ಇದೊಂದು ಧರ್ಮ ಯುದ್ಧವೇ?

0
309

✍️ ಅಸದ್ ಮಿರ್ಜಾ
ಲೇಖಕರು ಮತ್ತು ವಿಶ್ಲೇಷಕರು

ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನೇತೃತ್ವದ ಈ ಯುದ್ಧವನ್ನು ಪ್ರಮುಖವಾಗಿ ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಪ್ರಾಬಲ್ಯಕ್ಕೆ ನೇರ ಸವಾಲಾಗಿರುವ ಏಕೈಕ ರಾಷ್ಟ್ರವಾದ ಇರಾನ್ ಅನ್ನು ಕುಗ್ಗಿಸುವ ಪ್ರಯತ್ನ ಎಂದು ಬಣ್ಣಿಸಬಹುದು. ಈ ಪ್ರದೇಶದ ಇತರ ಹೆಚ್ಚಿನ ದೇಶಗಳು ತಮ್ಮ ಆರ್ಥಿಕ ಸಾಮ್ರಾಜ್ಯ ಮತ್ತು ವಂಶಾಡಳಿತವನ್ನು ರಕ್ಷಿಸಿಕೊಳ್ಳುವ ಸಲುವಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಅಮೆರಿಕದ ಪ್ರಭಾವಕ್ಕೆ ಒಳಗಾಗಿವೆ.

ಈ ಭಾಗದಲ್ಲಿ ಪ್ರಜಾಪ್ರಭುತ್ವ ಎಂಬುದು ಮರೀಚಿಕೆಯಾಗಿದೆ. ʻಅರಬ್ ಕ್ರಾಂತಿ' ಅನ್ನು ಈ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಕೃತಿಯನ್ನು ಉತ್ತೇಜಿಸುವ ಆಶಾದಾಯಕ ಚಳುವಳಿ ಎಂದು ಕರೆಯಬಹುದಾದರೂ, ಈ ಪ್ರದೇಶದ ವಂಶಾಡಳಿತ ಅಥವಾ ಪ್ರಜಾಪ್ರಭುತ್ವ ವಿರೋಧಿ ಆಡಳಿತಗಾರರನ್ನು ಬೆಂಬಲಿಸುವ ಅಮೆರಿಕದ ರಹಸ್ಯ ಕಾರ್ಯಾಚರಣೆಗಳಿಂದ ಅದು ಬಹಳ ಜಾಣ್ಮೆಯಿಂದ ಹತ್ತಿಕ್ಕಲ್ಪಟ್ಟಿತು. ಕಳೆದ ಹಲವು ವರ್ಷಗಳಿಂದ, ಈ ಪ್ರದೇಶದಲ್ಲಿ ಅಮೆರಿಕದ ಪ್ರಾಬಲ್ಯಕ್ಕೆ ಬೆದರಿಕೆಯಾಗಿ ಉಳಿದಿರುವ ಏಕೈಕ ಇಸ್ಲಾಮಿಕ್ ರಾಷ್ಟ್ರ ಇರಾನ್ ಆಗಿದೆ. ಅಲ್ಲದೆ, ವಿಶ್ವದ ತೈಲ ಮಾರುಕಟ್ಟೆಯ ಮೇಲೆ ಅಮೆರಿಕದ ನಿಯಂತ್ರಣ ಮತ್ತು ಪ್ರಾಬಲ್ಯಕ್ಕಾಗಿ ಇರಾನಿನ ತೈಲ ಹರಿವನ್ನು ನಿಯಂತ್ರಿಸುವ ಅದರ ಯೋಜನೆಗಳನ್ನು ಇರಾನ್ ವಿಫಲ ಗೊಳಿಸಿದೆ.

ಇದೇ ಸಮಯದಲ್ಲಿ, ಇಸ್ಲಾಮಿಕ್ ಜಗತ್ತಿನ ನಾಯಕರೆಂದು ಕರೆಸಿಕೊಳ್ಳುವ ಸೌದಿ ಅರೇಬಿಯಾ ಮತ್ತು ಇತರ ಕೊಲ್ಲಿ ರಾಷ್ಟçಗಳಾದ ಯುಎಇ, ಬಹ್ರೇನ್, ಕತಾರ್, ಓಮನ್ ಮುಂತಾದವು ಅಮೆರಿಕದ ಒತ್ತಡಕ್ಕೆ ಮಣಿದಿವೆ ಮತ್ತು ಇಸ್ರೇಲ್ ನೊಂದಿಗೆ ಸಂಬAಧವನ್ನು ಸ್ಥಾಪಿಸಿವೆ. ಇಸ್ರೇಲ್‌ನ ಅಂತಿಮ ಯೋಜನೆಯು ಇಸ್ಲಾಮಿಕ್ ಜಗತ್ತನ್ನು ನಾಶಪಡಿಸಿ, ತನ್ನ ಧಾರ್ಮಿಕ ಗ್ರಂಥಗಳ ಬೋಧನೆ ಯಂತೆಗ್ರೇಟರ್ ಇಸ್ರೇಲ್’ (ಅಖಂಡ ಇಸ್ರೇಲ್) ಅನ್ನು ಸ್ಥಾಪಿಸುವುದಾಗಿದೆ ಎಂಬ ಸತ್ಯವನ್ನು ಇಲ್ಲಿ ಯಾರೋ ಮರೆಯುತ್ತಿದ್ದಾರೆ ಅಥವಾ ನಿರ್ಲಕ್ಷಿಸುತ್ತಿದ್ದಾರೆ.

ಹಾಗಾಗಿ, ಪ್ರಸ್ತುತ ಸಂಘರ್ಷವು ಎರಡು ಪ್ರಾಥಮಿಕ ಉದ್ದೇಶಗಳನ್ನು ಹೊಂದಿದೆ: ಮೊದಲನೆಯದು, ವಿಶ್ವದ ತೈಲ ಪೂರೈಕೆಯನ್ನು ಹೇಗೆ ನಿಯಂತ್ರಿಸುವುದು (ಅಮೆರಿಕದ ನೇತೃತ್ವದಲ್ಲಿ) ಮತ್ತು ಎರಡನೆಯದು, ಗ್ರೇಟರ್ ಇಸ್ರೇಲ್ ಅನ್ನು ಹೇಗೆ ಸ್ಥಾಪಿಸುವುದು (ಇಸ್ರೇಲ್‌ಗಾಗಿ). ಇಲ್ಲಿಯವರೆಗೆ, ಇಡೀ ಪ್ರಚಾರದ ಕಥನದಲ್ಲಿ ಈ ಎರಡು ಉದ್ದೇಶಗಳನ್ನು ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ.

ಇರಾನಿನ ತೈಲ ಮತ್ತು ಅದರ ಪರಮಾಣು ಶೇಖರಣೆಯು ಅವರ ಮೇಲೆ ದಾಳಿ ಮಾಡಲು ಅಮೆರಿಕ-ಇಸ್ರೇಲ್ ಒಕ್ಕೂಟ ನೀಡುತ್ತಿರುವ ಮುಖ್ಯ ಕಾರಣಗಳಾಗಿದ್ದರೂ, ಧಾರ್ಮಿಕ ಆಯಾಮವು ಮತ್ತೊಂದು ಪ್ರಬಲ ಅಂಶವಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಆದರೆ ಇದನ್ನು ಬೇರೆಯದೇ ಕಥನದ ಅಡಿಯಲ್ಲಿ ಮರೆಮಾಚಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕವು ಈ ಯುದ್ಧವನ್ನು ʻಧರ್ಮಯುದ್ಧ' ಎಂದು ಬಣ್ಣಿಸುವ ಮೂಲಕ ಸೈನಿಕರನ್ನು ಸೇರಿಸಿಕೊಳ್ಳಲು ಮತ್ತು ಮಿಲಿಟರಿ ಅಭಿಯಾನಕ್ಕೆ ಸಾರ್ವಜನಿಕ ಬೆಂಬಲವನ್ನು ಪಡೆಯಲು ಯೋಜಿಸುತ್ತಿದೆ.

ಅಮೆರಿಕದ ವಾಚ್‌ಡಾಗ್ (ಕಾವಲು ಸಂಸ್ಥೆ) ವರದಿಯೊಂದರ ಪ್ರಕಾರ, ಈ ಯುದ್ಧವು "ಬೈಬಲ್‌ನಲ್ಲಿ ಉಲ್ಲೇಖಿಸಲಾದ ಅಂತ್ಯಕಾಲವನ್ನು (End of Times) ಪ್ರೇರೇಪಿಸುವ ಉದ್ದೇಶ ಹೊಂದಿದೆ" ಎಂದು ಅಮೆರಿಕದ ಸೈನಿಕರಿಗೆ ತಿಳಿಸಲಾಗಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ಇತ್ತೀಚೆಗೆ ಇರಾನ್ ಅನ್ನು "ಧಾರ್ಮಿಕ ಮತಾಂಧ ಹುಚ್ಚರು" ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕದ ಮಿಲಿಟರಿ ರಿಲಿಜಿಯಸ್ ಫ್ರೀಡಮ್ ಫೌಂಡೇಶನ್ (MRFF) ಎಂಬ ಸಂಸ್ಥೆಯು, ಇರಾನ್ ಜೊತೆಗಿನ ಯುದ್ಧವು "ಅರ್ಮಗೆಡ್ಡೋನ್" (Armageddon) ಅಥವಾ ಬೈಬಲ್‌ನ "ಅಂತ್ಯ ಕಾಲ"ಕ್ಕೆ ಕಾರಣವಾಗಲಿದೆ ಎಂದು ಅಮೆರಿಕದ ಸೈನಿಕರಿಗೆ ಹೇಳಲಾಗುತ್ತಿದೆ ಎಂಬ ಬಗ್ಗೆ ಇಮೇಲ್ ಮೂಲಕ ದೂರುಗಳನ್ನು ಸ್ವೀಕರಿಸಿರುವುದಾಗಿ ತಿಳಿಸಿದೆ. ಹೆಸರಿಸದ ಅಧಿಕಾರಿಯೊಬ್ಬರು ಒಖಈಈಗೆ ಬರೆದ ಇಮೇಲ್‌ನಲ್ಲಿ, ಕಮಾಂಡರ್ ಒಬ್ಬರು ಅಧಿಕಾರಿಗಳಿಗೆ "ಇದೆಲ್ಲವೂ ದೇವರ ದೈವಿಕ ಯೋಜನೆಯ ಭಾಗವಾಗಿದೆ ಎಂದು ಸೈನಿಕರಿಗೆ ಹೇಳಲು ಒತ್ತಾಯಿಸಿದರು ಮತ್ತು ಅರ್ಮಗೆಡ್ಡೋನ್ ಹಾಗೂ ಯೇಸು ಕ್ರಿಸ್ತನ ಮರಳುವಿಕೆಯನ್ನು ಉಲ್ಲೇಖಿಸುವ ಬೈಬಲ್‌ನ ರೆವ್ಯೂಲೇಷನ್ ಪುಸ್ತಕದ ಹಲವಾರು ಉಲ್ಲೇಖಗಳನ್ನು ನಿರ್ದಿಷ್ಟವಾಗಿ ನೀಡಿದರು" ಎಂದು ಬರೆದಿದ್ದಾರೆ.

MRFF ಅಮೆರಿಕದ ಸೈನಿಕರ ಧಾರ್ಮಿಕ ಸ್ವಾತಂತ್ರ‍್ಯವನ್ನು ಎತ್ತಿಹಿಡಿಯಲು ಸಮರ್ಪಿತವಾದ ಲಾಭರಹಿತ ಸಂಸ್ಥೆಯಾಗಿದೆ. "ಟ್ರಂಪ್ ಅವರು ಅರ್ಮಗೆಡ್ಡೋನ್ ಉಂಟುಮಾಡಲು ಮತ್ತು ಭೂಮಿಗೆ ಮರಳುವ ಸಂಕೇತವಾಗಿ ಇರಾನ್‌ನಲ್ಲಿ ಸಾಂಕೇತಿಕ ಬೆಂಕಿಯನ್ನು ಹಚ್ಚಲು ಯೇಸುವಿನಿಂದ ಅಭಿಷೇಕಿಸಲ್ಪಟ್ಟಿದ್ದಾರೆ" ಎಂದು ಕಮಾಂಡರ್ ತನ್ನ ಘಟಕಕ್ಕೆ ತಿಳಿಸಿದ್ದಾರೆ ಎಂದು ಆ ಅಧಿಕಾರಿ ಆರೋಪಿಸಿದ್ದಾರೆ.

ಅದೇ ಸಮಯದಲ್ಲಿ, ಇಸ್ರೇಲ್ ಮತ್ತು ಅಮೆರಿಕದ ನಾಯಕರು ಸಾರ್ವಜನಿಕವಾಗಿಯೂ ಧಾರ್ಮಿಕ ವಾದವನ್ನು ಬಳಸುತ್ತಿದ್ದಾರೆ. ಕಳೆದ ತಿಂಗಳು, ಇಸ್ರೇಲ್‌ನಲ್ಲಿರುವ ಅಮೆರಿಕದ ರಾಯಭಾರಿ ಮೈಕ್ ಹಕ್ಕಬೀ ಅವರು ಸಂಪ್ರದಾಯವಾದಿ ಅಮೆರಿಕನ್ ವ್ಯಾಖ್ಯಾನಕಾರ ಟಕರ್ ಕಾರ್ಲ್ಸನ್ ಅವರೊಂದಿಗಿನ ಸಂದರ್ಶನದಲ್ಲಿ, ಇಸ್ರೇಲ್ "ಬಹುತೇಕ ಇಡೀ ಮಧ್ಯಪ್ರಾಚ್ಯ"ವನ್ನು ವಶಪಡಿಸಿಕೊಂಡರೆ ಅದು "ಸರಿ" ಎಂದು ಹೇಳಿದರು. ಏಕೆಂದರೆ, ಬೈಬಲ್‌ನಲ್ಲಿ ಆ ಭೂಮಿಯನ್ನು ಅವರಿಗೆ ಭರವಸೆ ನೀಡಲಾಗಿದೆ. ಆದಾಗ್ಯೂ, ಇಸ್ರೇಲ್ ಹಾಗೆ ಮಾಡಲು ಪ್ರಯತ್ನಿಸುತ್ತಿಲ್ಲ ಎಂದು ಹಕ್ಕಬೀ ಸೇರಿಸಿದರು.

ವಾರದ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ ರೂಬಿಯೊ, "ಇರಾನ್ ಅನ್ನು ಹುಚ್ಚರು ನಡೆಸುತ್ತಿದ್ದಾರೆ - ಧಾರ್ಮಿಕ ಮತಾಂಧ ಹುಚ್ಚರು. ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ" ಎಂದರು. ಮತ್ತು ಹಿಂದಿನ ದಿನ ಪೆಂಟಗನ್ ಸುದ್ದಿಗೋಷ್ಠಿಯಲ್ಲಿ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, "ಇರಾನ್‌ನಂತಹ ಹುಚ್ಚು ಆಡಳಿತಗಳು, ಪ್ರವಾದಿಯ ಇಸ್ಲಾಮಿಕ್ ಭ್ರಮೆಗಳಲ್ಲಿ ಮುಳುಗಿರುವವರಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಿಡಲಾಗುವುದಿಲ್ಲ" ಎಂದು ಹೇಳಿದರು.

ವಾರದ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನಿಯನ್ನರನ್ನು ತೋರಾ ಗ್ರಂಥವನ್ನು ಉಲ್ಲೇಖಿಸಿ, ಇರಾನನ್ನು ಪುರಾತನ ಬೈಬಲ್ ಶತ್ರುಗಳಾದ ʻಅಮಾಲೆಕೈಟ್ಸ್’ಗೆ ಹೋಲಿಸಿದರು. ಯಹೂದಿ ಸಂಪ್ರದಾಯದಲ್ಲಿ “ಅಮಾಲೆಕ್” ಎಂದರೆ “ಶುದ್ಧ ದುಷ್ಟ ತನ”ದ ಸಂಕೇತ. “ಈ ವಾರ ತೋರಾ ಗ್ರಂಥದ ಒಂದು ಭಾಗ ನಾವು ಓದುತ್ತೇವೆ, `ಅಮಾಲೆಕ್ ನಿಮಗೆ ಏನು ಮಾಡಿದ್ದಾನೆ ಎಂಬುದನ್ನು ನೆನಪಿಡಿ.’ ನಾವು ನೆನಪಿಸಿಕೊಳ್ಳುತ್ತೇವೆ- ಮತ್ತು ನಾವು ಕಾರ್ಯನಿರ್ವಹಿಸುತ್ತೇವೆ.”

ಒಟ್ಟಾರೆಯಾಗಿ, ಈ ಧಾರ್ಮಿಕ ತಿರುವು ನೀಡಲು ಕಾರಣವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಧಾರ್ಮಿಕ ವಾದವು ಅಮೆರಿಕದ ಇವಾಂಜೆಲಿಕಲ್ ಕ್ರಿಶ್ಚಿಯನ್ನರು ಮತ್ತು ಕ್ರಿಶ್ಚಿಯನ್ ಝಿಯಾನಿಸ್ಟ್ ಗಳಲ್ಲಿ ಆಳವಾಗಿ ಬೇರೂರಿರುವ ನಂಬಿಕೆಗಳನ್ನು ಸಕ್ರಿಯಗೊಳಿಸುತ್ತದೆ. ಅವರು ಮಧ್ಯಪ್ರಾಚ್ಯ ಸಂಘರ್ಷಗಳನ್ನು ಬೈಬಲ್‌ನ “ಅಂತ್ಯಕಾಲ” ಕಥನದ ಭಾಗವಾಗಿ ನೋಡುತ್ತಾರೆ. ಇದು ಅರ್ಮಗೆಡ್ಡೋನ್, ಯೇಸು ಕ್ರಿಸ್ತನ ಮರಳುವಿಕೆಯ ಉಲ್ಲೇಖಗಳನ್ನು ಒಳಗೊಂಡಿದೆ. ಇಂತಹ ಭಾಷೆಯು ಯುದ್ಧವನ್ನು ದೈವಿಕವಾಗಿ ಮಂಜೂರಾದ ಮತ್ತು ನೈತಿಕವಾಗಿ ತುರ್ತು ಎಂದು ಬಿಂಬಿಸುವ ಮೂಲಕ ರಾಜಕೀಯ ಮತ್ತು ಧಾರ್ಮಿಕ ಬೆಂಬಲವನ್ನು ಒಟ್ಟುಗೂಡಿಸುತ್ತದೆ.

ನಾಯಕರು ಧಾರ್ಮಿಕ ಸಂಕೇತಗಳನ್ನು ಬಳಸಿಕೊಂಡು “ನಾವು ಮತ್ತು ಅವರು” ಎಂಬ ಸ್ಪಷ್ಟ ವಿಭಜನೆಯನ್ನು ಸೃಷ್ಟಿಸುತ್ತಾರೆ. ಈ ಸಂಘರ್ಷವನ್ನು ಭೌಗೋಳಿಕ ರಾಜಕೀಯ ವಿವಾದಕ್ಕಿಂತ ಹೆಚ್ಚಾಗಿ ನಾಗರಿಕತೆಗಳ ನಡುವಿನ ಸಂಘರ್ಷವನ್ನಾಗಿ- ಅಂದರೆ ಶಿಯಾ ಇಸ್ಲಾಮ್ ವಿರುದ್ಧ ಯಹೂದಿಗಳ ಉಳಿವು ಎಂಬಂತೆ ಚಿತ್ರಿಸುತ್ತಾರೆ. ಬೆಂಜಮಿನ್ ನೆತನ್ಯಾಹು ಇರಾನ್ ಅನ್ನು ಅಸ್ತಿತ್ವಕ್ಕೆ ಧಕ್ಕೆಯಾಗಿರುವ “ಶುದ್ಧ ದುಷ್ಟ” ಎಂದು ಚಿತ್ರಿಸಲು ಮೊರ್ದೆಕೈ, ಎಸ್ತರ್ ಮತ್ತು ಅಮಾಲೆಕೈಟ್ಸ್ ನಂತಹ ಬೈಬಲ್ ಪಾತ್ರಗಳನ್ನು ಬಳಸಿಕೊಂಡಿದ್ದಾರೆ. ಈ ಕಥನವು ಸಂಕೀರ್ಣ ಪ್ರಾದೇಶಿಕ ವಿದ್ಯಮಾನಗಳನ್ನು ಸಾರ್ವಜನಿಕರ ಮನಮುಟ್ಟುವಂತಹ ಒಂದು ನೈತಿಕ ನಾಟಕವನ್ನಾಗಿ ಸರಳಗೊಳಿಸುತ್ತದೆ.

ಯುದ್ಧವನ್ನು ದೈವಿಕ ಕಾರ್ಯಾಚರಣೆಯಾಗಿ ಬಿಂಬಿಸುವ ಮೂಲಕ, ನಾಯಕರು ಸಂಘರ್ಷವನ್ನು ನೈತಿಕಗೊಳಿಸುತ್ತಾರೆ, ಮಿಲಿಟರಿ ಕ್ರಮವನ್ನು ಸಮರ್ಥಿಸುತ್ತಾರೆ ಮತ್ತು ರಾಜಕೀಯ ರಾಜಿ ಮಾಡಿಕೊಳ್ಳುವುದನ್ನು ನಿರುತ್ಸಾಹಗೊಳಿಸುತ್ತಾರೆ. ಆದಾಗ್ಯೂ, ಈ ವಿಧಾನವು ಅಂತರರಾಷ್ಟ್ರೀಯ ಮೈತ್ರಿಗಳನ್ನು (ವಿಶೇಷವಾಗಿ ಜಾತ್ಯತೀತ ಪ್ರಜಾಪ್ರಭುತ್ವಗಳು ಮತ್ತು ಸುನ್ನಿ ಅರಬ್ ರಾಷ್ಟ್ರಗಳೊಂದಿಗೆ) ದುರ್ಬಲಗೊಳಿಸುವ ಅಪಾಯವನ್ನು ಹೊಂದಿದೆ. ಅಲ್ಲದೆ ಇರಾನ್‌ನ ಸ್ವಂತ ಥಿಯೋಕ್ರಾಟಿಕ್ ವಾದವನ್ನು ಇದು ಪುಷ್ಠೀಕರಿಸುತ್ತದೆ ಮತ್ತು ಸುಧಾರಣೆಯನ್ನು ಬಯಸುವ ಇರಾನಿನ ಅತೃಪ್ತರನ್ನು ದೂರವಿಡುತ್ತದೆ.

ಎಲಿ ಫೆಡರ್‌ಮನ್ ಮತ್ತು CAIR ಸೇರಿದಂತೆ ವಿಮರ್ಶಕರು, ಈ ಧಾರ್ಮಿಕ ಚೌಕಟ್ಟು ಅಪಾಯಕಾರಿ, ಇದು ಇಸ್ಲಾಮೋಫೋಬಿಯಾ ಮತ್ತು ಯಹೂದಿ ವಿರೋಧಿ ಭಾವನೆಯನ್ನು ಉತ್ತೇಜಿಸುತ್ತದೆ ಮತ್ತು ಶಾಂತಿಯನ್ನು ಸ್ಥಾಪಿಸುವುದನ್ನು ಕಷ್ಟಕರವಾಗಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಸಂಘರ್ಷವು ಮೂಲಭೂತವಾಗಿ ಭೌಗೋಳಿಕ ರಾಜಕೀಯವಾಗಿದೆ- ಇದು ಅಧಿಕಾರ, ಪರಮಾಣು ಪ್ರಸರಣ ಮತ್ತು ಪ್ರಾದೇಶಿಕ ಪ್ರಾಬಲ್ಯದಿಂದ ಪ್ರೇರಿತವಾಗಿದೆಯೇ ಹೊರತು ಧರ್ಮಗಳ ಯುದ್ಧವಲ್ಲ ಎಂದು ಅವರು ವಾದಿಸುತ್ತಾರೆ.

ಇಲ್ಲಿ ನಾವು ಮತ್ತೊಂದು ಸತ್ಯವನ್ನು ನಿರ್ಲಕ್ಷಿಸಬಾರದು: ಥಿಯೋ ಕ್ರಾಟ್, ಇಸ್ಲಾಮಿಕ್ ಮೂಲಭೂತವಾದಿ ಆಡಳಿತ ಎಂದು ಕರೆಯಲ್ಪಡುವ ಇರಾನ್ ಪ್ರಸ್ತುತ ಯುದ್ಧವನ್ನು ಧಾರ್ಮಿಕ ಯುದ್ಧ ಎಂದು ಚಿತ್ರಿಸಲು ಪ್ರಯತ್ನಿಸಿಲ್ಲ. ಆದರೆ, ಪ್ರಜಾಪ್ರಭುತ್ವ ಮತ್ತು ಉದಾರ ಚಿಂತನೆಯ ಜಾಗ ತಿಕ ನಾಯಕನೆಂದು ಕರೆಸಿಕೊಳ್ಳುವ, ಧಾರ್ಮಿಕ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಉತ್ತೇಜಿಸವವನೆಂಬ ಬಿರುದಾಂಕಿತ ಅಮೆರಿಕವೇ ಇದನ್ನು ಧಾರ್ಮಿಕ ಯುದ್ಧವಾಗಿ ಬಿಂಬಿಸುತ್ತಿದೆ.

ಕೃಪೆ: theaidem.com