ಜಾಸ್ಮೀನ್, ಸುಹೈಲ್ ಕಂದಕ್, ಎಂ.ಆರ್.ಪಿ.ಎಲ್. ಮತ್ತು ಆಶಾವಾದ

0
955

ಪ್ರತಿಭಟನೆ: ಏ.ಕೆ. ಕುಕ್ಕಿಲ

1. ಜಾಸ್ಮೀನ್
2. ಸುಹೈಲ್ ಕಂದಕ್
3. ಎಂ.ಆರ್.ಪಿ.ಎಲ್.

ಈ ಮೂರರ ಪೈಕಿ ಮೊದಲೆರಡನ್ನು ಕೈಬಿಟ್ಟು ಮೂರನೆಯದನ್ನು ಮೊದಲು ಎತ್ತಿಕೊಳ್ಳೋಣ.
ಇವು ಮೂರೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ್ದಾದರೂ ಈ ಜಿಲ್ಲಾ ವ್ಯಾಪ್ತಿಯನ್ನು ಮೀರಿ ರಾಜ್ಯಮಟ್ಟದಲ್ಲಿ ಗಮನ ಸೆಳೆಯುವುದಕ್ಕೆ ಇವಕ್ಕೆ ಸಾಧ್ಯವಾಗಿದೆ ಎಂಬುದು ಗಮನಾರ್ಹ. ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಕೋಮುಸೂಕ್ಷ್ಮ ಎಂಬ ಕಿರೀಟವಿದೆ. ಈ ಕಿರೀಟ ಸುಖಾಸುಮ್ಮನೆ ಬಂದಿಲ್ಲ. ಮುಸ್ಲಿಮ್ ಹುಡುಗ ಮತ್ತು ಹಿಂದೂ ಹುಡುಗಿ ಪರಸ್ಪರ ಮಾತನಾಡುವುದನ್ನು, ಬಸ್ಸಿನ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸುವುದನ್ನು ಮತ್ತು ಒಂದೇ ಕಡೆ ಕೂತು ಐಸ್‍ಕ್ರೀಮ್ ಮೆಲ್ಲುವುದನ್ನು ಹರಾಮಾಗಿಸಿಕೊಂಡ ಜಿಲ್ಲೆ ಇದು. ಈ ಹರಾಮನ್ನು ಗಣನೆಗೆ ತೆಗೆದುಕೊಳ್ಳದ ಯುವಕ-ಯುವತಿಯರ ಮೇಲೆ ಹಲವು ಬಾರಿ ಹಲ್ಲೆಗಳಾಗಿವೆ. ಕೊರೋನಾ ಎರಡನೇ ಅಲೆಗಿಂತ ವಾರಗಳ ಮೊದಲು ಇಂಥ ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯನ್ನು ಮಂಗಳೂರು ನಗರದ ಹೃದಯ ಭಾಗದಲ್ಲಿ ರಾತ್ರಿವೇಳೆ ಬಸ್ಸಿನಿಂದ ಇಳಿಸಿ ಯುವಕನಿಗೆ ಹಲ್ಲೆ ನಡೆಸಲಾದ ಘಟನೆ ನಡೆದಿದೆ. ಬಸ್ಸು ಬೆಂಗಳೂರಿಗೆ ಹೊರಟಿತ್ತು. ಹಾಗಂತ,

ಇಂಥ ಯುವಕ-ಯುವತಿಯರ ಕುರಿತು ಈ ಥಳಿಸುವ ತಂಡಕ್ಕೆ ಯಾರು ಮಾಹಿತಿ ಕೊಡುತ್ತಾರೆ ಎಂಬ ಬಗ್ಗೆ ಜಿಲ್ಲೆಯಲ್ಲಿ ಯಾರಲ್ಲೂ ಕುತೂಹಲವೇ ಇಲ್ಲ. ನಿಜವಾಗಿ,
ಅನ್ವೇಷಣೆಗೆ ಒಳಗಾಗಬೇಕಾದ ಸಂಗತಿ ಇದು. ನಾಗರಿಕರು ಈ ಬಗ್ಗೆ ಪ್ರಶ್ನೆಗಳನ್ನೆತ್ತಬೇಕಿತ್ತು ಮತ್ತು ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಯಾರನ್ನೇ ಆಗಲಿ ಥಳಿಸು ವುದು ಕಾನೂನುಬಾಹಿರ. ಜನರು ತಂಡ ಕಟ್ಟಿಕೊಂಡು ಅಂಥ ಕೃತ್ಯ ನಡೆಸುವುದಕ್ಕೆ ಕಾನೂನು ಪ್ರಕಾರ ಅನುಮತಿ ಇಲ್ಲ. ಆದ್ದರಿಂದ ಈ ತಂಡಕ್ಕೆ ಮಾಹಿತಿ ಒದಗಿಸುವುದು ಕೂಡಾ ಕಾನೂನುಬಾಹಿರವಾಗುತ್ತದೆ ಮತ್ತು ಹಾಗೇನಾದರೂ ಮಾಡಿ ದರೆ ಅವರೂ ಅಪರಾಧ ಕೃತ್ಯದಲ್ಲಿ ಭಾಗಿಯಾದಂತಾಗುತ್ತದೆ. ವಿಪರ್ಯಾಸ ಏನೆಂದರೆ, ಈ ಥಳಿಸುವ ಗುಂಪಿನ ಕುರಿತು ಮಾಧ್ಯಮಗಳಲ್ಲಿ ಚರ್ಚೆಯಾಗುವ ವೇಳೆ ಈ ಮಾಹಿತಿದಾರರು ಬಹುತೇಕ ಈ ಚರ್ಚಾ ವ್ಯಾಪ್ತಿಯಿಂದ ಹೊರಗಡೆಯೇ ಇರುತ್ತಾರೆ. ಇದುವೇ ಈ ಮಾಹಿತಿದಾರರ ಮನೋಬಲವನ್ನು ವೃದ್ಧಿಸುತ್ತಿರುತ್ತದೆ. ಅಷ್ಟಕ್ಕೂ,
ಮನುಷ್ಯರನ್ನು ಹೀಗೆ ಅನ್ಯಗೊಳಿಸುತ್ತಾ ಥಳಿಸುವ ಪ್ರಕರಣಗಳು ದನಸಾಗಾಟದ ಹೆಸರಲ್ಲೂ ಜಿಲ್ಲೆಯಲ್ಲಿ ನಡೆಯುತ್ತಿವೆ. ಕೆಲವೊಮ್ಮೆ ಇವು ತಾರಕ ರೂಪವನ್ನು ಪಡೆದು ಕೋಮು ಹಿಂಸಾಚಾರ ಸ್ವರೂಪವನ್ನು ಒಂದಕ್ಕಿಂತ ಹೆಚ್ಚು ಬಾರಿ ಪಡೆದದ್ದೂ ಇದೆ. ಯುವಕರು ಇಂಥ ಹಿಂಸಾಚಾರದಲ್ಲಿ ಭಾಗಿಯಾಗಿ ಜೈಲು ಸೇರುವುದು ಮತ್ತು ಕೇಸು-ಖಟ್ಲೆ ಎಂದು ಕೋರ್ಟು ಮೆಟ್ಟಲು ಹತ್ತಿಳಿಯುತ್ತಾ ಆಯುಷ್ಯ ಕಳೆಯುತ್ತಿರುವುದೂ ನಡೆಯುತ್ತಿದೆ. ಈ ಬಗ್ಗೆ ಅನೇಕರು ದಶಕಗಳಿಂದ ನಾಗರಿಕ ಸಮೂಹವನ್ನು ಎಚ್ಚರಿಸುತ್ತಲೂ ಬಂದಿದ್ದಾರೆ. ಯಾರು ಹೀಗೆ ಮನುಷ್ಯರನ್ನು ಧರ್ಮದ ಹೆಸರಲ್ಲಿ ಅನ್ಯಗೊಳಿಸಲು ಪ್ರಚೋದಿಸುತ್ತಿದ್ದರೋ ಅವರ ಮಕ್ಕಳು ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲಿಯೋ ಹೊರ ಜಿಲ್ಲೆಗಳಲ್ಲೋ ಉತ್ತಮ ಪಗಾರದ ಉದ್ಯೋಗದೊಂದಿಗೆ ಹಾಯಾಗಿದ್ದಾರೆ. ಆದರೆ ಇತ್ತ ಬಡ ಕುಟುಂಬದ ಯುವಕರು ಅತ್ತ ವಿದ್ಯಾಭ್ಯಾಸವೂ ಇಲ್ಲದೆ, ಇತ್ತ ಭವಿಷ್ಯವನ್ನೂ ಕೊಂದುಕೊಂಡು ಕುರುಡಾಗಿ ಬದುಕುತ್ತಿದ್ದಾರೆ ಎಂಬಂತಹ ಎಚ್ಚರಿಕೆಯ ಮಾತುಗಳನ್ನು ಆಡುತ್ತಲೂ ಇದ್ದಾರೆ. ಇಂಥ ಬುದ್ಧಿ ಮಾತುಗಳನ್ನು ಈವರೆಗೆ ಅಪಹಾಸ್ಯ ಮಾಡುತ್ತಲೇ ಬಂದಿರುವ ಈ ಗುಂಪನ್ನು ಮೊದಲ ಬಾರಿಗೆ ಎಂ.ಆರ್.ಪಿ.ಎಲ್. ತುಸು ಮೃದುಗೊಳಿಸಿದಂತಿದೆ. ಮೊದಲ ಬಾರಿ ಈ ಗುಂಪನ್ನು ಮತ್ತು ಇವರಂತೆ ಆಲೋಚಿಸುತ್ತಿರು ವವರನ್ನು ಆತ್ಮಾವಲೋಕನಕ್ಕೆ ತಳ್ಳಿದಂತಿದೆ. ಆದ್ದರಿಂದಲೇ, ಎಂ.ಆರ್.ಪಿ.ಎಲ್. ಉದ್ಯೋಗ ನೇಮಕಾತಿಯ ವಿಷಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ.


233 ಹುದ್ದೆಗಳ ನೇಮಕಾತಿಗಾಗಿ ಮಂಗಳೂರು ರಿಫೈನರಿ ಆಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (MRPL ) 2019 ಸೆಪ್ಟೆಂಬರ್‍ನಲ್ಲಿ ಅರ್ಜಿ ಆಹ್ವಾನಿಸಿತ್ತು. ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರು ಮತ್ತು ಕನ್ನಡಿಗರಿಗೆ ಈ ಸಂಸ್ಥೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪ ಈ ಮೊದಲೇ ಇತ್ತು. ಈ ಸಂಸ್ಥೆಗಾಗಿ ಸ್ಥಳೀಯರು ಬಹುಬೆಲೆಯ ಫಲವತ್ತಾದ ಭೂಮಿಯನ್ನು ನೀಡಿದ್ದರು. ಭೂಮಿಯ ಜೊತೆಗೆ ಇಲ್ಲಿನ ನೀರನ್ನೂ ವಿದ್ಯುತ್ತನ್ನೂ ಪಡೆದ ಈ ಸಂಸ್ಥೆಯು ಬದಲಿಯಾಗಿ ಇದೇ ಪರಿಸರವನ್ನು ತನ್ನ ತ್ಯಾಜ್ಯದಿಂದಾಗಿ ಕಲುಷಿತಗೊಳಿಸಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಬಗ್ಗೆ ಅಧಿಕೃತವಾಗಿ ಪರಿಶೀಲನೆಯೂ ನಡೆಯಿತು. ಇದರ ನಡುವೆಯೇ 2019 ಸೆಪ್ಟೆಂಬರ್‍ನಲ್ಲಿ ಅದು ವಿವಾದವೊಂದನ್ನು ಹುಟ್ಟುಹಾಕಿತು. 233 ಉದ್ಯೋಗ ನೇಮಕಾತಿಗಾಗಿ ಕರೆಯಲಾದ ಅರ್ಜಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಿಲ್ಲ ಮತ್ತು ಉದ್ಯೋಗ ನೇಮಕಾತಿಯ ಜಾಹೀರಾತನ್ನು ಹೊರರಾಜ್ಯಗಳಲ್ಲೂ ಪ್ರಕಟಿಸಿತು. ಈ ಬೆಳವಣಿಗೆಯನ್ನು ಪ್ರಶ್ನಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರು, ಈ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಸ್ಥಳೀಯರಿಗೆ ಆದ್ಯತೆ ನೀಡಿ ಹೊಸ ಪ್ರಕ್ರಿಯೆ ನಡೆಸುವಂತೆ ನೋಟೀಸ್ ಜಾರಿಗೊಳಿಸಿದ್ದರು. ಎಂ.ಆರ್.ಪಿ.ಎಲ್. ಇದಕ್ಕೆ ಒಪ್ಪಿಕೊಂಡು ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಿತ್ತು. ಆದರೆ,

ವರ್ಷದ ಬಳಿಕ ಈ ಕೊರೋನಾ ಕಾಲದಲ್ಲಿ ಈ ಹಿಂದಿನದ್ದೇ ರೀತಿಯಲ್ಲಿ ನೇಮಕಾತಿ ನಡೆಸಿದೆ ಮತ್ತು 10ಕ್ಕಿಂತ ಕಡಿಮೆ ಕನ್ನಡಿಗರ ಆಯ್ಕೆಯಾಗಿದೆ ಎಂದು ಹೇಳಲಾಗುತ್ತಿದೆ. 13 ಲೆಕ್ಕ ತೋರಿಸುತ್ತಿದ್ದರೂ ಈ ಹೆಸರುಗಳು ಕರ್ನಾಟಕದವು ಎಂಬ ಬಗ್ಗೆ ಇನ್ನಷ್ಟೇ ಖಚಿತಗೊಳ್ಳಬೇಕಿದೆ. ವಿಷಯ ಇದಲ್ಲ,
ಈ ಬಗ್ಗೆ ನಾಗರಿಕರ ಆಕ್ರೋಶವು ದಿನೇದಿನೇ ಬಲ ಪಡೆದು ಜಿಲ್ಲೆಯ ಸಂಸದರು ಮತ್ತು ಶಾಸಕರ ವಿರುದ್ಧ ಅದು ಕೂರುಂಬುಗಳಾದುವು. ಹೇಳಿ ಕೇಳಿ ಜಿಲ್ಲೆಯ ಸಂಸದರು ಮತ್ತು ಶಾಸಕರೆಲ್ಲ ಬಿಜೆಪಿಯವರು ಮತ್ತು ಎಂ.ಆರ್.ಪಿ.ಎಲ್. ಒಂದು ಸರಕಾರಿ ಸ್ವಾಮಿತ್ವದ ಸಂಸ್ಥೆ. ಶಾಸನ ಸಭೆಯಲ್ಲಿ ಕಾನೂನಿಗೆ ತಿದ್ದುಪಡಿ ತರದ ಹೊರತು ಯಾವುದೇ ಪತ್ರಿಕಾ ಹೇಳಿಕೆ, ಮಾತುಕತೆಗಳಿಂದ ಈಗ ಆಗಿರುವ ನೇಮಕಾತಿಯಲ್ಲಾಗಲೀ ಮುಂದೆ ಆಗಲಿರುವ ನೇಮಕಾತಿಯನ್ನಾಗಲಿ ತಡೆಹಿಡಿಯಲು ಸಾಧ್ಯವಿಲ್ಲ.

ಕುತೂಹಲದ ಸಂಗತಿ ಏನೆಂದರೆ, ಕಾಂಗ್ರೆಸ್, ಕಮ್ಯುನಿಸ್ಟ್ ಸಹಿತ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರು ಮತ್ತು ನಾಗರಿಕರು ಈ ವಿಷಯವನ್ನೆತ್ತಿಕೊಂಡು ಜನಪ್ರತಿನಿಧಿಗಳನ್ನು ನಿರಂತರ ಪ್ರಶ್ನಿಸತೊಡಗಿದರೂ ಈ ಜನ ಪ್ರತಿನಿಧಿಗಳನ್ನು ಸಮರ್ಥಿಸಲು ಅವರ ಬೆಂಬಲಿಗರೇ ಮುಂದೆ ಬರುತ್ತಿಲ್ಲ. ಈ ಹಿಂದೆ ಹೀಗಿರಲಿಲ್ಲ. ಇದು ಅನ್ಯಾಯ ಎಂಬುದು ಗೊತ್ತಿದ್ದರೂ ಅನ್ಯಾಯ ಮಾಡಿದವ ತಮ್ಮವ ಎಂಬ ನೀತಿಗೆ ಮಾರುಕಟ್ಟೆ ಇತ್ತು. ‘ಜೈಲಿಗೆ ಹೋಗುವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಡಿ, ಉದ್ಯೋಗಕ್ಕಾಗಿ ಹೋರಾಡಿ..’ ಎಂದು ಈ ಹಿಂದೆ ಪದೇ ಪದೇ ಹೇಳಲಾಗುತ್ತಿದ್ದರೂ ಅವರದನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಹಾಗಾಗಿಲ್ಲ. ಜಿಲ್ಲೆ ಪರಿವರ್ತನೆಯತ್ತ ಹೊರಳುತ್ತಿರುವಂತಿದೆ.

ಎಂ.ಆರ್.ಪಿ.ಎಲ್.ನಲ್ಲಿ ಜಿಲ್ಲೆಯ ವಿದ್ಯಾವಂತರಿಗೆ ಉದ್ಯೋಗ ಸಿಗದಿರುವುದಕ್ಕೆ ಜನಪ್ರತಿ ನಿಧಿಗಳ ಅಸಡ್ಡೆಯೇ ಕಾರಣ ಎಂಬ ಅಂಶಕ್ಕೆ ಯುವಕರು ಮಹತ್ವ ಕೊಡತೊಡಗಿದ್ದಾರೆ. ತಾವು ಈವರೆಗೆ ಬಲವಾಗಿ ಬೆಂಬಲಿಸುತ್ತಿದ್ದ ಜನಪ್ರತಿನಿಧಿಗಳ ವಿರುದ್ಧ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮೊದಲ ಬಾರಿ ಜನಪ್ರತಿನಿಧಿಗಳು ತಮ್ಮದೇ ಬೆಂಬಲಿಗರಿಗೆ ಮುಖಾಮುಖಿಯಾಗುವುದನ್ನು ತಪ್ಪಿಸಿಕೊಳ್ಳುತ್ತಾ ಸಾಗುತ್ತಿರುವ ವಾತಾವರಣ ಸೃಷ್ಟಿಯಾಗಿದೆ. ಹಾಗೆಯೇ,
ಇನ್ನೆರಡು ಪ್ರಕರಣಗಳನ್ನೂ ಇದರ ಜೊತೆಗಿಟ್ಟೇ ನೋಡಬೇಕು.

ಜಾಸ್ಮೀನ್ ಎಂಬ ಗರ್ಭಿಣಿ ಮಹಿಳೆಯನ್ನು ಮಂಗಳೂರಿನ ವೈದ್ಯರು ಒಂದು ತಂಡವಾಗಿ ಸತಾಯಿಸಿದರು ಎಂಬುದು ಒಂದು ಆರೋಪ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಘಟನೆ ನಡೆದಾಗ ಅದರಲ್ಲಿ ಭಾಗಿಯಾದವರ ಧರ್ಮ ನೋಡುವುದು ಮಾಮೂಲು ಮತ್ತು ಅದರ ಆಧಾರದಲ್ಲಿಯೇ ಹೋರಾಟದ ರೂಪರೇಷೆಗಳೂ ಸಿದ್ಧವಾಗುವುದಿದೆ. ಜಾಸ್ಮೀನ್‍ಗೆ ಸಂಬಂಧಿಸಿ ಪ್ರಿಯಾ ಬಲ್ಲಾಳ್ ಎಂಬ ವೈದ್ಯರಿಂದ ಹಿಡಿದು ಮಂಜುನಾಥ್ ವರೆಗೆ ಆರೋಪಿ ಸ್ಥಾನದಲ್ಲಿರುವ ವೈದ್ಯರೆಲ್ಲ ಜಾಸ್ಮೀನ್‍ರ ಧರ್ಮದವರಲ್ಲ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ಹೋರಾಟವು ಹಿಂದೂ-ಮುಸ್ಲಿಮ್ ಆಗಿ ಪರಿವರ್ತನೆಗೊಂಡಿಲ್ಲ. ವೈದ್ಯರು ಕೊಟ್ಟ ದೂರಿನಂತೆ ಜಾಸ್ಮೀನ್ ಕುಟುಂಬದ ಸದಸ್ಯರ ಬಂಧ ನವಾದಾಗಲೂ ಮತ್ತು ವೈದ್ಯರ ವಿರುದ್ಧ ಜಾಸ್ಮೀನ್ ದೂರು ಕೊಟ್ಟಾಗಲೂ ವೈದ್ಯರ ಬೆಂಬಲಕ್ಕೆ ಒಂದು ಧರ್ಮ ಮತ್ತು ಜಾಸ್ಮೀನ್‍ರ ಬೆಂಬಲಕ್ಕೆ ಇನ್ನೊಂದು ಧರ್ಮ ಎಂಬ ವಿಭಜನೆ ನಡೆಯಲಿಲ್ಲ. ಈ ಘಟನೆಯ ದಿನಗಳ ಬಳಿಕ ಇವೇ ವೈದ್ಯರ ದೂರಿನಂತೆ ಸುಹೈಲ್ ಕಂದಕ್ ಎಂಬ ಕೊರೋನಾ ವಾರಿಯರ್ ಬಂಧನ ವಾದಾಗಲೂ ಇದೇ ಒಗ್ಗಟ್ಟು ಕಾಣಿಸಿಕೊಂಡಿತು. ಸುಹೈಲ್ ಕಂದಕ್ ಯುವ ಕಾಂಗ್ರೆಸ್‍ನ ರಾಜ್ಯ ಮುಖಂಡರಾಗಿದ್ದೂ ಅವರ ಬಂಧನವನ್ನು ಪಕ್ಷಾತೀತವಾಗಿ ಹಿಂದೂ-ಮುಸ್ಲಿಮ್ ವಿಭಜನೆ ಯಿಲ್ಲದೇ ಖಂಡಿಸಲಾಯಿತು. ಇದು ಎಷ್ಟು ತೀವ್ರವಾಯಿತೆಂದರೆ, ಬಂಧನದ ಕೆಲವೇ ತಾಸುಗಳಲ್ಲಿ ಸಂಬಂಧಿತರು ಕೇಸನ್ನೇ ಹಿಂತೆಗೆದುಕೊಂಡರು. ಅಂದಹಾಗೆ,
ಈ ಹಿಂದಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಜಾಸ್ಮೀನ್ ಮತ್ತು ಸುಹೈಲ್ ಕಂದಕ್ ಪ್ರಕರಣವು ಧರ್ಮಾತೀತ ನೆಲೆಯಲ್ಲಿ ಚರ್ಚೆಗೊಳಗಾಗಿರುವುದನ್ನು ವಿಶೇಷ ಬೆಳವಣಿಗೆಯೆನ್ನ ಬೇಕು. ಮುಸ್ಲಿಮ್ ಮಹಿಳೆಯರು ಹಿಂದೂ ವೈದ್ಯರ ಮೇಲೆ ಆರೋಪ ಹೊರಿಸಿದ್ದರೆ ಎಂಬ ರೀತಿಯಲ್ಲಿ ರವಾನೆಯಾಗಬೇಕಿದ್ದ ಸುದ್ದಿ ಈ ಬಾರಿ ಹಾಗಾಗಿಲ್ಲ ಎಂಬುದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿರಬಹುದು.

1. ಈ ಕೊರೋನಾ ಕಾಲದಲ್ಲಿ ಧರ್ಮ ಬೇಧವಿಲ್ಲದೇ ಭಾರೀ ಸಂಖ್ಯೆಯಲ್ಲಿ ಸೇವಾ ನಿರತರಾಗಿರುವ ಮುಸ್ಲಿಮ್ ತಂಡಗಳು.
2. ಆಸ್ಪತ್ರೆಗಳು ನಾಗರಿಕರನ್ನು ದೋಚುತ್ತಿವೆ ಮತ್ತು ಈ ದೋಚುವಿಕೆಯಲ್ಲಿ ಹಿಂದೂ-ಮುಸ್ಲಿಮ್ ಬೇಧವೇನೂ ಇಲ್ಲ ಎಂಬ ಭಾವ.
3. ಎಂ.ಆರ್.ಪಿ.ಎಲ್.ನ ತಾಜಾ ಬೆಳವಣಿಗೆ.
ಹಾಗಂತ, ಈ ಬೆಳವಣಿಗೆಯ ಆಯುಷ್ಯ ಎಷ್ಟು ದೀರ್ಘ ಎಂಬ ಬಗ್ಗೆ ಈಗಾಗಲೇ ಖಣಿ ಹೇಳಲಾಗದು. ರಾಜಕಾರಣಿಗಳು ಚತುರರು. ಎಂ.ಆರ್.ಪಿ.ಎಲ್.ನ ವಿಷಯದಲ್ಲಿ ತಮ್ಮ ವಿರುದ್ಧವೇ ಮುನಿಸಿಕೊಂಡಿರುವ ಬೆಂಬಲಿಗರನ್ನು ಮತ್ತೆ ಹಳಿಗೆ ತರುವುದು ಅವರಿಗೆ ಕಷ್ಟವೇ ನೂ ಅಲ್ಲ. ಕತೆ ಕಟ್ಟುವುದರಲ್ಲಿ ಅವರು ನಿಷ್ಣಾತರು. ಯಾವುದೇ ಸಹಜ ಬೆಳವಣಿಗೆಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ, ಅದಕ್ಕೆ ನಾಟಕೀಯ ತಿರುವೊಂದನ್ನು ನೀಡಿ, ಕಾನ್ಸಿಫರಸಿ ಥಿಯರಿಯನ್ನು ಹುಟ್ಟು ಹಾಕಿ ಮತ್ತೆ ವಾತಾ ವರಣವನ್ನು ತಮಗೆ ಬೇಕಾದಂತೆ ಅವರು ಬದಲಿಸಿಬಿಡಬಲ್ಲರು. ಹಾಗಿದ್ದರೂ ಈ ಮೂರೂ ಘಟನೆಗಳಲ್ಲಿ ಆಶಾಭಾವದ ಕಿರಣಗಳಿವೆ. ಮೊದಲ ಬಾರಿ ಜಿಲ್ಲೆಯ ಯುವಕರು ರಾಜಕೀಯ ನಿಷ್ಠೆಗಿಂತ ಉದ್ಯೋಗ ನಿಷ್ಠೆಗೆ ಆದ್ಯತೆ ನೀಡಿದ್ದಾರೆ. ಹಿಂದೂ-ಮುಸ್ಲಿಮ್ ಎಂಬ ಕನ್ನಡಿಯನ್ನು ಬದಿಗಿಟ್ಟು ಸಮಸ್ಯೆಯನ್ನು ಸಮಸ್ಯೆಯಾಗಿ ನೋಡುವ ವಿವೇಕವನ್ನು ಪ್ರದರ್ಶಿಸಿದ್ದಾರೆ. ಈ ವಿವೇಕ ಚಿರಾಯುವಾಗಲಿ.