370 ನೇ ವಿಧಿ ರದ್ದಿನ ಬಗ್ಗೆ ಜಿಜ್ಞಾಸೆ: ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ತಯಾರಿ

0
726

ಹೊಸದಿಲ್ಲಿ, ಆ. 6: ಜಮ್ಮುಕಾಶ್ಮೀರದ 370ನೇ ವಿಧಿಯನ್ವಯ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದು ಪಡಿಸಿರುವುದು ಈಗ ದೊಡ್ಡ ಮಟ್ಟದ ಕಾನೂನು ಯುದ್ಧದತ್ತ ಮುಖ ಮಾಡಿದೆ. ಪಾರ್ಲಿಮೆಂಟು ಶಿಷ್ಟಾಚಾರ ಮೀರಿ ರಾಷ್ಟ್ರಪತಿ ಸಹಿ ಹಾಕಿದ ಕಾನೂನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲ್ಪಡಬಹುದು. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಮತ್ತು ವಿವಿಧ ಪ್ರತಿಪಕ್ಷ ನಾಯಕರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾನೂನು ತಜ್ಞರು ಕೂಡ ಕೇಂದ್ರ ಸರಕಾರದ ತೀರ್ಮಾನವನ್ನು ಸಂವಿಧಾನ ವಿರೋಧಿ ಎಂದು ಹೇಳಿದ್ದಾರೆ. ಮಧ್ಯಂತರ ಕಾನೂನು ರಚನಾ ಸಭೆಯ ತೀರ್ಮಾನದ ಮೂಲಕ ಜಮ್ಮು-ಕಾಶ್ಮೀರಕ್ಕೆ ಲಭಿಸಿದ ವಿಶೇಷ ಹಕ್ಕು ಮತ್ತು ರಕ್ಷಣೆಯನ್ನು ರದ್ದುಪಡಿಸಲು ರಾಷ್ಟ್ರಪತಿಯ ಆದೇಶದಿಂದ ಸಾಧ್ಯವಿಲ್ಲ. ರಾಜ್ಯದ ವಿಧಾನಸಭೆಯ ಅನುಮತಿ ಬೇಕು ಎಂದು ಕೂಡ ಹೇಳಲಾಗುತ್ತಿದೆ. ಆದರೆ, ರಾಷ್ಟ್ರಪತಿಯ 1953ರ ಆದೇಶವನ್ನು ರದ್ದುಪಡಿಸಲು 2019ರ ರಾಷ್ಟ್ರಪತಿಗೆ ಅಧಿಕಾರವಿದೆ ಎಂದು ಸರಕಾರ ವಾದಿಸುತ್ತಿದೆ.

ಜಮ್ಮುಕಾಶ್ಮೀರದಲ್ಲಿ ವಿಧಾನಸಭೆ ಇಲ್ಲ. ಅಲ್ಲಿ ರಾಷ್ಟ್ರಪತಿ ಆಳ್ವಿಕೆಯಿದೆ. ಆದ್ದರಿಂದ ಜಮ್ಮುಕಾಶ್ಮೀರಕ್ಕೆ ಸಂಬಂಧಿಸಿದ ಕಾನೂನು ರಚಿಸುವ ಅಧಿಕಾರ ಸಂಸತ್ತಿಗಿದೆ ಎಂದು ಸರಕಾರ ವಾದಿಸುತ್ತಿದೆ. ಆದರೆ ರಾಜ್ಯದಲ್ಲಿ ವಿಧಾನಸಭೆಯಿಲ್ಲದಿದ್ದರಿಂದ ರಾಜ್ಯದ ರೂಪವನ್ನು ಬದಲಾಯಿಸುವುದು ಕೇಂದ್ರ ಸರಕಾರಕ್ಕೋ, ಪಾರ್ಲಿಮೆಂಟಿಗೋ ಅನುಮತಿಯಿಲ್ಲ ಎಂಬ ಪ್ರತಿವಾದವೂ ಇದೆ. ಈ ವಿಷಯದಲ್ಲಿ ರಾಜ್ಯದ ಜನರ ಹಿತವನ್ನು ಕೇಂದ್ರ ಸರಕಾರ ಪರಿಗಣಿಸಿಲ್ಲ ಎಂದು ಬೆಟ್ಟು ಮಾಡಲಾಗುತ್ತಿದೆ. 370ನೆ ವಿಧಿಗೆ ಸಮಾನವಾದ ವ್ಯವಸ್ಥೆಗಳು ಇತರ ಪ್ರದೇಶಗಳಲ್ಲಿಯೂ ಇತ್ತು. ಇದನ್ನು ರಾಷ್ಟ್ರಪತಿ ಆಳ್ವಿಕೆಯ ಮರೆಯಲ್ಲಿ ತೆರವುಗೊಳಿಸಲಾಗಿಲ್ಲ. ಒಂದು ರಾಜ್ಯದ ವ್ಯವಸ್ಥೆಯನ್ನು ಬದಲಾಯಿಸಲು ಮುಂದೆ ಕೇಂದ್ರ ಸರಕಾರ ಸಿದ್ಧವಾಗಬಹುದು ಎನ್ನುವ ಆತಂಕವನ್ನೂ ವ್ಯಕ್ತಪಡಿಸಲಾಗುತ್ತಿದೆ.