ಪೊಲೀಸ್ ಮತ್ತು ಜೆ ಎನ್ ಯು ಆಡಳಿತದ ನಿಷ್ಕ್ರಿಯತೆ ಪ್ರಶ್ನಾರ್ಹ; ಕೂಡಲೇ ನ್ಯಾಯಾಂಗ ತನಿಖೆ ನಡೆಸಿ ಗೂಂಡಾಗಳನ್ನು ಶಿಕ್ಷೆಗೊಳಪಡಿಸಿ- ಸೈಯದ್ ಸಆದತುಲ್ಲಾ ಹುಸೈನಿ ಆಗ್ರಹ

0
533

ಸನ್ಮಾರ್ಗ ವಾರ್ತೆ-

ನವದೆಹಲಿ: ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ನಡೆದ ಕ್ರೂರ ಕ್ರೌರ್ಯವನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ಖಂಡಿಸಿದ್ದಾರೆ.

ಜೆ ಎನ್ ಯು ಕ್ಯಾಂಪಸ್ ನೊಳಗೆ ನುಗ್ಗಿ ಗೂಂಡಾಗಳು ಧ್ವಂಸ ಕಾರ್ಯದಲ್ಲಿ ನಿರತವಾದುದು, ಹಾಸ್ಟೆಲ್ ಕೊಠಡಿಗಳಿಗೆ ಪ್ರವೇಶಿಸಿ ಲಾಠಿ, ರಾಡ್ ಮತ್ತು ಕಲ್ಲುಗಳ ಮೂಲಕ ಹಲ್ಲೆ ಮಾಡಿರುವುದು ಆಘಾತಕಾರಿ ಸಂಗತಿಯಾಗಿದೆ. ಇದು ಸ್ಪಷ್ಟವಾಗಿ ಭಯೋತ್ಪಾದನಾ ಕೃತ್ಯವಾಗಿದೆ. ಹಿಂಸಾಚಾರ ಹಲವಾರು ಗಂಟೆಗಳ ಕಾಲ ಮುಂದುವರೆಯಿತು. ಇದರ ಹೊರತಾಗಿಯೂ, ದೆಹಲಿ ಪೊಲೀಸರು ಮತ್ತು ಜೆಎನ್‌ಯು ಆಡಳಿತವು ಮಧ್ಯಪ್ರವೇಶಿಸದಿದ್ದುದು ಮತ್ತು ಹಿಂಸೆಯನ್ನು ಮುಂದುವರಿಸಲು ಪರೋಕ್ಷವಾಗಿ ಅನುಮತಿ ನೀಡಿದ್ದು ಆಘಾತಕಾರಿ. ಈ ಕ್ರಿಮಿನಲ್ ಗ್ಯಾಂಗ್‌ಗೆ ದೆಹಲಿ ಪೊಲೀಸರು ಒತ್ತಾಶೆ ನೀಡುವ ವೀಡಿಯೊ ದೃಶ್ಯಗಳು ಮತ್ತು ಈ ಕ್ರಿಮಿನಲ್ ಗಳನ್ನು ಬಂಧಿಸದೆ ಮತ್ತು ಪ್ರಶ್ನಿಸದೆ ಕ್ಯಾಂಪಸ್‌ನಿಂದ ಹೊರನಡೆಯಲು ಅವಕಾಶ ಮಾಡಿ ಕೊಟ್ಟಿರುವ ಕ್ರಮವು ಊಹೆಗೂ ನಿಲುಕದ ವಿಷಯವಾಗಿದೆ. ಹಿಂಸಾತ್ಮಕ ಗುಂಪು ಯೋಗೇಂದ್ರ ಯಾದವ್ ಅವರ ಮೇಲೆ ಕೈ ಮಾಡಿದಾಗ ದೆಹಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಅದೇ ಕ್ರಿಮಿನಲ್ ಗಳಿಗೆ ಮುಖ್ಯ ದ್ವಾರದ ಹೊರಗೆ ಮಾಧ್ಯಮಕ್ಕೆ ತಡೆ ಒಡ್ಡಲೂ ಪೊಲೀಸರು ಉಚಿತ ಅವಕಾಶ ಒದಗಿಸಿದರು. ಗೂಂಡಾಗಳು ಆಂಬ್ಯುಲೆನ್ಸ್ ಅನ್ನು ಜೆಎನ್‌ಯು ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆದರು. ಕೆಲವು ಸಮಾಜ ವಿರೋಧಿ ಶಕ್ತಿಗಳು ಏಮ್ಸ್ ನಲ್ಲೂ ಕಾಣಿಸಿಕೊಂಡವು. ಗಾಯಗೊಂಡವರಿಗೆ ವೈದ್ಯಕೀಯ ಸಹಾಯ ಪಡೆಯುವುದನ್ನು ಈ ಶಕ್ತಿಗಳು ತಡೆಯುವ ಪ್ರಯತ್ನವೂ ನಡೆಸಿತು. ಇವೆಲ್ಲವೂ ವೀಡಿಯೋಗಳಿಂದ ಶೃತುಪಡುತ್ತಿವೆ ಎಂದವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಜೆಎನ್‌ಯುನಲ್ಲಿ ನಡೆದ ಈ ಘಟನೆ ದೇಶಕ್ಕೆ ದೊಡ್ಡ ಎಚ್ಚರಿಕೆಯಾಗಿದೆ. ವಿದ್ಯಾರ್ಥಿಗಳ ಧ್ವನಿಯನ್ನು ಬೆದರಿಕೆಯಾಗಿ ಕಾಣುವವರು ಫ್ಯಾಸಿಸ್ಟರು ಮಾತ್ರ. ಈ ಗ್ಯಾಂಗನ್ನು ಕೂಡಲೇ ಗುರುತಿಸಿ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಸರ್ಕಾರ ತಕ್ಷಣವೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಮತ್ತು ಈ ಕ್ರೌರ್ಯವನ್ನು ಎಸಗುವಂತೆ ಆ ಗ್ಯಾಂಗ್ ಗೆ ಆದೇಶಿಸಿದವರನ್ನು ಪತ್ತೆಹಚ್ಚಬೇಕು ಎಂದವರು ಆಗ್ರಹಿಸಿದ್ದಾರೆ.