ಕುದ್ರೋಳಿ: ರಾಬಿಯಾ ಸೈಫಿ ಹತ್ಯೆ ಖಂಡಿಸಿ ಎಸ್ಐಓ ಪ್ರತಿಭಟನೆ

0
522

ಸನ್ಮಾರ್ಗ ವಾರ್ತೆ

ಕುದ್ರೋಳಿ: ದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅತ್ಯಾಚಾರಗಳನ್ನು ಖಂಡಿಸಿ ಎಸ್‌ಐಓ ಕುದ್ರೋಳಿ ಘಟಕವು ಗುರುವಾರದಂದು ಕುದ್ರೋಳಿ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿತು. ದೇಶದ ರಾಜಧಾನಿ ದಿಲ್ಲಿಯಲ್ಲಿ ರಾಬಿಯ ಸೈಫಿ ಎಂಬ ಸಿವಿಲ್ ಡಿಫೆನ್ಸ್ ಸಿಬ್ಬಂದಿಯ ಬರ್ಬರ ಅತ್ಯಾಚಾರ ಹಾಗೂ ಕೊಲೆ ನಡೆದಿದೆ. ಇದಲ್ಲದೆ ದೇಶದ ವಿವಿದೆಡೆಗಳಲ್ಲಿ ಪ್ರತಿದಿನವೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಎಸ್‌ಐಓ ಕಳವಳ ವ್ಯಕ್ತಪಡಿಸಿತು.

2012ರ ನಿರ್ಭಯ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಲು ಹಲವಾರು ಕಾನೂನು ಬದಲಾವಣೆಗಳನ್ನು ಮಾಡಲಾಯಿತು. ಆದರೆ ಇವತ್ತು 9 ವರ್ಷಗಳ ಬಳಿಕ ನೋಡುವುದಾದರೆ ಈ ಬದಲಾವಣೆಗಳು ಎಬ್ಬಿಸಿದ್ದ ಆಶಾವಾದ ಈಗ ನಿರಾಶೆಯಾಗಿ ಪರಿವರ್ತನೆಗೊಂಡಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಹೆಣ್ಣಿನ ಗೌರವದ ಬಗ್ಗೆ ಹೆಚ್ಚೆಚ್ಚು ಚರ್ಚಿಸಿ, ಮನುಷ್ಯರ ನಡುವೆ ಗೌರವ, ಸಮಾನತೆ ಇರುವ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಾರ್ವಜನಿಕರು ಕಾರ್ಯನಿರತರಾಗಬೇಕಾದ ಅಗತ್ಯ ಇದೆ. ರಾಬಿಯಾ ಸೈಫಿ ಪ್ರಕರಣ ಅದೇ ರೀತಿ ಮಹಿಳೆಯರ ವಿರುದ್ಧ ಅತ್ಯಾಚಾರದ ಎಲ್ಲಾ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಶೀಘ್ರದಲ್ಲಿಯೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಾಗಿ ಎಸ್‌ಐಓ ಕುದ್ರೋಳಿ ಘಟಕವು ಆಗ್ರಹಿಸಿದೆ‌.

ಪ್ರತಿಭಟನೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕುದ್ರೋಳಿ ವರ್ತುಲ ಸಂಚಾಲಕ ಮಕ್ಬೂಲ್ ಅಹ್ಮದ್, ಜಿಐಓ ರಾಜ್ಯ ಸಲಹಾ ಸಮಿತಿ ಸದಸ್ಯೆ ಆಮಿನ ಮುಶೀರ, ಎಸ್‌ಐಓ ಮಂಗಳೂರು ನಗರಾಧ್ಯಕ್ಷ ಸಲ್ಮಾನ್ ಕುದ್ರೋಳಿ, ಕಾರ್ಯದರ್ಶಿ ಇಜಾಝ್ ಕುದ್ರೋಳಿ,
ಎಸ್‌ಐಓ ಕುದ್ರೋಳಿ ಶಾಖೆ ಅಧ್ಯಕ್ಷ ಮುಝಾಹಿರ್ ಕುದ್ರೋಳಿ ಮತ್ತು ಜಿಐಓ ನಗರಾಧ್ಯಕ್ಷೆ ಹನೀಫಾ ತ್ವಬೀಬಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.