ಮಂಗಳೂರು, ಜು 11: ಕಾನೂನು ಪಾಲನೆಯ ಹೆಸರಿನಲ್ಲಿ ಶಾಲಾ ಮಕ್ಕಳ ಖಾಸಗಿ ವಾಹನ ಚಾಲಕರ ಮೇಲೆ ಪೊಲೀಸರು ಅತಿರೇಕದ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ದ ಕ ಜಿಲ್ಲಾ ಶಾಲಾ ಮಕ್ಕಳ ಖಾಸಗಿ ವಾಹನ ಚಾಲಕರ ಸಂಘದ ನೇತೃತ್ವದಲ್ಲಿ ಜಿಲ್ಲಾದ್ಯಂತ ಗುರುವಾರ ಆರಂಭಗೊಂಡ ಮುಷ್ಕರ ಶುಕ್ರವಾರವೂ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ.
ನಿರಂತರ ಕೇಸು ಹಾಗು ವಿಪರೀತ ದಂಡ ಸೇರಿದಂತೆ ಕಳೆದ ಒಂದು ತಿಂಗಳಿನಿಂದ ನಾನಾ ರೀತಿಯ ಕಿರುಕುಳವನ್ನು ಪೊಲೀಸ್ ಇಲಾಖೆಯಿಂದ ಅನುಭವಿಸಿ ತಡೆಯಲಾಗದೆ ಕೊನೆಗೆ ಮುಷ್ಕರದ ಹಾದಿ ಹಿಡಿದಿದ್ದೇವೆ ಎಂಬುದು ಚಾಲಕ ಸಂಘದ ವಾದವಾಗಿದೆ. ಈ ಮುಷ್ಕರಕ್ಕಿಂತ ಮೊದಲು ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಕಿರುಕುಳದ ಬಗ್ಗೆ ದೂರಿಕೊಂಡರೂ ಪ್ರಯೋಜನವಾಗದ ಕಾರಣದಿಂದ ಈ ಮುಷ್ಕರಕ್ಕೆ ಮುಂದಾಗಬೇಕಾಯಿತು ಎಂದು ಸಂಘ ಸಮರ್ಥಿಸಿಕೊಂಡಿದೆ.
ಇತ್ತೀಚಿಗೆ ರಾಜ್ಯ ಉಚ್ಚ ನ್ಯಾಯಾಲಯವು ಶಾಲಾ ಮಕ್ಕಳ ಸಾಗಾಟಕ್ಕೆ ಸಂಬಂಧಿಸಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿತ್ತು. ಈ ನಿಯಮವು ವ್ಯಾವಹಾರಿಕವಲ್ಲ ಅನ್ನುವ ಆಕ್ಷೇಪ ಚಾಲಕ ಸಂಘದ್ದು. ರಿಕ್ಷಾದಲ್ಲಿ ೬ ಮಕ್ಕಳು, ಓಮ್ನಿಯಲ್ಲಿ ೯ ಮಕ್ಕಳು, ೩೦ ಸೀಟು ಇರುವ ಬಸ್ಸಿನಲ್ಲಿ ೩೫ ರವರೆಗೆ ಮಕ್ಕಳು ಮತ್ತು ೨೦ ಸೀಟು ಇರುವ ಬಸ್ಸಿನಲ್ಲಿ ೨೨ ರ ವರೆಗೆ ಮಕ್ಕಳನ್ನು ತುಂಬಿಸಿಕೊಂಡು ಹೋಗಬಹುದು ಎಂದು ಕಾನೂನು ಇರುವುದಾಗಿ ಹೇಳಲಾಗುತ್ತಿದ್ದು, ಇದರ ಹೆಸರಲ್ಲಿ ಪೊಲೀಸ್ ಇಲಾಖೆ ವಿಪರೀತ ಕಟ್ಟು ನಿಟ್ಟನ್ನು ತೋರ್ಪಡಿಸುತ್ತಿದೆ ಎಂಬುದು ಸಂಘದ ಆಕ್ಷೇಪ.
ಗುರುವಾರದಂದು ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯೂ ಕಡಿಮೆಯಾಗಿತ್ತು ಎಂದು ಶಾಲೆಗಳ ಮುಖ್ಯಸ್ಥರು ತಿಳಿಸಿದ್ದಾರೆ. ಮುಷ್ಕರ ನಡೆಸುವ ಬಗ್ಗೆ ಆಟೋರಿಕ್ಷಾ ಚಾಲಕರು ಮುಂಚಿತವಾಗಿಯೇ ಪೋಷಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೆಲವು ಪೋಷಕರೇ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗದ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದ ಹೊರತಾಗಿಯೂ ಮುಷ್ಕರ ನಡೆದಿದೆ ಮತ್ತು ಮುಂದುವರಿದಿದೆ.












