‘ಕೇಜ್ರಿವಾಲ್ ಕೋ ಆಶೀರ್ವಾದ್’; ವಾಟ್ಸಾಪ್ ಅಭಿಯಾನ ಆರಂಭಿಸಿದ ಆಮ್ ಆದ್ಮಿ ಪಕ್ಷ

0
635

ಸನ್ಮಾರ್ಗ ವಾರ್ತೆ

ನವದೆಹಲಿ: ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆಂಬಲ ಸೂಚಿಸಲು ಆಮ್ ಆದ್ಮಿ ಪಕ್ಷ ವಾಟ್ಸಾಪ್ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ‘ಕೇಜ್ರಿವಾಲ್ ಕೋ ಆಶೀರ್ವಾದ್’ ಎಂದು ಶೀರ್ಷಿಕೆ ನೀಡಲಾಗಿದೆ. ನಿನ್ನೆ, ಇಡಿ ಕಸ್ಟಡಿಯಲ್ಲಿರುವ ಕ್ರೇಜ್ರಿವಾಲ್ ಅವರ ಕಸ್ಟಡಿ ಅವಧಿಯನ್ನು ಏಪ್ರಿಲ್ 1 ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದ ಬೆನ್ನಿಗೆ ಆಪ್ ಅಭಿಯಾನವನ್ನು ಘೋಷಿಸಿದೆ.

ಅಭಿಯಾನಕ್ಕೆ ಚಾಲನೆ ನೀಡಿದ ಸುನೀತಾ ಕೇಜ್ರಿವಾಲ್ ಅವರು, ಅರವಿಂದ್ ಕೇಜ್ರಿವಾಲ್ ತಮ್ಮ ಜೀವನದುದ್ದಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದಾರೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ದೇಶದ ಅತ್ಯಂತ ಭ್ರಷ್ಟ ಮತ್ತು ಸರ್ವಾಧಿಕಾರಿ ಶಕ್ತಿಗಳಿಗೆ ಸವಾಲು ಹಾಕಿದ್ದಾರೆ. ಅವರು ನಿಜವಾದ ದೇಶಭಕ್ತ. ನಾನು 30 ವರ್ಷಗಳಿಂದ ಕ್ರೆಜ್ರಿವಾಲ್ ಅವರೊಂದಿಗೆ ಇದ್ದೇನೆ. ಭ್ರಷ್ಟಾಚಾರದ ವಿರುದ್ಧ ಅವರ ನಿಲುವು ನನಗೆ ಗೊತ್ತು. ಅವರ ಹೋರಾಟಕ್ಕೆ ಜನರ ಬೆಂಬಲ ಸಿಗಬೇಕು. ಅದಕ್ಕಾಗಿ ಅಭಿಯಾನ ಆರಂಭವಾಗಿದೆ. ನೀವು ಯಾವ ಪಕ್ಷದವರಾದರೂ, ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆಗಳನ್ನು ನೀವು 8297324624 ಗೆ WhatsApp ಸಂದೇಶವಾಗಿ ಕಳುಹಿಸುವಂತೆ ಸುನಿತಾ ಕೇಜ್ರಿವಾಲ್ ಹೇಳಿದರು. ಈ ಸರ್ವಾಧಿಕಾರ ಉಳಿಯುವುದಿಲ್ಲ, ಜನರೇ ಉತ್ತರಿಸುತ್ತಾರೆ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದರು.

ದೆಹಲಿ ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.