ಹೂಡೆ: ಆರ್ಥಿಕವಾಗಿ ದುರ್ಬಲವಾಗಿದ್ದ ಕುಟುಂಬಕ್ಕೆ ಮನೆ ನಿರ್ಮಿಸಿ ನೆರವು ನೀಡಿದ ಜಮಾಅತೆ ಇಸ್ಲಾಮಿ ಹಿಂದ್

0
700

ಸನ್ಮಾರ್ಗ ವಾರ್ತೆ

ಉಡುಪಿ: ಆರ್ಥಿಕವಾಗಿ ದುರ್ಬಲವಾಗಿದ್ದ ಸೂರಿಲ್ಲದ ಕುಟುಂಬಗಳಿಗೆ ಸೂರು ಒದಗಿಸುವ ತನ್ನ ಯೋಜನೆಯಂತೆ ಜಮಾಅತೆ ಇಸ್ಲಾಮಿ ಹಿಂದ್, ಸಂಘಟನೆಯ ತೋನ್ಸೆ – ಹೂಡೆ ಶಾಖೆಯಿಂದ ಅರ್ಥಿಕವಾಗಿ ಹಿಂದುಳಿದ ಸ್ಥಳೀಯ ಜಫ್ರುಲ್ಲಾ ಸಾಹೇಬ್’ರವರ ಕುಟುಂಬಕ್ಕಾಗಿ ನಿರ್ಮಿಸಿದ ಮನೆಯನ್ನು ಇಂದು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್’ನ ಉಡುಪಿ ಜಿಲ್ಲಾ ಸಂಚಾಲಕರಾದ ಶಬ್ಬೀರ್ ಮಲ್ಪೆಯವರು ಜಫ್ರುಲ್ಲಾ ಸಾಹೇಬ್’ರಿಗೆ ಮನೆ ಕೀಲಿ ಕೈ ನೀಡುವ ಮೂಲಕ ಸಾಂಕೇತಿಕವಾಗಿ ಮನೆಯನ್ನು ಹಸ್ತಾಂತರಿಸಿದರು.

ಇದು ಜಮಾಅತೆ ಇಸ್ಲಾಮಿ ಹಿಂದ್, ತೋನ್ಸೆ-ಹೂಡೆ ಶಾಖೆಯು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ನಿರ್ಮಿಸಿ ಕೊಡುತ್ತಿರುವ 26ನೇ ಮನೆಯಾಗಿದೆ. ಇದಲ್ಲದೆ ಸಂಘಟನೆಯು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ತನ್ನ ಅಂಗಸಂಸ್ಥೆ ಎಚ್.ಆರ್.ಎಸ್ ಮುಖಾಂತರ ಕೋವಿಡ್ ಮಹಾಮಾರಿಯಿಂದ ಸಂತ್ರಸ್ತ ಜನರ ಸೇವೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದೆ. ಸಾವಿರಾರು ಮಂದಿಗೆ ರೇಷನ್ ಕಿಟ್, ಅಗತ್ಯವುಳ್ಳ ರೋಗಿಗಳಿಗೆ ರಕ್ತ ಒದಗಿಸುವಿಕೆ, ಶವ ಸಂಸ್ಕಾರದಲ್ಲಿ ಸಹಾಯ, ಕೋವಿಡ್ ಹೆಲ್ಪ್’ಲೈನ್ ರಿಜಿಸ್ಟರ್ ಮಾಡಿ ಬೆಡ್’ನ ವ್ಯವಸ್ಥೆ ಮಾಡುವಲ್ಲಿ ಸಹಾಯ, ಆಂಬುಲೆನ್ಸ್ ವ್ಯವಸ್ಥೆ , ಇನ್ನಿತರ ಸಹಾಯ ಮಾಡಿದೆ ಎಂದು ಪ್ರಸ್ತಾವಿಕವಾಗಿ ಮಾತನಾಡಿದ ಇದ್ರಿಸ್ ಹೂಡೆ ತಿಳಿಸಿದರು.

ಮನೆಯ ಕೀಲಿ ಕೈ ಹಸ್ತಾಂತರಿಸಿದ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾ ಸಂಚಾಲಕ ಶಬ್ಬೀರ್ ಮಲ್ಪೆಯವರು ಶುಭ ಹಾರೈಸಿ ಈ ಮನೆಯು ಕುಟುಂಬಕ್ಕೆ ಶಾಂತಿ ನೆಮ್ಮದಿಯ ತಾಣವಾಗಲಿ ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ತೋನ್ಸೆ – ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ನಮ್ಮ ಸಹಜೀವಿಗಳ ಜೀವನ ಮಟ್ಟ ಸುಧಾರಿಸುವ ಬದ್ದತೆ ಮತ್ತು ದೇವಸಂಪ್ರೀತಿ ಅಪೇಕ್ಷೆ ಇವುಗಳೇ ಜಮಾಅತೆ ಇಸ್ಲಾಮಿ ಹಿಂದ್’ನ ಸೇವಾ ಕಾರ್ಯಗಳಿಗೆ ಪ್ರೇರಕವೇ ಹೊರತು ಲೌಕಿಕ ಆಡಂಬರಗಳಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಚ್.ಆರ್.ಎಸ್ ಹೂಡೆಯ ಹೊಣೆಗಾರರಾದ ಝೈನುಲ್ಲಾ, ಸಮಾಜಸೇವಕ ಮಹೇಶ್ ಹೂಡೆ, ವೆಲ್ಫೇರ್ ಪಾರ್ಟಿಯ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ರಝಾಕ್ ನಕ್ವಾ, ಮೌಲಾನ ತಾರೀಖ್, ಎಸ್.ಐ.ಓನ ಅಫ್ವಾನ್ ಹೂಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.