ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ನಾಪತ್ತೆ, ಹುಡುಕಿಕೊಟ್ಟವರಿಗೆ ಬಹುಮಾನ- ರೈತರ ವಿನೂತನ ಪ್ರತಿಭಟನೆ

0
350

ಸನ್ಮಾರ್ಗ ವಾರ್ತೆ

ಕೋಲಾರ: ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸದೆ ನಾಪತ್ತೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರನ್ನು ಹುಡುಕಿಕೊಟ್ಟು ಮಳೆ ಆರ್ಭಟಕ್ಕೆ ನಾಶವಾಗಿರುವ ಪ್ರತಿ ಎಕರೆ ವಾಣಿಜ್ಯ ಬೆಳೆಗೆ 5 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಉಪನಿರ್ದೇಶಕರ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಆಗ್ರಹಿಸಲಾಯಿತು.

ಜಿಲ್ಲೆಯ ಗಂಧಗಾಳಿ ಗೊತ್ತಿಲ್ಲದ ಶೋಕಿಗಾಗಿ ಉಸ್ತುವಾರಿ ಸಚಿವರ ಸ್ಥಾನ ಪಡೆದು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಜೊತೆಗೆ ರೈತರ ಕಷ್ಟಗಳಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಹುಡುಕಿಕೊಟ್ಟವರಿಗೆ ಒಂದು ಎಕರೆ ಕೃಷಿ ಜಮೀನು ಬಹುಮಾನ ನೀಡುತ್ತೇವೆಂದು ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಘೋಷಣೆ ಮಾಡಿದರು. ಹೋರಾಟದ ನೇತೃತ್ವವಹಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಲಕ್ಷಾಂತರರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದಿರುವ ಟೊಮೇಟೊ ಕ್ಯಾಪ್ಪಿಕಂ, ಆಲೂಗಡ್ಡೆ ಹೂ ಬೆಳೆಗಳು ಸಮೃದ್ಧವಾಗಿ ಬೆಳೆದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ಇತ್ತೀಚೆಗೆ ಸುರಿಯುತ್ತಿರುವ ಕುಂಭದೋಣ ಮಳೆಗೆ ಸಂಪೂರ್ಣವಾಗಿ ಬೆಳೆ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ಸಾಲಕ್ಕೆ ಸಿಲುಕಿ ಸ್ವಾಭಿಮಾನದ ಬದುಕಿಗೆ ಅಂತ್ಯ ಹೇಳುವ ಪರಿಸ್ಥಿತಿಯಲ್ಲಿರುವ ರೈತರ ಸಮಸ್ಯೆಗೆ ಸ್ಪಂದಿಸಿ ಸರ್ಕಾರದ ಮೇಲೆ ಒತ್ತಡ ಹಾಕಿ ಸೂಕ್ತ ಪರಿಹಾರ ಕೊಡಿಸಬೇಕಾದ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಜೀವನಕ್ಕೆ ಹೊಂದಿಕೊಂಡು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿಲ್ಲದ ಉಸ್ತುವಾರಿ ಸಚಿವರು ಬಿಜೆಪಿ ಕಾರ್ಯಕ್ರಮಗಳಿಗೆ ಸೀಮಿತವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ವ್ಯವಸಾಯ ಮನೆ ಮಕ್ಕಳೆಲ್ಲಾ ಉಪವಾಸ ಸಾಯ ಎಂಬ ಗಾದೆಯಂತೆ ಬೆಲೆಯಿದ್ದರೆ ಬೆಳೆಯಿಲ್ಲ. ಬೆಳೆಯಿದ್ದರೆ ಬೆಲೆಯಿಲ್ಲದಂತಾಗಿದೆ ರೈತರ ಬದುಕು. ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿದ್ದರೂ ತೋಟದಲ್ಲಿ ಬೆಳೆಯಿಲ್ಲದೆ ಇರುವ ಬೆಳೆ ನೂರು ವರ್ಷಗಳು ಕಂಡುಕಾಣದ ರೋಗಗಳು ಮೂರು ವರ್ಷಗಳಿಂದ ರೈತರನ್ನು ನಿದ್ದೆಗೆಡಿಸುತ್ತಿದ್ದರೂ ಸಮಸ್ಯೆಗೆ ಪರಿಹಾರ ಕೊಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪ ಮಾಡಿದರು. ಅತಿವೃಷ್ಟಿ ಅನಾವೃಷ್ಟಿ ಪ್ರಕೃತಿ ವಿಕೋಪಗಳ ಜೊತೆಗೆ ಇತ್ತೀಚೆಗೆ ಸುರಿಯುತ್ತಿರುವ ಮುಂಗಾರು ಮಳೆ ಆರ್ಭಟಕ್ಕೆ ಜಿಲ್ಲಾದ್ಯಂತ ಸಾವಿರಾರು ಹೆಕ್ಟೇರ್ ಬೆಳೆ ನಾಶವಾಗಿ ರೈತರು ಖಾಸಗಿ ಸಾಲಕ್ಕೆ ಸಿಲುಕಿದ್ದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸದೆ ನಾಪತ್ತೆಯಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.

ಈ ಕೂಡಲೇ ಸರ್ಕಾರ ಜಿಲ್ಲೆಯ ರೈತರ ಬೆಳೆನಷ್ಟದ ಅಂಕಿಅಂಶಗಳ ಮೂಲಕ ವರದಿ ತರಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ನಷ್ಟವಾಗಿರುವ ರೈತರ ತೋಟಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿ ಪ್ರತಿ ಎಕರೆಗೆ 5 ಲಕ್ಷ ಪರಿಹಾ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಉಪನಿರ್ದೇಶಕರಾದ ಗಾಯಿತ್ರಿ ಅವರು, ಜಿಲ್ಲಾದ್ಯಂತ ಸಾವಿರಾರು ಹೆಕ್ಟೇರ್‌ ಬೆಳೆ ನಾಶವಾಗಿದೆ. ಸಂಪೂರ್ಣ ವರದಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ , ಮಂಗಸಂದ್ರ ತಿಮ್ಮಣ್ಣ ಮಂಗಸಂದ್ರ ನಾಗೇಶ್, ಕುವಣ್ಣ, ಅಶ್ವತ್ಥಪ, ವೆಂಕಟೇಶಪ್ಪ, ಮೂರಂಡಹಳ್ಳಿ ಶಿವಾರೆಡ್ಡಿ, ಚಂದ್ರಪ್ಪ ಮುಂತಾದವರಿದ್ದರು.