2022ರ ಉ. ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತ್ಯೇಕವಾಗಿ ಸ್ಪರ್ಧಿಸಲಿದ್ದೇವೆ: ಜೆಡಿಯು

0
481

ಸನ್ಮಾರ್ಗ ವಾರ್ತೆ

ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತನ್ನ ಬಿಹಾರದ ಮಿತ್ರ ಪಕ್ಷ ಬಿಜೆಪಿಯಿಂದ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಜೆಡಿಯು ಪಕ್ಷ ಬುಧವಾರ ಪ್ರಕಟಿಸಿದೆ.ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜ್ಯದಲ್ಲಿನ ಬೆಳವಣಿಗೆಗಳೊಂದಿಗೆ ಈ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಇದೇ ವೇಳೆ ಹೇಳಿದೆ.

“ಜನತಾದಳ-ಯುನೈಟೆಡ್ ಬಿಜೆಪಿಯಿಂದ ಪ್ರತ್ಯೇಕವಾಗಿ 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಜೆಡಿಯುವಿನ ರಾಷ್ಟ್ರೀಯ ಸಮಿತಿಯು ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಎನ್‌ಡಿಟಿವಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

“2017 ರಲ್ಲಿ ನಾವು ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಿರಲಿಲ್ಲ. ಇದು ಪಕ್ಷಕ್ಕೆ ಸ್ವಲ್ಪಮಟ್ಟಿಗೆ ಹಾನಿ ಉಂಟು ಮಾಡಿದೆ. ಉತ್ತರ ಪ್ರದೇಶದೊಂದಿಗೆ ಬಿಹಾರಕ್ಕೆ ಉತ್ತಮ ಸಂಪರ್ಕವಿದೆ. ಅಲ್ಲಿ ನಮ್ಮ ಸರ್ಕಾರದ ನೀತಿಗಳು ಉತ್ತಮವಾಗಿ ಪ್ರಚಾರಗೊಂಡಿವೆ. 2022 ರ ಯುಪಿಯ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಮ್ಮ ಪಕ್ಷದ ರಾಷ್ಟ್ರೀಯ ಸಮಿತಿಯು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಹೇಳಿರುವ ತ್ಯಾಗಿ, ಈ ನಿರ್ಧಾರವು ಬಿಹಾರದ ರಾಜಕೀಯ ಬೆಳವಣಿಗೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಬಿಹಾರದಲ್ಲಿ ಎಲ್ಲವೂ ಉತ್ತಮವಾಗಿದೆ” ಎಂದವರು ಹೇಳಿದರು.