ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 5: ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ, ಮೆಹಬೂಬ ಮುಫ್ತಿ ಸಹಿತ ನಾಯಕರನ್ನು ಗೃಹಬಂಧನದಲ್ಲಿರಿಸಿದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತೀವ್ರ ಟೀಕೆ ಮಾಡಿದ್ದು ಭಾರತ ಈಗಲೂ ಪ್ರಜಾಪ್ರಭುತ್ವ ದೇಶವೇ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
“ಯಾವುದೇ ಆರೋಪ ಹೊರಿಸದೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳನ್ನು ಬಂಧನದಲಿಟ್ಟು ಲಕ್ಷಾಂತರ ಜನರನ್ನು ಬಂದಿಯಾಗಿಟ್ಟು ಆರು ತಿಂಗಳಾಯಿತು. ಇದು ಎಷ್ಟು ಸಮಯ ಮುಂದುವರಿಯಬಹುದೆಂದು ಆರು ತಿಂಗಳ ಹಿಂದೆ ನಾನು ಪ್ರಶ್ನಿಸಿದ್ದೆ. ಈಗ ನಾವು ಕೇಳುತ್ತಿರುವುದು ಭಾರತ ಈಗಲೂ ಒಂದು ಪ್ರಜಾಪ್ರಭುತ್ವ ದೇಶವಾಗಿದೆಯೇ ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಇರುವ ಆರ್ಟಿಕಲ್ 370 ರದ್ದು ಮಾಡಿ ಜಮ್ಮು ಕಾಶ್ಮೀರವನ್ನು ಜಮ್ಮು , ಲಡಕ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸುವುದರೊಂದಿಗೆ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಉದ್ಯಮಿಗಳು ಕಸ್ಟಡಿಯಲ್ಲಾಗಿದ್ದರು. ಕೆಲವು ಪ್ರಾದೇಶಿಕ ರಾಜಕೀಯ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದರೂ ಫಾರೂಕ್ ಅಬ್ದುಲ್ಲ, ಮೆಹಬೂಬ ಮುಫ್ತಿ ಈಗಲೂ ಗೃಹಬಂಧನದಲ್ಲಿದ್ದಾರೆ.












