ಸೇನೆಯ ಅಭ್ಯಾಸಬಲ ನಡೆಸುವುದಾಗಿ ನಮ್ಮೊಂದಿಗೆ ಹೇಳಲಾಗಿತ್ತು: ಉಕ್ರೇನ್‌ನಲ್ಲಿ ಬಂಧಿತ ರಷ್ಯಾ ಸೈನಿಕರ ಹೇಳಿಕೆ

0
229

ಸನ್ಮಾರ್ಗ ವಾರ್ತೆ

ಕೀವ್: ನಮಗೆ ಯುದ್ದದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸೇನೆಯ ಅಭ್ಯಾಸಬಲ ನಡೆಸಲು ಇಲ್ಲಿಗೆ ಎರಡು ವಾರದ ಹಿಂದೆ ಕರೆತರಲಾಗಿತ್ತು ಎಂದು ಉಕ್ರೇನ್ ನಲ್ಲಿ ಬಂಧಿತ ರಷ್ಯಾ ಸೈನಿಕರು ನೀಡಿರುವ ವಿಡಿಯೋ ಹೇಳಿಕೆಯು ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಉಕ್ರೇನ್ ಸೇನೆಯಿಂದ ಬಂಧನಕ್ಕೊಳಗಾದ ರಷ್ಯಾದ ಸೈನಿಕರನ್ನು ವಿಚಾರಣೆ ನಡೆಸಿರುವ ಉಕ್ರೈನ್ ನ ಅಧಿಕಾರಿಗಳು ಈ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ರಷ್ಯಾವು ತಮ್ಮ ಸೈನಿಕರಿಗೆ ಸುಳ್ಳು ಹೇಳಿ, ನಂಬಿಸಿ ಉಕ್ರೇನ್ ಗೆ ಯುದ್ಧಕ್ಕೆ ಕರೆದುಕೊಂಡು ಬಂದಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋ ಹಾಕಿರುವ ಉಕ್ರೇನ್ ನ ಖಾರ್ಕಿವ್ ಗವರ್ನರ್ ಓಲೆಹ್ ಸಿನೆಹುಬೊವ್, ರಷ್ಯಾದ ಸೈನಿಕರಿಗೆ ಯುದ್ಧದ ಬಗ್ಗೆ ಯಾವುದೇ ಸುಳಿವಿಲ್ಲ, ನಾವು ಬಂಧಿಸಿರುವ ಸೈನಿಕರಿಗೂ ಕೇಂದ್ರ ಕಮಾಂಡ್‌ನೊಂದಿಗೆ ಯಾವುದೇ ಸಂಬಂಧವಿಲ್ಲ. ಈ ಸೈನಿಕರಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಅವರಿಗೆ ತಿಳಿದಿಲ್ಲ” ಎಂದು ಹೇಳಿದ್ದಲ್ಲದೆ, ಈ ಸೈನಿಕರು ಉಕ್ರೇನ್ ಮೇಲಿನ ದಾಳಿಯ ಆರಂಭದಿಂದಲೂ ಅವರು ಆಹಾರವನ್ನು ತಿಂದಿಲ್ಲ ಎಂದು ಕೂಡ ಹೇಳಿರುವುದಾಗಿ ಗವರ್ನರ್ ತಿಳಿಸಿದ್ದಾರೆ.

ದಾಳಿ ನಡೆಸುತ್ತಿರುವ ಸೈನಿಕರಿಗೆ ಯಾವುದೇ ಆಹಾರ ಮತ್ತು ನೀರು ಸಿಕ್ಕಿಲ್ಲ. ಅವರ ವಾಹನಗಳಿಗೆ ಇಂಧನವನ್ನು ಪೂರೈಸಲಾಗಿಲ್ಲ. ರಷ್ಯಾದ ಸೈನಿಕರು ಆಹಾರಕ್ಕಾಗಿ ತಮ್ಮ ಗುರುತು ಸಿಗದಂತೆ ಸ್ಥಳೀಯ ಜನಸಂಖ್ಯೆಯೊಂದಿಗೆ ಬೆರೆಯಲು ಪ್ರಯತ್ನಿಸುತ್ತಿದ್ದಾರೆ. ಜನರೊಂದಿಗೆ ಬಟ್ಟೆ ಮತ್ತು ಆಹಾರವನ್ನು ಕೇಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ನಾಗರಿಕರು, ಜಾಗರೂಕರಾಗಿರಬೇಕು, ಅಪರಿಚಿತರಿಗೆ ಬಾಗಿಲು ತೆರೆಯಬಾರದು, ಅವರು ನಿಮ್ಮ ಮನೆಯಲ್ಲಿ ಮನೆಯಲ್ಲಿ ಅವಿತುಕೊಳ್ಳಲು ಸಹಾಯ ಮಾಡಬೇಡಿ ಎಂದು ಖಾರ್ಕಿವ್ ಪ್ರದೇಶದ ಜನರಿಗೆ ಖಾರ್ಕಿವ್ ಗವರ್ನರ್ ಓಲೆಹ್ ಸಿನೆಹುಬೊವ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ಇದನ್ನು ಬಿಬಿಸಿ ಸೇರಿದಂತೆ ಹೆಚ್ಚಿನ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಖಾರ್ಕಿವ್‌ನಲ್ಲಿ ಹತ್ತಾರು ರಷ್ಯಾದ ಸೈನಿಕರು ಉಕ್ರೇನ್‌ನ ಸಶಸ್ತ್ರ ಪಡೆಗಳಿಗೆ ಶರಣಾಗಿದ್ದಾರೆ.