ನಿತೀಶ್ ಕುಮಾರ್ ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸಿದ ಮುಸ್ಲಿಂ ರಾಜಕಾರಣಿಗಳನ್ನು ಟೀಕಿಸಿದ ಪತ್ರಕರ್ತ: ಎಫ್ಐಆರ್ ದಾಖಲು

0
356

ಸನ್ಮಾರ್ಗ ವಾರ್ತೆ

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸಿದ ಮುಸ್ಲಿಂ ರಾಜಕಾರಣಿಗಳನ್ನು ಟೀಕಿಸಿದಕ್ಕಾಗಿ ಮತ್ತು ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಮೌನವಾಗಿರುವುದನ್ನು ಟೀಕಿಸಿದಕ್ಕಾಗಿ ಬಿಹಾರದ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಿಲ್ಲಿ ಖಬರ್ ಡಿಜಿಟಲ್ ಪತ್ರಿಕೆಯ ಸಂಪಾದಕ ಫಜಲುಲ್ ಮುಬೀನ್ ಅವರ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಇವರ ಬಗ್ಗೆ ಹೇಳುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಇವರಿಗೆ ಇಮಾರತೆ ಶರೀಯಾ, ಮುಸ್ಲಿಂ ಪರ್ಸನಲ್ ಲಾ, ಜಮೀಯತೆ ಅಹ್ ಲೆ ಹದೀಸ್ ಮತ್ತು ಜಮೀಯತೆ ಉಲಾಮಾಗಿಂತ ಈ ನಿತೀಶ್ ಕುಮಾರ್ ದೊಡ್ಡವರಾಗಿದ್ದಾರೆ. ವಕ್ಫ್ ಎಂಬುದು ನಮ್ಮ ಸಾಂವಿಧಾನಿಕ ಹಕ್ಕಾಗಿದೆ ಮತ್ತು ನಮ್ಮ ಶರೀಅತ್‌ಗೆ ಸಂಬಂಧಿಸಿದ ಸಂಗತಿಯಾಗಿದೆ.ಅದರ ಬಗ್ಗೆ ಕಾಳಜಿ ವಹಿಸಿ ಎಂದು ನಿತೀಶ್ ಕುಮಾರ್ ಅವರ ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸಿದ ಮುಸ್ಲಿಂ ರಾಜಕಾರಣಿಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಇವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದರ ವಿರುದ್ಧ ನಿತೀಶ್ ಕುಮಾರ್ ಪಕ್ಷದ ಕೃಷಿ ವಿಭಾಗದ ಮುಖ್ಯಸ್ಥ ಅಸ್ಗರ್ ಅಲಿ ಪೊಲೀಸರಿಗೆ ದೂರು ನೀಡಿದ್ದರು. ಅದರಿಂದಾಗಿ ಈ ಮುಬೀನ್‌ರ ವಿರುದ್ಧ ಎಫ್ ಐ ಆರ್ ದಾಖಲಾಯಿತು. ಶಾಂತಿಯನ್ನು ಕದಾಡುವ ಮತ್ತು ಅವಮಾನಿಸುವ ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಸೆಕ್ಷನ್ ಗಳಡಿಯಲ್ಲಿ ಕೂಡ ಪ್ರಕರಣ ದಾಖಲಿಸಲಾಗಿದೆ.

ಇದೇ ವೇಳೆ ತನ್ನ ಬರಹವನ್ನು ಮುಬೀನ್ ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ ತಾನು ಯಾವ ಚಿತ್ರಗಳನ್ನು ಹಂಚಿಕೊಂಡಿದ್ದೆನೋ ಅದು ಈ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿತ್ತು. ಅನೇಕ ಮಂದಿ ಫೇಸ್ಬುಕ್ ಮತ್ತು ಇತರ ಕಡೆ ಅದನ್ನು ಹಂಚಿಕೊಂಡಿದ್ದರು. ನಾನು ಕೂಡ ಅದನ್ನು ಹಂಚಿಕೊಂಡೆ ಎಂದವರು ಹೇಳಿದ್ದಾರೆ. ಇದೇ ವೇಳೆ ಕ್ಷಮೆಯಾಚಿಸಿದರೆ ಪ್ರಕರಣ ಹಿಂತೆಗೆದುಕೊಳ್ಳುವುದಾಗಿ ನನಗೆ ಆಮಿಷ ಒಡ್ಡಲಾಯಿತು. ಆದರೆ ನಾನು ನಿರಾಕರಿಸಿದೆ ಎಂದವರು ಹೇಳಿದ್ದಾರೆ.