ಜೆಎನ್‍ಯು ಉಪಕುಲಪತಿಯ ವಾದ ಸುಳ್ಳು; ಸರ್ವರ್ ಕೋಣೆ ನಾಶವಗಿಲ್ಲ ಎಂದು ಮಾಹಿತಿಹಕ್ಕು ದಾಖಲೆಯಲ್ಲಿ ಬಹಿರಂಗ

0
528

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 22: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಶುಲ್ಕ ಹೆಚ್ಚಳದ ವಿರುದ್ಧ ಹೋರಾಟ ನಡೆಸಿದ ವಿದ್ಯಾರ್ಥಿಗಳು ಸರ್ವರ್ ಕೋಣೆ ಮತ್ತು ಸಿಸಿಟಿವಿಯನ್ನು ಪುಡಿಗಟ್ಟಿದ್ದಾರೆ ಎಂಬ ಉಪಕುಲಪತಿಯ ಹೇಳಿಕೆ ಸುಳ್ಳು ಎಂದು ಮಾಹಿತಿ ಹಕ್ಕು ದಾಖಲೆಯಿಂದ ಬಹಿರಂಗವಾಗಿದೆ. ಸಿಸಿಟಿವಿ ವ್ಯವಸ್ಥೆ ಬಯೊಮೆಟ್ರಿಕ್ ಸಿಸ್ಟಂ ಸಹಿತ ಸರ್ವರ್ ಕೋಣೆಯನ್ನು ಜನವರಿ ಮೂರರಂದು ವಿದ್ಯಾರ್ಥಿಗಳು ನಾಶಪಡಿಸಿದ್ದರೆಂಬ ದೂರಿನ ಮೇಲೇ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ರಿಜಿಸ್ಟ್ರೇಶನ್ ಬಹಿಷ್ಕರಿಸುವ ಕಾರಣಕ್ಕಾಗಿ ಸರ್ವರ್ ಕೋಣೆಯನ್ನು ನಾಶಪಡಿಸಲಾಗಿದೆ ಎಂದು ವಿಸಿ ದೂರಿನಲ್ಲಿ ಹೇಳಲಾಗಿದ್ದು, ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಐಷಿ ಘೋಷ್ ಸಹಿತ ಮೂವರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದರು. ಇದರ ಕುರಿತು ಸಾಮಾಜಿಕ ಕಾರ್ಯಕರ್ತರ ಮಾಹಿತಿ ಹಕ್ಕು ಅರ್ಜಿಗೆ, ಜನವರಿ ಮೂರರಂದು ಸರ್ವರ್ ಕೋಣೆ ನಾಶವಾಗಿಲ್ಲ, ವಿದ್ಯುತ್ ತೊಂದರೆಯಿಂದ ಸ್ಥಗಿತಗೊಳಿಸಿದ್ದೆಂದು ಜೆಎನ್‍ಯು ಅಧಿಕಾರಿಗಳು ಉತ್ತರ ನೀಡಿದ್ದಾರೆ. ಜನವರಿ ಐದರಂದು ಕ್ಯಾಂಪಸ್ ಅತಿಕ್ರಮಿಸಿದ ಮುಖವಾಡ ಧರಿಸಿದ ತಂಡ ಐಷಿ ಘೋಷ್ ಸಹಿತ ಮೂವತ್ತು ವಿದ್ಯಾಥಿಗಳು ಮತ್ತು ಅಧ್ಯಾಪಕರಿಗೆ ಹಲ್ಲೆ ನಡೆಸಿತ್ತು. ಪೊಲೀಸ್ ತನಿಖೆಯಲ್ಲಿ ಕ್ಯಾಂಪಸ್‍ನ ಉತ್ತರ ಗೇಟಿನ ಪ್ರಧಾನ ದ್ವಾರದ ಸಿಸಿಟಿವಿಯಲ್ಲಿ ರಾತ್ರೆ 11 ಮತ್ತು ಮೂರು ಗಂಟೆಯ ದೃಶ್ಯಗಳು ಇರಲಿಲ್ಲ. ಸರ್ವರ್ ರೂಮ್ ನಾಶಪಡಿಸಿದ್ದರಿಂದ ಹಲವು ಸಿಸಿಟಿವಿಗಳಿಂದ ನಿರಂತರ ದೃಶ್ಯಗಳು ಲಭಿಸಿಲ್ಲ ಎಂದು ಜೆಎನ್‍ಯು ಅಧಿಕಾರಿಗಳ ವಾದವಾಗಿತ್ತು. ಆದರೆ

ಮಾಹಿತಿ ಹಕ್ಕು ದಾಖಲೆ ಬಹಿರಂಗವಾಗುವುದರೊಂದಿಗೆ ವಿಸಿಯ ವಾದ ತಪ್ಪು ಎಂದು ಸಾಬೀತಾಗಿದೆ. ಇದೇವೇಳೆ ಜನವರಿ ಐದಕ್ಕೆ ಕ್ಯಾಂಪಸ್ಸಿನಲ್ಲಿ ಎಬಿವಿಪಿ ಕಾರ್ಯಕರ್ತರು ಮುಖವಾಡ ಧರಿಸಿ ನಡೆಸಿದ ದಾ೦ಧಲೆಯಲ್ಲಿ ಪೊಲೀಸರು ಈವರೆಗೂ ಯಾರನ್ನೂ ಬಂಧಿಸಿಲ್ಲ.