ಬೆಂಗಳೂರು, ಜು.12: ರಾಜ್ಯದಲ್ಲಿ ಸರಕಾರ ಪತನದತ್ತ ಮುಖಮಾಡಿರುವ ವೇಳೆಯೇ ಮಳೆಗಾಲದ ವಿಧಾನಸಭೆ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಈಗಾಗಲೆ ಅಧಿವೇಶನದಲ್ಲಿ ಉಪಸ್ಥಿತರಿರುವಂತೆ ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ವಿಪ್ ಜಾರಿಮಾಡಲಾಗಿದ್ದು ಅತೃಪ್ತರ ಮನೆಯ ಮುಂದೆ ವಿಪ್ ಅಂಟಿಸುವ ಕಾರ್ಯವೂ ಮುಗಿದಿದೆ. ಜೆಡಿಎಸ್ ಶಾಸಕರು ಅಧಿವೇಶನಕ್ಕೆ ಆಗಮಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಶಾಸಕರು ಕೂಡ ಆಗಮಿಸುತ್ತಿದ್ದಾರೆ. ಬೆಳಗ್ಗೆ ಮುಖ್ಯಮಂತ್ರಿ ಜೆಡಿಎಸ್ ಶಾಸಕರ ಸಭೆಯನ್ನು ಇಂದು ಬೆಳಗ್ಗೆ 10: 30ಕ್ಕೆ ಕರೆದಿದ್ದಾರೆ.
ಇದೇ ವೇಳೆ ಇಂದು ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ರಾಜೀನಾಮೆ ಇನ್ನೂ ಅಂಗೀಕರಿಸದ ಸ್ಪೀಕರ್ ತನ್ನ ವಾದವನ್ನು ಕೂಡ ಸುಪ್ರೀಂಕೋರ್ಟಿನಲ್ಲಿ ಮಂಡಿಸಿದ್ದಾರೆ. ಸ್ಪೀಕರ್ ವರದಿಯ ಆಧಾರದಲ್ಲಿ ಸುಪ್ರೀಂಕೋರ್ಟಿನಲ್ಲಿ ಪ್ರಕ್ರಿಯೆ ಮುಂದುವರಿಯಲಿದ್ದು ಬಹುತೇಕ ಪ್ರಕರಣ ಇಂದು ಇತ್ಯರ್ಥವಾಗುವ ಸಾಧ್ಯತೆ ಇಲ್ಲ. ನಿನ್ನೆ ಮುಂಬೈಯಿಂದ ಬಂದು ರಮೇಶ್ ಕುಮಾರ್ ಮುಂದೆ ಹಾಜರಾಗಿದ್ದ ಶಾಸಕರು ಪುನಃ ಮುಂಬೈಗೆ ತೆರಳಿದ್ದು ಇವರು ಯಾರೂ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ.












