✍️ ಮರ್ಹೂಮ್ ಇಬ್ರಾಹೀಮ್ ಸಈದ್
ಮಾಜಿ ರಾಜ್ಯಾಧ್ಯಕ್ಷರು, ಜ.ಇ. ಹಿಂದ್, ಕರ್ನಾಟಕ
ಸೈಯದ್ ಅಬುಲ್ ಆಲಾ ಮೌದೂದಿಯವರು ಕ್ರಿ.ಶ. 1903 ಸೆಪ್ಟೆಂಬರ್ 25 ರಂದು ಔರಂಗಾಬಾದ್ನಲ್ಲಿ ಜನಿಸಿದರು. ಜನನಕ್ಕೆ ಮೂರು ವರ್ಷಗಳ ಹಿಂದೆ ಮೌದೂದಿ ಕುಟುಂಬದ ಓರ್ವ ಶೈಖ್ ಬಂದು ಅವರ ತಂದೆಯ ಜೊತೆ ವಾಸವಾಗಿದ್ದರು. ಅವರು ಅಹ್ಮದ್ ಹಸನ್ರನ್ನು ಉದ್ದೇಶಿಸಿ ಒಂದು ದಿನ ಹೀಗೆಂದರು, “ನಿಮಗೊಂದು ಗಂಡು ಮಗು ಜನಿಸಿದರೆ ಅದಕ್ಕೆ `ಅಬುಲ್ ಆಲಾ’ ಎಂದು ಹೆಸರಿಡಬೇಕು. ಆ ಹೆಸರಿನ ಓರ್ವ ಮಹಾನರು ಈ ಕುಟುಂಬದಲ್ಲಿ ಆಗಿ ಹೋಗಿದ್ದಾರೆ. ಅವರ ನೆನಪನ್ನು ನೆಲೆ ನಿಲ್ಲಿಸಬೇಕು. ಆ ಮಹಾನರಿಂದಲೇ ಮೌದೂದಿ ಶಾಖೆ ಆರಂಭವಾಯಿತು.
ಬಾಲ್ಯದಲ್ಲಿಯೇ ಸೈಯದ್ ಮೌದೂದಿಯವರು ಧಾರ್ಮಿಕ ಕಾರ್ಯಗಳ ಬಗ್ಗೆ ಬಹಳ ಆಸಕ್ತಿಯುಳ್ಳವರಾಗಿದ್ದರು. ನಾಲ್ಕು ವರ್ಷ ಪ್ರಾಯದಿಂದ ಮಸೀದಿಗೆ ಹೋಗಿ ಸಾಮೂಹಿಕ ನಮಾಝ್ಗಳಲ್ಲಿ ಭಾಗವಹಿಸುತ್ತಿದ್ದರು. ಅವರ ಅಣ್ಣನವರಾದ ಸೈಯದ್ ಅಬುಲ್ ಖೈರ್ ಮೌದೂದಿಯವರು ಈ ರೀತಿ ಬರೆದಿದ್ದಾರೆ-
ಅಬುಲ್ ಆಲಾ ಬಹಳ ಬುದ್ಧಿವಂತ ಮತ್ತು ಸ್ವಾಭಿಮಾನಿ ಹುಡುಗನಾಗಿದ್ದ. ನಾಲ್ಕನೇ ವರ್ಷ ಪ್ರಾಯದಲ್ಲಿಯೇ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಒಲವು ತೋರಿಸುತ್ತಿದ್ದ. ಆಗಲೇ ತಂದೆಯವರೊಂದಿಗೆ ಮಸೀದಿಗೆ ಹೋಗಿ ಐದು ಹೊತ್ತು ನಮಾಝ್ ಮಾಡುತ್ತಿದ್ದ. ಐದನೇ ವಯಸ್ಸಿನಲ್ಲಿ ಕುರ್ಆನಿನ ಸುಮಾರು 30 ಸೂಕ್ತಗಳನ್ನು ಅರ್ಥಸಹಿತ ಬಾಯಿಪಾಠ ಮಾಡಿಕೊಂಡದ್ದ. ಉಪವಾಸ ವ್ರತಾಚರಣೆಯನ್ನು ನಿಶ್ಚಿತ ಪ್ರಾಯಕ್ಕಿಂತ ಮುಂಚೆಯೇ ಆರಂಭಿಸಿದ. ಇದು ಅನ್ಯರ ಪ್ರೇರಣೆಯಿಂದ ಆಗಿರಲಿಲ್ಲ. ಒಂದು ದಿನ ತಂದೆಯವರೊಂದಿಗೆ ಮಸೀದಿಗೆ ಹೋದಾಗ `ಆಝಾನ್’ ಕರೆ ನೀಡುವವರು ಬಂದು ಮುಟ್ಟಿರಲಿಲ್ಲ. ತಂದೆಯವರು ಅಬುಲ್ ಆಲಾರಿಗೆ ಆಝಾನ್ ಕರೆ ನೀಡಲು ಹೇಳಿದರು. ಯಾವುದೇ ಅಳುಕಿಲ್ಲದೆ ಉತ್ತಮವಾಗಿ ಆಝಾನ್ ನೀಡಿದ. ತಂದೆಯವರಿಗೆ ಬಹಳ ಸಂತೋಷವಾಯಿತು.
ವಿದ್ಯಾಭ್ಯಾಸ:
ಓರ್ವ ಧರ್ಮ ಪಂಡಿತನಾಗಿಸಬೇಕೆಂಬುದು ಅಹ್ಮದ್ ಹಸನ್ರವರ ಬಯಕೆಯಾಗಿತ್ತು. ಉರ್ದು ಭಾಷೆಯಲ್ಲಿ ಮಾತನಾಡಲು ಅವರಿಗೆ ಕಲಿಸಿದರು. ಇಸ್ಲಾಮೀ ವಿಶ್ವಾಸ ಶ್ರದ್ಧೆಗಳು ಹಾಗೂ ತತ್ವ-ಸಿದ್ಧಾಂತಗಳನ್ನು ವಿವಿಧ ಶೈಲಿಯಲ್ಲಿ ಅವರಿಗೆ ಕಲಿಸಿಕೊಡುತ್ತಿದ್ದರು. ಅರಬಿ, ಇಂಗ್ಲೀಷ್, ಪಾರ್ಸಿ, ಉರ್ದು ಮುಂತಾದ ಭಾಷೆಗಳ ಪ್ರಾಥಮಿಕ ಪಾಠಗಳನ್ನು ಮತ್ತು ಕರ್ಮಶಾಸ್ತ್ರ ಹಾಗೂ ಹದೀಸ್ನ ಕೆಲವು ಗ್ರಂಥಗಳನ್ನು ತಂದೆಯವರೇ ಮಗನಿಗೆ ಕಲಿಸಿದರು. ಮಗನ ಸ್ವಭಾವ ಸಂಸ್ಕರಣೆಯಲ್ಲಿ ಅಹ್ಮದ್ ಹಸನ್ ಅತ್ಯಧಿಕ ಶ್ರದ್ಧೆ ವಹಿಸಿದ್ದರು. ಕೆಟ್ಟ ಬಾಲಕರೊಂದಿಗೆ ಸಂಪರ್ಕವನ್ನು ಅವರು ಬಹಳ ಜಾಗರೂಕತೆಯಿಂದ ನಿಯಂತ್ರಿಸುತ್ತಿದ್ದರು.
ತಂದೆಯವರ ಶಿಕ್ಷಣ ತರಬೇತಿಯಿಂದ ಸೈಯದ್ ಮೌದೂದಿಯವರಲ್ಲಿ ಪಾಪ-ಪುಣ್ಯ ಪ್ರಜ್ಞೆಯ ಬಲವಾಗಿ ಬೇರೂರಿತು. 9ನೇ ವರ್ಷ ಪ್ರಾಯವಾಗದ ತನಕ ಅಹ್ಮದ್ ಹಸನ್ರ ಶಿಕ್ಷಣ ತರಬೇತಿಯಲ್ಲಿದ್ದ ಸೈಯದ್ ಮೌದೂದಿಯವರು ಅವರಿಂದ ಅರಬಿ ಭಾಷೆ, ವ್ಯಾಕರಣ, ಕರ್ಮಶಾಸ್ತ್ರದ ಪ್ರಾಥಮಿಕ ಗ್ರಂಥಗಳು ಹಾಗೂ ಹದೀಸ್ನ ಅಭ್ಯಾಸ ಮಾಡಿದರು. ಅನಂತರ ನದೀಮುಲ್ಲಾ ಹುಸೈನಿಯವರ ಸಲಹೆಯಂತೆ ಔರಂಗಬಾದಿನ `ಮದ್ರಸಾ ಫೌಕಾನಿಯಾ’ಕ್ಕೆ ಸೇರಿಸಿದರು.
ಸಾಹಿತ್ಯ ಕೃಷಿ:
ಅಂದಿನ ಹೈದರಾಬಾದ್ ಪ್ರಾಂತ್ಯದಲ್ಲಿ ಶಾಲಾ ವಿದ್ಯಾಭ್ಯಾಸಕ್ಕೆ `ರುಶ್ದಿಯ್ಯಾ’ ಮತ್ತು ಹೈಸ್ಕೂಲು ವಿದ್ಯಾಭ್ಯಾಸಕ್ಕೆ `ಮೌಲಾವಿ’ ಕೋರ್ಸ್ ಎನ್ನುತ್ತಿದ್ದರು. ಶಿಕ್ಷಣ ಮಾಧ್ಯಮ ಉರ್ದುವಾಗಿತ್ತು. ಜೊತೆಗೆ ಅರಬಿ ಭಾಷೆ, ಅದೇ ಭಾಷೆಯಲ್ಲಿ ಕರ್ಮಶಾಸ್ತ್ರಾಭ್ಯಾಸ, ಹದೀಸ್, ಮಂತಿಕ್ (ತರ್ಕಶಾಸ್ತ್ರ) ಇತ್ಯಾದಿಗಳನ್ನು ಕಡ್ಡಾಯವಾಗಿ ಕಲಿಸಲಾಗುತ್ತಿತ್ತು. 1914ರಲ್ಲಿ ನಡೆದ ಮೌಲವಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆಗ ಅವರ ಪ್ರಾಯ 11 ವರ್ಷ. ನಂತರ ಹೈದರಾಬಾದಿನ `ದಾರುಲ್ ಉಲೂಮ್’ ಕಾಲೇಜಿಗೆ ತಂದೆಯವರು ಭರ್ತಿ ಮಾಡಿದರು. ಪ್ರಖ್ಯಾತ ಧರ್ಮ ಪಂಡಿತರೂ ಪವಿತ್ರ ಕುರ್ಆನಿನ ವ್ಯಾಖ್ಯಾನಕಾರರೂ ಆದ ಮೌಲಾನ ಹಮೀದುದ್ದೀನ್ ಫರಾಹಿಯವರು ಆ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಮೌದೂದಿಯವರನ್ನು ಅತ್ಯಂತ ಪ್ರೀತಿ-ವಾತ್ಸಲ್ಯದಿಂದ ತರಬೇತುಗೊಳಿಸಿದರು.
ಸೈಯದ್ ಮೌದೂದಿಯವರ ಅಣ್ಣ ಅಬೂ ಮುಹಮ್ಮದ್ ಮೌದೂದಿ ಭೋಪಾಲ್ನಲ್ಲಿ ನೆಲೆಸಿದ್ದರು. ಅವರ ತಂದೆ ಅಹ್ಮದ್ ಹಸನ್ರವರು ಅಲ್ಲಿ ಹೋಗಿ ನೆಲೆಸಿದ್ದರು. ಅವರು ಅಲ್ಲಿ ರೋಗಪೀಡಿತರಾದರು. ಸೈಯದ್ ಮೌದೂದಿಯವರು ಶಿಕ್ಷಣ ತೊರೆದು ತಾಯಿಯ ಜೊತೆ ಭೋಪಾಲಿಗೆ ತೆರಳಿ ತಂದೆಯ ಶುಶ್ರೂಷೆಯಲ್ಲಿ ನಿರತರಾದರು. 1920ರಲ್ಲಿ ತಂದೆಯ ನಿಧನವಾಯಿತು. 17ರ ಚಿರಯುವಕನಾದ ಸೈಯದ್ ಮೌದೂದಿಯವರ ಮೇಲೆ ಕುಟುಂಬದ ಭಾರ ಹೊರಬೇಕಾಯಿತು. ಆಗಿನ ಕಠಿಣ ಪರಿಸ್ಥಿತಿಯನ್ನು ಅವರು ಹೀಗೆ ಉಲ್ಲೇಖಿಸುತ್ತಾರೆ:
“ಜೀವನದ ಕಹಿ ವಾಸ್ತವಿಕತೆಯನ್ನು ಆಗ ನಾನು ಸರಿಯಾಗಿ ಅರಿತುಕೊಂಡೆ. ಈ ಲೋಕದಲ್ಲಿ ಗೌರವದಿಂದ ಜೀವಿಸಬೇಕಾದರೆ ತನ್ನ ಸ್ವಂತ ದುಡಿಮೆಯಲ್ಲಿ ಬದುಕಬೇಕು. ಆರ್ಥಿಕ ಸ್ವಾವಲಂಬನೆ ಇಲ್ಲದೆ ಗೌರವಯುತ ಬಾಳು ಅಸಾಧ್ಯ. ಅಲ್ಲಾಹನು ನನಗೆ ಸಾಹಿತ್ಯ ಸಾಮರ್ಥ್ಯವನ್ನು ಅನುಗ್ರಹಿಸಿದ. ಪಠಣ, ಅಭ್ಯಾಸ ಮತ್ತು ಅನ್ವೇಷಣೆಗಳ ಮೂಲಕ ಅದನ್ನು ಇನ್ನಷ್ಟು ಪರಿಪಕ್ವಗೊಳಿಸಿ ಬೆಳೆಸಲು ನಾನು ಪ್ರಯತ್ನಿಸಿದೆ. ಲೇಖನಿ ಹಿಡಿದು ಜೀವನ ಯಾತ್ರೆಯಲ್ಲಿ ಮಾರ್ಗ ರಚಿಸುತ್ತಾ ಸಾಗಲು ನಾನು ನಿರ್ಧರಿಸಿದೆ. ಆಫೀಸ್ ಕೆಲಸಕ್ಕೆ ಸೇರಲು ನನಗೆ ಮನಸ್ಸಿರಲಿಲ್ಲ.”
1914ರಲ್ಲಿ ಮೌಲವಿ ಪರೀಕ್ಷೆಯ ಬಳಿಕ ದೊರೆತ ರಜಾ ದಿನಗಳಲ್ಲಿ ಅಬುಲ್ ಆಲಾರವರು, ಕಾಸಿಮ್ ಅಮೀನ್ ಬೇ ಅವರ `ಅಲ್ ಮರ್ಅತುಲ್ ಜದೀದ’ (ಆಧುನಿಕ ಮಹಿಳೆ) ಎಂಬ ಅರಬಿ ಗ್ರಂಥವನ್ನು ಉರ್ದು ಭಾಷೆಗೆ ಭಾಷಾಂತರಿಸಿದರು. ಆಗ ಅವರ ಪ್ರಾಯ 11 ವರ್ಷ. 1918ರಲ್ಲಿ ಅವರು ಪತ್ರಿಕಾ ಜಗತ್ತಿಗೆ ಪ್ರವೇಶಿಸಿದರು. ಉತ್ತರ ಪ್ರದೇಶದ ಬಿಜನೂರ್ನಿಂದ ಹೊರಡುತ್ತಿದ್ದ `ಅಲ್ ಮದೀನಾ’ ಎಂಬ ಪತ್ರಿಕೆಯಲ್ಲಿ ಅಣ್ಣ ಅಬುಲ್ ಖೈರ್ ಮೌದೂದಿ ಸಂಪಾದಕರಾಗಿಯೂ, ಅಬುಲ್ ಆಲಾ ಸಹ ಸಂಪಾದಕರಾಗಿಯೂ ದುಡಿದರು. 1919ರಲ್ಲಿ ಖಿಲಾಫತ್ ಚಳವಳಿ ಆರಂಭವಾದಾಗ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಚಳವಳಿಯ ಸಂದರ್ಭದಲ್ಲಿ ಬಂಧನಕ್ಕೊಳಗಾದವರ ಮನೆಯವರಿಗೆ ಆರ್ಥಿಕ ಸಹಾಯ ಮಾಡುವ ಸಲುವಾಗಿ `ಅಂಜುಮನನೆ ಇಆನತೆ ನಝರ್ ಬಂದಾನೆ ಇಸ್ಲಾಮ್’ (ಮುಸ್ಲಿಮ್ ಖೈದಿಗಳ ಸಹಾಯ ಸಂಘ) ಎಂಬ ಸಂಘ ಸ್ಥಾಪಿಸಿ ಅದರಲ್ಲಿ ಸಕ್ರಿಯವಾಗಿ ದುಡಿದರು. ಸಂಘದ ಜೀವನಾಡಿಯಂತಿದ್ದ ತಾಜುದ್ದೀನ್ರವರು ಜಬಲ್ಪುರದಿಂದ `ತಾಜ್’ ಎಂಬ ಹೆಸರಿನ ಪತ್ರಿಕೆ ಆರಂಭಿಸಿದರು. ಅದರ ಸಂಪಾದಕತ್ವದ ಹೊಣೆಯೂ ಮೌದೂದಿ ಸಹೋದರರ ಮೇಲೆ ಬಿತ್ತು. ಪತ್ರಿಕಾ ಜಗತ್ತಿಗೆ ಕಾಲಿರಿಸಿದಾಗ ಇಂಗ್ಲೀಷ್ ಭಾಷಾ ಪಾಂಡಿತ್ಯದ ಅಗತ್ಯ ಅಬುಲ್ ಆಲಾರಿಗೆ ಮನವರಿಕೆಯಾಯಿತು. ಅಂತೆಯೇ ಅವರು ಮೌಲವಿ ಮುಹಮ್ಮದ್ ಫಾರಿಉಲ್ ಅವರಿಂದ ಭಾಷಾ ಸಾಹಿತ್ಯದ ಅಧ್ಯಾಯನ ಮಾಡ ತೊಡಗಿದರು.
ಎರಡು ವರ್ಷಗಳ ನಿರಂತರ ಅಧ್ಯಯನದಿಂದ ಇಂಗ್ಲಿಷ್ ಭಾಷೆಯ ಜೊತೆಗೆ ಆ ಭಾಷೆಯಲ್ಲಿದ್ದ ತಂತ್ರಜ್ಞಾನ, ರಾಜನೀತಿ, ಅರ್ಥಶಾಸ್ತ್ರ, ಧರ್ಮ ಮತ್ತು ಸಂಸ್ಕೃತಿಯ ಚರಿತ್ರೆ, ಸಮಾಜಶಾಸ್ತ್ರ ಮುಂತಾದ ಹಲವಾರು ವಿಷಯಗಳ ಅನೇಕ ಗ್ರಂಥಗಳ ಅಭ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ಅವರು ತಮ್ಮ ಇಸ್ಲಾಮೀ ಅಧ್ಯಯನವನ್ನು ಮುಂದುವರಿಸಿದರು. ಅರಬಿ ವ್ಯಾಕರಣ, ಅರಬಿ ಸಾಹಿತ್ಯಶಾಸ್ತ್ರ (ಇಲ್ಮುಲ್ ಮುಆನೀ), ಅರಬನಿ ಅಲಂಕಾರ ಶಾಸ್ತ್ರ (ಇಲ್ಮುಲ್ ಬಯಾನ್), ತರ್ಕಶಾಸ್ತ್ರ (ಮಂತಿಕ್), ತಫ್ಸೀರ್ (ಕುರ್ಆನ್ ವ್ಯಾಖ್ಯಾನ), ಹದೀಸ್ ನಿರೂಪಣಾ ಶಾಸ್ತ್ರ, ಕರ್ಮಶಾಸ್ತ್ರ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅನೇಕ ಬೃಹತ್ ಗ್ರಂಥಗಳನ್ನು ಅವರು ವಿವಿಧ ವಿದ್ವಾಂಸರಿಂದ ಕಲಿತರು.
ಅರಬಿ ಭಾಷಾ ಪಾಂಡಿತ್ಯವು ಆಗಾಧವಾಗಿತ್ತು. ಮುಹಮ್ಮದ್ ಶೀರಾಝಿಯವರು ರಚಿಸಿದ ತತ್ವಶಾಸ್ತ್ರದ ಗಹನವಾದ ಗ್ರಂಥ `ಅಲ್ ಅಸ್ಫಾರುಲ್ ಅರಬಿಯ್ಯ’ ಎಂಬ ಕೃತಿಯನ್ನು ಉಸ್ಮಾನಿಯಾ ವಾಸಿಕಟಿಗಾಗಿ ಅಬುಲ್ ಆಲಾರವರೇ ಉರ್ದು ಭಾಷೆಗೆ ಭಾಷಾಂತರಿಸಿದ್ದರು. 1963ರ ಮೇ 11 ರಂದು ಸೈಯದ್ ಮೌದೂದಿ ಮಕ್ಕಾದ ಮಸ್ಜಿದ್ ದೆಹಲವಿಯಲ್ಲಿ ಮಾಡಿದ ಅರಬಿ ಭಾಷಣವು ಅವಿಸ್ಮರಣೀಯವಾಗಿತ್ತು. ಆ ಬಳಿಕ ಅದು `ಇಸ್ಲಾಮೀ ತೆಹರಿಕೋಂಕೆಲಿಯೆ ಏಕ್ ಲಾಇಹಯೆ ಅಮಲ್’ (ಇಸ್ಲಾಮೀ ಆಂದೋಲನಗಳಿಗೆ ಒಂದು ಕಾರ್ಯ ವಿಧಾನ) ಎಂಬ ಹೆಸರಿನಲ್ಲಿ ಪ್ರಕಾಶನಗೊಂಡಿತು.
1916 ರಿಂದ 1921ರ ವರೆಗಿನ ಕಾಲ ಅಬುಲ್ ಆಲಾ ರವರಿಗೆ ಬಹಳ ಕಠಿಣ ಪರೀಕ್ಷಾ ಘಟ್ಟವಾಗಿತ್ತು. ಆರ್ಥಿಕ ದುಃಸ್ಥಿತಿ ಹದಗೆಟ್ಟಿತ್ತು. ಈ ಕಾಲವಧಿಯಲ್ಲಿ ಅರಬಿ ಸಾಹಿತ್ಯ, ಕುರ್ಆನ್ ವ್ಯಾಖ್ಯಾನ, ಹದೀಸ್, ನ್ಯಾಯಶಾಸ್ತ್ರ, ತತ್ವಜ್ಞಾನ ಮುಂತಾದ ವಿಷಯಗಳ ಬಗ್ಗೆ ಗಹನವಾದ ಅಧ್ಯಯನ ಮುಂದುವರಿಸಿದರು.
1924ರಲ್ಲಿ ಮೌಲಾನ ಮುಹಮ್ಮದಲೀ ಜೌಹರ್ ತಮ್ಮ ಹಮ್ದರ್ದ್ ಪತ್ರಿಕೆಯಲ್ಲಿ ಸಹ ಸಂಪಾಕದರಾಗಲು ಆಹ್ವಾನಿಸಿದರು. ಆದರೆ ಅವರು ಕಾರಣಾಂತರ ಸ್ವೀಕರಿಸಲಿಲ್ಲ.
ಆ ಸಂದರ್ಭದಲ್ಲಿ ಹಿಂದೂ-ಮುಸ್ಲಿಮ್ ಸಂಬಂಧವನ್ನು ಹದೆಗೆಡಿಸುವ ಅನೇಕ ಗಲಭೆಗಳಾದವು. ಬರಬರುತ್ತಾ ಅದು ದಿನನಿತ್ಯದ ಘಟನೆಯಾಗಿ ಮಾರ್ಪಟ್ಟಿತು. ಮುಸ್ಲಿಮರನ್ನು ಭಾರತದಿಂದ ಓಡಿಸಬೇಕು ಮತ್ತು ಮಕ್ಕಾದ ಕಅಬಾದಲ್ಲಿ ಓಂಕಾರ ಲಿಖಿತ ಭಗವಾಧ್ವಜ ಹಾರಿಸಬೇಕೆಂದೂ ಘೋಷಣೆ ಹಾಕ ತೊಡಗಿದವು. ಸ್ವಾಮೀ ಶ್ರದ್ಧಾನಂದ `ರಂಗೀಲಾ ರಸೂಲ್’ ಎಂಬ ಅವಹೇಳನ ಮಾಡುವ ಕೃತಿಯನ್ನು ಪ್ರಕಟಿಸಲಾಯಿತು. ಮುಸ್ಲಿಮರು ಭಾರಿ ಪ್ರತಿಭಟನೆ ಮಾಡಿದರು. ದೇಶದಾದ್ಯಂತ ಕೋಮುಗಲಭೆ ವ್ಯಾಪಿಸಿತು. ಅದರಲ್ಲಿ ಇಸ್ಲಾಮಿನ `ಜಿಹಾದ್’ ಕಲ್ಪನೆ ಆಕ್ಷೇಪಗಳ ಕೇಂದ್ರ ವಿಷಯವಾಗಿತ್ತು. ಕೆಲವು ಮುಸ್ಲಿಮ್ ಪಂಡಿತರು ಆ ಆರೋಪಗಳಿಗೆ ಉತ್ತರ ನೀಡಿದರೂ ಯಾವುದೇ ಹೆಚ್ಚಿನ ಪರಿಣಾಮ ಬೀರಲಿಲ್ಲ.
`ಅಲ್ ಜಿಹಾದ್ ಫಿಲ್ ಇಸ್ಲಾಮ್’
ಆಗಿನ ಕಾಲದಲ್ಲಿ ದೆಹಲಿಯ ಜಾಮಿಅ ಮಸೀದಿಯಲ್ಲಿ ಶುಕ್ರವಾರದ ನಮಾಝ್ ಬಳಿಕ ಮೌಲಾನ ಮುಹಮ್ಮದ್ ಅಲಿ ಜೌಹರ್ ಅವರು ಭಾಷಣ ಮಾಡುತ್ತಾ ಹೇಳಿದರು, ಇಸ್ಲಾಮ್ ಜಿಹಾದ್ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ದೂರೀಕರಿಸಿ ಅದನ್ನು ಸರಿಯಾಗಿ ಮನದಟ್ಟು ಮಾಡಿಕೊಡುವ ಒಂದು ಗ್ರಂಥ ರಚನೆಯಾಗಬೇಕೆಂದು ಕರೆ ನೀಡಿದರು. ಮೌದೂದಿಯವರು ಆ ಸಭೆಯಲ್ಲಿ ಹಾಜರಿದ್ದರು. ಅಂದೇ ಅವರು ಆ ಕೆಲಸ ಮಾಡುವ ಪಣತೊಟ್ಟರು. ಅದಕ್ಕಾಗಿ ಅವರು ಜಿಹಾದ್ ಬಗ್ಗೆ ಇರುವ ಉರ್ದು, ಅರಬಿ ಮತ್ತು ಇಂಗ್ಲೀಷ್ ಭಾಷೆಯ ಸರಿಸುಮಾರು ಎಲ್ಲಾ ಪುಸ್ತಕಗಳನ್ನು ಓದಿದರು. ಆಳವಾದ ಅಧ್ಯಯನ ಮತ್ತು ಸಂಶೋಧನೆಯ ಬಳಿಕ ಅವರು ರಚಿಸಿದ ಗ್ರಂಥವೇ `ಅಲ್ ಜಿಹಾದ್ ಫಿಲ್ ಇಸ್ಲಾಮ್’ ಎಂಬ ಜಗದ್ವಿಖಾಯಾತ ಕೃತಿ. ಆಗ ಅವರ ಪ್ರಾಯ 24 ವರ್ಷ ಆಗಿತ್ತು. ಮೊದಲು ಅದು `ಅಲ್ ಜಮ್ಇಯ್ಯತ್’ ಪತ್ರಿಕೆಯಲ್ಲಿ 24 ಸಂಚಿಕೆಗಳಲ್ಲಿ ಪ್ರಕಟವಾಯಿತು. ತದ ನಂತರ ಅದನ್ನು ಗ್ರಂಥದ ರೂಪದಲ್ಲಿ ಮುದ್ರಿಸಲಾಯಿತು. 1928ರಲ್ಲಿ ಆಝಮ್ಗಢದ ದಾರುಲ್ ಮುಸನ್ನಿಫೀನ್ ಸಂಸ್ಥೆಯ ವತಿಯಿಂದ ಮೌಲಾನ ಸೈಯದ್ ಸುಲೈಮಾನ್ ನದ್ವಿ ಅವರು ಪ್ರಕಟಿಸಿದರು. ಈಗಾಗಲೇ ಅದರ ಹಲವಾರು ಆವೃತ್ತಿಗಳು ವಿವಿಧ ಭಾಷೆಗಳಲ್ಲಿ ಬಂದಿವೆ.
1640ರಲ್ಲಿ ನಾಲ್ಕು ಭಾಗಗಳಲ್ಲಿ `ಅಲ್ ಹಿಕ್ಮತುಲ್ ಮುಸಾಲಿಯಃ ಫಿಲ್ ಮಸಾರ್ರುಬೂಬಿಯ್ಯಃ’ ಎಂಬ ಅರಬಿ ಗ್ರಂಥವನ್ನು ಉರ್ದು ಭಾಷೆಗೆ ಅನುವಾದಿಸಿದ್ದರು. ಅದು 3500 ಪುಟಗಳ ಬೃಹತ್ ಗ್ರಂಥವನ್ನು ಕೇವಲ 8 ತಿಂಗಳೊಳಗೆ ಅನುವಾದಿಸಿ ಮುಗಿಸಿದರು. ಇದರ ಸಂಭಾವನೆಯಲ್ಲಿ ದೊರೆತ 5 ಸಾವಿರ ರೂಪಾಯಿಗಳಿಂದ `ತರ್ಜುಮಾನುಲ್ ಕುರ್ಆನ್’ ಎಂಬ ಮಾಸ ಪತ್ರಿಕೆಯನ್ನು ಆರಂಭಿಸಿದರು. 1932 ರಿಂದ ತನ್ನ ನಿಧನದ ತನಕ ಸೈಯದ್ ಮೌದೂದಿಯವರೇ ಅದರ ಸಂಪಾದಕರಾಗಿದ್ದರು.
`ತರ್ಜುಮಾನುಲ್ ಕುರ್ಆನ್’ನ ಆರ್ಥಿಕ ಪರಿಸ್ಥಿತಿ ಉತ್ತಮವಾಗದ ಕಾರಣ ಸೈಯದ್ ಮೌದೂದಿಯವರು ತನ್ನೆಲ್ಲ ಉಳಿತಾಯವನ್ನು ಅದಕ್ಕಾಗಿ ವ್ಯಯಿಸುತ್ತಿದ್ದರು. ಅವರು ಅದನ್ನು ತನ್ನ ಸಂದೇಶ ಮತ್ತು ಧ್ಯೇಯವೆಂದು ಭಾವಿಸಿದ್ದರು. ಮೌಲಾನ ಮೌದೂದಿಯವರು ಪ್ರಾಚೀನ ಮತ್ತು ಅವಾಕಚೀನ ವಿದ್ಯೆಗಳನ್ನು ಸಮಗ್ರವಾಗಿ ಮಾಡಿಕೊಂಡಿದ್ದರು. ಪ್ರತಿಯೊಂದು ವಿಷಯವನ್ನು ತಾರ್ಕಿಕವಾಗಿ ಆಧುನಿಕ ಶೈಲಿಯಲ್ಲಿ ವಿವರಿಸಿ ಅರ್ಥಮಾಡಿಕೊಂಡುವ ಸಾಮರ್ಥ್ಯವುಳ್ಳವರಾಗಿದ್ದರು.
ತರ್ಜುಮಾನುಲ್ ಕುರ್ಆನ್ ಪತ್ರಿಕೆಯ ಪ್ರಸಾರ ಸಂಖ್ಯೆ ನಿರಂತರವಾಗಿ ಏರುತ್ತಲೇ ಹೋಯಿತು. 1941ರ ವೇಳಗೆ ಅದರ ಪ್ರಸಾರ 2000, 1961ರಲ್ಲಿ 6000. ತರುವಾಯ 9000ಕ್ಕೆ ತಲುಪಿತು. ಅದು ಕೇವಲ ಒಂದು ಪತ್ರಿಕೆಯಾಗಿರಲಿಲ್ಲ. ಅದೊಂದು ವ್ಯವಸ್ಥೆಯ ಪ್ರತಿಪಾದಕ. ಒಂದು ಧ್ಯೇಯದ ಮಾರ್ಗಸೂಚಿ ಮತ್ತು ಒಂದು ಸಂದೇಶವಾಗಿತ್ತು.
ವೈಚಾರಿಕ ಕ್ರಾಂತಿ:
1933 ರಿಂದ 1940ರ ತನಕ ಅನೇಕ ಗ್ರಂಥಗಳನ್ನು ರಚಿಸಿದರು. ಆಧುನಿಕ ಯುಗದಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಹಬ್ಬಿರುವ ತಪ್ಪು ತಿಳುವಳಿಕೆಗಳನ್ನು ದೂರೀಕರಿಸುವ ಮತ್ತು ಅದರ ತತ್ವ ಸಿದ್ಧಾಂತಗಳ ಸತ್ಯಾವನ್ನು ಜನರಿಗೆ ಮನದಟ್ಟು ಮಾಡುವ ಸಲುವಾಗಿ ವೈವಿಧ್ಯಮಯ ಲೇಖನಗಳನ್ನು ಬರೆದರು. ಮೂರು ಭಾಗಗಳ `ತಫ್ಹೀಮಾತ್’ ಎಂಬ 1500 ಪುಟಗಳ ಗ್ರಂಥ ಬರೆದರು. ಈ ಗ್ರಂಥವು ಮೌಲಾನರ ಅಗಾಧ ಪಾಂಡಿತ್ಯ, ಅವಿರತ ಸಂಶೋಧನೆ, ನಿರಂತರ ಶ್ರಮ ಮತ್ತು ಇಸ್ಲಾಮಿನ ಬಗ್ಗೆ ಅವರಿಗಿರುವ ನಿಷ್ಕಳಂಕ ಕಾಳಜಿ ಹಾಗೂ ನೈಜ ಕಳಕಳಿಯ ಪ್ರತೀಕವಾಗಿದೆ.
ತರ್ಜುಮಾನುಲ್ ಕುರ್ಆನ್ನಲ್ಲಿ ಸೈಯದ್ ಮೌದೂದಿಯವರ ವಾಚಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಿದ್ದರು. ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೋತ್ತರಗಳನ್ನು ಕ್ರೋಢೀಕರಿಸಿ `ರಸಾಯಿಲ್ ವ ಮಸಾಯಿಲ್’ ಎಂಬ 5 ಭಾಗಗಳಲ್ಲಿ ಗ್ರಂಥ ರಚಿಸಿದರು. ಅದನ್ನು ಓದುವಾಗ ಅವುಗಳಲ್ಲಿರುವ ವಕ್ರ ಬುದ್ಧಿಯ ಪ್ರಶ್ನೆಗಳು, ಸ್ವಾರಸ್ಯಕರ ಟೀಕೆ ಟಿಪ್ಪಣಿಗಳು, ಅವುಗಳ ಸಂಕ್ಷಿಪ್ತ ಮತ್ತು ಮನಮುಟ್ಟುವ ಉತ್ತರವನ್ನು ಪ್ರತಿಯೊಬ್ಬ ಬುದ್ಧಿವಂತರನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ. ಈ ಅವಧಿಯಲ್ಲಿ `ಪರ್ದಾ’ ʻತನ್ಕೀಹಾತ್ʼ ಮುಂತಾದ ಕೃತಿಗಳನ್ನು ಬರೆದರು. ಈ ಗ್ರಂಥಗಳು ಸಹಸ್ರಾರು ಬುದ್ಧಿಜೀವಿಗಳ ಹೃದಯವನ್ನು ಗೆದ್ದಿದೆ. ಲಕ್ಷಗಟ್ಟಲೆ ಜನರ ಜೀವನದಲ್ಲಿ ಪರಿವರ್ತನೆ ತಂದಿವೆ. ಅವರಿಗೆ ಜೀವನದ ಯಥಾರ್ಥ ಉದ್ದೇಶವನ್ನು ಮನಗಾಣಿಸಿ. ಅದಕ್ಕಾಗಿ ಅವಿಶ್ರಾಂತವಾಗಿ ಹೋರಾಡುವಂತೆ ಮಾಡಿದೆ.
ಕುಟುಂಬ ಜೀವನ:
1937ರಲ್ಲಿ ಸೈಯದ್ ಮೌದೂದಿಯವರು ವಿವಾಹವಾದರು. ಅವರ ಪತ್ನಿ ಮಹ್ಮೂದಾ ಬೇಗಮ್ ದೆಹಲಿಯ ಬುಖಾರಿ ಸೈಯದ್ ಮೌದೂದಿ ಮನೆತನಕ್ಕೆ ಸೇರಿದವರು. ಸೈಯದ್ ಮೌದೂದಿಯವರ ಧರ್ಮಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ನೆರವಾದರು. ಮುಂದೆ ಜಮಾಅತೆ ಇಸ್ಲಾಮೀ ಸದಸ್ಯೆಯೂ ಆದರು.
ಇಸ್ಲಾಮೀ ಪ್ರಾಧ್ಯಾಪಕ:
ಸೈಯದ್ ಮೌದೂದಿಯವರು `ಮುಸಲ್ಮಾನ್ ಔರ್ ಮೌಜೂದ ಸಿಯಾಸೀ ಕಶ್ಮಕಶ್’ ಎಂಬ ಲೇಖನಮಾಲೆಯ 2ನೇ ಭಾಗವನ್ನು ಪೂರ್ಣಗೊಳಿಸಿದರು. ರಮಝಾನಿನಲ್ಲಿ ತರಾವೀಹ್ ನಮಾಝ್ ಬಳಿಕ ಪ್ರಾತಃಕಾಲದ ತನಕ ಕುಳಿತು ಬರೆಯುತ್ತಾ ಆ ಪುಸ್ತಕ ಪೂರ್ಣಗೊಳಿಸಿದ್ದರು. 1930 ರಿಂದ 1942ರ ವರೆಗೆ ಇದೇ ರೀತಿ ಅವರು ಕೆಲಸ ಮಾಡುತ್ತಿದ್ದರು. ನೆರವಿಗೆ ಯಾರೂ ಇರಲಿಲ್ಲ. ಈ ಆಂದೋಲನ ನಡೆಯಲಿ ನಡೆಯದಿರಲಿ, ನನ್ನಿಂದಾಗುವುದನ್ನು ನಾನು ಮಾಡಿಯೇ ತೀರುತ್ತೇನೆ ಎಂಬುದು ಅವರ ದೃಢಸಂಕಲ್ಪವಾಗಿತ್ತು.
ಲಾಹೋರಿನ ಇಸ್ಲಾಮಿಯಾ ಕಾಲೇಜಿನಲ್ಲಿ ಗೌರವ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಯಾವುದೇ ಪ್ರತಿಫಲವನ್ನು ಪಡೆದಿರಲಿಲ್ಲ. ಕಾಲೇಜಿನ ಪ್ರಾಂಶುಪಾಲರಾದ ಖ್ವಾಜಾ ದಿಲ್ ಮುಹಮ್ಮದ್ ಅವರು ತಮ್ಮ ವಾರ್ಷಿಕ ವರದಿ(1939)ಯಲ್ಲಿ ಈ ರೀತಿ ಬರೆದಿರುವರು.
`ಕಾಲೇಜಿನಲ್ಲಿ ಮಹಾಗ್ರಂಥಕರ್ತರೂ ಸುಧಾರಕರೂ ಆದ ಮೌಲಾನ ಸೈಯದ್ ಮೌದೂದಿಯವರನ್ನು ಇಸ್ಲಾಮೀ ಅಧ್ಯಯನ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅವರು ತಮ್ಮ ಸೇವೆಯನ್ನು ಉಚಿತವಾಗಿ ನೀಡುವ ಮೂಲಕ ದೊಡ್ಡ ತ್ಯಾಗ ಮನೋಭಾವವನ್ನು ಪ್ರಕಟಿಸಿದ್ದಾರೆ. ಅವರಿಗೆ ಕೃತಜ್ಞರಾಗಿದ್ದೇವೆ.
ಆ ಕಾಲದಲ್ಲಿ ಹಲವು ವಿದ್ಯಾಸಂಸ್ಥೆಗಳ ಆಮಂತ್ರಣದ ಮೇರೆಗೆ ಸೈಯದ್ ಮೌದೂದಿಯವರು ಅಲ್ಲಿಗೆ ಹೋಗಿ ಉಪನ್ಯಾಸಗಳನ್ನು ನೀಡುತ್ತಿದ್ದರು. ಈ ಭಾಷಣಗಳು ಅನಂತರ ಪುಸ್ತಕದ ರೂಪದಲ್ಲಿ ಪ್ರಕಟವಾದವು. ಅವರ ಅನೇಕ ಭಾಷಣಗಳು ರೇಡಿಯೋ ಲಾಹೋರ್ನಿಂದಲೂ ಪ್ರಸಾರವಾದವು. 1941ರ ಫೆಬ್ರವರಿ 23 ರಂದು ಪೇಶಾವರದ ಇಸ್ಲಾಮಿಯಾ ಕಾಲೇಜಿನಲ್ಲಿ `ಇಸ್ಲಾಮ್ ಔರ್ ಜಾಹಿಲಿಯ್ಯತ್’ (ಇಸ್ಲಾಮ್ ಮತ್ತು ಅಜ್ಞಾನ) ಎಂಬ ವಿಷಯದಲ್ಲಿ ಮಾಡಿದ ಭಾಷಣವೂ ಉಲ್ಲೇಖಕಾರ್ಹ (ಕಿರು ಪುಸ್ತಕ) ಆಗಿದೆ.
ಉತ್ತಮ ಸಂಘಟನೆಯ ಅಗತ್ಯ:
ಎಪ್ರಿಲ್ 1941ರಲ್ಲಿ ಸೈಯದ್ ಮೌದೂದಿಯವರು `ತರ್ಜುಮಾನುಲ್ ಕುರ್ಆನ್’ ಪತ್ರಿಕೆಯಲ್ಲಿ `ಒಂದು ಉತ್ತಮ ಸಂಘಟನೆಯ ಅಗತ್ಯ’ ಎಂಬ ಶೀರ್ಷಿಕೆಯಲ್ಲಿ ಒಂದು ಲೇಖನ ಬರೆದರು. ಅದರಲ್ಲಿ ಭವಿಷ್ಯದ ಅಂಧಕಾರದಿಂದ ರಕ್ಷಣೆ ಪಡೆಯಲು ಹಾಗೂ ಇಸ್ಲಾಮಿನ ಅನುಗ್ರಹಗಳನ್ನು ಸವಿಯಲು ಇಲ್ಲೊಂದು ಉತ್ತಮ ಸಿದ್ಧಾಂತ ಮಾತ್ರ ಇದ್ದರೆ ಸಾಲದು. ಅದರ ಜೊತೆಗೆ ಒಂದು ಉತ್ತಮ ಸಂಘಟನೆ ಇರಬೇಕಾದುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.
ಪ್ರಸ್ತುತ ಸಂಘಟನೆಗೆ ಸೇರುವ ಸದಸ್ಯರಲ್ಲಿರಬೇಕಾದ ಗುಣ ವೈಶಿಷ್ಟ್ಯಗಳನ್ನು ಅವರು ಹೇಳಿದ್ದರು. `ಸುದೃಢವಾದ ವಿಶ್ವಾಸ, ಅಚಂಚಲವಾದ ಮನೋಬಲ, ಅತ್ಯುತ್ತಮ ಕಾರ್ಯ ಕೌಶಲ್ಯಗಳು ಅವರಲ್ಲಿರಬೇಕು. ಕ್ರಾಂತಿಯ ಮಾರ್ಗದಲ್ಲಿ ತಮ್ಮ ಧನವನ್ನು, ಸಮಯವನ್ನು, ಬೌದ್ಧಿಕ ಮತ್ತು ಶಾರೀರಿಕವಾದ ಎಲ್ಲ ರೀತಿಯ ಸಾಮರ್ಥ್ಯಗಳನ್ನು ಅದಕ್ಕಾಗಿ ವ್ಯಯಿಸಬೇಕಾದೀತು. ಸೆರೆವಾಸ, ಗಡಿಪಾರು, ಸೊತ್ತುವಿತ್ತಗಳ ಹಾನಿ ಸಹಿಸಬೇಕಾದೀತು. ಈ ಹಂತ ದಾಟದೆ ಜಗತ್ತಿನಲ್ಲಿ ಯಾವ ಕ್ರಾಂತಿಯೂ ಸಂಭವಿಸಿಲ್ಲ. ಮುಂದೆ ಸಂಭವಿಸಲೂ ಸಾಧ್ಯವಿಲ್ಲ.
ಸೈಯದ್ ಮೌದೂದಿಯವರ ಈ ಮಾತುಗಳು ಸಹಸ್ರಾರು ಹೃದಯಗಳಲ್ಲಿ ಇಸ್ಲಾಮೀ ಕ್ರಾಂತಿಯ ಕಿಡಿ ಹೊತ್ತಿಸಿದೆವು. ತರ್ಜುಮಾನುಲ್ ಕುರ್ಆನ್ ಮೂಲಕ ಸೈಯದ್ ಮೌದೂದಿಯವರು ಇಸ್ಲಾಮೀ ಸಂದೇಶವನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದರು. ಆ ಸಂದೇಶವನ್ನು ಮನಗಂಡು ಧರ್ಮ ಸಂಸ್ಥಾಪನೆಯನ್ನು ತಮ್ಮ ಜೀವನದ ಉದ್ದೇಶವೆಂಬುದುನ್ನು ಅರಿತುಕೊಂಡವರು ದೇಶದ ಎಲ್ಲಾ ಭಾಗಗಳಲ್ಲಿಯೂ ಹರಡಿಕೊಂಡಿದ್ದರು. ಆ ಪೈಕಿ 75 ಮಂದಿ ಮೌದೂದಿಯವರ ಆಹ್ವಾನದ ಮೇಲೆ ಆಗಸ್ಟ್ 24, 1941 ಲಾಹೋರಿನ ಇಸ್ಲಾಮಿಯಾ ಪಾರ್ಕ್ನಲ್ಲಿ ಸಭೆ ಸೇರಿದರು. ಅಂದೇ ಅವರೆಲ್ಲರಿಗೂ `ಜಮಾಅತೆ ಇಸ್ಲಾಮಿಯ ಸಂವಿಧಾನ’ ಎಂಬ ಕರಡು ಪ್ರತಿಯನ್ನು ವಿತರಿಸಲಾಯಿತು.
ಜಮಾಅತೆ ಇಸ್ಲಾಮೀಯ ಸ್ಥಾಪನೆ:
1941ರ ಅಗಸ್ಟ್ 26 ರಂದು ತರ್ಜುಮಾನುಲ್ ಕುರ್ಆನ್ ಕಛೇರಿಯಲ್ಲಿ ಒಂದು ಸಭೆ ಜರಗಿತು. ಅದರಲ್ಲಿ 75 ಮಂದಿ ಭಾಗವಹಿಸಿದ್ದರು. ಪ್ರಸ್ತಾವಿಕ ಭಾಷಣ ಮಾಡುತ್ತಾ ಹೇಳಿದರು, “ಒಂದು ಕಾಲದಲ್ಲಿ ನಾನೂ ಓರ್ವ ಪರಂಪಾಗತ ಧರ್ಮ ವಿಶ್ವಾಸಿಯಾಗಿದ್ದೆ. ವಂಶೀಯ ಧರ್ಮದ ಓರ್ವ ಅನುಯಾಯಿ ನಂತರ ನಾನು ಅಲ್ಲಾಹನ ಗ್ರಂಥ ಮತ್ತು ಪ್ರವಾದಿಚರ್ಯೆಯೆಡೆಗೆ ಮರಳಿದೆ. ಇಸ್ಲಾಮನ್ನು ಅಧ್ಯಯನ ಮಾಡಿ ಅದರ ಮೇಲೆ ವಿಶ್ವಾಸವಿರಿಸಿದೆ. ಅದೇ ಉದ್ದೇಶಕ್ಕಾಗಿ ತರ್ಜುಮಾನುಲ್ ಕುರ್ಆನ್ ಜಾರಿಗೊಳಿಸಿದೆ. ಇಸ್ಲಾಮನ್ನು ಒಂದು ಆಂದೋಲನದ ರೂಪದಲ್ಲಿ ಜಾರಿಗೆ ತರುವ ನಿಟ್ಟಿನ ಪ್ರಯತ್ನಗಳನ್ನು ಆರಂಭಿಸಸಿದೆ. (ರೂದಾದೇ ಜಮಾಅತೆ ಇಸ್ಲಾಮೀ ಭಾಗ- 1)
ಒಂದು ವಾಸ್ತವಿಕತೆಯನ್ನು ಅವರು ಆರಂಭದಲ್ಲೇ ಒತ್ತಿ ಹೇಳಿದರು, ಪ್ರವಾದಿ(ಸ) ಅವರು ರೂಪಿಸಿದ ಸಂಘಟನೆಗೆ ಸೇರದವರು ಮುಸ್ಲಿಮರಾಗಿರುವುದಿಲ್ಲ. ಆದರೆ ನಾವು ಸ್ಥಾಪಿಸುವ ಸಂಘಟನೆಗೆ ಪ್ರವಾದಿ(ಸ) ಮತ್ತು ಅವರ ಅನುಯಾಯಿಗಳ ಸಂಘಟನೆಯ ಸ್ಥಾನಮಾನವಿಲ್ಲ. ಧರ್ಮದ ನವೋತ್ಥಾನಕ್ಕೆ ಶ್ರಮಿಸುವ ಒಂದು ಸಂಘಟನೆ ಮಾತ್ರವಿದು. ಈ ಸಂಘಟನೆಗೆ ಸೇರಿದವರು ಮಾತ್ರವಲ್ಲ ಸೇರದವರೂ ಮುಸ್ಲಿಮರೇ ಆಗಿದ್ದಾರೆ. ಭವಿಷ್ಯದಲ್ಲಿ ಎದುರಾಗಬಹುದಾದ ಕೆಲವು ಅನಾಹುತಗಳನ್ನು ಭಾಷಣದಲ್ಲಿ ಸೂಚಿಸುತ್ತಾ ಹೇಳಿದರು, ಜಮಾಅತೆ ಇಸ್ಲಾಮೀ ಎಂದೂ ಕೂಡ ಮುಸ್ಲಿಮರ ಒಂದು ಪಂಗಡವಾಗಿ ಮಾರ್ಪಡಬಾರದೆಂದೂ ಅಂತೆಯೇ ಅದರ ನಾಯಕನ ಬಗ್ಗೆ ಇಲ್ಲಸಲ್ಲದ ಮಹಿಮೆಗಳನ್ನು ಸೃಷ್ಟಿಸಿ ಹೇಳಬಾರದೆಂದೂ ಎಚ್ಚರಿಸಿದರು.
ಮದ್ರಾಸ್ ಸಮ್ಮೇಳನ:
ದೇಶದ ಸ್ವಾತಂತ್ರ್ಯಕ್ಕಿಂತ ನಾಲ್ಕು ತಿಂಗಳ ಮೊದಲು 1947 ಎಪ್ರಿಲ್ನಲ್ಲಿ ದೇಶದಾದ್ಯಂತ ವಲಯಮಟ್ಟದ ಸಮ್ಮೇಳನಗಳು ಜರಗಿದವು. 1947 ಎಪ್ರಿಲ್ 25-26 ರಂದು ದಕ್ಷಿಣ ಭಾರತದ ಜಮಾಅತೆ ಇಸ್ಲಾಮೀ ಸಮ್ಮೇಳನವು ಮದ್ರಾಸ್ನಲ್ಲಿ ಜರುಗಿತು. ಅದರ ಸಮಾರೋಪ ಭಾಷಣವು ಒಂದು ಚಾರಿತ್ರಿಕ ಪ್ರವಚನವಾಗಿತ್ತು. (ಭಾರತದ ಭವಿಷ್ಯ ಮತ್ತು ಮುಸ್ಲಿಮರು- ಎಂಬ ಶೀರ್ಷಿಕೆಯಲ್ಲಿ ಕನ್ನಡದಲ್ಲಿ ಪ್ರಕಟಗೊಂಡಿದೆ)
ದೇಶ ವಿಭಜನೆಯ ನಂತರ ಅವರು ಲಾಹೋರಿನ ಇಛ್ರಾ ಎಂಬ ಬಡಾವಣೆಯಲ್ಲಿ ವಾಸ ಹೂಡಿದರು. ಅಂದಿನಿಂದ ಮರಣದ ವರೆಗೂ ಅಲ್ಲೇ ನೆಲೆಸಿದ್ದರು. ಮನೆಯ ಪಕ್ಕದಲ್ಲಿ ಖಾಸಗಿ ಗ್ರಂಥಲಾಯವಿತ್ತು.
1948 ಎಪ್ರಿಲ್ 15 ರಂದು ಭಾರತದಲ್ಲಿರುವ ಜಮಾಅತ್ ಸದಸ್ಯರು ಪ್ರತ್ಯೇಕ ಸಂಘಟನೆಯಾಗಿ ರೂಪುಗೊಂಡರು.
1948 ಅಕ್ಟೋಬರ್ 4 ರಂದು ಮೌಲಾನ ಮೌದೂದಿಯವರು ಬಂಧಿಸಲ್ಪಟ್ಟರು. ಮುಲ್ತಾನ್ ಜೈಲಿನಲ್ಲಿ ಮೌದೂದಿಯೊಂದಿಗೆ ಮೀಯಾಂ ತುಫೈಲ್ ಮತ್ತು ಮೌಲಾನ ಅಮೀನ್ ಅಹ್ಸನ್ ಇಸ್ಲಾಹಿಯವರೂ ಇದ್ದರು.
ಅಕ್ರಮಿಯ ಮೊರೆ ಹೋಗಲಾರೆ:
ಸೈಯದ್ ಮೌದೂದಿಯವರು ಸೆರೆಮನೆಯಲ್ಲಿ ಶಾಂತಚಿತ್ತರಾಗಿದ್ದರು. ಬಹಳ ಕಾಲದಿಂದ ಅವರಿಗೆ ಮೂತ್ರಕೋಶದ ತೊಂದರೆ ಇತ್ತು. ಬಂಧನದ ಒಂದು ವಾರ ಮೊದಲು ಮೂತ್ರಕೋಶದಲ್ಲಿ ಕಲ್ಲು ಕಂಡು ಬಂದಿತ್ತು. ಅದರ ಚಿಕಿತ್ಸೆಯನ್ನೂ ಆರಂಭಿಸಿದ್ದರು. ಬಂಧನದ ಬಳಿಕ ಚಿಕಿತ್ಸೆ ನಿಂತು ಹೋಯಿತು. ಸಮಸ್ಯೆ ಹೆಚ್ಚಾಯಿತು. ವೈದ್ಯರನ್ನು ಕಾಣುವ ಸ್ಥಿತಿಯಲ್ಲಿರಲಿಲ್ಲ. ಸರಕಾರದಿಂದ ವೈದ್ಯರನ್ನು ಕಾಣುವ ಅನುಮತಿಯ ಮೊರೆ ಹೋಗುವುದು ನಾನು ನೆಚ್ಚಿಕೊಂಡಿರುವ ತತ್ವಕ್ಕೆ ವಿರುದ್ಧವಾಗಿದೆ. ಆದ್ದರಿಂದ ಪ್ರಾಣ ಹೋದರೂ ಸರಿಯೇ ನಾನು ಸರಕಾರದಿಂದ ಯಾವುದೇ ರಿಯಾಯಿತಿಯನ್ನು ಅಪೇಕ್ಷಿಸಲಾರೆ ಎಂದರು. (ಮಕಾತೀಬೆ ಝಿಂದಾನ್)
ಚಳಿಗಾಲದಲ್ಲಿ ತಣ್ಣೀರಿನಿಂದ ವಝೂ ಮಾಡಿದರೆ ನೆಗಡಿಯಾಗುತ್ತಿತ್ತು. ಆದರೆ ಸೆರೆಮನೆಗೆ ಬಂದ ಬಳಿಕ ಚಳಿಗಾಲದಲ್ಲಿ ತೆರೆದ ಜಾಗದಲ್ಲಿ ತಣ್ಣೀರು ಸ್ನಾನ ಮಾಡುತ್ತಿದ್ದರು. ತೆರೆದ ಜಾಗದಲ್ಲಿ ಮಲಗುತ್ತಿದ್ದರು. ಆದರೆ ಒಂದು ದಿನವೂ ನೆಗಡಿಯಾಗಲಿಲ್ಲ.
ಮೂತ್ರಕೋಶದ ಬಾಧೆ ತೀವ್ರವಾಯಿತು. 17-18 ಗಂಟೆಗಳ ಕಾಲ ಮೂತ್ರ ನಿಂತು ಹೋಯಿತು. ಮೂತ್ರ ನಾಳದಲ್ಲಿ ಕಲ್ಲು ಬಂದು ಸಿಕ್ಕಿಕೊಂಡಿತ್ತು. ಮೌದೂದಿ ಅಲ್ಲಾಹನ ಮೊರೆಯಿಟ್ಟರು. ಕಲ್ಲು ನೀಗಿತು. ಬಾಧೆ ದೂರವಾಯಿತು. ಅಲ್ಲಾಹನ ಕೃಪೆಯಿಂದ ಸಹಜವಾಗಿ ಮೂತ್ರ ವಿಸರ್ಜನೆ ಮಾಡಲಾರಂಭಿಸಿದರು.
20 ತಿಂಗಳ ಸೆರೆವಾಸದ ವೇಳೆ ಅವರು ವ್ಯಾಪಕ ಅಧ್ಯಯನ ನಡೆಸಿದರು. ತನ್ನ ಕೆಲವು ಗ್ರಂಥಗಳ ಮರುಪರಿಶೀಲನೆ ಮಾಡಿ ಅವುಗಳಿಗೆ ಅಂತಿಮ ರೂಪ ಕೊಟ್ಟರು. ಸೂದ್(ಬಡ್ಡಿ) ಎಂಬ ಅವರ ಪ್ರಸಿದ್ಧ ಗ್ರಂಥದ 2ನೇ ಭಾಗವು ಇದೇ ಜೈಲಿನಲ್ಲಿ ಬರೆಯಲ್ಪಟ್ಟಿತು. ತಫ್ಹೀಮುಲ್ ಕುರ್ಆನಿನ ಪ್ರಥಮ ಭಾಗವೂ ಇಲ್ಲಿಯೇ ಪೂರ್ಣಗೊಂಡು ಪ್ರಕಟನೆಗೆ ಹೋಯಿತು. 1950ರ ಮೇ 28 ರಂದು ಈ ಮೂವರನ್ನು ಸರಕಾರ ಬೇಷರತ್ ಬಿಡುಗಡೆ ಮಾಡಿತು.
ಪ್ರವಾದಿ ಸಮಾಪ್ತಿ:
1952ನೇ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರವಾದಿತ್ವ ಸಮಾಪ್ತಿ ಆಂದೋಲನ ತಾರಕ್ಕೇರಿತು. ಮುಸ್ಲಿಮ್ ಸಮುದಾಯ ಒಕ್ಕೊರಳಿನಿಂದ ಕಾದಿಯಾನಿಗಳನ್ನು ಮುಸ್ಲಿಮೇತರ ಅಲ್ಪಸಂಖ್ಯಾತರೆಂದು ಘೋಷಿಸಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟಿತು. ಇದೇ ಸಂದರ್ಭದಲ್ಲಿ ಮೌದೂದಿಯವರು `ಕಾದಿಯಾನಿ ಸಮಸ್ಯೆ’ ಎಂಬ ಕೃತಿ ರಚಿಸಿದರು. ಕೇವಲ 2 ತಿಂಗಳಲ್ಲಿ 1 ಲಕ್ಷ ಪ್ರತಿಗಳು ಮಾರಾಟವಾದವು. ಇದೇ ಕಿರು ಹೊತ್ತಗೆಯ ನೆಪದಲ್ಲಿ 1953 ಮೇ 11 ರಂದು ಮೌದೂದಿಯವರಿಗೆ ಮರಣ ದಂಡನೆ ವಿಧಿಸಲ್ಪಟ್ಟಿತು.
ಈ ವಿವಾದಾಸ್ಪದ ವಿಧಿಯನ್ನು ಕೇಳಿ ಉಕ್ಕಿನಂತಹ ಮನೋದಾರ್ಢ್ಯದ ಮೌದೂದಿಯ ಮೇಲೆ ಯಾವ ಪ್ರಭಾವವೂ ಬೀರಲಿಲ್ಲ. ಸಹನೆಯ ಸಾಕಾರಮೂರ್ತಿಯಾದ ಅವರು ಮಾಡದ ತಪ್ಪಿಗೆ ನೀಡಲ್ಪಟ್ಟ ಈ ಮರಣ ದಂಡನೆಯ ಘೋಷಣೆಯನ್ನು ತಾಳ್ಮೆಯಿಂದ ಆಲಿಸಿದರು.
ತಾವು ಒಂದು ವಾರದೊಳಗೆ ಈ ಮರಣದಂಡನೆಯ ವಿರುದ್ಧ ರಾಷ್ಟ್ರಾಧ್ಯಕ್ಷರಿಗೆ ದಯಾ ಭಿಕ್ಷೆ ಸಲ್ಲಿಸಬಹುದು ಎಂದು ಜೈಲಿನ ಅಧಿಕಾರಿ ತಿಳಿಸಿದರು. ಅವರು ಗಂಭೀರ ವದನರಾಗಿ ಈ ರೀತಿ ಉತ್ತರಿಸಿದರು- “ನನಗೆ ಯಾರ ದಯಾಭಿಕ್ಷೆಯೂ ಬೇಕಾಗಿಲ್ಲ. ಜೀವನ-ಮರಣಗಳ ತೀರ್ಪು ಭೂಮಿಯಲ್ಲಾಗುವುದಿಲ್ಲ. ಅದು ಆಕಾಶದಲ್ಲಾಗುತ್ತದೆ. ನೇಣು ಕಂಬದಲ್ಲಿ ನನ್ನ ಮರಣವು ನಿಶ್ಚಿತವಾಗಿದ್ದರೆ ಭೂಮುಖದ ಮೇಲಿರುವ ಯಾರಿಗೂ ನನ್ನನ್ನು ರಕ್ಷಿಸಲು ಸಾಧ್ಯವಿಲ್ಲ. ನನ್ನ ಅಂತ್ಯವು ನಿರ್ಧರಿತವಾಗಿರದಿದ್ದರೆ ಯಾರಿಂದಲೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ.”
ಅವರನ್ನು ಜೈಲಿನ ಕೋಣೆಯಿಂದ ಮರಣ ದಂಡನೆ ವಿಧಿಸಲ್ಪಟ್ಟರಿಗಾಗಿರುವ ವಿಶೇಷ ಕೊಠಡಿಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ಸರಕಾರದ ವತಿಯಿಂದ ಒದಗಿಸಲಾದ ಒಂದು ಶರ್ಟು ಮತ್ತು ನಾಡೆ ಇಲ್ಲದ ಇಜಾರು ಧರಿಸಿ ನೇಣುಗಂಭವನ್ನು ಏರುವುದರ ನಿರೀಕ್ಷೆಯಲ್ಲಿದ್ದರು. ಜೈಲಾಧಿಕಾರಿ ಸಾಂತ್ವಾನ ನೀಡಿದಾಗ, ಅವರು ಶಾಂತಚಿತ್ತರಾಗಿದ್ದರು. `ನಾನು ಕಳವಳ ಪಡುವುದಿಲ್ಲ. ನಾನು ಸತ್ಯದ ಪಥದಲ್ಲಿ ಪ್ರಥಮ ಹೆಜ್ಜೆಯನ್ನಿರಿಸಿದಾಗಲೇ ನನಗೆ ಈ ಪರಿಸ್ಥಿತಿ ಒದಗಲಿದೆ ಎಂದು ಚೆನ್ನಾಗಿ ನಿರೀಕ್ಷಿಸಿದ್ದೆ. ನನಗೆ ಜೀವನ ನೀಡಿದವನ ಮಾರ್ಗದಲ್ಲೇ ಅದನ್ನು ತ್ಯಾಗ ನೀಡುವ ಸೌಭಾಗ್ಯ ಲಭಿಸಿರುವುದು ಸಂತೋಷಕರ ಎಂದರು. ಆ ರಾತ್ರಿಯನ್ನು ಅವರು ಆ ಮರಣ ಕೋಣೆಯಲ್ಲಿ ಕಳೆದರು. ಅವರು ಅಲ್ಲಿಗೆ ಕುರ್ಆನ್ ಪ್ರತಿಯನ್ನು ಮಾತ್ರ ಜೊತೆ ಒಯ್ದಿದ್ದರು. ಆದರೆ ಅಲ್ಲಿ ಅದನ್ನು ಇಡಲು ಸೂಕ್ತ ಸ್ಥಳವಿಲ್ಲದ ಕಾರಣ ಮರಳಿಸಿದರು. ಚಾಪೆಯ ಮೇಲೆ ಮಲಗಿದರು. ಚಾಪೆಗೆ ಒರಗಿದ್ದೇ ತಡ, ನಿದ್ರಾವಶವಾಗಿ ಗೊರಕೆ ಹೊಡೆಯಲಾರಂಭಿಸಿದರು. ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ಯಾವ ವ್ಯಕ್ತಿಯೂ ಈ ರೀತಿ ನಿಶ್ಚಿಂತೆಯಿಂದ ನಿದ್ರಿಸುವುದು ತಾನು ಕಂಡಿಲ್ಲವೆಂದು ಜೈಲಿನ ಕಾವಲುಗಾರ ಹೇಳುತ್ತಾರೆ.
ಈ ಮರಣ ದಂಡನೆಯ ವಿರುದ್ಧ ಪಾಕಿಸ್ತಾನದ ಒಳಗೂ ಹೊರಗೂ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಹಲವಾರು ದೇಶಗಳಿಂದ ನೂರಾರು ಸಂಘಟನೆಗಳ ನಾಯಕರು, ವಿದ್ವಾಂಸರು ಮತ್ತು ಬುದ್ಧಿಜೀವಿಗಳು ಪ್ರತಿಭಟಿಸಿ, ರದ್ದುಗೊಳಿಸಬೇಕೆಂದು ಆಪೇಕ್ಷಿಸಿದರು. ಕೊನೆಗೂ ಸರಕಾರ ಮಣಿಯಿತು. ಅವರ ಮರಣ ದಂಡನೆಯ ತೀರ್ಪನ್ನು ಸರಕಾರವೇ ರದ್ದುಗೊಳಿಸಿತು.
1961 ರ ಕೊನೆಯಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದರು. ಶಾ ಸವೂದ್ ಅವರ ಆಹ್ವಾನದ ಮೇರೆಗೆ ಮದೀನಾದಲ್ಲಿ ಇಸ್ಲಾಮೀ ಯುನಿವರ್ಸಿಟಿಯ ಒಂದು ಸಮಗ್ರ ಯೋಜನೆಯೊಂದಿಗೆ ಅಲ್ಲಿಗೆ ಹೋಗಿದ್ದರು. ದೊರೆ ಶಾ ಸವುದ್ ಅವರು ಮೌದೂದಿಯವರನ್ನು ಬರ ಮಾಡಿಕೊಂಡರು.
`ನಾವು ಪ್ರವಾದಿಯ ನಗರವಾದ ಮದೀನಾದಲ್ಲಿ ಒಂದು ಇಸ್ಲಾಮೀ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ಬಯಸುತ್ತೇವೆ. ಅದರಲ್ಲಿ ಧಾರ್ಮಿಕ ವಿದ್ವಾಂಸರು ಸಿದ್ಧರಾಗಿ ಇಸ್ಲಾಮಿನ ಸಂದೇಶ ಪ್ರಚಾರದಲ್ಲಿ ನಿರತರಾಗುವಂತಾಗಬೇಕು. ಅದಕ್ಕಾಗಿ ತಮ್ಮನ್ನು ಆಹ್ವಾನಿಸಿದ್ದೇವೆ. ತಾವು ಇಸ್ಲಾಮಿನ ಸಂದೇಶ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವವರು ಮತ್ತು ಅದರಲ್ಲೇ ಬಿಡುವಿಲ್ಲದೆ ದುಡಿಯುತ್ತಿರುವವರು ಎಂಬುದು ನಮಗೆ ತಿಳಿದಿದೆ. ಆದ್ದರಿಂದ ತಮ್ಮಿಂದ ನಾವು ಈ ಕಾರ್ಯದಲ್ಲಿ ಮಾರ್ಗದರ್ಶನ ತಡೆಯಬಯಸಿದ್ದೇವೆ. (ಏಶ್ಯಾ, ಲಾಹೋರ್ ಜನವರಿ 1962)
ಸೈಯದ್ ಮೌದೂದಿಯವರು ಶಾ ಸವೂದ್ರಿಗೆ ತಾವು ಸಿದ್ಧಪಡಿಸಿದ ಇಸ್ಲಾಮೀ ವಿಶ್ವವಿದ್ಯಾಲಯದ ಯೋಜನೆಯಪೂರ್ಣ ರೂಪುರೇಖೆಗಳನ್ನು ನೀಡಿದರು. ಅದನ್ನು ಅವರು ಶಾ ಸವೂದರ ಅಪೇಕ್ಷೆಯಂತೆ ನವೆಂಬರ್ 1960ರಲ್ಲೇ ಸಿದ್ಧಪಡಿಸಿದ್ದರು. 1962ರ ಮೇ ತಿಂಗಳ ಮದೀನಾ ವಿಶ್ವವಿದ್ಯಾಲಯದ ಸಲಹಾ ಸಮಿತಿ ಸಭೆಗೆ ಮೌದೂದಿಯವರನ್ನು ಆಹ್ವಾನಿಸಲಾಗಿತ್ತು. ಇಂಗ್ಲಿಷ್ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ತೀರ್ಮಾನವಾಯಿತು. ಯಾವ ಇಮಾಮರ ಫಿಕ್ಹ್ ಅನ್ನು ಭೋದಿಸಬೇಕೆಂಬ ಬಗ್ಗೆ ಸಾಕಷ್ಟು ಚರ್ಚೆಯ ಬಳಿಕ ಮೌದೂದಿಯವರ ಅಭಿಪ್ರಾಯವು ಬಹುಮತದಿಂದ ವಿದ್ಯಾರ್ಥಿಗಳಿಗೆ ನಾಲ್ಕೂ ಫಿಕ್ಹ್ಗಳನ್ನು ಆಧಾರ ಸಹಿತ ಕಲಿಸಬೇಕೆಂದು ತೀರ್ಮಾನಿಸಲಾಯಿತು.
1970ರ ಸೆಪ್ಟೆಂಬರ್ 6 ರಂದು ಮೌದೂದಿಯವರ ಕೊಲೆ ಮಾಡುವ ಉದ್ದೇಶದಿಂದ ಓರ್ವ ಯುವಕ ಜಮಾಅತ್ ಕೇಂದ್ರದಲ್ಲಿರುವ ಅವರ ನಿವಾಸಕ್ಕೆ ಬಂದಿದ್ದ. ಕಾರಣ ಪ್ರವಾದಿಗಳ ವಿರುದ್ಧ ಬರೆಯುತ್ತಾನೆ ಮತ್ತು ಸಹಾಬಿಗಳ ಗೌರವಕ್ಕೆ ಕುಂದುಂಟು ಮಾಡುತ್ತಾನೆ ಎಂಬ ಆರೋಪ ಹೊರಿಸಲಾಗಿತ್ತು. ಇದನ್ನು ಕೇಳಿದ ಝಾಹಿದ್ ಇಕ್ಬಾಲ್ ಕೆರಳಿ ಕೆಂಡವಾಗಿ ಕೊಲ್ಲಲು ಹೊರಟಿದ್ದನು. ಮಾಂಸದಂಗಡಿಯಿಂದ ದೊಡ್ಡ ಚೂರಿಯೊಂದನ್ನು ಪಡೆದು ಕಚೇರಿಗೆ ತಲುಪಿ ಅಡಗಿ ಕೂತ. ಮೌಲಾನ ಅಸರ್ ನಮಾಝ್ಗೆ ಬಂದಾಗ ಕೊಲ್ಲುವ ಯೋಜನೆ ಇತ್ತು. ಅವನನ್ನು ಯಾರೂ ಗಮನಿಸಲಿಲ್ಲ. ಅವನು ಅವರ ಬಳಿಗೆ ಹೋಗಿ ನಿಂತನು. ಅವರ ಮುಖ ನೋಡಿ, ಈ ವ್ಯಕ್ತಿ ಪ್ರವಾದಿಯವರನ್ನು ನಿಂದಿಸಲು ಸಾಧ್ಯವಿಲ್ಲ ಎಂದು ತೋಚಿತು. ಅದು ಪ್ರಶ್ನೋತ್ತರ ಸಮಯವಾಗಿತ್ತು. ಅಲ್ಲೊಬ್ಬರು, ಸುಳ್ಳಾರೋಪದ ಕುರಿತು ಪ್ರಶ್ನಿಸಿದರು. ಮೌಲಾನ ಹೇಳಿದರು `ಬಯ್ಯುವವರಿಗೆಲ್ಲಾ ಉತ್ತರ ನೀಡುತ್ತಿರುವುದು ನಮ್ಮ ಕೆಲಸವಲ್ಲ. ನಾನೂ ಅವರಂತೆ ಬಯ್ಯಲು ಆರಂಭಿಸಿದರೆ ನಮ್ಮ ಮತ್ತು ಅವರ ಮಧ್ಯೆ ವ್ಯತ್ಯಾಸವಾದರೂ ಏನಿರುತ್ತದೆ?” ಆಗ ಝಾಹಿದ್ ಇಕ್ಬಾಲ್, ಮೌಲಾನ ಮುಂದೆ ಬಂದು ನಿಂತ. ಗದ್ಗದಿತ ಸ್ವರದಲ್ಲಿ ಹೇಳಿದ, “ಮೌಲಾನ ನನೊಂದು ವಿಷಯ ಹೇಳುತ್ತೇನೆ. ಆದರೆ ನನಗೆ ಹೆದರಿಕೆಯಾಗುತ್ತಿದೆ.” ಮೌಲಾನ ಹೇಳಿದರು, “ನಿಸ್ಸಂಕೋಚವಾಗಿ ಹೇಳಿರಿ. ಅವನು ಒರೆಯಿಂದ ಚೂರಿಯನ್ನು ಹೊರ ತೆಗೆದು ಮೇಜಿನ ಮೇಲಿಟ್ಟ. ಅವನಲ್ಲಿ ಪಿಸ್ತೂಲು ಕೂಡ ಇತ್ತು. “ನಾನು ತಮ್ಮನ್ನು ಕೊಲ್ಲಲು ಬಂದವನು” ಎಂದ.
ಹಾಗೆದರೆ ಕೊಲೆ ಮಾಡಿ ಎಂದರು. ನಂತರ ಆ ಯುವಕ ಝಿಯಾವುಲ್ ಕಾಸಿಮಿಯವರ ಭಾಷಣದಿಂದ ತೊಡಗಿ ಈ ಸಭೆಯ ವರೆಗಿನ ವೃತ್ತಾಂತ ತಿಳಿಸಿದನು.
ತಫ್ಹೀಮುಲ್ ಕುರ್ಆನ್ ಪೂರ್ತಿಕರಣ:
ಮೌದೂದಿಯವರ ದೇಹಾರೋಗ್ಯವು ದಿನೇ ದಿನೇ ಕುಸಿಯುತ್ತಾ ಬಂತು. ಎರಡು ಶಸ್ತ್ರ ಚಿಕಿತ್ಸೆಗಳು ಅವರನ್ನು ನಿಶ್ಶಕ್ತರಾಗಿ ಮಾಡಿತು. ಆದರೂ ಜಮಾಅತ್ ಬಂಧುಗಳ ಒತ್ತಾಯದ ಮೇರೆ ಜಮಾಅತ್ ಅಧ್ಯಕ್ಷತೆಯ ಹೊಣೆಗಾರಿಕೆ ನಿರ್ವಹಿಸುತ್ತಲೇ ಇದ್ದರು. ಪ್ರವಾಸಗಳನ್ನೆಲ್ಲ ರದ್ದು ಮಾಡಿ ತಫ್ಹೀಮುಲ್ ಕುರ್ಆನಿನ ಕೆಲಸ ಮಾತ್ರ ಮುಂದುವರಿಸಿದರು. 1972ರ ಜೂನ್ 7 ರಂದು ಆ ಕಾರ್ಯ ಪೂರ್ಣಗೊಂಡಿತು. ಸುಮಾರು 30 ವರ್ಷಗಳ ದೀರ್ಘಾವಧಿಗೆ ಅದಕ್ಕೆ ತಗಲಿತ್ತು.
ಫೈಸಲ್ ಪ್ರಶಸ್ತಿ:
ಸೈಯದ್ ಮೌದೂದಿಯವರು ಅರ್ಧ ಶತಮಾನ ಕಾಲ ಇಸ್ಲಾಮಿಗೆ ಸಲ್ಲಿಸಿದ ಅಮೋಘ ಸೇವೆಯನ್ನು ಪರಿಗಣಿಸಿ ಸೌದಿ ಅರೇಬಿಯಾದ ಕಿಂಗ್ ಫೈಸಲ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು 1979ರಲ್ಲಿ ನೀಡಿ ಗೌರವಿಸಲಾಯಿತು. ಎರಡು ಲಕ್ಷ ಸೌದಿ ರಿಯಲ್ ಮೌಲ್ಯದ ಪ್ರಶಸ್ತಿ ಸ್ವೀಕರಿಸಿದ ಭಾರತೀಯ ಉಪ ಭೂಖಂಡದ ಮೊದಲ ವಿದ್ವಾಂಸರಾಗಿದ್ದರು. ಆ ಪ್ರಶಸ್ತಿಯ ಮೊತ್ತವನ್ನು ಇಸ್ಲಾಮೀ ಸಂಶೋಧನಾ ಕಾರ್ಯಗಳಿಗಾಗಿ ಒಂದು ವಿಶ್ವಸ್ಥನೀಯ ಸ್ಥಾಪನೆಯಲ್ಲಿ ವಿನಿಯೋಗಿಸಿದರು.
1978ರ ಆರಂಭದಲ್ಲೇ ಅವರ ದೇಹಸ್ಥಿತಿ ತೀರಾ ಹದಗೆಟ್ಟಿತ್ತು. 1979 ಎಪ್ರಿಲ್ನಲ್ಲಿ ಅಮೇರಿಕಾದ ಬಫೆಲ್ಲೋದಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವಾಗ ದ್ವಿತೀಯ ಪುತ್ರ ಡಾ| ಅಹ್ಮದ್ ಫಾರೂಕ್ ಪಾಕಿಸ್ತಾನಕ್ಕೆ ಒಂದು ಹೆಚ್ಚಿನ ತಪಾಸಣೆಗಾಗಿ ಕರೆದುಕೊಂಡು ಹೋದರು.
1979 ಡಿಸೆಂಬರ್ 22 ರಂದು ಆ ಧುವತಾರೆ ಅಸ್ತಮಿಸಿತು.
ಬಳಿಕ ಅವರ ಪಾರ್ಥೀವ ಶರೀರವನ್ನು ಅಮೇರಿಕಾದಿಂದ ವಿಮಾನದ ಮೂಲಕ ಪಾಕಿಸ್ತಾನಕ್ಕೆ ತರಲಾಯಿತು. ಅವರ ಜನಾಝದಲ್ಲಿ ಸುಮಾರು 6 ಲಕ್ಷ ಮಂದಿ ಭಾಗವಹಿಸಿದ್ದರು. ಜಗದ್ವಿಖ್ಯಾತ ವಿದ್ವಾಂಸ ಡಾ| ಯೂಸುಫುಲ್ ಕರ್ಝಾವಿಯವರು ಜನಾಝ ನಮಾಝ್ನ ನೇತೃತ್ವ ವಹಿಸಿದ್ದರು.
ಅನು: ಮುಖ್ತಾರ್ ಅಹ್ಮದ್, ಪಾಣೆಮಂಗಳೂರು












