ಸನ್ಮಾರ್ಗ ವಾರ್ತೆ
ಮಲಪ್ಪುರಂ,ಸೆ.18: ಒಮನೂರ್ ಚೆತ್ತುಪಾಲದಲ್ಲಿ ಶಾಲಾ ವಿದ್ಯಾರ್ಥಿಯನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಿದರೆಂದು ಆರೋಪಿಸಿ ಯುವಕರಿಗೆ ಹಲ್ಲೆ ನಡೆಸಿದ್ದ ಮೂವರನ್ನು ವಾಳಕ್ಕಾಡ್ ಪೊಲೀಸರು ಬಂಧಿಸಿದ್ದಾರೆ. ಇತರ 40 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಒಮನೂರಿನ ಫೈಝಲ್, ದುಲ್ಫಿಕರ್, ಮುಅತಸ್ಖಾನ್ ಎಂಬವರ ವಿರುದ್ಧ ಕೊಲೆಯತ್ನ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಅಕ್ರಮ ಗುಂಪುಗೂಡುವಿಕೆ, ವಾಹನ ಸಂಚಾರಕ್ಕೆ ಅಡ್ಡಿ ಮುಂತಾದ ಕೇಸು ದಾಖಲಿಸಿಕೊಳ್ಳಲಾಗಿದೆ.
ಅಪಹರಣಕಾರರೆಂದು ಆರೋಪಿಸಿ ಊರವರು ಹೊಡೆದ ಝಫರುಲ್ಲಾ, ರಹ್ಮತ್ ಅಲಿಯವರನ್ನು ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಸೋಮವಾರ ಬೆಳಗ್ಗಿನ ವೇಳೆ ಒಂಬತ್ತು ಘಂಟೆಗೆ ಘಟನೆ ನಡೆದಿತ್ತು. ಬಿಳಿ ಕಾರಿನಲ್ಲಿ ಬಂದು ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ವಿದ್ಯಾರ್ಥಿ ಊರವರಿಗೆ ತಿಳಿಸಿದ್ದು, ಸಿಸಿ ಟಿವಿಯಲ್ಲಿ ವಾಹನ ಪತ್ತೆಯಾಗಿತ್ತು. ಪೊಲೀಸರು ಸೂಚಿಸಿದ ಪ್ರಕಾರ ಆರೋಪಿಗಳು ಪೊಲೀಸ್ ಠಾಣೆಗೆ ಬರುತ್ತಿದ್ದಾಗ ಒಮನೂರಿನಲ್ಲಿ ಕಾರನ್ನು ತಡೆದು ಹಲ್ಲೆ ನಡೆಸಿದ್ದಾರೆ. ಗಾಯಾಳು ಯುವಕರನ್ನು ಪೊಲೀಸರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.












