ಮೋದಿಯ ಕುರಿತು ಬಿಬಿಸಿ ಬಿಡುಗಡೆಗೊಳಿಸಿದ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ವಾಷಿಂಗ್ಟನ್ ನಲ್ಲಿ ಸಿದ್ಧತೆ

0
456

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬಿಬಿಸಿ ಬಿಡುಗಡೆಗೊಳಿಸಿರುವ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲು ಅಮೆರಿಕದ ವಾಷಿಂಗ್ಟನ್ ಸಜ್ಜಾಗಿದೆ.

ಈ ಡಾಕ್ಯುಮೆಂಟರಿ ಪ್ರದರ್ಶನಕ್ಕಾಗಿ ನೀತಿ ನಿರೂಪಕರು, ಜರ್ನಲಿಸ್ಟ್ ಗಳು ಮತ್ತು ವಿಶ್ಲೇಷಕರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಭೇಟಿ ಕೊಡಲಿದ್ದು, ಅದಕ್ಕಿಂತ ಮುಂಚಿತವಾಗಿ ಈ ಪ್ರದರ್ಶನ ನಡೆಯಲಿದೆ.

ಜೂನ್ 22 ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ಕೊಡಲಿದ್ದು ಅದಕ್ಕಿಂತ ಎರಡು ದಿನ ಮುಂಚಿತವಾಗಿ ಜೂನ್ 20ರಂದು ಈ ಬಿಬಿಸಿ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲಾಗುವುದು ಎಂದು ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಸ್ಪಷ್ಟಪಡಿಸಿದೆ. ಈ ಡಾಕ್ಯುಮೆಂಟರಿಗೆ ಭಾರತದಲ್ಲಿ ಬ್ಯಾನ್ ಆಗಿರುವುದನ್ನು ನೆನಪಿಸುವುದಕ್ಕಾಗಿ ಈ ಪ್ರದರ್ಶನ ನಡೆಸಲಿದ್ದೇವೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.

ಇಂಡಿಯಾ: ದಿ ಮೋದಿ ಕ್ವೆಶ್ಚನ್ ಎಂಬ ಹೆಸರಲ್ಲಿ ಎರಡು ಭಾಗಗಳಲ್ಲಿ ಬಿಡುಗಡೆಯಾಗಿರುವ ಈ ಡಾಕ್ಯುಮೆಂಟರಿ 2002ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡವನ್ನು ವಿವರಿಸುತ್ತದೆ. ಆಗ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿ ಆಗಿದ್ದರು ಮತ್ತು ಆ ಹತ್ಯಾಕಾಂಡದಲ್ಲಿ ಸಾವಿರಕ್ಕಿಂತಲೂ ಅಧಿಕ ಮಂದಿ ಹತರಾಗಿದ್ದರು. ಇವರಲ್ಲಿ ಬಹುತೇಕ ಮಂದಿ ಮುಸ್ಲಿಮರಾಗಿದ್ದರು ಅನ್ನುವುದು ಕೂಡ ಗಮನಾರ್ಹ.

ಈ ಡಾಕ್ಯುಮೆಂಟರಿಗೆ ಮೋದಿ ಸರ್ಕಾರ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು ಮತ್ತು ಭಾರತದಲ್ಲಿ ಪ್ರದರ್ಶನವಾಗದಂತೆ ನಿಷೇಧ ವಿಧಿಸಿತ್ತು.