ಸನ್ಮಾರ್ಗ ವಾರ್ತೆ
ಕೊಚ್ಚಿ: ಲಕ್ಷದ್ವೀಪ ಜಿಲ್ಲಾಧಿಕಾರಿಯ ಪ್ರತಿಕೃತಿ ದಹಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಜಾಮೀನು ನೀಡಲು ಅಮಿನಿ ಸಿಜೆಎಂ ಕೋರ್ಟಿಗೆ ಹೈಕೋರ್ಟು ಸೂಚಿಸಿದೆ.
ಲಕ್ಷದ್ವೀಪ ಆಡಳಿತದ ನಿರ್ಧಾರಗಳ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೈಗೆತ್ತಿಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಅಮಿನಿಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶನ ನೀಡಿದೆ.
ಬಂಧನ ಕಾನೂನು ಬಾಹಿರವೆಂದು ಕೋರ್ಟ್ ಹೇಳಿದೆ. ಪ್ರತಿಕೃತಿ ದಹಿಸುವುದು ಠಾಣೆಯಿಂದ ಜಾಮೀನು ಮಂಜೂರು ಮಾಡುವ ಅಪರಾಧವಾಗಿದೆ. ಐದು ದಿವಸ ಜೈಲಿನಲ್ಲಿರಿಸಿದ್ದು ಕಾನೂನು ಬಾಹಿರವಾಗಿದ್ದು ಮೂರು ಗಂಟೆಯೊಳಗೆ ಅವರನ್ನು ಬಿಡಗಡೆಗೊಳಿಸಬೇಕೆಂದು ಕೋರ್ಟು ಆದೇಶಿಸಿದೆ. ಬಂಧನ ದಿನಾಂಕ ಮತ್ತು ಅವರ ವಿರುದ್ಧ ಆರೋಪಿಸಿರುವ ಅಪರಾಧದ ವಿವರಗಳನ್ನು ಬುಧವಾರದೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರನ್ನೊಳಗೊಂಡ ನ್ಯಾಯಪೀಠವು ದ್ವೀಪದ ವೈದ್ಯಕೀಯ ಅಧಿಕಾರಿಗೆ ಆರೋಪಿಗಳ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲು ಆದೇಶಿಸಿದ್ದು, ಬಂಧಿತರಲ್ಲಿ ಒಬ್ಬರಿಗೆ ಕೊರೊನ ದೃಢಪಟ್ಟಿದೆ. ಎಲ್ಲರನ್ನೂ ಒಂದೇ ಹಾಲಿನಲ್ಲಿರಿಸಿಕೊಳ್ಳಲಾಗಿತ್ತು.












