಶ್ಲಾಘಿಸಿದರು.

ಹೆಣ್ಣುಮಕ್ಕಳ ಹಾಸ್ಟೆಲ್ ಕಟ್ಟಿಸಲು ಕಿಶೋರ್ ಸಿಂಗ್ ಕನೋದ್ ಈ ಹಿಂದೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಅಗತ್ಯವಿದ್ದ ಉಳಿದ ಹಣ 75 ಲಕ್ಷ ರೂಪಾಯಿ ಕೊಟ್ಟದ್ದಕ್ಕೆ ವಿಲೇಜ್ ಆಫಿಸರ್ ಪುರಿ ಅಂಜಲಿಯನ್ನು ಅಭಿನಂದಿಸಿದರು ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.