ಆಕ್ರಮಣದಿಂದ ದೂರವಿರಲು ಭಾರತ ಇಸ್ರೇಲ್‌ನ್ನು ಒತ್ತಾಯಿಸಬೇಕು: ಕರ್ನಾಟಕದ ಮುಸ್ಲಿಮ್ ಸಂಘಟನೆಗಳ ಮುಖಂಡರಿಂದ‌ ರಾಜ್ಯಪಾಲರಿಗೆ ಮನವಿ

0
561

ಸನ್ಮಾರ್ಗ ವಾರ್ತೆ

ಬೆಂಗಳೂರು: ಫೆಲಸ್ತೀನಿಯನ್ನರ ಮೇಲಿನ ಆಕ್ರಮಣದಿಂದ ದೂರವಿರಲು ಭಾರತ ಇಸ್ರೇಲನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿ ಕರ್ನಾಟಕದ ಮುಸ್ಲಿಮ್ ಸಂಘಟನೆಗಳ ನಾಯಕರು ರಾಜ್ಯಪಾಲ ವಾಜುಭಾಯಿ ವಾಲಾ‌ರವರಿಗೆ ವಿಜ್ಞಾಪನೆಯನ್ನು ಸಲ್ಲಿಸಿದೆ.

ಅಲ್-ಅಕ್ಸಾ ಮಸೀದಿ, ಜೆರುಸಲೇಮ್, ಗಾಝಾ ಮತ್ತು ಪ್ಯಾಲೆಸ್ತೀನ್‍ನ ಇತರ ಸ್ಥಳಗಳ ಮೇಲೆ ಇಸ್ರೇಲಿನ ಆಕ್ರಮಣ ಮತ್ತು ಕ್ರೂರ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅದು ಇನ್ನೂರಕ್ಕೂ ಹೆಚ್ಚು ಫೆಲಸ್ತೀನಿಯನರನ್ನು ಕೊಂದು ಸಾವಿರಾರು ಜನರು ಗಾಯಗೊಳ್ಳುವಂತೆ ಮಾಡಿದೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಈ ಆಕ್ರಮಣಕಾರಿ ಹಿಂಸಾತ್ಮಕ ಕೃತ್ಯಗಳ ಮೂಲಕ ಫೆಲೆಸ್ತೀನಿಯನ್ನರ ಪ್ರದೇಶಗಳನ್ನು ವಶಪಡಿಸುವುದು ಇಸ್ರೇಲ್‍ನ ಭಯೋತ್ಪಾದಕ ತಂತ್ರಗಳ ಒಂದು ಭಾಗವಾಗಿದೆ. ಇದು ಅಂತಾರಾಷ್ಟ್ರೀಯ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಅಲ್ಲಿನ ಯಹೂದಿ ವಸಾಹತುಗಾರರಿಗೆ ಪುನರ್ವಸತಿಯ ನೆಪಹೂಡುತ್ತಿದೆ. ಜೆರುಸಲೇಮ್‍ನ ಶೇಖ್‍ಜರ್ರಾ ಪ್ರದೇಶವನ್ನು ಸ್ಥಳಾಂತರಿಸಲು ಪ್ರಸ್ತುತ ಅನ್ಯಾಯಯುತ ಮತ್ತು ಕ್ರೂರ ಅಭಿಯಾನ ನಡೆಯುತ್ತಿದೆ ಮತ್ತು ಇದಕ್ಕಾಗಿ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ನಾಗರಿಕರನ್ನು ದೊಡ್ಡ ಪ್ರಮಾಣದಲ್ಲಿ ತೀವ್ರ ದೌರ್ಜನ್ಯಕ್ಕೆ ಒಳಪಡಿಸಲಾಗುತ್ತಿದೆ. ಪ್ಯಾಲೆಸ್ತೀನಿಯರನ್ನು ಬಲವಂತವಾಗಿ ಹೊರಹಾಕುವುದು ಮಾನವ ಹಕ್ಕುಗಳ ಎಲ್ಲಾ ತತ್ವಗಳ ಉಲ್ಲಂಘನೆಯಾಗಿದೆ ಎಂದು ಮುಸ್ಲಿಂ ಮುಖಂಡರು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದೆ.

ಇಸ್ರೇಲ್ ಅಲ್-ಅಕ್ಸಾ ಮಸೀದಿಗೆ ನುಗ್ಗಿ ನಮಾಝಿಗರ ಮೇಲೆ ದಾಳಿ ಮಾಡಿ ಕಾಂಪೌಂಡ್‍ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ ರೀತಿ ವಿಶ್ವದಾದ್ಯಂತ ಮುಸ್ಲಿಮರಿಗೆ ತೀವ್ರ ನೋವನ್ನುಂಟು ಮಾಡಿದೆ. ಅಲ್-ಅಕ್ಸಾ ಮಸೀದಿ ಮುಸ್ಲಿಮರಿಗೆ ಮೂರನೇ ಪವಿತ್ರ ಸ್ಥಳವಾಗಿದೆ. ನಮ್ಮ ಧಾರ್ಮಿಕ ಭಾವನೆಗಳು ಈ ಸ್ಥಳದೊಂದಿಗೆ ಸಂಬಂಧ ಹೊಂದಿವೆ. ಈ ಪವಿತ್ರ ಸ್ಥಳದಲ್ಲಿನ ದಬ್ಬಾಳಿಕೆ ಮತ್ತು ಅನಾಗರಿಕತೆಯನ್ನು ಇಡೀ ನಾಗರಿಕ ಜಗತ್ತು ಬಲವಾಗಿ ಖಂಡಿಸಬೇಕು.

ಗಾಝಾದ ಮೇಲೆ ವೈಮಾನಿಕ ದಾಳಿಯ ಮೂಲಕ ಪರಿಸ್ಥಿತಿಯನ್ನು ಹೆಚ್ಚು ಹದಗೆಡಿಸಲು ಇಸ್ರೇಲ್ ದುಷ್ಟ ಯತ್ನ ನಡೆಸುತ್ತಿದೆ. ಇಸ್ರೇಲಿನ ಎಲ್ಲಾ ಕ್ರಮಗಳು ವಿಶ್ವ ಸಂಸ್ಥೆಯ ನಿರ್ಣಯಗಳು ಮತ್ತು ಅಂತಾರಾಷ್ಟ್ರೀಯ ಸಮುದಾಯದ ನಿಲುವಿನ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ನಾಗರಿಕ ಜಗತ್ತಿನ ಭಾವನೆಗಳು ಮತ್ತು ಜಾಗತಿಕ ಸ್ಥಾನದ ಬಗ್ಗೆ ಇಸ್ರೇಲ್ ಹೆದರುವುದಿಲ್ಲ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಪ್ರಸ್ತುತ ಸಾಂಕ್ರಾಮಿಕದಲ್ಲಿ, ಇಸ್ರೇಲ್ ತನ್ನ ದುಷ್ಕೃತ್ಯ ಮತ್ತು ಕಾನೂನುಬಾಹಿರ ವಿಸ್ತರಣಾ ಯೋಜನೆಗಾಗಿ ಮಾಡಿದ ಈ ಅನಾಗರಿಕ ಕೃತ್ಯಗಳು ಎಲ್ಲಾ ಮಾನವೀಯತೆಯ ವಿರುದ್ಧದ ಗಂಭೀರ ಅಪರಾಧವಾಗಿದೆ. ಇಸ್ರೇಲ್ ಪಡೆಗಳ ಭೀಕರ ದಬ್ಬಾಳಿಕೆಯನ್ನು ಸಮರ್ಥಿಸಲು ಕೇವಲ 10 ಇಸ್ರೇಲೀಯರನ್ನು ಕೊಂದ ಪ್ಯಾಲೆಸ್ತೀನಿನ್ ಪ್ರತೀಕಾರದ ಕ್ರಮವನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಭಾರತೀಯ ಪ್ರತಿನಿಧಿ ಶ್ರೀ ತಿರುಮೂರ್ತಿ ಅವರು ನೀಡಿದ ಹೇಳಿಕೆಯನ್ನು ನಾವು ಪ್ರಶಂಸಿಸುತ್ತೇವೆ.

ನಮ್ಮ ಬೇಡಿಕೆಗಳು:
ಈ ಆಕ್ರಮಣವನ್ನು ತಡೆಯುವಲ್ಲಿ ಅಂತರರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ತಮ್ಮ ಪಾತ್ರವನ್ನು ವಹಿಸಬೇಕು ಮತ್ತು ನಿರ್ಣಯಗಳು ಮತ್ತು ಹೇಳಿಕೆಗಳಿಗೆ ಸೀಮಿತವಾಗಿರದೆ ಇಸ್ರೇಲನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ದಬ್ಬಾಳಿಕೆ ಮತ್ತು ಅನಾಗರಿಕತೆಯನ್ನು ಕೊನೆಗೊಳಿಸಲು ಅಂತಾರಾಷ್ಟ್ರೀಯ ನ್ಯಾಯಾಲಯ, ಮಾನವ ಹಕ್ಕುಗಳ ಸಂಘಟನೆಗಳು, ಜಗತ್ತಿನ ಎಲ್ಲ ನ್ಯಾಯ-ಪ್ರಿಯ ದೇಶಗಳು, ಎನ್‍ಜಿಒಗಳು ಮತ್ತು ಪ್ರಭಾವಿ ವ್ಯಕ್ತಿಗಳು ಮುಂದೆ ಬಂದು ಇಸ್ರೇಲ್ ಮೇಲೆ ಜಾಗತಿಕವಾಗಿ ಪ್ರಬಲ ಒತ್ತಡ ಹೇರಬೇಕೆಂದು ನಾವು ಆಗ್ರಹಿಸುತ್ತೇವೆ.

ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕಾನ್ಫರೆನ್ಸ್ (ಒಐಸಿ), ಮುಸ್ಲಿಮ್ ಮತ್ತು ಅರಬ್ ರಾಷ್ಟ್ರಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾದರೆ ಸಾಲದು. ಪ್ಯಾಲೆಸ್ತೀನಿಯನ್ನರ ಮೇಲಿನ ಮತ್ತಷ್ಟು ದಬ್ಬಾಳಿಕೆಯನ್ನು ತಡೆಯಲು ಅವರು ತಮ್ಮ ಪ್ರಭಾವವನ್ನು ಬಳಸಬೇಕು.

ನಮ್ಮ ದೇಶದ ದೀರ್ಘಕಾಲದ ವಿದೇಶಾಂಗ ನೀತಿ ಮತ್ತು ಪ್ಯಾಲೆಸ್ತೀನಿನ ಜನರಿಗಾಗಿ ಮತ್ತು ಪ್ಯಾಲೆಸ್ತೀನಿನ ಉದ್ದೇಶಕ್ಕಾಗಿ ದೀರ್ಘಕಾಲದ ಬದ್ಧತೆಯನ್ನು ನಾವು ಗೌರವಿಸುತ್ತೇವೆ. ಜೊತೆಗೆ ಅನ್ಯಾಯಕ್ಕೊಳಗಾದ ಪ್ಯಾಲೆಸ್ತೀನಿಯನ್ ಜನರನ್ನು ಬೆಂಬಲಿಸಬೇಕು ಮತ್ತು ಅವರ ಹಕ್ಕುಗಳನ್ನು ನೀಡಲು ಇಸ್ರೇಲ್ ತನ್ನ ಆಕ್ರಮಣಕಾರಿ ನಡವಳಿಕೆಯನ್ನು ತ್ಯಜಿಸುವಂತೆ ಒತ್ತಡ ಹೇರಬೇಕು ಎಂದು ನಾವು ನಮ್ಮ ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ.

ನಾವು ಭಾರತದ ನಾಗರಿಕರು ಮತ್ತು ಭಾರತೀಯ ಮುಸ್ಲಿಮರ ಪರವಾಗಿ ಅನ್ಯಾಯಕ್ಕೊಳಗಾದ ಫೆಲೆಸ್ತೀನಿಯನ್ನರಿಗೆ ಒಗ್ಗಟ್ಟಿನ ಬೆಂಬಲ ವ್ಯಕ್ತಪಡಿಸುತ್ತೇವೆ. ಅವರ ಧೈರ್ಯ ಮತ್ತು ಪರಿಶ್ರಮಕ್ಕೆ ನಾವು ಗೌರವ ಸಲ್ಲಿಸುತ್ತೇವೆ ಮತ್ತು ಅವರ ವಿಜಯಕ್ಕಾಗಿ ಪ್ರಾರ್ಥಿಸುತ್ತೇವೆ.

ಸಹಿ ಮಾಡಿದವರು:

ಸಘೀರ್ ಅಹ್ಮದ್ ರಶಾದಿ, ಅಮೀರೆ ಶರಿಯತ್, ಕರ್ನಾಟಕ

ಮುಫ್ತಿ ಇಫ್ತಿಖರ್ ಅಹ್ಮದ್ ಖಾಸ್ಮಿ, ಅಧ್ಯಕ್ಷರು, ಜಮೀಯತುಲ್ ಉಲೆಮಾ, ಕರ್ನಾಟಕ

ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಅಧ್ಯಕ್ಷರು, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ

ಮುಫ್ತಿ ಝುಲ್ಫಿಕರ್ ನೂರಿ, ಅಹ್ಲೆ ಸುನ್ನತ್ ಜಮಾಅತ್, ಕರ್ನಾಟಕ
ಮೌಲಾನಾ ಇಜಾಝ್ ಅಹ್ಮದ್ ನದ್ವಿ, ಜಮೀಯತ್ ಅಹ್ಲೆ ಹದೀಸ್, ಕರ್ನಾಟಕ

ಅಬ್ದುಲ್ ರಹೀಂ ರಶೀದಿ, ಅಧ್ಯಕ್ಷರು, ಜಮೀಯತುಲ್ ಉಲೆಮಾ, ಕರ್ನಾಟಕ (ಎಂ. ಅರ್ಷದ್ ಮದನಿ)

ಸೈಯದ್ ಅಬ್ದುಲ್ ವಾಜಿದ್ ಖಾದ್ರಿ, ಅಧ್ಯಕ್ಷರು, ಸುನ್ನಿ ಜಮೀಯತುಲ್ ಉಲೆಮಾ, ಕರ್ನಾಟಕ

ಶಬ್ಬೀರ್ ಅಹ್ಮದ್ ನದ್ವಿ, ಬೆಂಗಳೂರು

ಸೈಯದ್ ಮುಸ್ತಫಾ ರಿಫೈ ಜಿಲಾನಿ, ಕಾರ್ಯದರ್ಶಿ, ಅಖಿಲ ಭಾರತ ಮಿಲ್ಲಿ ಕೌನ್ಸಿಲ್

ಸೈಯದ್ ತನ್ವೀರ್ ಹಾಶ್ಮಿ, ಅಧ್ಯಕ್ಷರು ಜಮಾಅತೆ ಅಹ್ಲೆಸುನ್ನತ್ ಕರ್ನಾಟಕ

ಮಕ್ಸೂದ್ ಇಮ್ರಾನ್ ರಶಾದಿ, ಖತೀಬ್ ಮತ್ತು ಇಮಾಮ್, ಸಿಟಿ ಜಾಮಿಯಾ ಮಸೀದಿ, ಬೆಂಗಳೂರು

ಶೆಹಝಾದ್ ಶಕೀಬ್ ಮುಲ್ಲಾ, ಅಧ್ಯಕ್ಷರು, ಸ್ಟೂಡೆಂಟ್ಸ್ ಇಸ್ಲಾಮಿಕ್ ಅರ್ಗನೈಝೇಶನ್ ಆಫ್ ಇಂಡಿಯಾ, ಕರ್ನಾಟಕ
ಜಿಲ್ಲಾಧ್ಯಕ್ಷರು, ರಾಬಿತೆ ಮಿಲ್ಲತ್, ಕರ್ನಾಟಕ

ಮುಜಾಹಿದ್ ಅಲಿ ಬಾಬಾ, ಅಧ್ಯಕ್ಷರು, ಸದಾ-ಎ-ಇತ್ತಿಹಾದ್, ಕರ್ನಾಟಕ

ಸೈಯದ್ ಇಕ್ಬಾಲ್ ಅಹ್ಮದ್, ಕಾರ್ಯದರ್ಶಿ ಜಮಾಅತೆ ಮಹಾದವಿಯಾ, ಕರ್ನಾಟಕ

ಇಬ್ರಾಹಿಂ ಸಾಹಬ್, ಅಂಜುಮಾನೆ ಇಮಾಮಿಯಾ, ಕರ್ನಾಟಕ

ಇಜಾಜ್ ಅಹ್ಮದ್ ಖುರೇಷಿ, ಅಧ್ಯಕ್ಷರು, ಜಾಮಿಯತುಲ್ ಖುರೇಶ್, ಕರ್ನಾಟಕ

ನ್ಯಾಯವಾದಿ ಪಿ.ಉಸ್ಮಾನ್, ಅಧ್ಯಕ್ಷರು, ಎಪಿಸಿಆರ್, ಕರ್ನಾಟಕ
ನ್ಯಾಯವಾದಿ ಇಶ್ತಿಯಾಕ್ ಅಹ್ಮದ್, ಅಧ್ಯಕ್ಷರು, ಸೆಕ್ಯೂಲರ್ ಅಡ್ವೊಕೇಟ್ಸ್ ಫ್ರಂಟ್ ಕರ್ನಾಟಕ

ನ್ಯಾಯವಾದಿ ಅಕ್ಮಲ್ ರಿಜ್ವಿ, ಕಾರ್ಯದರ್ಶಿ, ಮೂಮೆಂಟ್ ಫಾರ್ ಜಸ್ಟಿಸ್ ಕರ್ನಾಟಕ

ಮಸೂದ್ ಅಬ್ದುಲ್ ಖಾದಿರ್, ಅಧ್ಯಕ್ಷರು, ಅಂಜುಮಾನೆ ಖುದ್ದಾಮುಲ್ ಮುಸ್ಲಿಮೀನ್, ಬೆಂಗಳೂರು

ಲಬೀದ್ ಶಾಫಿ, ಅಧ್ಯಕ್ಷರು, ಸೋಲಿಡ್ಯಾರಿಟಿ ಯೂತ್ ಮೊಮೆಂಟ್, ಕರ್ನಾಟಕ