ಇಖಾಮತುದ್ದೀನ್: ವರ್ತಮಾನದ ಸವಾಲು ಮತ್ತು ಪರಿಹಾರ

0
137

✍️ ಅಬೂ ಅನೀಸ್, ಕಲ್ಲಾಪು

ಧರ್ಮ ಸಂಸ್ಥಾಪನೆ (ಇಖಾಮತುದ್ದೀನ್) ಕುರ್‌ಆನ್ ಪ್ರತಿಪಾದಿಸಿದ ಧ್ಯೇಯದೊಂದಿಗೆ ಪ್ರತಿಯೊಬ್ಬ ಮುಸ್ಲಿಮನ ಮನ-ಮಸ್ತಿಷ್ಕಗಳು ಅಂತರ್ಗತವಾಗಿರಬೇಕು. “ಈ ಧರ್ಮವನ್ನು ಸ್ಥಾಪಿಸಿರಿ ಮತ್ತು ಇದರಲ್ಲಿ ವಿಭಿನ್ನವಾಗದಿರಿ” (42: 13) ಎಂಬ ಕುರ್‌ಆನಿನ ಈ ಧ್ಯೇಯ ವಾಕ್ಯದಲ್ಲಿ ಪ್ರತಿಯೊಬ್ಬ ಮುಸ್ಲಿಮನ ಪಾಲುಗಾರಿಕೆಯಿದೆ. ಅನ್ಯಥಾ ಈ ಋಣಬದ್ಧ ಕಾರ್ಯದಲ್ಲಿ ಯಾವುದೇ ಸಂಘಟನೆ (ಜಮಾಅತ್‌ನ) ಗುತ್ತೇದಾರಿಕೆಯಿಲ್ಲ. ಇದು ಮುಸ್ಲಿಮರೆಲ್ಲರೂ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ, ಸಂಘಟನಾತ್ಮಕವಾಗಿಯೂ ನಿರ್ವಹಿಸ ಬೇಕಾದ ಕಾರ್ಯವಾಗಿದೆ.

ಅರ್ಥಾತ್ ಮುಸ್ಲಿಮನ ಬದುಕು ಈ ವಿಧಿಗೆ, ಆಜ್ಞೋಪ ದೇಶಗಳಿಗೆ ಬದ್ಧವಾಗಿರಬೇಕು. ಅದು ಹೇಗೆ…? ಮುಸ್ಲಿಮನ ವೈಯಕ್ತಿಕ ಕಾರ್ಯಗಳು, ನಂಬಿಕೆ, ಆರಾಧನೆಗಳು, ವ್ಯವಹಾರಗಳು, ಗುಣನಡತೆಗಳು (ಅಖ್ಲಾಕ್) ಇವೆಲ್ಲವೂ ದೇವನಿಷ್ಠೆ ಮತ್ತು ಭಕ್ತಿಯ ಸತ್ಯತೆಯಿಂದ ಕೂಡಿರಬೇಕು. ಚಂಚಲ ಮನಃಸ್ಥಿತಿಗಳು ಬದುಕಿನುದ್ದಕ್ಕೂ ಆಗೊಮ್ಮೆ ಈಗೊಮ್ಮೆ ಸಹಜವಾಗಿ ವ್ಯತಿಚಲನೆಗೆ ಬಲಿಯಾಗಬಹುದಾದರೂ, ಮೂಲ ಭೂತವಾಗಿ ಅಲ್ಲಾಹನ ನಿಷ್ಠೆ ಮತ್ತು ಆಖಿರತ್‌ನ ಶಿಕ್ಷೆ-ರಕ್ಷೆಗಳ ಬಗ್ಗೆ ಜಾಗೃತವಾಗಿರಬೇಕು.

ಆರಾಧನೆ (ಇಬಾದತ್)

ಬದುಕಿನುದ್ದಕ್ಕೂ ಕ್ರಮಬದ್ಧವಾಗಿ ರೂಢಿಸಿಕೊಳ್ಳಬೇಕಾಗಿದೆ. ಸಾಮೂಹಿಕ (ಜಮಾಅತ್) ನಮಾಝಿಗೆ ಆದ್ಯತೆ ನೀಡಬೇಕಾಗಿದೆ. ಯಾವ ಇಸ್ಲಾಮೀ ಪಾರ್ಟಿಯವರು ನಿರ್ಮಿಸಿದ್ದಾರೆ ಎಂಬುದನ್ನು ಪರಿಗಣನೆಗೆ ತೆಗೆಯದೆ ಪರಿಸರದ ಮಸೀದಿಯಲ್ಲಿ ಸಾಮೂಹಿಕ ನಮಾಝಿನಲ್ಲಿ ಭಾಗಿಯಾಗುವುದರ ಮೂಲಕ ಇಸ್ಲಾಮೀ ಏಕತೆ (ವಹದತ್)ಗೆ ಆದ್ಯತೆ ನೀಡಬೇಕಾಗಿದೆ. ಇಬಾದತ್‌ಗಳಲ್ಲಿ ತನ್ನೊಡೆಯನೊಂದಿಗೆ ಗೈಯ್ಯುವ ಪ್ರತಿಜ್ಞೆಗಳನ್ನು ಗರಿಷ್ಠ ಮಟ್ಟದಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ ಮತ್ತು ಪರಿಸರದ ನೀತಿಯಲ್ಲೂ ಇಸ್ಲಾಮೀ ಮೌಲ್ಯಾಧಾರಿತ ಏಕತೆ ಮತ್ತು ಸಮಗ್ರತೆಯ ಬಗ್ಗೆ ಜಾಗರೂಕರಾಗಬೇಕಾದ ಅಗತ್ಯವಿದೆ.

ಗುಣಸಂಪನ್ನತೆ (ಅಖ್ಲಾಕ್)

ಇಸ್ಲಾಮೀ ಸಚ್ಚಾರಿತ್ರ‍್ಯ ಗುಣವಿಶೇಷಗಳನ್ನು ತಕ್ವಾ (ಆತ್ಮ ಸಂಯಮನದ) ತಳಹದಿಯಲ್ಲಿ ನೋಡಬೇಕಾಗಿದೆ. ಪವಿತ್ರ ಕುರ್‌ಆನ್ ಹೇಳುತ್ತದೆ, “ಅತ್ಯಂತ ಹೆಚ್ಚು ತಕ್ವಾ ಉಳ್ಳವನೇ ನಿಮ್ಮಲ್ಲಿ ಶ್ರೇಷ್ಠನಾಗಿದ್ದಾನೆ.” ತಕ್ವಾ ಎಂಬುದು ಕಣ್ಣಿಗೆ ಗೋಚರಿಸುವ ವಿಷಯವೇನಲ್ಲ. ವಿಶ್ವಾಸಿಯ ಮಾತುಕೃತಿ, ವ್ಯವಹಾರ, ಪ್ರಾಮಾಣಿಕತೆ, ಒಡನಾಟ, ವಚನ ಪಾಲನೆ ಸತ್ಯಸಂಧತೆಯ ಮೂಲಕ ಪ್ರತಿಬಿಂಬಿತವಾಗಬೇಕಾಗಿದೆ.

ಅನ್ಯಥಾ ಯಾವುದೇ ಮುಸ್ಲಿಮ್ ಪಾರ್ಟಿಯ ಅನುಯಾಯಿಯೆಂಬ ಕಾರಣಕ್ಕಾಗಿ ಅಥವಾ ತಾನು ಅಪ್ಪಟ ಏಕದೇವ ವಿಶ್ವಾಸಿ ಎಂಬ ಹೆಗ್ಗಳಿಕೆಯಲ್ಲಿ ಮಾತ್ರ ಇದನ್ನು ಅಳೆಯಲಾಗುವುದಿಲ್ಲ. ಪ್ರವಾದಿ ವಚನವೊಂದು ಹೇಳುವಂತೆ, ಅಲ್ಲಾಹನು ನಿಮ್ಮ ಪೋಷಾಕು ಮತ್ತು ಸಂಪತ್ತನ್ನು ನೋಡುವುದಿಲ್ಲ. ಅನ್ಯಥಾ ಅಲ್ಲಾಹನು ನಿಮ್ಮ ಅಂತರಾಳ ಮತ್ತು ಸತ್ಕರ್ಮಗಳನ್ನು ನೋಡುತ್ತಾನೆ. ವಿಶ್ವಾಸಿಯಲ್ಲಿರುವ ಈ ಸತ್ಯಸಂಧತೆಗಳು ಇಖಾಮತುದ್ದೀನ್ (ಧರ್ಮ ಸಂಸ್ಥಾಪ ನೆಯ)ನ ತಳಹದಿಗಳಾಗಿವೆ.

ಕುರ್‌ಆನ್ ಅತ್ಯಂತ ನಿಖರ ಶಬ್ದಗಳಿಂದ ಈ ಬಗ್ಗೆ ಜಾಗೃತಿ ಮೂಡಿಸುತ್ತದೆ, “ನಮಾಝಿನಲ್ಲಿ ಭಯಭಕ್ತಿ ಉಳ್ಳವರು ನಿರರ್ಥಕ ಮಾತು ಹರಟೆಗಳಿಂದ ದೂರ ವಿರುವವರು, ತಮ್ಮ ಪಾಲಿನ ಝಕಾತನ್ನು ಶ್ರದ್ಧೆಯಿಂದ ನೀಡುವವರು, ನೈತಿಕ ಮೇರೆಯನ್ನು ಮೀರದವರು, ಸತ್ಯಸಂಧರು ಮತ್ತು ವಚನ ಬದ್ಧರು ಇಂತಹ ಗುಣ ಮಟ್ಟದ ಜನರು.” ಅಲ್ಲಾಹನು ತನ್ನ ಈ ನೈಜ ದಾಸರನ್ನು ತನ್ನ ಖಲೀಫ(ಪ್ರತಿ ನಿಧಿ)ರಾಗಿ ಸಮಾಜದ ಬೆಳಕಾಗಿ ನಿಯುಕ್ತ ಗೊಳಿಸಿದ್ದಾನೆ.

ಈ ಇಸ್ಲಾಮೀ ಸುಭಾಷಿತಗಳನ್ನು ಮೈಗೂಡಿಸಿಕೊಂಡು ಆಂದೋಲನದ ಕಾರ್ಯಕರ್ತರು `ಇಖಾಮತುದ್ದೀನ್’ ಮಾದರಿಗಳಾಗಬೇಕು. ಇದಕ್ಕೆ ವ್ಯತಿರಿಕ್ತವಾಗಿ ಈ ಸುಭಾಷಿತಗಳ ಹೆಗ್ಗಳಿಕೆಯಲ್ಲಿ ತಾನೊಬ್ಬ ಆದರ್ಶವಾದಿ ಎಂಬ ಹಣೆಪಟ್ಟಿಯಲ್ಲಿ ತನ್ನ ಭಾವನೆಗಳಿಗೆ ನಿರ್ಬಂಧ, ವಿಧಿ, ಸಂಪ್ರದಾಯಗಳನ್ನು ಹೇರಿ, ಅದನ್ನು ಅನುಸರಿಸುವವರನ್ನು ಧರ್ಮದಿಂದ ಹೊರದೂಡಿ ಶಿರ್ಕ್ ಮತ್ತು ಕುಫ್ರ್ ಪರರೆಂದು ಚಿತ್ರೀಕರಿಸುವುದು, ವಿಮರ್ಶಿಸು ವುದು ಆಂದೋಲನಕ್ಕೆ ಯೋಜಿತವಾದ ವಿಷಯವಾಗಿರುವುದಿಲ್ಲ.

ಮುಸ್ಲಿಮ್ ಸಮುದಾಯದೊಳಗೆ ಸಗಟಾಗಿ ಕಪಟಿಗಳನ್ನು ಸೃಷ್ಟಿಸುವ ಪ್ರವೃತ್ತಿ ಇತ್ತೀಚೆಗಿನ ವರ್ಷಗಳಲ್ಲಿ ಅನಪೇಕ್ಷಿತವಾಗಿ ವ್ಯಾಪಕವಾಗುತ್ತಲೂ ಇವೆ. ಮುಸ್ಲಿಮ್ ಸಮುದಾಯದೊಳಗೆ ಫಾಸಿಕ್, ಪಾಜಿರ್ ಮತ್ತು ಮುನಾಫಿಕ್‌ಗಳು ಸಹಜವಾಗಿ ಪ್ರವಾದಿ(ಸ)ರ ಕಾಲದಿಂದಲೇ ಇದ್ದಾರೆ. ಇವರನ್ನು ಧರ್ಮದಿಂದ ಹೊರದಬ್ಬಿದ ಬಗ್ಗೆ ಯಾವುದೇ ಪುರಾವೆಯಿಲ್ಲ. ಆದರೂ ಇವರ ನಡವಳಿಕೆಗಳಲ್ಲಿ ವಿಧಿ ವಿಧಾನಗಳ ನಿರ್ಲಕ್ಷ್ಯ ಮತ್ತು ಮುನಾಫಿಕ್‌ಗಳು ಇಸ್ಲಾಮೀ ಏಕತೆ-ಸಮಗ್ರತೆಗೆ ವಿಘ್ನಗಳನ್ನು ತಂದೊಡ್ಡುವವರಾಗಿದ್ದಾರೆ. ಇಸ್ಲಾಮೇತರ ವಿಚಾರ ನಡವಳಿಕೆಗಳ ಬಗ್ಗೆ ಸ್ವಯಂ ಜಾಗೃತರಾಗುವಂತೆ ಕುರ್‌ಆನ್ ಅಲ್ಲಲ್ಲಿ ಎಚ್ಚರಿಕೆ ನೀಡಿದೆ. ಅಲ್ಲದೆ ಇವರನ್ನು ಧರ್ಮದಿಂದ ಹೊರದಬ್ಬುವಂತೆ ಯಾವುದೇ ಕೂಟಕ್ಕೆ ಆಜ್ಞೆ ನೀಡಿರುವುದಿಲ್ಲ.

ಪವಿತ್ರ ಕುರ್‌ಆನ್ ಪ್ರತಿಪಾದಿಸಿದಂತೆ, “ಪ್ರವಾದಿಗಳೇ! ಯುಕ್ತಿ ಮತ್ತು ಸದುಪ ದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು ಜನರೊಂದಿಗೆ ಉತ್ತಮ ರೀತಿಯಿಂದ ಸಂವಾದಿಸಿರಿ. ಯಾರು ಅವನ (ದೇವನ) ಮಾರ್ಗದಿಂದ ಭ್ರಷ್ಟನಾಗಿದ್ದಾನೆ ಮತ್ತು ಯಾರು ನೇರ ಮಾರ್ಗದಲ್ಲಿದ್ದಾನೆಂಬುದನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು.” (ಪವಿತ್ರ ಕುರ್‌ಆನ್- 16: 125)

ಇಲ್ಲಿ ಧರ್ಮದಿಂದ ಹೊರ ದೂಡುವ ಪ್ರಸ್ತಾಪವಿಲ್ಲ. ಅನ್ಯಥಾ ಸುಧಾರಣಾತ್ಮಕವಾಗಿ ಸಂವಾದಿಸುವ ಮತ್ತು ತರ್ಕಿಸುವ ಅವಕಾಶವಿದೆ. ಪ್ರಸ್ತುತ ಸೂಕ್ತದಲ್ಲಿ ಸ್ಪಷ್ಟಪಡಿಸಿದಂತೆ ದೇವನ ಮಾರ್ಗದಿಂದ ಯಾರು ಭ್ರಷ್ಟರಾಗಿದ್ದಾರೆ. ಯಾರು ನೇರ ಮಾರ್ಗದಲ್ಲಿದ್ದಾರೆ ಎಂಬುದನ್ನು ನಿನ್ನ ಪ್ರಭು ಚೆನ್ನಾಗಿ ಬಲ್ಲನು.

ಇದಕ್ಕೆ ಪೂರಕವಾಗಿ ಪ್ರವಾದಿ(ಸ) ವಚನ ನಿಖರವಾಗಿ ಮುಸ್ಲಿಮ್ ಉಮ್ಮತ್‌ಗೆ ತಾಕೀತು ನೀಡುತ್ತಿದೆ. ಅನಸ್(ರ)ರಿಂದ ನಿವೇದನೆ: “ನಮ್ಮಂತೆ ನಮಾಝ್ ಮಾಡುವ, ನಮ್ಮ ಕಿಬ್ಲಾವನ್ನು ಅಭಿಮುಖೀ ಕರಿಸುವವನು, ನಾವು ಝಬಹ್(ದಿಬ್ಹ) ಮಾಡಿದುದನ್ನು ತಿನ್ನುವವನು ಮುಸ್ಲಿಮ ನಾಗಿದ್ದಾನೆ. ಅವನ ಹೊಣೆ ಅಲ್ಲಾಹ್ ಮತ್ತು ಅವನ ಪ್ರವಾದಿಯ ಮೇಲಿದೆ. ಆದ ಕಾರಣ ಅವನ ಬಗೆಗಿರುವ ಅಲ್ಲಾಹನ ವಚನವನ್ನು ಭಂಗಗೊಳಿಸದಿರಿ.” (ಬುಖಾರಿ)

ಈ ಹದೀಸ್ ನೀಡಿದ ಸೂಚನೆಯಂತೆ ನಮಾಝ್ ಮಾಡುವವರು ಮುಸ್ಲಿಮರಾಗಿದ್ದಾರೆ. ಅವರಲ್ಲಿ ಫಾಸಿಕ್, ಪಾಜಿರ್ ಮತ್ತು ಮುನಾಫಿಕ್‌ಗಳು ಇರಬಹುದು. ಅವರ ಬಗ್ಗೆ ಕುರ್‌ಆನ್ ಪ್ರತಿಪಾದಿಸಿದಂತೆ ಯಾರು ನೇರ ಪಥದಲ್ಲಿದ್ದಾರೆ ಮತ್ತು ವ್ಯತಿಚಲಿಸಿದ್ದಾರೆ ಎಂಬುದನ್ನು ಅಲ್ಲಾಹನು ಚೆನ್ನಾಗಿ ಅರಿತಿರುತ್ತಾನೆ. ಹದೀಸ್ ಪ್ರತಿಪಾದಿಸಿದಂತೆ ಅವರ ಮೇಲಿನ ಹೊಣೆಗಾರಿಕೆಯು ಅಲ್ಲಾಹ್ ಮತ್ತು ಅವನ ರಸೂಲರಿಗೆ ಇದೆ. ಅದರ ಬಗೆಗಿರುವ ಅಲ್ಲಾಹನ ವಚನವನ್ನು ಭಂಗಗೊಳಿಸದಿರಿ.

ಈ ಹದೀಸ್‌ನ ಬೆಳಕಿನಂತೆ ಉಪದೇಶ, ಸಮಾಲೋಚನೆ ಮೂಲಕ ಪರಸ್ಪರ ಉನ್ನತ ಮಟ್ಟದ ಸಂವಾದಿಗಳಾಗಬೇಕಲ್ಲದೆ, ಆಂತರಿಕವಾಗಿ ಖಂಡ ತುಂಡಾದ ತರ್ಕ-ತಗಾದೆಗಳ ಮೂಲಕ ಅಲ್ಲಾಹನ ವಚನವನ್ನು ಭಂಗಗೊಳಿಸುವುದು ಜ್ಞಾನವಂತಿಕೆಯಲ್ಲ. ಅನ್ಯಥಾ ಅದು ಮುಸ್ಲಿಮ್ ಉಮ್ಮತ್ (ಸಮುದಾಯ) ಅನ್ನು ಒಡೆಯುವ ಹರಿತವಾದ ಕತ್ತಿಯಾಗಿ ಮಾರ್ಪಡಬಹುದೇ ಹೊರತು ಪೂರ್ಣವಾಗಿ ಇಸ್ಲಾಮೀ ಮೌಲ್ಯಗಳನ್ನು ಆವಿಷ್ಕರಿಸಿದ ಮಾದರಿ ಜಮಾಅತ್ ಆಗಿ ಪ್ರತಿಬಿಂಬಿತವಾಗಲಾರದು. ಹರಾಮ್-ಹಲಾಲ್ ಬಗ್ಗೆ ನೀರಸವಾಗಿ ಪ್ರವರ್ತಿಸುವ ಅನೇಕರಿದ್ದಾರೆ. ತಮ್ಮ ವ್ಯಾಪಾರೋದ್ಯಮಗಳನ್ನು ಬಡ್ಡಿಯಾವೃತ ಕೊಡುಕೊಳ್ಳುವಿಕೆಯಲ್ಲಿ ಕುದುರಿಸುವ ಪ್ರಕ್ರಿಯೆಗಳು ಯಾವ ಅರ್ಥದಲ್ಲೂ ಇಸ್ಲಾಮಿನ ಪೂರ್ಣತೆಯನ್ನು ಹೊಂದಿರುವುದಿಲ್ಲ.

ತೌಹೀದ್ ಇಸ್ಲಾಮೀ ಏಕತೆ(ವಹದತ್)ಗೆ ಪೂರಕವಾಗಿರ ಬೇಕು. ಅದರಂತೆ ಆಚಾರ ಅನುಷ್ಠಾನಗಳಲ್ಲಿ ವೈವಿಧ್ಯತೆಯಿರುವುದು ಮಾನವನಲ್ಲಿರುವ ಪ್ರಾಕೃತಿಕ ಗುಣವಾಗಿದೆ. ಮರ್‌ಹಬ್‌ಗಳು, ಹದೀಸ್‌ಗಳ ಅನುಸರಣೆಯ ಅನುಷ್ಠಾನದಲ್ಲೂ ಆಂತರಿಕ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಏಕೆಂದರೆ ಮಾನವನು ಸಹಜವಾಗಿ ವೈಚಾರಿಕ ಭಿನ್ನತೆಯಲ್ಲಿ ಅಧೀಷ್ಟಿತನಾಗಿರುತ್ತಾನೆ.

ಅದರಂತೆ ಫಿಕ್ಹ್ (ಕರ್ಮಶಾಸ್ತ್ರ) ಮತ್ತು ಅದರ ಅನುಷ್ಠಾನದಲ್ಲೂ ಭಿನ್ನತೆಯಿರಬಹುದು. ಕಬರ್ ಝಿಯಾರತ್‌ನ ನೆಪದಲ್ಲಿ ಆಡಂಬರದ ಉರೂಸಿನ ಮೂಲಕ ಮೃತರೊಂದಿಗೆ ತವಸ್ಸುಲ್ ಮಾಡುವ ಅನುಚಿತ ಕ್ರಿಯೆಗಳು ಶಿರ್ಕ್ ಪರವಾಗಬಲ್ಲವು. ಆದರೆ ಇಂತಹವರನ್ನು ಮಕ್ಕಾ ಮುಶ್ರಿಕರಿಗೆ ಹೋಲಿಸಿ ಸಗಟಾಗಿ ಮುಶ್ರಿಕರನ್ನಾಗಿಸಿ ಹೊರದಬ್ಬುವುದು ಇನ್ನೊಂದು ಅಜ್ಞಾನವಾಗಿದೆ. ಏಕೆಂದರೆ ಮೇಲೆ ಉಲ್ಲೇಖಿಸಿದ ಹದೀಸ್‌ನಂತೆ ಕಿಬ್ಲಾಕ್ಕೆ ಮುಖಮಾಡಿ ನಮಾಝ್ ಮಾಡುವವರು, ನಮ್ಮಂತೆ ಝಬಹ್ ಮಾಡಿ ತಿನ್ನುವವರು ಆಗಿದ್ದಾರೆ. ಅವರ ಹೊಣೆಗಾರಿಕೆಯು ಅಲ್ಲಾಹ್ ಮತ್ತು ರಸೂಲರ ಮೇಲಿದೆ. ಅದರ ಬಗೆಗಿರುವ ಅಲ್ಲಾಹನ ವಚನವನ್ನು ಭಂಗಗೊಳಿಸುವಂತಿಲ್ಲ.

ತೌಹೀದ್ ಏಕತೆ(ವೈವಿಧ್ಯತೆಯಲ್ಲಿ ಏಕತೆ)ಯನ್ನು ಬಲ ಪಡಿಸಬೇಕಾಗಿದೆ. ಇದಕ್ಕೆ ಹೊರತಾಗಿ ತೌಹೀದ್‌ನ ಹೆಗ್ಗಳಿಕೆಯಲ್ಲಿ ‘ಏಕರೂಪತೆ’ಯ ಬೆನ್ನು ಹಿಡಿದರೆ, ಸಮುದಾಯ ಒಡೆದು ಅಲ್ಲಾಹ್ ಮತ್ತು ಪ್ರವಾದಿಯ ವಚನಕ್ಕೆ ಭಂಗವುಂಟಾಗುವುದು ನಿಶ್ಚಿತ.

ಇಸ್ಲಾಮೀ (ಇಖಾಮತುದ್ದೀನ್) ಆಂದೋಲನದ ವಕ್ತಾರರು ಸಮಾಲೋಚನೆ, ಸಂವಾದಗಳ ಮೂಲಕ, ಬರಹ ಭಾಷಣಗಳ ಮೂಲಕ ಇಸ್ಲಾಮೀ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಬೇಕಾಗಿದೆ. ಧರ್ಮದೊಳಗೆ ದಾಂಧಲೆಗಳನ್ನು ಸೃಷ್ಟಿಸಿ ಪ್ರತ್ಯೇಕತೆಗೆ ಪ್ರೇರಣೆ ನೀಡುವ ಯಾವುದೇ ಕ್ರಿಯೆಗಳಿಂದ ದೂರವಿರಬೇಕು.