ಬೈಕ್ ಅಪಘಾತಕ್ಕೀಡಾಗಿ ಕೋಮಾದಲ್ಲಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಇನ್ನಿಲ್ಲ

0
335

ಸನ್ಮಾರ್ಗ ವಾರ್ತೆ

ಬೆಂಗಳೂರು: ಕಳೆದ ಶನಿವಾರ ಬೆಂಗಳೂರಿನಲ್ಲಿ ಬೈಕ್ ಅಪಘಾತಕ್ಕೀಡಾಗಿ ಕೋಮಾದಲ್ಲಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರರಂಗದ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಮಾಹಿತಿ ಹಂಚಿದ್ದಾರೆ.

ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಟನನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಶನಿವಾರ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕಿನಲ್ಲಿ ನಟ ಹಿಂದಿರುಗುತ್ತಿದ್ದರು. ಅವರ ಗೆಳೆಯ ನವೀನ್ ಬೈಕ್ ಓಡಿಸುತ್ತಿದ್ದು, ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ನಟ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು.

ಮೂಲತಃ ರಂಗಭೂಮಿ ಕಲಾವಿದರಾಗಿರುವ ಸಂಚಾರಿ ವಿಜಯ್, ‘ನಾನು ಅವನಲ್ಲ, ಅವಳು’ ಸಿನಿಮಾ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಸಿನಿಮಾ ಜೊತೆಯಲ್ಲಿ `ಉಸಿರು’ ಹೆಸರಿನ ತಂಡವನ್ನು ಕಟ್ಟಿಕೊಂಡು ಲಾಕ್‍ಡೌನ್ ನಲ್ಲಿ ಸಂಕಷ್ಟ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದರು. ಸದ್ಯ ನಟನ ನಿಧನಕ್ಕೆ ಚಿತ್ರರಂಗ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.