ಖಾಲಿಸ್ತಾನ್-ಗೂಂಡಾ ಅಕ್ರಮ ಸಂಬಂಧ; 5 ರಾಜ್ಯಗಳಲ್ಲಿ ಎನ್‍ಐಎ ದಾಳಿ

0
173

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಖಾಲಿಸ್ತಾನಿ ಭಯೋತ್ಪಾದಕರು ಮತ್ತು ಗೂಂಡಾ ತಂಡಗಳ ನಡುವೆ ಇರುವ ಅಕ್ರಮ ಸಂಬಂಧ ಕುರಿತು ಕಠಿಣ ಕ್ರಮಕ್ಕೆ ಎನ್‍ಐಎ ಮುಂದಾಗಿದ್ದು ಈ ನಿಟ್ಟಿನಲ್ಲಿ ಪಂಜಾಬ್,  ಹರಿಯಾಣ, ದಿಲ್ಲಿ, ರಾಜಸ್ತಾನ, ಉತ್ತರಾಖಂಡ, ಉತ್ತರ ಪ್ರದೇಶಗಳಲ್ಲಿ ಐವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‍ಐಎ ದಾಳಿ ನಡೆಸಿದೆ.

ಪಂಜಾಬಿನಲ್ಲಿ 30 ಸ್ಥಳಗಳಲ್ಲಿ, ರಾಜಸ್ತಾನದ ಹದಿಮೂರು ಕಡೆ, ಹರಿಯಾಣದಲ್ಲಿ ನಾಲ್ಕು, ಉತ್ತರಖಂಡದಲ್ಲಿ ಎರಡು, ಮತ್ತು ಉತ್ತರ ಪ್ರದೇಶ, ದಿಲ್ಲಿಗಳಲ್ಲಿ ಬೇರೆ ಬೇರೆ ಜಾಗಗಳಲ್ಲಿ ಎನ್‍ಐಎ ದಾಳಿ ಮಾಡಿದೆ ಎಂದು ವರದಿಯಾಗಿದೆ.

ಖಾಲಿಸ್ತಾನ ಭಯೋತ್ಪಾದಕರು , ವಿದೇಶಗಳನ್ನು ಕೇಂದ್ರವಾಗಿಟ್ಟು ಪ್ರವರ್ತಿಸುವ ಗೂಂಡಾಗಳು ಮಾದಕ ವಸ್ತುಗಳು ಮತ್ತು ಆಯುಧಗಳನ್ನು ಹವಾಲ ಮೂಲಕ ಭಾರತದಲ್ಲಿ ಕಾರ್ಯವೆಸಗುವವರಿಗೆ ಧನ ಸಹಾಯವನ್ನೂ ನೀಡುತ್ತಿರುವುದಾಗಿ ಎನ್‍ಐಎ ಪತ್ತೆ ಹಚ್ಚಿದೆ. ಈ ಪ್ರಯುಕ್ತ ಖಾಲಿಸ್ತಾನಿ, ಐಎಸ್‍ಐ ಗೂಂಡಾ ಸಂಬಂಧ ಕುರಿತ ವಿಸ್ತಾರವಾದ ವಿವರಗಳು  ತನಿಖಾ ಸಂಸ್ಥೆ ಎನ್‍ಐಎಗೆ ದೊರಕಿದೆ ಎಂದು ವರದಿಗಳು ಹೇಳುತ್ತಿವೆ.

ಖಾಲಿಸ್ತಾನಿ ಭಯೋತ್ಪಾದಕ ಹರ್‍ದೀಪ್ ಸಿಂಗ್ ನಿಜ್ಜಾರನ ಕೊಲೆಯ ಹಿಂದೆ ಭಾರತ ಸರಕಾರದ ಹಸ್ತ ಇದೆ ಎಂದು ಕೆನಡದ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ ನಂತರ ಭಾರತ ಮತ್ತು ಕೆನಡಗಳ ನಡುವೆ ಸಂಬಂಧವೇ ಹಳಸಿದ್ದು ಇದರ ಬೆನ್ನಿಗೆ ಭಾರತ ಕೆನಡ ರಾಜತಾಂತ್ರಿಕರನ್ನು ಹೊರಹಾಕಿದ ಘಟನೆಗಳೂ ನಡೆಯಿತು.

ಕಳೆದ ಜೂನಿನಲ್ಲಿ ಖಾಲಿಸ್ತಾನಿ ನಾಯಕ ಹರದೀಪ್ ಸಿಂಗ್ ನಿಜ್ಜಾರ್ ರನ್ನು ಕೆನಡದ ಗುರುದ್ವಾರದೊಳಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. 46 ವರ್ಷದ ಹರ್‍ದೀಪ್, ಗುರುನಾನಕ್ ಸಿಖ್ ಗುರದ್ವಾರ ಸಾಹಿಬ್ ಮುಖ್ಯಸ್ಥ , ಖಾಲಿಸ್ತಾನ್ ಟೈಗರ್ ಪೋರ್ಸ್‍ನ ಮುಖ್ಯಸ್ಥ, ಸಿಖ್ ಫಾರ್ ಜಸ್ಟಿಸ್ ಸಂಬಂಧಪಟ್ಟಂತೆ ಕಾರ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ.

ಪಂಜಾಬಿನ ಜಲಂಧರ್ ನ ಬರ್‍ಸಿಂಗ್ ಪುರ ಗ್ರಾಮದ ನಿವಾಸಿ. ಖಾಲಿಸ್ತಾನ್ ಟೈಗರ್ ಪೋರ್ಸ್‍ಗೆ ತರಬೇತಿ, ಧನ ಸಹಾಯ, ನೆಟ್‍ವರ್ಕಿಂಗ್‍ನಲ್ಲಿ ಸಕ್ರಿಯವಾಗಿದ್ದ ವ್ಯಕ್ತಿ ಎಂದು ಹರ್‍ದೀಪ್ ಸಿಂಗ್ ಕುರಿತು ಕೇಂದ್ರ ಸರಕಾರ ಹೇಳುತ್ತಿದೆ. ಎನ್‍ಐಎ ಇವರ ವಿರುದ್ಧ ಒಂದು ಕೇಸು ದಾಖಲಿಸಿಕೊಂಡಿತ್ತು.