#ಜಸ್ಟೀಸ್ ಫಾರ್ ಉಝ್ಮಾ: ಪ್ಲೇಟಿನಿಂದ ಒಂದಿಷ್ಟು ಆಹಾರ ತೆಗೆದು ಕೊಂಡ ಕಾರಣಕ್ಕೆ ಬಾಲ ಕಾರ್ಮಿಕೆ ಉಝ್ಮಾ ಕೊಲೆ!

0
1193

ಲಾಹೋರ್(ಪಾಕಿಸ್ತಾನ): ಬಾಲಕಾರ್ಮಿಕಳಾಗಿ ಮನೆಗೆಲಸದಲ್ಲಿದ್ದ ಹದಿನಾರರ ಹರೆಯದ ಉಝ್ಮಾ ಳನ್ನು ಆಕೆಯ ಮಾಲಿಕನ ಮನೆಯವರೇ ಕೊಂದು ಶವವನ್ನು ಚರಂಡಿಯಲ್ಲಿ ಬಿಸಾಡಿದ ಘಟನೆಯು ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದಿದೆ. ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಸಾವಿಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂಬ ಹೋರಾಟದ ಕೂಗು ಮೊಳಗುತ್ತಿದೆ.

ಉಝ್ಮಾಳ ಕೊಲೆಗೆ ಸಂಬಂಧಿಸಿದಂತೆ ಮನೆಯೊಡತಿ ಮತ್ತು ಆಕೆಯ ಮಕ್ಕಳನ್ನು ಬಂಧಿಸಲಾಗಿದೆ.

ಪೋಲಿಸರು ಹೇಳುವ ಪ್ರಕಾರ, “ಉಝ್ಮಾಳನ್ನು ಜನವರಿ 18 ರಂದು ಕೊಲ್ಲಲಾಗಿದ್ದು ತದನಂತರ ಆಕೆಯ ಶವವನ್ನು ಲಾಹೋರ್ ಇಕ್ಬಾಲ್ ಟೌನ್ ನ ಚರಂಡಿಗೆಸೆಯಲಾಗಿದೆ” ಎಂದಾಗಿದೆ.

ಮಗಳು ಊಟ ಮಾಡುತ್ತಿದ್ದ ಊಟದ ತಟ್ಟೆಯಿಂದ ಒಂದಿಷ್ಟು ಆಹಾರ ತೆಗೆದುಕೊಂಡಳೆಂಬ ಕ್ಷುಲ್ಲಕ ಕಾರಣಕ್ಕಾಗಿ ಮನೆಯೊಡತಿ ಆಕೆಯ ತಲೆಗೆ ಚೂಪಾದ ಆಯುಧದಿಂದ ಹಲವು ಬಾರಿ ತಲೆಗೆ ಥಳಿಸಿದುದೇ ಆಕೆಯ ಸಾವಿಗೆ ಕಾರಣವಾಯಿತು ಎಂದು ಪೋಲಿಸರು ಹೇಳಿದ್ದಾರೆ.

ಉಝ್ಮಾಳನ್ನು ಕೊಂದು ಚರಂಡಿ ಗೆಸೆದ ನಂತರ “ಆಕೆ ಮನೆಯಿಂದ ಕಳ್ಳತನವೆಸಗಿ ಓಡಿ ಹೋಗಿದ್ದಾಳೆಂದು ಪೋಲಿಸರ ಬಳಿ ದೂರು ನೀಡದ ಮನೆ ಮಾಲಕಿ ಉಝ್ಮಾಳ ಕುಟುಂಬವನ್ನು ಪೋಲಿಸ್ ಠಾಣೆಗೆ ಕರೆಸಿದ್ದರು ಎಂಬ ವಿಷಯವನ್ನು ಇಕ್ಬಾಲ್ ಟೌನ್ ಡಿಎಸ್ ಪಿ ಅಬ್ದುಲ್ ಗಫೂರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಝ್ಮಾಳ ಹೆತ್ತವರು “ಎಂಟು ತಿಂಗಳಿನಿಂದ ಮನೆಗೆಲಸದಲ್ಲಿದ್ದ ನಮ್ಮ‌ಮಗಳೊಂದಿಗೆ ಒಂದು ದಿನವು ಮಾತನಾಡಲಾಗಲಿ, ಆಕೆಗೆ ಮನೆಗೆ ಬರಲಿಕ್ಕಾಗಲಿ ಫೋನ್ ನಲ್ಲಿಯೂ ಕೂಡ ಮಾತನಾಡಲಿಕ್ಕಾಗಲಿ ಮನೆಯೊಡತಿ ಅನುವು ಮಾಡಿಕೊಡಲಿಲ್ಲ. ಉಝ್ಮಾಳನ್ನು ಅವರು ಚಿತ್ರವಿಚಿತ್ರವಾಗಿ ಶಿಕ್ಷೆಗೊಳಪಡಿಸಿದ್ದಾರೆಂದು” ತಮ್ಮ ಅಳಲನ್ನು ತೋಡಿಕೊಂಡಿದ್ದರು.

ತದನಂತರ ಸಂಶಯಗೊಂಡ ಪೋಲಿಸರು ಕೂಡಲೇ ಮನೆಯೊಡತಿ ಹಾಗೂ ಆಕೆಯ ಮಕ್ಕಳನ್ನು ವಿಚಾರಣೆಗೊಳಪಡಿಸಿದಾಗ ಉಝ್ಮಾಳನ್ನು ಕೊಂದು ಚರಂಡಿಗೆಸೆದ ಸತ್ಯಾಂಶವು ಹೊರಬಂದಿದೆ.

ಪಾಕಿಸ್ತಾನ್ ತಹ್ ರೀಕೆ ಇನ್ಸಾಫ್ ಈ ವಿಷಯ ತಿಳಿಯುತ್ತಿದಂತೆ ಟ್ವಿಟರ್ ಮೂಲಕ ಮಾನವ ಹಕ್ಕುಗಳ ಸಚಿವ ಶಿರಿನ್ ಮಝ್ಹಾರಿ ಯವರ ಗಮನಕ್ಕೆ ತರುವಲ್ಲಿ ಸಫಲವಾಗಿತ್ತು.

ಎಸ್ ಹೆಚ್ ಓ ಠಾಣಾ ಇಕ್ಬಾಲ್ ಟೌನ್ ಪೋಲಿಸರಿಗೆ ತ್ವರಿತ ವಿಚಾರಣಾ ಆದೇಶವನ್ನು ನೀಡುವ ಮೂಲಕ ಪಿಪಿಸಿ 302 ರ ಅನ್ವಯ ಕೊಲೆಗೆ ಸಂಬಂಧಿಸಿದಂತೆ ಮನೆಯೊಡತಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಯು ತ್ವರಿತ ಗತಿಯನ್ನು ಪಡೆಯುತ್ತಿರುವುದಾಗಿ ಪೋಲಿಸರು ತಿಳಿಸಿದ್ದಾರೆ.