ಕೇರಳ: ‘ಪೌರತ್ವ ತಿದ್ದುಪಡಿ ಕಾಯ್ದೆ’ ಜಾರಿಗೆ ತರುವುದಿಲ್ಲ: ಪಿಣರಾಯ್‌ ವಿಜಯನ್‌

0
99

ಸನ್ಮಾರ್ಗ ವಾರ್ತೆ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಅಸಂವಿಧಾನಿಕ ಸಿಎಎ ಕಾಯ್ದೆ ಮತ್ತೆ ಮುನ್ನೆಲೆಗೆ ಬಂದಿದೆ. ಇದರ ಬೆನ್ನಲ್ಲಿ ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದಿಲ್ಲ ಎಂದು ಸಿಎಂ ಪಿಣರಾಯ್‌ ವಿಜಯನ್‌ ಹೇಳಿದ್ದಾರೆ. ತಮ್ಮ ಸರ್ಕಾರ ಸಿಎಎ ವಿಚಾರದಲ್ಲಿ ಈ ಮೊದಲು ತೆಗೆದುಕೊಂಡ ನಿರ್ಣಯಕ್ಕೆ ಬದ್ಧವಾಗಿದೆ ಎಂದರು.

ದೇಶಾಭಿಮಾನಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಪಿಣರಾಯ್ ವಿಜಯನ್, ಸಿಎಎ ಕಾಯ್ದೆಯು ಒಂದು ವರ್ಗದ ಜನರಿಗೆ ಅನೀತಿಯನ್ನುಂಟು ಮಾಡುವ ಗುರಿಯನ್ನು ಹೊಂದಿದೆ. ಸಿಎಎ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಕೇರಳದಲ್ಲಿ ಇದನ್ನು ಜಾರಿಗೆ ತರುವುದಿಲ್ಲ ಎಂದು ನಾವು ಈಗಾಗಲೇ ಹೇಳಿದ್ದೇವೆ ಮತ್ತು ಇನ್ನು ಮುಂದಕ್ಕೂ ಅದು ಎಲ್‌ಡಿಎಫ್‌ ಸರ್ಕಾರದ ಅಚಲ ನಿಲುವಾಗಿದೆ ಎಂದು ಹೇಳಿದ್ದಾರೆ.

ಭಾರತವನ್ನು ಜಾತ್ಯತೀತ ರಾಷ್ಟ್ರದಿಂದ ಧಾರ್ಮಿಕ ರಾಷ್ಟ್ರವಾಗಿ ಪರಿವರ್ತಿಸಲು ದೇಶದಲ್ಲಿ ತ್ವರಿತ ಪ್ರಯತ್ನಗಳು ನಡೆಯುತ್ತಿವೆ. ಈ ಎಲ್ಲಾ ಅಪಾಯಕಾರಿ ಪ್ರವೃತ್ತಿಗಳು ಮತ್ತು ನಡೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಎಂ ಪಿಣರಾಯ್‌ ವಿಜಯನ್‌ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ತಮಿಳುನಾಡಿಗೆ ಕಾಲಿಡಲು ನ ಬಿಡುವುದಿಲ್ಲ :ಎಂ ಕೆ ಸ್ಟಾಲಿನ್ ಹೇಳಿಕೆ:

ಈ ಮೊದಲು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡಿಗೆ ಕಾಲಿಡಲು ನಾವು ಬಿಡುವುದಿಲ್ಲ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದರು.

ತಮಿಳುನಾಡಿನಲ್ಲಿ ಡಿಎಂಕೆ ವಿರೋಧ ಪಕ್ಷದಲ್ಲಿದ್ದಾಗ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿತ್ತು. ಡಿಎಂಕೆ ಸಿಎಎ ಅನುಷ್ಠಾನದ ವಿರುದ್ಧ 20 ಮಿಲಿಯನ್ ಸಹಿಗಳನ್ನು ಸಂಗ್ರಹಿಸಿತ್ತು ಮತ್ತು ಅದನ್ನು ಅಂದಿನ ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಿತ್ತು.

ನಾವು 2021ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ, ಸಿಎಎ ಹಿಂಪಡೆಯಲು ಒತ್ತಾಯಿಸಿ  ವಿಧಾನ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದೇವೆ. ಡಿಎಂಕೆ ಸರ್ಕಾರವು ತಮಿಳುನಾಡಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದ್ದರು.