ಸನ್ಮಾರ್ಗ ವಾರ್ತೆ
ಬೆಂಗಳೂರು, ಮೇ 2: ಲಾಕ್‌ಡೌನ್ ಅವಧಿಯು ವಿಸ್ತರಣೆಗೊಂಡಿರುವ ಸಂದರ್ಭದಲ್ಲಿ ಕಾರ್ಮಿಕರನ್ನು ಉಚಿತವಾಗಿ ಊರಿಗೆ ತಲುಪಿಸುವ ಕೆಲಸವನ್ನು ವಿವಿಧ ರಾಜ್ಯಗಳು ಕೈಗೊಳ್ಳುತ್ತಿರುವುದು ಈಗಾಗಲೇ ವರದಿಯಾಗಿದೆ.
ಈ ಸಂದರ್ಭದಲ್ಲಿ ಊರಿಗೆ ತೆರಳಲಾರದೇ ಬೆಂಗಳೂರಿನಲ್ಲಿ ಸಿಕ್ಕಿಕೊಂಡಿರುವ ಕಾರ್ಮಿಕರಿಗೆ ಊರಿಗೆ ಹೋಗಲು ಕರ್ನಾಟಕ ಸರ್ಕಾರ ಬಸ್ ವ್ಯವಸ್ಥೆ ಮಾಡಿದ್ದು, ಭಾರೀ ಮೊತ್ತದ ಟಿಕೇಟ್ ದರವನ್ನು ನಿಗದಿ ಪಡಿಸುವ ಮೂಲಕ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ವರ್ತಿಸುತ್ತಿದೆ.
ಗುರುವಾರ ಸಂಜೆ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ನಾಳೆಯಿಂದಲೇ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಘೋಷಿಸಿದರು.ಆದರೇ ಟಿಕೇಟ್ ದರವನ್ನು ಸಾರ್ವಜನಿಕರಿಂದ ಗೌಪ್ಯವಾಗಿ ಇಡಲಾಗಿತ್ತು.ಇದರ ಅರಿವಿಲ್ಲದೇ ಕಂದಾಯ ಭವನದ ಎದುರಿನ ಬನ್ನಪ್ಪ ಪಾರ್ಕ್ ನಿಂದ ಬಸ್ ತೆರಳುತ್ತವೆ ಎಂದು ತಿಳಿದು ಬನ್ನಪ್ಪ ಪಾರ್ಕ್ ಬಳಿ ಜಮಾಯಿಸಿದ ಕಾರ್ಮಿಕರು ಮತ್ತಷ್ಟು ಪರದಾಡುವಂತಾಗಿದೆ.
ಕೊರೊನಾ ಟೆಸ್ಟ್ ಮಾಡಿಸಿಕೊಂಡಿರಬೇಕು, ಟಿಕೇಟ್ ಖರೀದಿಸಿ ಪ್ರಯಾಣಿಸಬೇಕು ಮತ್ತು ಒಂದು ಬಸ್‌ನಲ್ಲಿ ಒಟ್ಟು ಬಸ್ ಸಾಮರ್ಥ್ಯದ ಶೇ.40% ಜನ ಮಾತ್ರ ಪ್ರಯಾಣಿಸಬಹುದು ಎಂದು ನಿಯಮಗಳನ್ನು ಸರ್ಕಾರ ವಿಧಿಸಿರುವುದನ್ನು ಸೂಚಿಸಲಾಗಿತ್ತಾದರೇ, ಪ್ರಯಾಣ ದರ ಮೂರು ಪಟ್ಟು ಹೆಚ್ಚಾಗಿದೆ ಎಂದು ಬಾಯಿಬಿಟ್ಟಿರಲಿಲ್ಲ.
ಇದರಿಂದ ಇತ್ತ ಒಂದೂವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್‌ನಲ್ಲಿ ಸಿಕ್ಕಿಬಿದ್ದು ಹೊಟ್ಟೆ ಬಟ್ಟೆಗಿಲ್ಲದೇ ಕಷ್ಟ ಅನುಭವಿಸಿದ್ದ ಕಾರ್ಮಿಕರು ಅಂತೂ ತಮ್ಮೂರು ತಲುಪುವ ಆಸೆಯಲ್ಲಿ ವಿವಿಧ ಸ್ಥಳಗಳಿಂದ ಬನ್ನಪ್ಪ ಪಾರ್ಕ್ ಬಳಿ ಬಂದರೆ ಟಿಕೇಟ್ ದರವು ನುಂಗಲಾರದ ತುತ್ತಾಗಿದೆ.

ಕಾರ್ಮಿಕನೊಬ್ಬ 450 ರೂ ಕೊಟ್ಟು ರಾಯಚೂರಿಗೆ ಪ್ರಯಾಣಿಸುವುದೇ ಲಾಕ್‌ಡೌನ್‌ನಿಂದಾಗಿ ಕಷ್ಟವಾಗಿರುವಾಗ, ಸರ್ಕಾರ ರಾಯಚೂರಿಗೆ ತಲಾ ವ್ಯಕ್ತಿಗೆ 1203 ರೂ ನಿಗಧಿಪಡಿಸಿದೆ. ಉತ್ತರ ಕನ್ನಡಕ್ಕೆ 1493 ರೂ! ಯಾದಗಿರಿಗೆ 1411ರೂ! ಹೆಚ್ಚು ಕಮ್ಮಿ ಎರಡು ತಿಂಗಳು ಯಾವುದೇ ಕೆಲಸವಿಲ್ಲ, ಕೂಲಿಯಿಲ್ಲದೇ ಕೈಲ್ಲಿದ್ದ ಹಣವನ್ನೆಲ್ಲಾ ದಿನಬಳಕೆಯ ವಸ್ತುಗಳಿಗಾಗಿ ಬಳಸಿರುವಾಗ ಇಷ್ಟೊಂದು ಹಣವನ್ನು ಭರಿಸುವುದಾದರೂ ಹೇಗೆ ಎಂಬುದನ್ನು ಸರಕಾರ ಮರೆತಂತಿದೆ.
ಈಗಾಗಲೇ ಕೆ.ಎಸ್.ಆರ್.ಟಿ.ಸಿ ನಷ್ಟದಲ್ಲಿದೆ. ಅಲ್ಲದೇ ಕೇವಲ 40% ಜನರನ್ನು ಮಾತ್ರ ಕೊಂಡೊಯ್ಯಬೇಕು. ವಾಪಸ್ ಬೆಂಗಳೂರಿಗೆ ಬಸ್ ಖಾಲಿ ಬರಬೇಕು. ಇದೆಲ್ಲವನ್ನು ಕೂಡಿಸಿ ಆ ಭಾರವನ್ನು ಕಾರ್ಮಿಕರ ತಲೆಯ ಮೇಲೆ ಹಾಕಲು ಸರ್ಕಾರ ನಿರ್ಧರಿಸಿದಂತಿದೆ ಎಂಬ ವಾದಗಳು ಕೇಳಿಬರುತ್ತಿವೆ.
ಒಂದೂವರೆ ತಿಂಗಳು ನೋವುಂಡು ಜರ್ಜರಿತವಾಗಿರುವ ಕಾರ್ಮಿಕರನ್ನು ಉಚಿತವಾಗಿ ಅವರ ಊರುಗಳಿಗೆ ಕಳುಹಿಸಬೇಕಾದ ಸರ್ಕಾರ ಅವರಿಂದಲೇ ಲೂಟಿಗೆ ಇಳಿದಿರುವುದು ದೇಶದಲ್ಲಿ ಕರ್ನಾಟಕ ಜನತೆ ತಲೆ ತಗ್ಗಿಸುವಂತೆ ಎಂದು ಹಲವರು ದೂರಿದ್ದಾರೆ. ಲಾಕ್ ಡೌನ್ ಅವಧಿಯ ವೇಳೆ ಕಟ್ಟಡ ಕಾಮಗಾರಿ ಆರಂಭಗೊಂಡರೇ ಕಾರ್ಮಿಕರ ಅಭಾವವನ್ನು ನೀಗಿಸಲು ಟಿಕೇಟ್ ದರವನ್ನು ಏರಿಸಲಾಗಿದೆ ಎಂಬ ಪೊಳ್ಳು ವಾದಗಳನ್ನು ನೀಡುತ್ತಿರುವುದೂ ಕೂಡ ಕೇಳಿ ಬರುತ್ತಿದೆ.
ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












