ಚೀನಾದ ನಿಷೇಧದ ಮಧ್ಯೆಯೂ ಛಲಬಿಡದೆ ಉಯಿಗುರ್ ಮುಸ್ಲಿಮರಿಗಾಗುತ್ತಿರುವ ಅನ್ಯಾಯ ಬಹಿರಂಗಗೊಳಿಸಿದ್ದ ಭಾರತೀಯ ಮೂಲದ ಪತ್ರಕರ್ತೆಗೆ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ

0
608

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಶಿಂಜಿಯಾಂಗ್ ಪ್ರಾಂತದ ಉಯಿಗುರ್ ಮುಸ್ಲಿಮರನ್ನು ಬಂಧಿಖಾನೆಯಲ್ಲಿರಿಸಿದ ವಿವರವನ್ನು ಹೊರ ಜಗತ್ತಿಗೆ ಬಹಿರಂಗಪಡಿಸಿದ್ದ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲ್‍ರಿಗೆ ಜಗತ್ತಿನ ಪತ್ರಕರ್ತರಿಗೆ ನೀಡಲಾಗುವ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ದಕ್ಕಿದೆ. ಚೀನಾ ರಹಸ್ಯವಾಗಿ ಬಯಲು ಬಂಧಿಖಾನೆಯನ್ನು ನಿರ್ಮಿಸಿ ಉಯಿಗುರ್ ಮುಸ್ಲಿಮರನ್ನು ಅದರಲ್ಲಿ ಕೂಡಿ ಹಾಕಿತ್ತು.

ಜೈಲು ಮತ್ತು ಬಯಲು ಬಂಧಿಖಾನೆ ಸಹಿತ ಅದರಲ್ಲಿರುವ ಸೌಕರ್ಯಗಳ ಕುರಿತು ವಿವರಗಳನ್ನು ಒಳಗೊಂಡ ತನಿಖಾ ವರದಿಗೆ ಪುಲಿಟ್ಝರ್ ಪ್ರಶಸ್ತಿ ನೀಡಲಾಗಿದೆ. ಅಮೆರಿಕದ ಉತ್ಕೃಷ್ಟ ಜರ್ನಲಿಸಂ ಪ್ರಶಸ್ತಿಯನ್ನು ಇಬ್ಬರು ಭಾರತೀಯ ಮೂಲದ ಪತ್ರಕರ್ತರು ಪಡೆದುಕೊಂಡಿದ್ದಾರೆ. ಇವರಲ್ಲಿ ಬಸ್‍ಫೀಡ್ ನ್ಯೂಸ್‍ನ ಮೇಘಾ ರಾಜಗೋಪಾಲನ್ ಒಬ್ಬರು.

ಇವರ ಶಿಂಜಿಯಾಂಗ್ ಸರಣಿ ಅಂತಾರಾಷ್ಟ್ರೀಯ ವರದಿಗಾರಿಕೆ ವಿಭಾಗದಲ್ಲಿ ಪುರಸ್ಕರ ಪಡೆಯಿತು. 2017ರಲ್ಲಿ ಮೇಘಾ ಶಿಂಜಿಯಾಂಗ್ ಗೆ ಹೋಗಿದ್ದರು. ಈ ಕಾಲದಲ್ಲಿ ಬಂಧಿಖಾನೆಯು ಇಲ್ಲವೆಂದು ಚೀನ ಹೇಳುತ್ತಿತ್ತು. ಆದರೆ, ಮೇಘಾರ ವರದಿ ಬಹಿರಂಗವಾದ ಮೇಲೆ ಅವರ ವೀಸಾ ರದ್ದು ಪಡಿಸಿ ಚೀನದಿಂದ ಹೊರಗಟ್ಟಲಾಗಿತ್ತು.

ಇದರ ನಂತರ ಲಂಡನ್ ನಿಂದ ಮೇಘಾ ಬಯಲು ಬಂಧಿ ಖಾನೆಯ ಕುರಿತ ತನಿಖೆ ಮುಂದುವರಿಸಿದರು. ತನ್ನ ಸಹಾಯಕ್ಕಾಗಿ ಇಬ್ಬರನ್ನು ಗೊತ್ತುಪಡಿಸಿ, ಸರಣಿ ವರದಿಯನ್ನು ಪ್ರಕಟಿಸಿದ ಬಳಿಕ ಜಗತ್ತಿಗೆ ಚೀನ ಮುಸ್ಲಿಮರಿಗೆ ನಡೆಸುತ್ತಿರುವ ಅನ್ಯಾಯ ಬಹಿರಂಗವಾಗಿತ್ತು. ತನ್ನ ವರದಿಯಲ್ಲಿ ದ 260 ಬಯಲು ಬಂಧಿಖಾನೆಗಳನ್ನು ಇವರು ಗುರುತಿಸಿದರು. ಕೆಲವು ಸ್ಥಳಗಳಲಿ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಇರಿಸಲಾಗಿತ್ತು. ಅಲ್ಲದೇ ಕೆಲವು ಫ್ಯಾಕ್ಟರಿಗಳಲ್ಲಿ ಅವರಿಂದ ಕೆಲಸ ಮಾಡಿಸಲಾಗುತ್ತಿತ್ತು. ಮೇಘಾರ ವರದಿ ಬಹಿರಂಗವಾದ ಮೇಲೆ ಅವರ ವೀಸಾ ರದ್ದು ಪಡಿಸಿ ಚೀನದಿಂದ ಹೊರಗಟ್ಟಲಾಗಿತ್ತು. ನಿಷೇಧವಿದ್ದ ಹಿನ್ನೆಲೆಯಲ್ಲಿ ಛಲಬಿಡದೇ ಮೇಘಾರವರು ನೆರೆಯ ಕಝಾಕಿಸ್ಥಾನಕ್ಕೆ ಹೋಗಿ ಹೆಚ್ಚು ವಿವರಗಳನ್ನು ಸಂಗ್ರಹಿಸಿದರು. ಇಲ್ಲಿ ಆಶ್ರಯ ಪಡೆದುಕೊಂಡಿದ್ದ ಚೀನದ ಮುಸ್ಲಿಮರನ್ನು ಅವರು ಭೇಟಿಯಾಗಿ, ಅವರ ಬಯಲು ಬಂಧಿಖಾನೆಯ ಅನುಭವಗಳನ್ನು ಪ್ರಕಟಿಸಿದರು.

21 ವಿಭಾಗಗಳಲ್ಲಿ ಪುಲಿಟ್ಝರ್ ಪ್ರಶಸ್ತಿ ಪ್ರತಿವರ್ಷ ಕೊಡಲಾಗುತ್ತದೆ. 20 ವಿಭಾಗಗಳಲ್ಲಿ ವಿಜೇತರಿಗೆ ಸರ್ಟಿಫಿಕೆಟ್ ಮತ್ತು 15,000 ಅಮೆರಿಕ ಡಾಲರ್ ನಗದು ಪ್ರಶಸ್ತಿ ನೀಡಲಾಗುತ್ತದೆ. ಪಬ್ಲಿಕ್ ಸರ್ವಿಸ್ ವಿಭಾಗದ ವಿಜೇತರಿಗೆ ಚಿನ್ನದ ಪದಕ ನೀಡಿ, ಗೌರವಿಸಲಾಗುತ್ತದೆ.