ಕರುಪ್ಪುಮ್ಮರನ್ನು ಅಬುಧಾಬಿಗೆ ಕರೆಸಿಕೊಂಡ ಅಝೀಝ್: ಹೃದಯ ತಟ್ಟುವ ‘ದ ರಿಯಲ್ ಕೇರಳ ಸ್ಟೋರಿ’

0
517

ಸನ್ಮಾರ್ಗ ವಾರ್ತೆ

ನೀವು ದ ಕೇರಳ ಸ್ಟೋರಿ ಸಿನಿಮಾದ ಬಗ್ಗೆ ಕೇಳಿರಬಹುದು. ನೋಡಿರಬಹುದು ಅಥವಾ ಅದರ ಬಗೆಗಿನ ಬರಹವನ್ನು ಓದಿರಬಹುದು. ಆದರೆ ಇಲ್ಲಿ ಹೇಳಲು ಹೊರಟಿರುವುದು ಇನ್ನೊಂದು ಕೇರಳ ಸ್ಟೋರಿ. ಇದು ರಿಯಲ್ ಕೇರಳ ಸ್ಟೋರಿ.

ಅಝೀಝ್ ಎಂಬ ಕೇರಳದ ಮಲಪುರಂನ ಸಮಾಜ ಸೇವಕ ತನ್ನ ಸಾಕು ತಾಯಿಯನ್ನು ಅಬುದಾಬಿಗೆ ಕರೆಸಿಕೊಂಡು ಅಲ್ಲಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿಸಿದ ಪ್ರೇಮಮಯಿ ಸ್ಟೋರಿ.

ಈ ಸಾಕು ತಾಯಿಯ ಹೆಸರು ಕುರುಪ್ಪ ಅಥವಾ ಕುರುಪುಮ್ಮ. ಈ ಕುರುಪುಮ್ಮ ಯಾರು ಗೊತ್ತೇ? ಅಯ್ಯಪ್ಪ ಮತ್ತು ಕರುಪ್ಪ ಎಂಬ ದಂಪತಿಯ ಮಗಳು. ಮೊದಲೇ ಹೇಳಿದಂತೆ ಅಝೀಝ್ ಅವರು ಮಲಪುರಂ ಜಿಲ್ಲೆಯ ಒಂದು ಹಳ್ಳಿಗಾಡಿನವರು, ಈ ಕುರುಪುಮ್ಮ ಮತ್ತು ಅಝೀಝ್ ಕುಟುಂಬ ಅಕ್ಕಪಕ್ಕ ವಾಸಿಸುತ್ತಿದ್ದುವು. ಅಝೀಝ್ ಅವರ ತಂದೆ ತಾಯಿಗೆ ಹತ್ತು ಮಕ್ಕಳು. ಈ 10 ಮಕ್ಕಳನ್ನು ಲಾಲಿಸಿ ಪೋಷಿಸಿದ್ದು ಈ ಕುರುಪುಮ್ಮ ಮತ್ತು ಇವರ ತಾಯಿ ಕರುಪ್ಪ. ಈ ಕುರುಪುಮ್ಮ ಮತ್ತು ಈ ಅಝೀಝ್ ಸಹಿತ ಎಲ್ಲ ಮಕ್ಕಳು ಒಂದೇ ಬಟ್ಟಳಲ್ಲಿ ಜೊತೆಯಾಗಿ ಊಟ ಮಾಡುತ್ತಿದ್ದರು. ಬಡತನದ ಬೇಗೆಯಲ್ಲಿ ಬಳಲುತ್ತಿದ್ದ ಬಾಲ್ಯ ಕಾಲದಲ್ಲಿ ತಮ್ಮನ್ನು ಸ್ವಂತ ಮಕ್ಕಳಂತೆ ಪ್ರೀತಿಸಿ ಪೋಷಿಸಿದ್ದು ಈ ಕುರುಪುಮ್ಮ ಮತ್ತು ಅವರ ತಾಯಿ ಕರುಪ್ಪ ಎಂದು ಅಝೀಝ್ ನೆನಪಿಸುತ್ತಾರೆ.

ತನಗೆ ಅಬುದಾಬಿ ನೋಡಬೇಕು ಎಂಬ ಆಸೆಯನ್ನು ಈ ಕುರುಪುಮ್ಮ ವ್ಯಕ್ತಪಡಿಸಿದ್ದರು. ಅಝೀಝ್ ತಡ ಮಾಡಲಿಲ್ಲ. ತನ್ನ ಪತ್ನಿ ಮತ್ತು ಮಕ್ಕಳ ಜೊತೆ ಅವರು ಈ ಕುರುಪುಮ್ಮನನ್ನು ಅಬುದಾಬಿಗೆ ಕರೆಸಿಕೊಂಡರು. ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಆಲಿಂಗಿಸಿದರು. ಪ್ರೀತಿಸಿದರು. ಅದಕ್ಕೆ ಅವರ ಕುಟುಂಬ ಸಾಕ್ಷಿಯಾಯಿತು.

ಅಬುಧಾಬಿಯಲ್ಲಿ ನಡೆದ ಮಲಪುರಂ ಕಾರ್ಯಕ್ರಮಕ್ಕೆ ಈ ಬಾರಿ ಅತಿಥಿ ಇದೇ ಕುರುಪುಮ್ಮಾ.

ಇದುವೇ ರಿಯಲ್ ಕೇರಳ ಸ್ಟೋರಿ..