ಕೋಲಾರ: ಸಾರ್ವಜನಿಕ ಗಣೇಶೋತ್ಸವಕ್ಕೆ ನಗರಸಭೆ ಪೂರ್ವಾನುಮತಿ, ಕೋವಿಡ್ ನಿಯಮ ಪಾಲನೆ ಕಡ್ಡಾಯ- ಕೆ.ಎಂ.ಜಯರಾಮರೆಡ್ಡಿ

0
547

ಸನ್ಮಾರ್ಗ ವಾರ್ತೆ

ಕೋಲಾರ,ಆ.19: ಸಾರ್ವಜನಿಕ ಗಣೇಶೋತ್ಸವಕ್ಕೆ ನಗರಸಭೆ ಪೂರ್ವಾನುಮತಿ ಪಡೆದಿರಬೇಕು ಮತ್ತು ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ನಗರದ 8 ಮತ್ತು 9ನೇ ವಾರ್ಡಿನ ನಾಗರೀಕರಿಗೆ ನೋಡಲ್ ಅಧಿಕಾರಿಗಳಾದ ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ಹಾಗೂ ಕೆ.ಎನ್.ಮಂಜುನಾಥ್ ಅರಿವು ಮೂಡಿಸಿದರು.

ಗಣೇಶ ಚತುರ್ಥಿ ಹಿನ್ನಲೆಯಲ್ಲಿ ನಗರದ 8 ಮತ್ತು 9ನೇ ವಾರ್ಡಿನ ವಿವಿಧೆಡೆ ಸಂಚಾರ ನಡೆಸಿ ಕೋವಿಡ್ ಮಾರ್ಗಸೂಚಿ ಕುರಿತು ಅರಿವು ಮೂಡಿಸಿದ ಡಿಡಿಪಿಐ ಜಯರಾಂರೆಡ್ಡಿ, ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಬೇಕಾದಲ್ಲಿ ಇರುವ ನಿಯಮಗಳ ಕುರಿತು ಅರಿವು ಮೂಡಿಸಿದರು.

ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣಪತಿ ಪ್ರತಿಷ್ಟಾಪಿಸಬೇಕಾದಲ್ಲಿ ನಗರಸಭೆಯಿಂದ ಪೂರ್ವಾನುಮತಿ ಕಡ್ಡಾಯ, ಮತ್ತು ಕಾರ್ಯಕ್ರಮದಲ್ಲಿ 8 ರಿಂದ 9 ಮಂದಿಗೆ ಮಾತ್ರವೇ ಪ್ರವೇಶ ಇರಬೇಕು ಮತ್ತು ಸಾಮಾಜಿಕ ಅಂತರ ಪಾಲಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಕೋವಿಡ್-19ರ ನಿಯಮಾವಳಿಯಂತೆ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು, ಗಣಪತಿ ಪ್ರತಿಷ್ಟಾಪಿಸಿರುವ ಜಾಗದಲ್ಲಿ ಬರುವ ಸ್ಯಾನಿಟೈಸರ್ ಇಟ್ಟು ಬರುವ ಭಕ್ತಾಧಿಗಳಿಗೆ ಹಾಕಿ ಸ್ವಚ್ಚತೆ ಕಾಪಾಡಬೇಕು ಎಂದು ತಿಳಿಸಿದರು.

ಗಣೇಶ ಮೂರ್ತಿಯನ್ನು ತರುವಾಗ ಮತ್ತು ವಿಸರ್ಜನೆ ಮಾಡುವಾಗ ಯಾವುದೇ ಮೆರವಣಿಗೆ ಅಥವಾ ಉತ್ಸವವನ್ನು ಮಾಡುವಂತಿಲ್ಲ, ಪ್ರತಿ ಹಂತದಲ್ಲೂ ಕೋವಿಡ್ ನಿಯಮ ಪಾಲಿಸಿ ರೋಗನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಮಾರ್ಗಸೂಚಿ ನೀಡಿದೆ, ಗಣಪತಿ ಮೂರ್ತಿ 4 ಅಡಿಗಳಿಗಿಂತ ಎತ್ತರ ಇರಬಾರದು ಎಂದ ಅವರು, ಪಿಒಪಿ ಮತ್ತಿತರ ಪರಿಸರಕ್ಕೆ ಮಾರಕವಾದ ಮೂರ್ತಿಗಳನ್ನು ಮಾರುವಂತೆಯೂ ಇಲ್ಲ, ಪ್ರತಿಷ್ಟಾಪಿಸುವಂತೆಯೂ ಇಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಪಾವನ ಜನಾರ್ಧನ್, ನಗರಸಭೆ ಸಿಬ್ಬಂದಿ ಜಗದೀಶ್, ಪುನೀತ್ ಮತ್ತಿತರರಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.