ಕಾಶ್ಮೀರ ಹತ್ಯಾಕಾಂಡ: ವಿವಾದಾತ್ಮಕ ಪೋಸ್ಟ್ ಗಾಗಿ 28 ಮಂದಿ ಬಂಧನ

0
370

ಸನ್ಮಾರ್ಗ ವಾರ್ತೆ

ಕಾಶ್ಮೀರದ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಅಭಿಪ್ರಾಯ ಹಂಚಿಕೊಂಡದ್ದಕ್ಕಾಗಿ 28 ಮಂದಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬಂಧಿಸಲಾಗಿದೆ. ಇವರಲ್ಲಿ ಅಸ್ಸಾಂನ ಶಾಸಕರೂ ಸೇರಿದ್ದಾರೆ. ಹಾಗೆಯೇ ಪತ್ರಕರ್ತರು ವಕೀಲರು ಇಬ್ಬರು ನಿವೃತ್ತ ಶಿಕ್ಷಕರು ಮತ್ತು 23 ವಿದ್ಯಾರ್ಥಿಗಳೂ ಸೇರಿದ್ದಾರೆ.

ಉತ್ತರ ಪ್ರದೇಶ ಮಧ್ಯಪ್ರದೇಶ ಛತ್ತೀಸ್ಗಡ ಜಾರ್ಖಂಡ್ ಅಸ್ಸಾಂ ಮೇಘಾಲಯ ಮತ್ತು ತ್ರಿಪುರಗಳಲ್ಲಿ ಈ ಬಂಧನ ನಡೆದಿದೆ. ಏಪ್ರಿಲ್ 24ರಂದು ಈ ಕುರಿತಂತೆ ಮೊದಲ ಬಂಧನ ನಡೆದಿದೆ. ಅಸ್ಸಾಂನ ಎಐಯುಡಿಎಫ್ ಶಾಸಕ ಅಮೀನುಲ್ ಇಸ್ಲಾಂ ಅವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ಅವರು ಕಾಶ್ಮೀರಿ ಹತ್ಯಾಕಾಂಡವನ್ನು 2019ರ ಪುಲ್ವಾಮ ಭಯೋತ್ಪಾದನಾ ಕೃತ್ಯದೊಂದಿಗೆ ಹೋಲಿಸಿ ಮಾತಾಡಿದ್ದರು.

ಏಪ್ರಿಲ್ 25 ರಂದು ಮಧ್ಯಪ್ರದೇಶದ ಅತಿಥಿ ಉಪನ್ಯಾಸಕಿ ನಸೀಮ್ ಬಾನು ಅವರನ್ನು ಬಂಧಿಸಲಾಯಿತು. ಇವರು ವಿಡಿಯೋ ಮಾಡಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಏಪ್ರಿಲ್ 25ರಂದು ಅಸ್ಸಾಂನಲ್ಲಿ ಪತ್ರಕರ್ತ ವಿದ್ಯಾರ್ಥಿ ಮತ್ತು ವಕೀಲರನ್ನು ದೇಶ ವಿರೋಧಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಹೇಳಿ ಬಂಧಿಸಲಾಯಿತು. ತ್ರಿಪುರದಲ್ಲಿ ಇಬ್ಬರು ನಿವೃತ್ತ ಅಧ್ಯಾಪಕರನ್ನು ಬಂಧಿಸಲಾಯಿತು.