ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಸ್ಥಾಪಿಸಲು ಸರ್ವ ಧರ್ಮೀಯರು ಮುಂದೆ ಬರಬೇಕು: ಅಮೀನ್ ಅಹ್ಸನ್

0
261

ಸನ್ಮಾರ್ಗ ವಾರ್ತೆ

ಮಂಗಳೂರು: ಪುತ್ತೂರಿನ‌ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಹೊಡೆದಾಟ ಅತ್ಯಂತ ಖೇದಕರ. ಪೋಷಕರು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಭಯಪಡುವ ಪ್ರಸಕ್ತ ಸಂದರ್ಭ ಕರಾವಳಿಯಲ್ಲಿ ನಿರ್ಮಾಣವಾಗುತ್ತಿರುವುದು ಕಳವಳಕಾರಿಯಾಗಿದೆ. ಕಾಲೇಜು ತರಗತಿಗಳು ಹಿಂದು, ಮುಸ್ಲಿಮ್ ಆಗಿ ಸಂಪೂರ್ಣ ವಿಭಜಿಸುವ ಕಾರ್ಯ ಕೋಮುವಾದಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದ್ದರಿಂದ ಸರ್ವಧರ್ಮೀಯ ಪ್ರಜ್ಞಾವಂತರು ಇದನ್ನು ತಡೆಯಲು ಕಾರ್ಯಪ್ರವೃತ್ತವಾಗಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಮಕ್ಕಳ ಕಲಹ ಇಂದು ನಿನ್ನೆಯದಲ್ಲ. ವಿದ್ಯಾರ್ಥಿಗಳು ಗಲಾಟೆ ಮಾಡಿ ನಂತರ ರಾಜಿಯಾಗಿ ಒಂದಾಗಿ ಕಳೆಯುವ ವಾತಾವರಣ ಹಿಂದಿನಿಂದಲೂ ನಡೆಯುತ್ತಿತ್ತು. ಒಂದು ವೇಳೆ ಗಲಾಟೆ ತಾರರಕ್ಕೇರಿದರೆ ಹೆತ್ತವರು, ಸಮಾಜದ ಹಿರಿಯರು ಬುದ್ದಿಹೇಳಿ ಸರಿ ಪಡಿಸುತ್ತಿದ್ದರು. ಆದರೆ ಈಗ ರಾಜಕೀಯ ಪ್ರೇರಿತ ಸಂಘಟನೆಗಳು ವಿದ್ಯಾರ್ಥಿಗಳ ಗಲಾಟೆಯನ್ನು ಧರ್ಮಾಧಾರಿತ ಎಂದು ಬಿಂಬಿಸಿ ಸಮಸ್ಯೆಯನ್ನು ಇನ್ನಷ್ಟು ಕ್ಲಿಷ್ಟಕರಗೊಳಿಸಲು ಪ್ರಯತ್ನಿಸುತ್ತಿವೆ. ಇದರಿಂದ ಸಮಾಜದಲ್ಲಿ ಇನ್ನಷ್ಟು ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ. ಆದ್ದರಿಂದ ಸರ್ವಕಾಲೇಜು ವಿದ್ಯಾರ್ಥಿ ಸಂಘಟನೆಗಳು ಮತ್ತು ಇತರ ಪ್ರಜ್ಞಾವಂತ ವಿದ್ಯಾರ್ಥಿ ಸಂಘಟನೆಗಳು ಈ ಸಂದರ್ಭದಲ್ಲಿ ಪ್ರಜ್ಞಾವಂತಿಕೆ ಮೆರೆದು ಸೌಹಾರ್ದದಿಂದ ಬೆರೆತು ಶಿಕ್ಷಣ ಪಡೆಯುವ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಈ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಹೊಂದುವಂತಾಗಬೇಕು ಎಂದವರು ತಿಳಿಸಿದ್ದಾರೆ.

ಮಕ್ಕಳನ್ನು ಪೋಷಕರು ಕಷ್ಟಪಟ್ಟು ಕಾಲೇಜಿಗೆ ಕಳುಹಿಸುವುದು ಉತ್ತಮ ಭವಿಷ್ಯ ರೂಪಿಸಲಿಕ್ಕಾಗಿದೆ. ಹಿಂದು ಮುಸ್ಲಿಮ್ ಎಂದು ಹೊಡೆದಾಡಿ ಕ್ರಿಮಿನಲ್ ಕೇಸು ಹಾಕಿಸಿಕೊಂಡು ಆಸ್ಪತ್ರೆ, ಜೈಲು ಅಲೆದರೆ ನಿಮಗೂ ನಿಮ್ಮ ಹೆತ್ತವರು, ಕುಟುಂಬಕ್ಕೆ ಹೆಚ್ಚು ನಷ್ಟ ಆಗುತ್ತದೆ. ಎಲ್ಲಾ ಸಂದರ್ಭದಲ್ಲಿ ಸತ್ಯ ನ್ಯಾಯ ಪರವಾಗಿರಲು ಎಲ್ಲಾ ಧರ್ಮಗಳು ಸಾರುತ್ತದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸಿ ಕೋಮು ಧ್ರುವೀಕರಣವನ್ನು ಸೋಲಿಸುವ ಕೆಲಸ ನಡೆಯಬೇಕು. ಸ್ವಾರ್ಥ ಹಿತಾಸಕ್ತಿ ಮತ್ತು ಧರ್ಮಾಧಾರಿತ ಮತರಾಜಕಾರಣವನ್ನು ತಡೆಯಲು ಸರ್ವಧರ್ಮೀಯರು ಮುಂದೆ ಬರಬೇಕು ಎಂದು ಅಮೀನ್ ಅಹ್ಸನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.