ಸನ್ಮಾರ್ಗ ವಾರ್ತೆ
76 ವರ್ಷದ ಕಲಬುರಗಿಯ ವಯೋವೃದ್ಧರೋರ್ವರು ಕೊರೋನಾ ವೈರಸ್ ಸೋಂಕಿನಿಂದ ನಿಧನ ಹೊಂದಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೃತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ಈಗ ತಪಾಸಣೆ ಪ್ರಾರಂಭವಾಗಿದ್ದು, 31 ಜನರನ್ನು ಹೆಚ್ಚು ಅಪಾಯಕಾರಿ ಮತ್ತು 15 ಜನರನ್ನು ಕಡಿಮೆ ಅಪಾಯಕಾರಿ ಎಂದು ವಿಭಜಿಸಿ ಇ.ಎಸ್.ಐ.ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಇದಕ್ಕಾಗಿ 200 ಬೆಡ್ ಕ್ವಾರಂಟಯನ್ ವಾರ್ಡ್, 50 ಬೆಡ್ ಐಸೋಲೇಷನ್ ವಾರ್ಡ್ ಸ್ಥಾಪಿಸಿ ವೈದ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ತಪಾಸಣಾ ಕೇಂದ್ರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆಯಲ್ಲದೆ ಎಲ್ಲ ತಾಲೂಕ ಹಂತದಲ್ಲಿಯೂ ಐಸೋಲೇಷನ್ ವಾರ್ಡ್ ಸ್ಥಾಪಿಸಿದೆ.
ಇದೇವೇಳೆ, ಕೊರೋನಾ ಭೀತಿಯಿಂದ ಇವತ್ತು (ಶುಕ್ರವಾರ) ನಡೆಯಬೇಕಾಗಿದ್ದ ಶ್ರೀ ಶರಣಬಸವೇಶ್ವರ ಜಾತ್ರೆಯನ್ನು ರದ್ದು ಪಡಿಸಲಾಗಿದೆ. ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೇಜು (ಪರೀಕ್ಷೆಗಳನ್ನು ನಡೆಯುವುದನ್ನು ಹೊರತುಪಡಿಸಿ) ಒಂದು ವಾರಗಳ ಕಾಲ ರಜೆ ಸಾರಲಾಗಿದೆ. ನಗರದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಮಾಲ್ ಗಳನ್ನು ಕೂಡ ಒಂದು ವಾರ ಮುಚ್ಚಲು ಸೂಚಿಸಲಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಕುರಿತು ಪರೀಕ್ಷಿಸಲು ಲ್ಯಾಬ್ ತೆರೆಯಲು ಈಗಾಗಲೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಇದಕ್ಕೆಅಗತ್ಯವಿರುವ ಉಪಕರಣಗಳನ್ನು ಕೂಡಲೇ ಸರಬರಾಜಿಗೆ ಒತ್ತಾಯಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.












