ಕೋಝಿಕ್ಕೋಡ್ ನಿಫಾ ವೈರಾಣು ದೃಢ; ಜ್ವರದಿಂದ ಮೃತಪಟ್ಟಿರುವ ಇಬ್ಬರಿಗೂ ನಿಫಾ

0
346

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಸೆ. 12:  ಜಿಲ್ಲೆಯಲ್ಲಿ ಜ್ವರದಿಂದ ಬಳಲಿ ಮೃತ ಪಟ್ಟಿದ್ದ ಇಬ್ಬರಿಗೂ ನಿಫಾ ವೈರಾಣು ತಗಲಿತ್ತು ಎಂದು ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪುಣೆಯ ವೈರಾಲಜಿ ಲ್ಯಾಬಿನಲ್ಲಿ ಸ್ಯಾಂಪಲ್‍ಗಳನ್ನು ಪರೀಕ್ಷೆ ನಡೆಸಲಾಗಿತ್ತು. ಇಬ್ಬರ ಸ್ಯಾಂಪಲ್‍ಗಳು ಪಾಸಿಟಿವ್ ಆಗಿದೆ. ರೋಗ ಪ್ರತಿರೋಧಕ ಚಟುವಟಿಕೆ ಆರಂಭಿಸುವುದಾಗಿ ರಾಜ್ಯದ ಆರೋಗ್ಯ ಸಚಿವೆ ತಿಳಿಸಿದರು.

ನಿಫಾ ಪ್ರತಿರೋಧಕ್ಕಾಗಿ ಕೇಂದ್ರದ ತಂಡ ರಾಜ್ಯಕ್ಕೆ ಬರಲಿದೆ. ಶಂಕಿತ ನಾಲ್ವರ ಸ್ಯಾಂಪಲ್ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಕೇಂದ್ರ ಸಚಿವ ಮನ್ಸೂಕ್ ಮಾಂಡ್ಯ ತಿಳಿಸಿದರು. ನಿಫ ಪ್ರತಿರೋಧ ಕಾರ್ಯದಲ್ಲಿ ರಾಜ್ಯ ಸರಕಾರ ತೊಡಗಿದ್ದು ಮೃತಪಟ್ಟಿರುವವರ ಸಂಪರ್ಕದಲ್ಲಿದ್ದವರ ಮೇಲೆ ನಿಗಾ ಇರಿಸಲಾಗಿದೆ. ಎಪ್ಪತ್ತೈದು ಮಂದಿಯ ಸಂಪರ್ಕ ಪಟ್ಟಿಯನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.

ಪರಿಸ್ಥಿತಿಯ ಅವಲೋಕನ ನಡೆಸಲಾಗುತ್ತಿದ್ದು ನೀಫಾ ವಿರುದ್ಧ ಚಟುವಟಿಕೆಗಳನ್ನು ಏಕೀಕರಿಸಲು ಕೋಝಿಕ್ಕೋಡ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ಸಭೆ ಸೇರಲಾಗಿದೆ.

ಮೃತರ ಸಂಬಂಧಿಕರಾದ ನಾಲ್ವರಿಗೆ ಈ ಜ್ವರವಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ವೆಂಟಿಲೇಟರಿನಲ್ಲಿರುವ ಒಂಬತ್ತು ವರ್ಷದ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹತ್ತು ತಿಂಗಳ ಮಗುವಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಯಾರ ಆರೋಗ್ಯವೂ ಅಷ್ಟು ಗಂಭೀರ ಸ್ಥಿತಿಯಲ್ಲಿಲ್ಲ.

ಆಗಸ್ಟ್ 30, ಸೆಪ್ಟಂಬರ್ 11ಕ್ಕೆ ಇಬ್ಬರಿಗೆ ಅಸಹಜ ರೀತಿಯಲ್ಲಿ ಜ್ವರ ಬಂದಿತ್ತು. ಅವರು ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೊದಲು ಮೃತಪಟ್ಟ ಸಂಬಂಧಿಕ ಕೂಡ ಜ್ವರ ಬಂದುದರಿಂದ ನಿಫಾ ಇರಬಹುದೇ ಎಂಬ ಸಂದೇಹ ಸೃಷ್ಟಿಯಾಗಿತ್ತು ನಂತರ ಸ್ಯಾಂಪಲ್‍ಗಳನ್ನು ಪುಣೆಯ ಲ್ಯಾಬ್‍ಗೆ ಕಳುಹಿಸಲಾಗಿತ್ತು.