ಅನಿವಾಸಿ ಭಾರತೀಯರ ಸಂಕಷ್ಟಕ್ಕೆ ಮಿಡಿದ ಬ್ಯಾರೀಸ್ ವೆಲ್ಫೇರ್ ಫೋರಮ್: ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಜೊತೆ ಮಾತುಕತೆ

0
1075

ಸನ್ಮಾರ್ಗ ವಾರ್ತೆ

(ಕೊರೋನಾ ಲಾಕ್ ಡೌನ್ ಸಮಯದಲ್ಲಿ ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿಯು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಅನಿವಾಸಿಗಳ ಪ್ರಶಂಸೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಬಿ ಡಬ್ಯು ಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಅವರೊಂದಿಗೆ ಸನ್ಮಾರ್ಗ ನಡೆಸಿದ ಸಂದರ್ಶನ ಇಲ್ಲಿದೆ.)

ಪ್ರಶ್ನೆ – ಅಬುಧಾಬಿಯಲ್ಲಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಾರಾದರೂ ಆಹಾರ ಮತ್ತು ವೈದ್ಯಕೀಯ ಕಾರಣಗಳಿಂದಾಗಿ ಸಂಕಷ್ಟದಲ್ಲಿದ್ದರೆ ನಮ್ಮನ್ನು ಸಂಪರ್ಕಿಸಿ ಅಂತ ಬ್ಯಾರೀಸ್ ವೆಲ್ಫೇರ್ ಫೋರಮ್ ಹೆಸರಲ್ಲಿ ಪೋಸ್ಟರನ್ನು ನೋಡಿದ್ದೆ. ಏನಿದು? ಎಷ್ಟು ಜನರಿಗೆ ಸ್ಪಂದಿಸಿದ್ದೀರಿ? ಹೇಗೆ ಸ್ಪಂದಿಸಿದ್ದೀರಿ?

ಉತ್ತರ: ಯುಎಇ ಯ ಸಾಮುದಾಯಿಕ ಮತ್ತು ಸಾಮಾಜಿಕ ಸಂಘಟನೆಯಾದ ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ, ಇಂದು ಜಗತ್ತಿನಾದ್ಯಂತ ತಲ್ಲಣ ನಿರ್ಮಿಸಿರುವ ಕೋವಿಡ್ ೧೯ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರ ನೆರವಿಗೆ ತಕ್ಷಣ ಸ್ಪಂದಿಸಿದೆ. ಬಿ ಡಬ್ಯು ಎಫ್ ಪದಾಧಿಕಾರಿಗಳು ಮತ್ತು ಸ್ವಯಂ ಸೇವಕರು ಗ್ರೌಂಡ್ ಲೆವಲಿನಲ್ಲಿ ವೈದ್ಯಕೀಯ ಸಹಾಯ ಮತ್ತು ಆಹಾರ ಪದಾರ್ಥಗಳನ್ನು ಒದಗಿಸುವುದರ ಮೂಲಕ ಎಲ್ಲಾ ವರ್ಗದ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಭಾರತೀಯ ಧೂತಾವಾಸದೊಂದಿಗಿನ ಸಹಕಾರದೊಂದಿಗೆ ರೋಗಭಾದಿತರ ಮತ್ತು ಅವರ ಒಡನಾಟದಲ್ಲಿರುವವರ ವೈದ್ಯಕೀಯ ತಪಾಸಣೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳ ವ್ಯವಸ್ಥೆ ಮುಂತಾದ ಜೀವಕಾರುಣ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಸಾವಿರಾರು ಕನ್ನಡಿಗರು ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು ಅಂಥವರನ್ನು ಪತ್ತೆ ಹಚ್ಚಿ ಅವರಿಗೆ ಆಹಾರ ಮತ್ತು ಇನ್ನಿತರ ದೈನಂದಿನ ಆವಶ್ಯಕ ವಸ್ತುಗಳ ಪೂರೈಕೆ, ಧನ ಸಹಾಯ ಮುಂತಾದ ಸೇವೆಗಳನ್ನು ಸ್ವಯಂ ಸೇವಕರು ನೀಡುತ್ತಿದ್ದಾರೆ.

ಬಿ ಡಬ್ಯು ಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆಯವರು ಈ ಪರಿಹಾರ ಕಾರ್ಯದ ನೇತೃತ್ವ ವಹಿಸಿದ್ದಾರೆ. ಸಿದ್ದೀಕ್ ಕಾಪು, ಇಮ್ರಾನ್ ಅಹ್ಮದ್, ರಶೀದ್ ಬಿಜೈ, ನವಾಜ್ಹ್ ಉಚ್ಚಿಲ್, ಮುಹಮ್ಮದ್ ಕಲ್ಲಾಪು, ರಶೀದ್ ವಿಟ್ಲ, ಬಷೀರ್ ಉಚ್ಚಿಲ್ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಬಷೀರ್ ಬಜ್ಪೆ , ಹಂಝ ಎರ್ಮಾಳ್, ಅಬ್ದುಲ್ ರವೂಫ್, ಹಮೀದ್ ಗುರುಪುರ, ಅಬ್ದುಲ್ ಮಜೀದ್ ಕುತ್ತಾರ್, ಹನೀಫ್ ಉಳ್ಳಾಲ್, ಜಲೀಲ್ ಬಜ್ಪೆ, ಮಜೀದ್ ಆತೂರ್, ಮುಜೀಬ್ ಉಚ್ಚಿಲ್, ಇರ್ಫಾನ್ ಅಹ್ಮದ್, ಮತ್ತು ಮೋಹಿಯುದ್ದೀನ್ ಹಂಡೇಲ್, ಅಪಾರ ಸಹಕಾರ ನೀಡುತ್ತಿದ್ದಾರೆ.

ಪ್ರಶ್ನೆ – ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರಲು ಸಂಘಟನೆಯ ವತಿಯಿಂದ ಏನಾದರೂ ಕ್ರಮ ಕೈಗೊಂಡಿದ್ದೀರಾ?

ಯುಎಇ ಯಲ್ಲಿ ಅನಿವಾಸಿ ಭಾರತೀಯ ಕನ್ನಡಿಗರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದು ಅವರಿಗೆ ಈ ಕೆಳಗಿನ ನೆರವನ್ನು ನೀಡಿ ಅವರ ಸಂಕಷ್ಟ ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಕರ್ನಾಟಕದ ಮುಖ್ಯ ಮಂತ್ರಿ, ಭಾರತ ಸರಕಾರದ ವಿದೇಶಾಂಗ ಮಂತ್ರಿ ಮತ್ತು ಇನ್ನಿತರ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮುಹಮ್ಮದ್ ಅಲಿ ಉಚ್ಚಿಲ್ ಈಗಾಗಲೇ ವಿನಂತಿಸಿದ್ದಾರೆ. ಈ ಅನಿವಾಸಿ ಭಾರತೀಯ ಕನ್ನಡಿಗರು ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು ಅವರ ಈ ಸಂಕಷ್ಟದ ಸಮಯದಲ್ಲಿ ಸರಕಾರ ಅವರ ನೆರವಿಗೆ ಬರಬೇಕೆಂದು ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ.

  1. ಸಂಕಷ್ಟಗಳಿಗೆ ಒಳಗಾಗಿ ಊರಿಗೆ ಮರಳಿ ಬಯಸುವಂತಹ ಅನಿವಾಸಿ ಭಾರತೀಯ ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ, ಭಾರತ ಮತ್ತು ಯುಎಇ ಸರಕಾರದ ಜೊತೆಗೆ ಮಾತುಕತೆ ನಡೆಸಿ ಕಾರ್ಯಪ್ರವೃತ್ತವಾಗಬೇಕು.

2. ಅಲ್ಲಿನ ಅನಿವಾಸಿ ಭಾರತೀಯ ಕನ್ನಡಿಗರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ಮತ್ತು ಕ್ವಾರಂಟೈನ್ ವ್ಯವಸ್ಥೆಗಳ ಬಗ್ಗೆ ಖಾತರಿಪಡಿಸಬೇಕು.

3. ಕೆಲಸ ಕಳೆದುಕೊಂಡು ತಾಯ್ನಾಡಿಗೆ ಹಿಂತೆರಳುವ ಕನ್ನಡಿಗರ ನೆರವಿಗೆ ಕೇರಳದ ನೂರ್ಕಾ ಮಾದರಿಯಲ್ಲಿ ಒಂದು ಪ್ರಾಧಿಕಾರ ಸ್ಥಾಪಿಸಿ ಅವರಿಗೆ ಒಂದು ನೆಲೆ ಕಂಡುಕೊಳ್ಳಲು ಸಹಾಯ ಮತ್ತು ನೆಲೆ ಕಂಡುಕೊಳ್ಳುವವರೆಗೆ ಮಾಸಿಕ ಧನ ಸಹಾಯವನ್ನು ನೀಡಬೇಕು.

4. ಕರ್ನಾಟಕಕ್ಕೇ ಹಿಂದೆ ಮರಳ ಬಯಸುವವರನ್ನು ಕ್ವಾರಂಟೈನ್ ನಲ್ಲಿ ಇರಿಸಲು ರಾಜ್ಯ ಸರಕಾರ ವ್ಯವಸ್ಥೆ ಮಾಡಬೇಕು.

ಪ್ರಶ್ನೆ – ಬ್ಯಾರೀಸ್ ವೆಲ್ಫೇರ್ ಫಾರಂನ ಗುರಿಯೇನು? ಏನಕ್ಕೆ ಅದು ಸ್ಥಾಪನೆಗೊಂಡಿದೆ? ಈವರೆಗಿನ ಸೇವೆಯ ಕುರಿತಂತೆ ಸಂಕ್ಷಿಪ್ತ ವಿವರ ನೀಡುವಿರಾ?

ಬ್ಯಾರೀಸ್ ವೆಲ್ಫೇರ್ ಫೋರಮ್ 2005 ರಲ್ಲಿ ಅಬುಧಾಬಿಯಲ್ಲಿ ಸ್ಥಾಪಿತವಾಯಿತು. ಸಮಾನ ಮನಸ್ಕ ಸಮುದಾಯ ಭಾಂದವರು ಅಬುಧಾಬಿಯಿಯಲ್ಲಿರುವ ಬ್ಯಾರಿ ಸಮುದಾಯವನ್ನು ಒಂದು ವೇದಿಕೆಯ ಅಡಿಯಲ್ಲಿ ಸಂಘಟಿಸಿ ಪರಸ್ಪರರನ್ನು ಅರಿಯಲು ಸುಖಃ ದುಃಖಗಳಲ್ಲಿ ಭಾಗಿಯಾಗಲು ಸ್ಥಾಪಿತವಾದ ಸಂಘಟನೆ. ಕಾಲಕ್ರಮೇಣ ಬಿ ಡಬ್ಯು ಎಫ್ ತಮ್ಮನ್ನು ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊ೦ಡಿತು ಮತ್ತು ತನ್ನ ಕಾರ್ಯ ಕ್ಷೇತ್ರವನ್ನು ಅವಿಭಿಜಿತ ದಕ್ಷಿಣ ಕನ್ನಡ ಜಿಲ್ಲೆಗೂ ಪಸರಿಸಿತು. 2008 ರಲ್ಲಿ ಮೊತ್ತ ಮೊದಲನೆಯದಾಗಿ ಮುಸ್ಲಿಮ್ ಸಮುದಾಯದಲ್ಲಿ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ ಸಂಘಟನೆ ತಡ ನಂತರ ಏಳು ಸಾಮೂಹಿಕ ವಿವಾಹಗಳನ್ನು ಸಂಘಟಿಸಿತು. 110 ಹೆಣ್ಣು ಮಕ್ಕಳು ಈ ಯೋಜನೆಯ ಅಡಿಯಲ್ಲಿ ವಿವಾಹಿತರಾಗಿ ಸುಖಿ ಕೌಟುಂಬಿಕ ಜೀವನ ನಡೆಸುತ್ತಿದ್ದಾರೆ. ಈ ನಮ್ಮ ಸಾಮೂಹಿಕ ವಿವಾಹದ ಯಶಸ್ಸಿನಿಂದ ಉತ್ತೇಜನ ಸಿಕ್ಕಿದ ಹಲವಾರು ಮುಸ್ಲಿಮ್ ಸಮುದಾಯದ ಸಂಘಟನೆಗಳು ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು ಅದು ಈಗಲೂ ಮುಂದುವರಿಯುತ್ತಿದೆ.

ನಮ್ಮ ಎರಡನೆಯ ಅತಿ ಯಶಸ್ವೀ ಯೋಜನೆ ಶೌಚಾಲಯ. ಇದರ ಅಡಿಯಲ್ಲಿ 150 ಕ್ಕೂ ಮೇಲ್ಪಟ್ಟು ಶೌಚಾಲಯಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗಿದೆ.

ಇನ್ನು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ವೀಲ್ ಚೆರ್, ಫುಡ್ ಕಿಟ್ ವಿತರಣೆ ಮುಂತಾದ ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಬಿ ಡಬ್ಯು ಎಫ್ ತನ್ನನ್ನು ತೊಡಗಿಸಿಕೊಂಡಿದೆ. ಯುಏಈ ಯಲ್ಲಿ ಅತ್ಯಂತ್ಯ ಪ್ರಸಿದ್ಧ ಮತ್ತು ಗೌರವಯುತ ಸಾಮುದಾಯಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಇದು ಹಲವಾರು ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಾ ಇದೆ. ಅದರಲ್ಲಿ,

1. ಪ್ರತಿ ರಂಝಾನ್ ತಿಂಗಳಲ್ಲಿ ಏರ್ಪಡಿಸುವ ಸರ್ವಧರ್ಮ ಇಫ್ತಾರ್ ಕೂಟ.

2.  ಕಳೆದ 2 ತಿಂಗಳಲ್ಲಿ ಸುಮಾರು ೪೦೦ ಹೆಚ್ಚಿನ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳ ಕಿಟ್ ಒದಗಿಸಿದ್ದೇವೆ. ಇದರ ಮುಖಾಂತರ ಸಾಧಾರಣ 11000 ಡೈಲಿ ಊಟದ ಪೊಟ್ಟಣಗಳನ್ನು ವಿತರಿಸಿದ್ದೇವೆ.

ಪ್ರಶ್ನೆ- ಕೇವಲ ಅಬುದಾಭಿಗೆ ಮಾತ್ರ ಯಾಕೆ ಈ ನೆರವನ್ನು ಸೀಮಿತಗೊಳಿಸಿದಿರಿ?

ನಮ್ಮದು ಅಬುಧಾಬಿಯನ್ನು ಕಾರ್ಯಕ್ಷೇತ್ರವಾಗಿಟ್ಟಿರುವ ಸಂಘಟನೆ. ಇತರ ಎಮಿರೇಟ್ಸ್ ಗಳಲ್ಲಿ ಸಹೋದರ ಸಂಘಟನೆಗಳೊಂದಿಗೆ ನಾವು ಎಲ್ಲಾ ವಿಧದಲ್ಲೂ ಪರಸ್ಪರ ಸಹಕರಿಸುತ್ತಾ ಇದ್ದೇವೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.