ಜಮಾಅತೆ ಇಸ್ಲಾಮಿ ಹಿಂದ್ ತೋನ್ಸೆ-ಹೂಡೆಯಿಂದ ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

0
544

ಸನ್ಮಾರ್ಗ ವಾರ್ತೆ

ಉಡುಪಿ: ಜಮಾಅತೆ ಇಸ್ಲಾಮೀ ಹಿಂದ್ ತೋನ್ಸೆ-ಹೂಡೆ ವತಿಯಿಂದ “ಆರ್ಥಿಕವಾಗಿ ಆಶಕ್ತರಾದ ಕುಟುಂಬಗಳಿಗೆ ಸೂರು ಒದಗಿಸುವ ಯೋಜನೆಯಂತೆ” ಹೂಡೆಯ ದಾರುಸ್ಸಲಾಮ್ ಮದ್ರಸಾದ ಬಳಿಯ ಅಬ್ದುಲ್ಲಾ ಸಾಹೇಬ್ ಕುಟುಂಬಕ್ಕಾಗಿ ನಿರ್ಮಿಸಿದ ಮನೆಯ ಕೀಲಿಕೈಯನ್ನು ತೋನ್ಸೆ-ಹೂಡೆ ಜಮಾಅತೆ ಇಸ್ಲಾಮಿ ಹಿಂದ್’ನ ಹಿರಿಯ ಸದಸ್ಯರಾದ ಮೌಲಾನ ಆದಮ್ ಸಾಹೇಬ್ ಅವರು ಸಾಂಕೇತಿಕವಾಗಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾರವರು ಜನರಿಗೆ ದೀರ್ಘಕಾಲ ಉಪಯೋಗಕ್ಕೆ ಬರುವ ದಾನ ಅಥವಾ ಕೊಡುಗೆಗಳಿಗೆ ಇಸ್ಲಾಮ್ ಅತ್ಯಂತ ಹೆಚ್ಚು ಮಹತ್ವವನ್ನು ನೀಡಿದೆ ಮತ್ತು ಅದನ್ನು ನಿರಂತರ ಪುಣ್ಯನೀಡುವ ಕಾರ್ಯ ಎಂದು ಬಣ್ಣಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿದ್ದ ಜಮಾಅತೆ ಇಸ್ಲಾಮಿ ಹಿಂದ್ ಇದರ ಮಹಿಳಾ ವಿಭಾಗದ ಉಡುಪಿ ಜಿಲ್ಲಾ ಸಂಚಾಲಕಿ ಕುಲ್ಸೂಮ್ ಅಬೂಬಕರ್ ಅವರು ಮಾತನಾಡಿ ಆಹಾರ, ಬಟ್ಟೆಯ ನಂತರ ಇರಲೊಂದು ಮನೆ ಮನುಷ್ಯನ ಪ್ರಮುಖ ಮೂಲಭೂತ ಬೇಡಿಕೆಯಾಗಿದೆ. ಇತರ ಕೆಲಸಗಳೊಂದಿಗೆ ಜನತೆಯ ಈ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಡುವ ಸಂಘಟನೆಯ ಭಾಗವಾಗಿರುವುದಕ್ಕೆ ನನಗೆ ಸಂತೋಷವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್, ತೋನ್ಸೆ-ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದರ್ ಅವರು ಜಮಾಅತೆ ಇಸ್ಲಾಮಿ ಹಿಂದ್ ಮಾಡುತ್ತಿರುವ ಆರೋಗ್ಯ, ಶಿಕ್ಷಣ, ಮೂಲಭೂತ ಬೇಡಿಕೆಗಳ ಪೂರೈಕೆ, ವಿಪತ್ತು ನಿರ್ವಹಣೆ ಮತ್ತು ಪರಿಹಾರ ಹಾಗೂ ಇನ್ನಿತರ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಸಾಂದರ್ಭಿಕವಾಗಿ ಮುಂದಿಟ್ಟರು. ಅಲ್ಲದೆ ಜಮಾಅತೆ ಇಸ್ಲಾಮಿ ಹಿಂದ್ ಚಟುವಟಿಕೆಗಳಿಗೆ ದೇವಸಂಪ್ರೀತಿ ಗಳಿಕೆಯೇ ಪ್ರೇರಕವಾಗಿದೆಯೇ ಹೊರತು ಭೌತಿಕ ಉದ್ದೇಶಗಳಲ್ಲ ಎಂದು ಹೇಳಿದರು.

ತೋನ್ಸೆ ಪಂಚಾಯತ್’ನ ನಿಕಟ ಪೂರ್ವ ಅಧ್ಯಕ್ಷರಾದ ಫೌಝಿಯ ಪರ್ವೀನ್, ಮಾಜಿ ಉಪಾಧ್ಯಕ್ಷರಾದ ಉಸ್ತಾದ್ ಸಾದಿಕ್, ಮನೆಯ ಕೀಲಿಗೈ ಸ್ವೀಕರಿಸಿದ ಅಬ್ದುಲ್ಲಾ ಸಾಹೇಬ್ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್.ಐ.ಓ ಸ್ಥಾನೀಯ ಅಧ್ಯಕ್ಷರಾದ ವಸೀಮ್ ಅಬ್ದುಲ್ಲಾ, ಅಬುಲೈಸ್ ಮಸೀದಿಯ ಇಮಾಮರಾದ ಮಹಮ್ಮದ್ ತಾರೀಕ್, ತೋನ್ಸೆ ಪಂಚಾಯತ್ ಸದಸ್ಯರುಗಳಾದ ವಿಜಯ ಪಡುಕುದ್ರು, ಕುಸುಮ ಗುಜ್ಜರಬೆಟ್ಟು, ಜಮೀಲಾ ಸದೀದಾ, ಮುಮ್ತಾಝ್ ಬೇಗಂ, ಪಂಚಾಯತ್ ಕಾರ್ಯದರ್ಶಿ ದಿನಕರ್ ಬೇಂಗ್ರೆ ಹಾಗೂ ಇನ್ನಿತರ ಸ್ಥಳೀಯ ನಾಗರೀಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ಡಾ.ಫಹೀಮ್ ಅಬ್ದುಲ್ಲಾರವರು ಮೌಲಾನಾ ಶಾಹಿದ್ ಫಲಾಹಿಯವರ ಕುರ್‌ಆನ್ ಪಠಣದೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವಿತ್ತರು.