ಗಾಂಜಾ ಮಾಫಿಯ ದಾಂದಲೆ: ತಾಯಿಯ ಮುಂದೆ 17 ವರ್ಷದ ಪುತ್ರನನ್ನು ಮಾರಣಾಂತಿಕವಾಗಿ ಕಡಿದು ಹಾಕಿದರು

0
625

ಕಾಯಂಕುಳಂ, ಜು.3: ಗಾಂಜಾ ಮಾಫಿಯದ ಗೂಂಡಾಗಳು ಮನೆಯೊಳಗೆ ನುಗ್ಗಿ ತಾಯಿಯ ಮುಂದೆಯೇ ಹದಿನೇಳು ವರ್ಷದ ಮಗನನ್ನು ಕಡಿದು ಮಾರಣಾಂತಿಕವಾಗಿ ಗಾಯಗೊಳಿಸಿದ ಘಟನೆ ಕೇರಳದ ಕೃಷ್ಣಪುರಂ ಎಂಬಲ್ಲಿ ನಡೆದಿದೆ. ಇಲ್ಲಿನ ಅನೂಪ್ ಭವನದ ಪ್ರದೀಪ್ ಎಂಬವರ ಪುತ್ರ ಅಭಿಮನ್ಯು ಕ್ರೂರ ಹಲ್ಲೆಗೊಳಗಾಗಿರುವ ಯುವಕನಾಗಿದ್ದಾನೆ. ಮಂಗಳವಾರ ಮುಂಜಾನೆ ಘಟನೆ ನಡೆದಿದ್ದು ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಹೋದರ ಶಂಕರ್ ನನ್ನು ಹುಡುಕಿ ಬಂದ ತಂಡ ಈ ಕೃತ್ಯವೆಸಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಂಕರ್ ಸಿಗದ ದ್ವೇಷದಲ್ಲಿ ಸಹೋದರ ಅಭಿಮನ್ಯುವನ್ನು ಗುಂಪು ಕಡಿದು ಹಾಕಿದೆ. ತಾಯಿ ಶೀಬಾ ಕೇವಲ ಅಸಹಾಯಕರಾಗಿ ನಿಲ್ಲಬೇಕಾಯಿತು. ಟಿವಿ ಸಹಿತ ಮನೆಯ ಉಪಕರಣಗಳನ್ನು ಗೂಂಡಾಗಳು ಧ್ವಂಸ ಮಾಡಿದರು. ಅಭಿಮನ್ಯು ಗಂಭೀರವಾಗಿ ಗಾಯಗೊಂಡಿದ್ದು ಆಲಪ್ಪುಝ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಯಿತು. ಒಚ್ಚಿರ ಎಂಬಲ್ಲಿನ ಗೂಂಡಾಗಳು ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.