ಹಕ್ಕುಗಳಿಗಾಗಿ ಹೋರಾಡದಿದ್ದರೆ ಕಾಶ್ಮೀರದ ರಾಜಕೀಯ ಪಕ್ಷಗಳು ಜನರ ನಂಬಿಕೆ ಕಳಕೊಳ್ಳಲಿವೆ- ಇಲ್ತಿಜಾ ಮುಫ್ತಿ

0
329

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.3: ಜನರ ಹಕ್ಕುಗಳಿಗಾಗಿ ಮತ್ತು ಆರ್ಟಿಕಲ್ 370 ನೇ ವಿಧಿಯನ್ನು ಮರು ಸ್ಥಾಪಿಸಲು ಹೋರಾಡದಿದ್ದರೆ ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳು ಜನರ ನಂಬಿಕೆ ಕಳಕೊಳ್ಳಲಿದೆ ಎಂದು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಹೇಳಿದ್ದಾರೆ.

ಆರ್ಟಿಕಲ್ 370 ಮತ್ತು 35 ಸಹಿತ ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ಮರು ಸ್ಥಾಪಿಸುವ ವಿಷಯದಿಂದ ಪಿಡಿಪಿ ಹಿಂದೆ ಸರಿಯುವುದಿಲ್ಲ ಎಂದು ಅವರು ಇಂಡಿಯಾ ಟುಡೆಗೆ ತಿಳಿಸಿದರು.

ಕಾಶ್ಮೀರದ ವಿಶೇಷಾಧಿಕಾರ ರದ್ದು ಪಡಿಸಿ ಆಗಸ್ಟ್ 5 ಕ್ಕೆ ಒಂದು ವರ್ಷ ಆಗಲಿದೆ. ಆರ್ಟಿಕಲ್ 370 ರದ್ದುಪಡಿಸಿದ ಬಳಿಕ ಕಾಶ್ಮೀರದ ಪರಿಸ್ಥಿತಿ ಬಿಗಡಾಯಿಸಿದೆ.

ಒಂದು ವರ್ಷದಿಂದ ಕಾಶ್ಮೀರದಲ್ಲಿ ಸೈನಿಕರು ಮತ್ತು ಬ್ಯಾರಿಕೇಡ್‍ಗಳಲ್ಲಿ ಮಾತ್ರ ಹೆಚ್ಚಳವಾಗಿದೆ. ತಮಾಷೆ ಮಾಡಿದರೂ ಯುಎಪಿಎ ಕಾನೂನು ಹೇರುವ ಪರಿಸ್ಥಿತಿಯಿದೆ. ಮುಖ್ಯಧಾರೆಯ ಪಕ್ಷಗಳಿ ಇದರ ವಿರುದ್ಧ ಪ್ರತಿಕ್ರಿಯಿಸದಿರುವುದು ಅವರ ಬಗ್ಗೆ ಜನರು ನಂಬಿಕೆ ಕಳಕೊಳ್ಳುವಂತೆ ಮಾಡಿದೆ.

ನನ್ನ ತಾಯಿಯನ್ನು ಒಂದು ವರ್ಷದಿಂದ ಬಂಧನದಲ್ಲಿರಿಸಲಾಗಿದೆ. ಮೆಹಬೂಬ ಮುಫ್ತಿಯನ್ನು ಯಾಕೆ ಬಿಡುಗಡೆಗೆ ಮಾಡಿಲ್ಲ ಎಂದು ಇಲ್ತಿಜಾ ಪ್ರಶ್ನಿಸಿದರು. ಯುಎಪಿಎಯ ಅಡಿಯಲ್ಲಿ ಅವರಿಗೆ ಗೃಹ ಬಂಧನ ವಿಧಿಸಲಾಗಿದೆ.

ನರೇಂದ್ರ ಮೋದಿ ಅಯೋಧ್ಯೆಗೆ ಹೋಗುವುದು ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಗಮನ ಬೇರೆಡೆಗೆ ಹರಿಯುವಂತೆ ಮಾಡುವುದಕ್ಕಾಗಿದೆ ಎಂದು ಇಲ್ತಿಜಾ ಹೇಳಿದರು. ಕೊರೋನ ಪೀಡಿತ ಕೇಂದ್ರ ಗ್ರಹ ಸಚಿವ ಅಮಿತ್ ಶಾ ನಮಗೆ ಮೋಸ ಮಾಡಿದರೂ ಅವರು ಶೀಘ್ರ ಗುಣಮುಖವಾಗಲಿ ಎಂದು ಇಲ್ತಿಜಾ ಹಾರೈಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.