ಸನ್ಮಾರ್ಗ ವಾರ್ತೆ
ರೋಣ: “ಪ್ರವಾದಿ ಮುಹಮ್ಮದ್ (ಸ) ಅವರು ಇಡೀ ವಿಶ್ವಕ್ಕೆ ದೈವೀಕ ಮಾರ್ಗದರ್ಶನದಂತೆ ಸಮಾನತೆಯ ಪರಿಕಲ್ಪನೆಯನ್ನು ನೀಡಿದರು, ಯಾರು ಯಾರನ್ನು ಕೀಳಾಗಿ ಹಾಗೂ ತುಚ್ಚವಾಗಿ ಕಾಣಬಾರದು ಎಂಬುದು ಅವರ (ಸ) ಸಂದೇಶದ ಪ್ರಮುಖ ಭಾಗವಾಗಿತ್ತು” ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ, ಅಕ್ಬರ್ ಅಲಿ ಉಡುಪಿ ಹೇಳಿದರು.
ಅವರು ಜಮಾಅತೆ ಇಸ್ಲಾಮೀ ಹಿಂದ್ ರೋಣ ವತಿಯಿಂದ ಸ್ಥಳೀಯ ಮದೀನಾ ಮಸೀದಿಯಲ್ಲಿ ಹಮ್ಮಿಕೊಂಡ ‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್(ಸ)’ ಎಂಬ ವಿಚಾರಗೋಷ್ಠಿಯ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿ ಮಾತನಾಡಿದರು. ಮುಂದುವರಿದು ಅವರು ‘ಎಲ್ಲ ಪ್ರವಾದಿಗಳು ಮಾನವರನ್ನು ಎಲ್ಲ ರೀತಿಯ ಶೋಷಣೆ, ಮರ್ದನ ಹಾಗೂ ದಬ್ಬಾಳಿಕೆಯಿಂದ ವಿಮೋಚಿಸಿ ಅವರನ್ನು ಏಕದೇವನ ಆರಾಧನೆಡೆಗೆ ಕರೆ ನೀಡಿದರು, ಆ ಪರಿಪಾಲಕ ಎಲ್ಲಾ ಕಾಲದ, ಪ್ರದೇಶದ, ಹಾಗೂ ಸಕಲ ಮಾನವರ ಸೃಷ್ಟಿಕರ್ತನಾಗಿದ್ದಾನೆ’ ಎಂದವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡರಾದ ಐ.ಎಸ್ ಪಾಟೀಲ್ ” ಎಲ್ಲ ಧರ್ಮಗಳು ಜನರನ್ನು ಪ್ರೀತಿಸಲು ಕಲಿಸುತ್ತವೆ, ಆದ್ದರಿಂದ ನಾವೆಲ್ಲರೂ ಕೂಡಿ ಬಾಳುವುದರ ಮೂಲಕ ಬಲಿಷ್ಠ ಭಾರತವನ್ನು ಕಟ್ಟಲು ಪ್ರಯತ್ನಿಸಬೇಕು” ಎಂದು ನುಡಿದರು.
ರಿಯಾಝ್ ಅಹ್ಮದ್ ಸಹ ಕಾರ್ಯದರ್ಶಿ, ಜ. ಇ. ಹಿಂದ್ ಕರ್ನಾಟಕ, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶ ಹಾಗೂ ಆಶಯದ ಕುರಿತು ಸವಿಸ್ತಾರವಾಗಿ ಬೆಳಕು ಚೆಲ್ಲಿದರು.

ಮೌಲಾನ ಮುಹಮ್ಮದ್ ಫಾರೂಖ್ ಉಮರಿ ಜಿಲ್ಲಾ ಸಂಚಾಲಕರು, ಜ.ಇ.ಹಿಂದ್ ಗದಗ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಫೈಝ್ ಅಹ್ಮದ್ ಕಲಾದಗಿ ಸ್ಥಾನೀಯ ಅಧ್ಯಕ್ಷರು, ಜ.ಇ. ಹಿಂದ್ ರೋಣ, ಕಾರ್ಯಕ್ರಮವನ್ನು ನಿರೂಪಿಸಿದರು. ಮುಹಮ್ಮದ್ ರಝಾ ಕಲ್ಮನಿ ಕಾರ್ಯಕರ್ತರು, ಜ.ಇ. ಹಿಂದ್ ಗದಗ, ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.












