ಮುಸ್ಲಿಂ, ದಲಿತರ ವಿರುದ್ಧ ದಾಳಿಯನ್ನು ಪ್ರತಿಭಟಿಸಲು ಕರೆ ನೀಡಿದ ಆಕಾರ್ ಪಟೇಲ್‍ ಟ್ವಿಟರ್ ಖಾತೆ ಸ್ಥಗಿತ!

0
997

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.13: ಮುಸ್ಲಿಮರು ಹಾಗೂ ದಲಿತ ವಿಭಾಗಗಳ ವಿರುದ್ಧ ನಡೆಯುವ ದಾಳಿಯ ವಿರುದ್ಧ ಪ್ರತಿಭಟನೆಗೆ ಪತ್ರಕರ್ತ ಹಾಗೂ ಮಾನವಹಕ್ಕು ಕಾರ್ಯಕರ್ತ, ಭಾರತದ ಆಮ್ನೆಸ್ಟಿ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ಕರೆ ನೀಡಿದ್ದು, ಇವರ ಟ್ವಿಟರ್ ಖಾತೆಯನ್ನು ಭಾರತದಲ್ಲಿ ಅಮಾನತುಗೊಳಿಸಲಾಗಿದೆ. ಆಫ್ರೋ-ಅಮೆರಿಕನ್ ವಂಶದ ಜಾರ್ಜ್ ಫ್ಲಾಯ್ಡರನ್ನು ಅಮೆರಿಕದ ಪೊಲೀಸರು ಕೊಂದದ್ದರ ವಿರುದ್ಧ ನಡೆಯುವ ಪ್ರತಿಭಟನೆಗಳಿಗೆ ಸಮಾನವಾಗಿ ಭಾರತೀಯರು ಪ್ರತಿಭಟಿಸಬೇಕೆಂದು ಆಕಾರ್ ಕರೆ ನೀಡಿದ್ದರು. ಟ್ವಿಟರ್ ಖಾತ್ ರದ್ದುಪಡಿಸಿದ್ದರ ಜೊತೆಗೆ ಅವರ ವಿರುದ್ಧ ವಿವಿಧ ಕಲಂಗಳಡಿಯಲ್ಲಿ ಬೆಂಗಳೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಭಾರತೀಯ ಕಾನೂನಿಗೆ ವಿರುದ್ಧವಾಗಿ ಅವರ ಪೋಸ್ಟ್ ಇದೆ ಎಂದು ಹೇಳಿ ಅವರ ಟ್ವಿಟರ್ ಖಾತೆ ರದ್ದುಗೊಳಿಸಿದ್ದು, ಆದರೆ ಭಾರತದ ಹೊರಗೆ ಆಕಾರ್ ಪಟೇಲ್‍ರ ಟ್ವಿಟರ್ ಖಾತೆ ಉಪಯೋಗಿಸಬಹುದು. ಅಧಿಕಾರಿಗಳ ಕೋರಿಕೆಯಂತೆ ಖಾತೆ ರದ್ದು ಪಡಿಸಲಾಗಿದೆ ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ. ಇದೇ ವೇಳೆ ಟ್ವಿಟರ್ ಖಾತೆ ಬ್ಲಾಕ್ ಮಾಡಿದ್ದನ್ನು ಆಕಾರ್ ವಿರೋಧಿಸಿದ್ದು, ಸಾಮಾಜಿಕ ಮಾಧ್ಯಮಗಳು ಪಾರದರ್ಶಕವಾಗಿರಬೇಕು. ಖಾತೆ ರದ್ದು ಮಾಡಿದ್ದಕ್ಕೆ ಇರುವ ಕಾರಣಗಳನ್ನಾದರೂ ಖಾತೆಯ ಮಾಲಕನಿಗೆ ತಿಳಿಸಬೇಕೆಂದು ಹೇಳಿದ್ದಾರೆ.

ಜಾರ್ಜ್ ಫ್ಲಾಯ್ಡ್‌ರ ಕೊಲೆಯ ವಿರುದ್ಧ ನಡೆಯುವ ಪ್ರತಿಭಟನೆಯ ವೀಡಿಯೊದ ಜೊತೆ ದೇಶದಲ್ಲಿ ಮುಸ್ಲಿಮರು, ದಲಿತರು, ಆದಿವಾಸಿ ಮತ್ತು ಮಹಿಳೆಯರ ವಿರುದ್ಧ ನಡೆಯುವ ದಾಳಿಯನ್ನು ಭಾರತೀಯರು ಪ್ರತಿಭಟಿಸಬೇಕೆಂದು ಅವರು ಟ್ವೀಟ್ ಮಾಡಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.