ಸನ್ಮಾರ್ಗ ವಾರ್ತೆ
ಮಧ್ಯಪ್ರದೇಶದ ಕಮಲ್ ಮೌಲಾ ಸಂಕೀರ್ಣದ ಬಳಿ ಶುಕ್ರವಾರದ ಪ್ರಾರ್ಥನೆಗೆ ಸ್ಥಳಾವಕಾಶ ಕಲ್ಪಿಸಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಮಧ್ಯಪ್ರದೇಶ ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ. ಮುಸ್ಲಿಮರಿಗೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಕಮಲ್ ಮೌಲಾ ಸಂಕೀರ್ಣದ ಬಳಿ ಪರ್ಯಾಯ ಸ್ಥಳವನ್ನು ಕಾಯ್ದಿರಿಸುವಂತೆ ಸುಪ್ರೀಂಕೋರ್ಟು ಜುಲೈ 14ರಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ರಾಜ್ಯ ಸರ್ಕಾರವು ಗುರುತಿಸಿರುವ ಪರ್ಯಾಯ ಸ್ಥಳವು ವಿವಾದಿತ ಸಂಕೀರ್ಣದಿಂದ ತುಂಬಾ ದೂರದಲ್ಲಿದೆ ಎಂದು ಮುಸ್ಲಿಂ ನಾಯಕರು ಆರೋಪಿಸಿದ್ದಾರೆ ಮತ್ತು ಸುಪ್ರೀಂಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಮಧ್ಯಪ್ರದೇಶ ಹೈಕೋರ್ಟ್ ನ ಇಂದೋರ್ ಪೀಠವು ಈ ಸಂಕೀರ್ಣವನ್ನು ದೇವಾಲಯವೆಂದು ಘೋಷಿಸಿತ್ತು.
ಸುಪ್ರೀಂ ಕೋರ್ಟ್ ಈ ಹಿಂದೆ ಭೋಜ ಶಾಲಾ ಸ್ಥಳದ ಬಳಿ ಶುಕ್ರವಾರದ ಪ್ರಾರ್ಥನೆಗೆ ಭೂಮಿ ಇರಬೇಕು ಎಂದು ತೀರ್ಪು ನೀಡಿತ್ತು. ಆದರೆ ಈಗ ಮಧ್ಯಪ್ರದೇಶ ಸರಕಾರ ನೀಡಿರುವ ಭೂಮಿ, ಬೋಜಶಾಲಾದಿಂದ ಎರಡು ಕಿಲೋಮೀಟರ್ ದೂರದಲ್ಲಿದೆ, ನಾವೀಗಾಗಲೇ ಶುಕ್ರವಾರದ ಪ್ರಾರ್ಥನೆಯನ್ನು ತಪ್ಪಿಸಿಕೊಂಡಿದ್ದೇವೆ ಎಂದು ಕಮಲ್ ಮೌಲಾ ಮಸೀದಿಯನ್ನು ಪ್ರತಿನಿಧಿಸುತ್ತಿರುವ ವಕೀಲ ಹುಝಯ್ ಫ ಅಹಮದಿ ವಾದಿಸಿದರು.
ಇದೇ ವೇಳೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ಮೆಹತಾ ಅವರು ಪರ್ಯಾಯ ಸ್ಥಳವು ವಿವಾದಿತ ಸಂಕೀರ್ಣದಿಂದ ಸುಮಾರು 900 ಮೀಟರ್ ದೂರದಲ್ಲಿದೆ, ಈ ಸಮಸ್ಯೆಯನ್ನು ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಮತ್ತು ಅಗತ್ಯ ಬಿದ್ದರೆ ಸರಿಪಡಿಸುವ ಕ್ರಮ ಕೈಗೊಳ್ಳುವುದಾಗಿ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಧಾರ್ ನಲ್ಲಿರುವ ವಿವಾದಿತ ಸ್ಥಳವನ್ನು ಸರಸ್ವತಿಗೆ ಸಮರ್ಪಿತವಾದ ದೇವಾಲಯವೆಂದು ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.. ಈ ಮೇಲ್ಮನವಿಯ ವಿಚಾರಣೆ ನಡೆಸುವ ವೇಳೆ, ಭೋಜ ಶಾಲಾ ಸಂಕೀರ್ಣದಲ್ಲಿ ಶುಕ್ರವಾರ ಒಂದು ಗಂಟೆಯಿಂದ 3 ಗಂಟೆಯವರೆಗೆ ಮುಸ್ಲಿಮರಿಗೆ ಪ್ರಾರ್ಥನೆ ನಡೆಸಲು ವ್ಯವಸ್ಥೆ ಮಾಡಿಕೊಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿತ್ತು.












