ಬಿಜೆಪಿ ಸದಸ್ಯತ್ವ ಇರುವ ಇಬ್ಬರು ಮಾಜಿ ನ್ಯಾಯಮೂರ್ತಿಗಳು ಹಿರಿಯ ವಕೀಲರ ಪ್ಯಾನಲ್‌ನಿಂದ ಔಟ್: ಕೇರಳ ಸಂಪುಟ ತೀರ್ಮಾನ

0
430

ಸನ್ಮಾರ್ಗ ವಾರ್ತೆ

ತಿರುವನಂತಪುರ: ಬಿಜೆಪಿ ಸಂಪರ್ಕ ಹೊಂದಿರುವ ಉಚ್ಚ ನ್ಯಾಯಾಲಯದ ಇಬ್ಬರು ಮಾಜಿ ನ್ಯಾಯಮೂರ್ತಿಗಳನ್ನು ರಾಜ್ಯ ಸರ್ಕಾರದ ಹಿರಿಯ ವಕೀಲರ ಪ್ಯಾನಲ್‌ನಿಂದ ಕೈಬಿಡಲು ಕೇರಳ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪರಿಷ್ಕೃತ ಪ್ಯಾನಲ್‌ನಿಂದ ಈ ಇಬ್ಬರ ಹೆಸರುಗಳನ್ನು ಹೊರಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
2018ರಲ್ಲಿ ನಿವೃತ್ತರಾದ ನ್ಯಾಯಮೂರ್ತಿ ಪಿ.ಎನ್. ರವೀಂದ್ರನ್ ಹಾಗೂ 2019ರಲ್ಲಿ ನಿವೃತ್ತರಾದ ನ್ಯಾಯಮೂರ್ತಿ ವಿ. ಚಿದಂಬರೇಶ್ ಅವರನ್ನು ಈ ಪ್ಯಾನಲ್‌ನಿಂದ ತೆಗೆದುಹಾಕಲಾಗಿದೆ. ಇವರು ಬಿಜೆಪಿ ಸದಸ್ಯತ್ವ ಹೊಂದಿರುವುದೇ ಈ ತೀರ್ಮಾನಕ್ಕೆ ಮುಖ್ಯ ಕಾರಣ ಎಂದು ಸಂಪುಟದ ಮೂಲವನ್ನು ಉಲ್ಲೇಖಿಸಿ ಮಲಯಾಳಂ ಸುದ್ದಿ ವಾಹಿನಿ ‘ಮಾತೃಭೂಮಿ ನ್ಯೂಸ್’ ವರದಿ ಮಾಡಿದೆ.

2021ರಲ್ಲಿ ಆರಂಭವಾದ ಪಿಣರಾಯಿ ವಿಜಯನ್ ಸರ್ಕಾರದ ಅವಧಿಯಲ್ಲಿಯೂ ರವೀಂದ್ರನ್ ಮತ್ತು ಚಿದಂಬರೇಶ್ ಅವರು ರಾಜ್ಯ ಸರ್ಕಾರದ ವಕೀಲರ ಸಮಿತಿಯಲ್ಲಿದ್ದರು. ಆದರೆ ಅದೇ ವರ್ಷ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದರು. ಅಲ್ಲದೆ, ಬಿಜೆಪಿ-ಆರ್‌ಎಸ್‌ಎಸ್ ಬೆಂಬಲಿತ ನಿವೃತ್ತ ನ್ಯಾಯಮೂರ್ತಿಗಳ ಒಕ್ಕೂಟ ಹೊರಡಿಸಿದ ಹೇಳಿಕೆಗಳಿಗೂ ಸಹಿ ಹಾಕಿದ್ದರು.

ಈ ಪರಿಷ್ಕರಣೆಯು ಕೇವಲ ಬಿಜೆಪಿ ಬೆಂಬಲಿತರಿಗೆ ಮಾತ್ರ ಸೀಮಿತವಾಗಿಲ್ಲ. ಸಿಪಿಎಂ ಸಂಯೋಜಿತ ‘ಆಲ್ ಇಂಡಿಯಾ ಲಾಯರ್ಸ್ ಯೂನಿಯನ್’ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ವಿ. ಸುರೇಂದ್ರನಾಥ್ ಅವರನ್ನೂ ಸಹ ಪ್ಯಾನಲ್‌ನಿಂದ ಕೈಬಿಡಲಾಗಿದೆ. ಜೊತೆಗೆ, ಹಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಎಡಪಂಥೀಯ ಬೆಂಬಲಿಗ ಹಾಗೂ ಮಾಜಿ ಎಸ್‌ಎಫ್‌ಐ ನಾಯಕ ಪಿ.ವಿ. ದಿನೇಶ್ ಅವರ ಹೆಸರೂ ಹೊಸ ಪಟ್ಟಿ ಯಲ್ಲಿಲ್ಲ. ಹೀಗಾಗಿ ಇದು ಏಕಪಕ್ಷೀಯ ಕ್ರಮವಲ್ಲ, ಬದಲಿಗೆ ಸಮಗ್ರ ಪುನರ್ರಚನೆಯ ಭಾಗ ಎಂದು ಸರ್ಕಾರಿ ಮೂಲಗಳು ಪ್ರತಿಪಾದಿಸಿವೆ.

ಇದೇ ವೇಳೆ, ಬಹುಚರ್ಚಿತ ಎಸ್‌ಎನ್‌ಸಿ-ಲಾವಲಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ದೇವದತ್ ಕಾಮತ್ ಮತ್ತು ಎಂ.ಆರ್. ರಮೇಶ್ ಬಾಬು ಅವರಿಗೆ ಹೊಸ ಪ್ಯಾನಲ್‌ನಲ್ಲಿ ಸ್ಥಾನ ನೀಡಲಾಗಿದೆ. ಮಾಜಿ ಕೆಪಿಸಿಸಿ ಅಧ್ಯಕ್ಷ ವಿ.ಎಂ. ಸುಧೀರನ್ ಪರವಾಗಿ ಈ ಇಬ್ಬರು ವಕೀಲರು ವಾದ ಮಂಡಿಸಿದ್ದರು. ರಮೇಶ್ ಬಾಬು ಅವರು ಪ್ರಸ್ತುತ ರಾಜ್ಯ ಸರ್ಕಾರದ ಹಿರಿಯ ಸ್ಟ್ಯಾಂಡಿಂಗ್ ಕೌನ್ಸಿಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.