ಗ್ಯಾನ್ ವಾಪಿ ತೀರ್ಪು ಕೋರ್ಟ್‌ನ ಮೇಲೆ ಜನರ ನಂಬಿಕೆ ಕಡಿಮೆ ಮಾಡಿದೆ: ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್

0
494

ಸನ್ಮಾರ್ಗ ವಾರ್ತೆ

ನವದೆಹಲಿ (ಫೆ.2): ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರ ಜ್ಞಾನವಾಪಿ ಸಂಕೀರ್ಣದಲ್ಲಿರುವ ವ್ಯಾಸ್ ಜಿ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಹಕ್ಕನ್ನು ನೀಡಿದ್ದಕ್ಕೆ ಮುಸ್ಲಿಮ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ತೀರ್ಪಿನ ಮೇಲೆಯೇ ಪ್ರಶ್ನೆಗಳನ್ನು ಎತ್ತುವ ಮೂಲಕ ಈ ನಿರ್ಧಾರವನ್ನು ಟೀಕಿಸಿದೆ.  

ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸೈಫುಲ್ಲಾ ರಹಮಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಕೋರ್ಟ್‌ನ ಮೇಲೆ ಜನರ ನಂಬಿಕೆಯೇ ಕಡಿಮೆಯಾಗಬೇಕು ಎನ್ನುವ ಹಾದಿಯಲ್ಲಿ ನ್ಯಾಯಾಲಯಗಳು ಸಾಗುತ್ತಿವೆ. ಅನೇಕ ಕಾನೂನು ತಜ್ಞರು ಕೂಡ ಇದನ್ನು ನಂಬುತ್ತಾರೆ. ನಿನ್ನೆ ನಡೆದ ಘಟನೆ ನಿರಾಸೆ ತಂದಿದೆ. ಅಲ್ಲಿ ಇರುವುದು ಮಸೀದಿ. ಕೋರ್ಟ್‌ನ ನಿರ್ಧಾರದಿಂದ 20 ಕೋಟಿ ಮುಸ್ಲಿಮರು ಮತ್ತು ಎಲ್ಲಾ ನ್ಯಾಯವನ್ನು ಪ್ರೀತಿಸುವ ನಾಗರಿಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಮುಸ್ಲಿಮರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಭಾರತ ಹಲವು ಧರ್ಮಗಳ ಗುಚ್ಛ ಎಂದು ನಂಬಿರುವ ಎಲ್ಲಾ ಹಿಂದೂಗಳು ಮತ್ತು ಸಿಖ್ಖರು ಈ ನಿರ್ಧಾರದಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ಅಲ್ಲಿನ ಐತಿಹಾಸಿಕ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು.  ಬ್ರಿಟಿಷರು ಈ ದೇಶಕ್ಕೆ ಬಂದು ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡರು. 1857 ರಲ್ಲಿ ಅವರು ದೇಶಕ್ಕಾಗಿ ಆರಾಧಕರು ಮತ್ತು ದೇವರ ಆರಾಧಕರು ಇಬ್ಬರೂ ಒಂದಾಗಿರುವುದನ್ನು ಕಂಡರು. ಇದರ ನಂತರ, ಅವರು ಎರಡು ಸಮುದಾಯಗಳ ನಡುವೆ ಒಡಕು ಮೂಡಿಸಲು ಅಂದರೆ ಅವರ ನಡುವೆ ಅಂತರವನ್ನು ಸೃಷ್ಟಿಸಲು ಕೆಲಸ ಮಾಡಿದರು ಎಂದು ಹೇಳಿದ್ದಾರೆ.

ಹಾಗೇನಾದರೂ ಮುಸ್ಲಿಮರು ಇತರರ ಪೂಜಾ ಸ್ಥಳಗಳನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವ ಚಿಂತನೆಯನ್ನು ಹೊಂದಿದ್ದರೆ, ಇಷ್ಟೊಂದು ದೇವಾಲಯಗಳು ಅಸ್ತಿತ್ವದಲ್ಲಿ ಇರುತ್ತಿದ್ದವೇ? ಆತುರಾತುರವಾಗಿ ನ್ಯಾಯಾಲಯ ತನ್ನ ನಿರ್ಧಾರ ಕೈಗೊಂಡು ಪೂಜೆಗೆ ಅವಕಾಶ ನೀಡಿದೆ. ನಮ್ಮ ಪರ ವಾದ ಮಂಡಿಸುವ ಅವಕಾಶವನ್ನೂ ನೀಡಲಿಲ್ಲ. ಇದರಿಂದ ನ್ಯಾಯ ಒದಗಿಸುವ ನ್ಯಾಯಾಲಯಗಳ ಮೇಲಿನ ನಂಬಿಕೆ ಕಡಿಮೆಯಾಗಿದೆ.

ಬಾಬರಿ ಮಸೀದಿಯ ತೀರ್ಪಿನಲ್ಲಿ, ಮಸೀದಿಯ ಅಡಿಯಲ್ಲಿ ಯಾವುದೇ ದೇವಾಲಯವಿಲ್ಲ ಎಂದು ನ್ಯಾಯಾಲಯವು ಒಪ್ಪಿಕೊಂಡಿತು ಆದರೆ ಒಂದು ವರ್ಗದ ನಂಬಿಕೆಯನ್ನು ಪರಿಗಣಿಸಿ, ಅವರ ಪರವಾಗಿ ತೀರ್ಪು ನೀಡಲಾಯಿತು ಎಂದಿದ್ದಾರೆ.

ಜ್ಞಾನವಾಪಿಯಾಗಲಿ ಅಥವಾ ದೇಶದ ಎಲ್ಲಿಯೇ ಆಗಲಿ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ ಎನ್ನುವುದೆಲ್ಲಾ ಸುಳ್ಳು. ಇಸ್ಲಾಮ್ ಧರ್ಮದಲ್ಲಿ ಕಿತ್ತುಕೊಂಡ ಜಾಗದಲ್ಲಿ ಮಸೀದಿ ಕಟ್ಟುವಂತಿಲ್ಲ. ಇಲ್ಲಿನ ಜಾಗವನ್ನು ಖರೀದಿ ಮಾಡಿ ಮಸೀದಿಯನ್ನು ಕಟ್ಟಲಾಗಿದೆ ಎಂದು ಹೇಳಿದ್ದಾರೆ.