ನ್ಯಾಯಾಲದ ತೀರ್ಪು ಕಾನೂನು ಬಾಹಿರ ಮತ್ತು ಅಕ್ರಮ ಎಂದ ಸಂಜೀವ್ ಭಟ್ ಪತ್ನಿ ಶ್ವೇತಾ ಸಂಜೀವ್‌ ಭಟ್

0
666

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗುಜರಾತ್ ಪಲನ್ ಪುರ್ ಸೆಷನ್ಸ್ ನ್ಯಾಯಾಲಯವು ತಮ್ಮ ಪತಿಗೆ ವಿಧಿಸಿರುವ ಶಿಕ್ಷೆಯನ್ನು ತಿರಸ್ಕರಿಸಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಸಂಜೀವ್ ಭಟ್, ನ್ಯಾಯಾಲಯದ ತೀರ್ಪನ್ನು ಕಾನೂನುಬಾಹಿರ ಮತ್ತು ಅಕ್ರಮ ಎಂದು ಬಣ್ಣಿಸಿದ್ದಾರೆ.

ಈಗಾಗಲೇ ಪ್ರತ್ಯೇಕ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಂಜೀವ್ ಭಟ್ ಅವರಿಗೆ ರಾಜಸ್ಥಾನ ಮೂಲದ ವಕೀಲರೊಬ್ಬರನ್ನು ಪ್ರಕರಣವೊಂದರಲ್ಲಿ ಸಿಲುಕಿಸಲು ಅವರ ಕಚೇರಿಯಲ್ಲಿ ಸಂಜೀವ್ ಭಟ್ ಮಾದಕ ದ್ರವ್ಯವಿರಿಸಿದ್ದರು ಎಂಬ 1996ರ ಪ್ರಕರಣದಲ್ಲಿ ನ್ಯಾಯಾಲಯವು ಹೆಚ್ಚುವರಿಯಾಗಿ 20 ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಶ್ವೇತಾ ಸಂಜೀವ್‌ ಭಟ್, “ನೀವು ನಿಮ್ಮ ರಕ್ಷಕನನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲರಾಗಿದ್ದೀರಿ. ಭವಿಷ್ಯದಲ್ಲಿ ಇನ್ನೊಬ್ಬ ರಕ್ಷಕ ನಿಮ್ಮನ್ನು ರಕ್ಷಿಸಲು ಎದ್ದು ನಿಲ್ಲಲಿದ್ದಾನೆಯೆ? ಪ್ರಭುತ್ವ ಮತ್ತು ಅದರ ಕಿಡಿಗೇಡಿಗಳು ಅಧಿಕಾರದ ವಿಷವೇರಿಸಿಕೊಂಡಿದ್ದು, ದುರುದ್ದೇಶಪೂರಿತವಾಗಿರುವ ಅವರು ತಮ್ಮ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವವರನ್ನು ಮೌನವಾಗಿಸಲು ಹಾಗೂ ಭಿನ್ನಮತವನ್ನು ಹತ್ತಿಕ್ಕಲು ದೃಢ ಸಂಕಲ್ಪ ಮಾಡಿದ್ದಾರೆ.

ನಾವೆಲ್ಲ ಮೇಲೆದ್ದು ನಿಲ್ಲೋಣ. ಆದರೆ, ಸಿಟ್ಟಿನಿಂದಲ್ಲ; ಬದಲಿಗೆ ಒಗ್ಗಟ್ಟಿನಿಂದ. ನಾವು ನಮ್ಮ ಧ್ವನಿಯನ್ನು ಎತ್ತೋಣ. ಆದರೆ, ದ್ವೇಷದಿಂದಲ್ಲ; ಬದಲಿಗೆ ಧೃತಿಗೆಡದ ದೃಢ ಸಂಕಲ್ಪದಿಂದ. ನಾವೆಲ್ಲರೂ ಸಂಜೀವ್ ಭಟ್ ಪರವಾಗಿ ಹೋರಾಡೋಣ. ಅವರ ಮೇಲೆ ಎಸಗಿರುವ ಅನ್ಯಾಯದ ವಿರುದ್ಧ! ಇದು ಕೇವಲ ಅನ್ಯಾಯವಲ್ಲ; ಇದು ಸತ್ಯ ನ್ಯಾಯಪರತೆ ಹಾಗೂ ಅತ್ಯಂತ ಅಗತ್ಯವಾದ ಮಾನವೀಯತೆಯ ವಿರುದ್ಧದ ಯುದ್ಧ ಘೋಷಣೆಯಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1996ರಲ್ಲಿನ ಪ್ರಕರಣದ ಸಂಬಂಧ ತೀರ್ಪು ನೀಡಿದ್ದ ಜೆ.ಎನ್.ಠಕ್ಕರ್, ಸಂಜೀವ್ ಭಟ್ ಅವರಿಗೆ 20 ವರ್ಷಗಳ ಹೆಚ್ಚುವರಿ ಶಿಕ್ಷೆ ವಿಧಿಸಿದ್ದರು. ಈ ಶಿಕ್ಷೆಯು ಸಂಜೀವ್‌ ಭಟ್ ಅವರು ತಮ್ಮ ಜೀವಾವಧಿ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಜಾರಿಗೆ ಬರಲಿದೆ ಎಂದೂ ಆದೇಶಿಸಿದ್ದರು. ಇದರಿಂದ ಅವರು ಈ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಕಳೆದಿರುವ ಐದೂವರೆ ವರ್ಷವನ್ನು ನಿರ್ಲಕ್ಷಿಸಿದಂತಾಗಿದೆ ಹಾಗೂ ಅವರನ್ನು ಜೀವನ ಪರ್ಯಂತ ಸೆರೆವಾಸದಲ್ಲಿರಿಸುವ ಪಿತೂರಿಯ ಭಾಗವಾಗಿದೆ. ಇಂತಹ ಕ್ರಮವು ಕಾನೂನು ಬಾಹಿರ ಮತ್ತು ಅಕ್ರಮ ಎಂದು ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಸಂಜೀವ್‌ ಭಟ್ ಆರೋಪಿಸಿದ್ದಾರೆ.