ಹಬ್ಬಾಚರಣೆ: ಧರ್ಮ ಮತ್ತು ನಾವು

0
14

✍️ ಏ.ಕೆ. ಕುಕ್ಕಿಲ

ಈದುಲ್ ಫಿತ್ರ್
ಈದುಲ್ ಅಝ್ಹಾ

ಈ ಎರಡು ಹಬ್ಬಗಳ ಹೊರತಾಗಿ ಮುಸ್ಲಿಮರಿಗೆ ಮೂರನೆಯದೊಂದು ಅಧಿಕೃತ ಹಬ್ಬವಿಲ್ಲ. ಈ ಎರಡೂ ಹಬ್ಬಗಳ ವಿಶೇಷತೆ ಏನೆಂದರೆ, ದೀಪಾವಳಿಯಂತೆ, ಗಣೇಶ ಚತುರ್ಥಿಯಂತೆ ಅಥವಾ ಕೃಷ್ಣಾಷ್ಟಮಿಯಂತೆ ನಿರ್ದಿಷ್ಟ ತಿಂಗಳಲ್ಲಿ ಆಚರಿಸಲ್ಪಡುವುದಿಲ್ಲ. ದೀಪಾವಳಿ ಸಾಮಾನ್ಯವಾಗಿ ಅಕ್ಟೋಬರ್/ನವೆಂಬರ್ ತಿಂಗಳಲ್ಲಿ ಆಚರಿಸಲ್ಪಟ್ಟರೆ, ಕೃಷ್ಣ ಜನ್ಮಾಷ್ಟಮಿಯು ಆಗಸ್ಟ್/ಸೆಪ್ಟೆಂಬರ್‌ನಲ್ಲಿ ಆಚರಿಸಲ್ಪಡುತ್ತದೆ. ಹಾಗಂತ, ಈ ಹಬ್ಬಗಳೇನೂ ಸೌರಮಾನ ಕ್ಯಾಲೆಂಡರನ್ನೇ ಆಧರಿಸಿಕೊಂಡು ಆಚರಿಸಲ್ಪಡುತ್ತಿರುವುದಲ್ಲ. ಎರಡೂ ಧರ್ಮಗಳ ಹಬ್ಬಗಳು ಚಾಂದ್ರಮಾನ ಕ್ಯಾಲೆಂಡರನ್ನೇ ನೆಚ್ಚಿಕೊಂಡಿದ್ದರೂ ಮುಸ್ಲಿಮರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದ್ದರಿಂದ ಈ ಹಬ್ಬಗಳ ಆಚರಣೆಯು ಬೇರೆ ಬೇರೆ ತಿಂಗಳಲ್ಲಿ ನಡೆಯುತ್ತದೆ. ಅಂದಹಾಗೆ,

ಬಾಲ ಚಂದ್ರನ ದರ್ಶನವಾದ ಬಳಿಕವೇ ಈದ್ ಘೋಷಣೆಯಾಗುತ್ತದೆ. ರಮಝಾನ್ ತಿಂಗಳ ಉಪವಾಸ ವ್ರತ ಆಚರಣೆಗೂ ಇಷ್ಟೇ ಕಠಿಣ ನಿಯಮ ಪಾಲನೆ ಮಾಡಲಾಗುತ್ತದೆ. ಬಾಲಚಂದ್ರ ಕಂಡ ಬಳಿಕ ಉಪವಾಸ ವ್ರತದ ಘೋಷಣೆಯಾಗುತ್ತದೆ. ಇದರಾಚೆಗಿನ ಇನ್ನೊಂದು ವಿಶೇಷ ಏನೆಂದರೆ,

ಈ ಎರಡೂ ಈದ್‌ಗಳು ಬಾಹ್ಯ ಆಡಂಬರಕ್ಕಿಂತ ಆಂತರಿಕ ಸಂಸ್ಕರಣೆಗೆ ಒತ್ತು ನೀಡುತ್ತದೆ. ಈದುಲ್ ಫಿತ್ರ್ ಅಂದರೆ, ದಾನದ ಹಬ್ಬ ಎಂದು ಅರ್ಥ. ದಾನವೇ ಇಲ್ಲಿ ಕೇಂದ್ರ ಬಿಂದು. ದಾನ ಯಾರಿಗೆ ಅಂದರೆ, ಬಡವರು ಮತ್ತು ದುರ್ಬಲರಿಗೆ. ಒಂದು ತಿಂಗಳು ಉಪವಾಸ ಆಚರಿಸಿದ ಬಳಿಕ ಆಚರಿಸಲಾಗುವ ಈ ಹಬ್ಬದ ದಿನದಂದು ಮುಸ್ಲಿಮರು ಕಡ್ಡಾಯವಾಗಿ ಮಾಡಬೇಕಾದ ದಾನವನ್ನು ಹೊರತುಪಡಿಸಿದರೆ, ಉಳಿದಂತೆ ನಮಾಝ್, ಹೊಸ ಬಟ್ಟೆ ಧರಿಸುವುದು, ಮಸೀದಿಯಲ್ಲಿ ಸೇರುವುದು ಇತ್ಯಾದಿಗಳಾವುವೂ ಕಡ್ಡಾಯ ಅಲ್ಲ. ಮೂರು ಹೊತ್ತಿನ ಊಟಕ್ಕೂ ಮೀರಿ ಆಹಾರ ಧಾನ್ಯಗಳನ್ನು ಹೊಂದಿದವರು ಅಥವಾ ಅಷ್ಟು ಸಬಲರು ಮನೆಯ ಪ್ರತಿ ವ್ಯಕ್ತಿಯ ಮೇಲೆ ಸುಮಾರು ಮೂರು ಕಿಲೋ ಆಹಾರ ಧಾನ್ಯಗಳನ್ನು ಲೆಕ್ಕ ಹಾಕಿ ಬಡವರಲ್ಲಿ ಹಂಚುವ ಈ ಹಬ್ಬವು ಜನಸ್ನೇಹಿ ಮತ್ತು ದಾನಸ್ನೇಹಿ ಎನಿಸಿಕೊಂಡಿದೆ. ಮಸೀದಿಯಲ್ಲಿ ಸಾಮೂಹಿಕವಾಗಿ ಹಬ್ಬದ ನಮಾಝ್ ಮಾಡಿದ ಬಳಿಕ ಎಲ್ಲರೂ ಪರಸ್ಪರ ಶುಭಾಶಯ ಕೋರುವುದು ಸಂಪ್ರದಾಯ. ಹೊಸ ಬಟ್ಟೆ ಧರಿಸುವುದು ಅಥವಾ ಇರುವುದರಲ್ಲೇ ಉತ್ತಮ ಬಟ್ಟೆ ಧರಿಸುವುದು ಮತ್ತು ಕುಟುಂಬದ ಮನೆಗಳಿಗೆ ಭೇಟಿ ಕೊಟ್ಟು ಸಂಬಂಧ ವೃದ್ಧಿಸುವುದು ಈ ಹಬ್ಬದ ಪ್ರಮುಖ ಬೇಡಿಕೆಯಾಗಿದೆ. ಹೆಚ್ಚಾಗಿ ಆ ಮನೆಯಲ್ಲಿ ಒಂದೋ ಭೋಜನ ಅಥವಾ ಏನನ್ನಾದರೂ ತಿಂದು ಕುಶಲ ವಿಚಾರಿಸಿ ಖುಷಿಯನ್ನು ಹಂಚಿಕೊಳ್ಳುವುದು ಈ ಹಬ್ಬಾಚರಣೆಯ ಪ್ರಮುಖ ಆಕರ್ಷಣೆ.

ಈದುಲ್ ಅಝ್ಹಾ ಅಥವಾ ಬಲಿದಾನದ ಹಬ್ಬ ಕೂಡ ಇದಕ್ಕಿಂತ ಹೊರತಲ್ಲ.

ಈದುಲ್ ಫಿತ್ರ್ ಅಥವಾ ಉಪವಾಸ ವ್ರತಾಚರಣೆ ಕೊನೆಗೊಂಡ ಬಳಿಕ ಆಚರಿಸುವ ಹಬ್ಬವು ಇಸ್ಲಾಮಿಕ್ ಕ್ಯಾಲೆಂಡರ್‌ನ 9ನೇ ತಿಂಗಳಲ್ಲಿ ಆಚರಿಸಲ್ಪಟ್ಟರೆ, ಬಲಿದಾನದ ಹಬ್ಬವನ್ನು 12ನೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದು ಕೂಡ ಬಾಹ್ಯಾಡಂಬರಗಳಿಗಿಂತ ಆಂತರಿಕ ಅವಲೋಕನಕ್ಕೆ ಹೆಚ್ಚು ಒತ್ತು ನೀಡುತ್ತದೆ. 12ನೇ ತಿಂಗಳಾದ ದುಲ್ ಹಜ್ಜ್‌ನ 10ನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ತಿಂಗಳ 9ನೇ ದಿನದಂದು ಜಾಗತಿಕ ಮುಸ್ಲಿಮರು ಉಪವಾಸ ಆಚರಿಸುತ್ತಾರೆ. ಆ ದಿನ ಸೌದಿ ಅರೇಬಿಯಾದ ಮಕ್ಕಾದಲ್ಲಿ ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸಿರುವ ಸುಮಾರು 35 ಲಕ್ಷ ಮುಸ್ಲಿಮರು ಹಜ್ಜ್‌ನ ಪ್ರಧಾನ ಕರ್ಮವನ್ನು ನಿರ್ವಹಿಸುತ್ತಾರೆ. ಮರುದಿನ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಪ್ರವಾದಿ ಇಬ್ರಾಹೀಮ್(ಅ) ಅವರ ನೆನಪಲ್ಲಿ ಪ್ರಾಣಿಬಲಿಯನ್ನು ನೀಡಲಾಗುತ್ತದೆ. ಈ ಪ್ರಾಣಿಬಲಿ ಎಂಬುದು ಭಾರತದಲ್ಲಿ ಸಹಜವಾಗಿ ಕಾಣುವ ರೀತಿಯ ಪ್ರಾಣಿಬಲಿಯಲ್ಲ. ಮಕ್ಕಾದ ಕಅಬಾಕ್ಕೆ ಅಥವಾ ಅಲ್ಲಿನ ಕಪ್ಪು ಕಲ್ಲಿಗೆ ಪ್ರಾಣಿಯನ್ನು ಬಲಿ ನೀಡಲಾಗುವುದಿಲ್ಲ. ಪ್ರಾಣಿಯನ್ನು ದೇವನ ನಾಮದೊಂದಿಗೆ ವಧಿಸಿ ಅದರ ಮಾಂಸವನ್ನು ಜನರಲ್ಲಿ ಹಂಚುವ ಪ್ರಕ್ರಿಯೆಯೇ ಈ ಪ್ರಾಣಿಬಲಿ. ಹೀಗೆ,

ಬಲಿ ನೀಡಲಾದ ಪ್ರಾಣಿಗಳ ಮಾಂಸವನ್ನು ಸೌದಿ ಅರೇಬಿಯಾವು ಪ್ರತಿವರ್ಷ ಆಫ್ರಿಕಾದ ಬಡರಾಷ್ಟ್ರಗಳ ಜನರಿಗೆ ಹಂಚಿಕೆ ಮಾಡುತ್ತದೆ. ಕೇವಲ ಸೌದಿ ಅರೇಬಿಯಾ ಮಾತ್ರವಲ್ಲ, ಶ್ರೀಮಂತ ಅರಬ್ ರಾಷ್ಟ್ರಗಳು ಪ್ರಾಣಿಬಲಿಯ ಮಾಂಸವನ್ನು ದುರ್ಬಲ ರಾಷ್ಟ್ರಗಳ ಜನರಿಗೆ ಹಂಚುವುದನ್ನು ರೂಢಿಯಾಗಿಸಿಕೊಂಡು ಬಂದಿದೆ. ಈ ಹಬ್ಬವೂ ಮಸೀದಿಯಲ್ಲಿ ಅಥವಾ ಈದ್‌ಗಾಹ್‌ನಲ್ಲಿ ಸಾಮೂಹಿಕ ನಮಾಝ್, ಈದ್ ಪ್ರವಚನ ಮತ್ತು ಪರಸ್ಪರ ಆಲಿಂಗನಗಳನ್ನು ಹೊಂದಿದ್ದು, ಕುಟುಂಬಿಕರ ಮನೆಗೆ ಭೇಟಿ ಕೊಟ್ಟು, ಆಹಾರ ಸೇವಿಸಿ ಸಂಬಂಧ ಬೆಳೆಸುವ ಕ್ರಿಯೆಯೊಂದಿಗೆ ಕೊನೆಗೊಳ್ಳುತ್ತದೆ. ಪ್ರಾಣಿಬಲಿ ಎಂಬುದು ಸರಕಾರದ ಅನುಮತಿಯೊಂದಿಗೆ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲಾ ವಧಾಗೃಹಗಳಲ್ಲೂ ನಡೆಯುತ್ತದೆ ಮತ್ತು ಅದರ ಮಾಂಸವನ್ನು ಬಡವರಲ್ಲಿ ಹಂಚುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ.

ಹಿಂದೂ ಹಬ್ಬಗಳಿಗೆ ಹೋಲಿಸಿದರೆ, ಇಸ್ಲಾಮಿಕ್ ಹಬ್ಬಗಳ ಆಚರಣೆ ಮತ್ತು ಅದರ ಹಿನ್ನೆಲೆಗಳು ತೀರಾ ಭಿನ್ನ. ದೀಪಾವಳಿಯ ಹಿಂದೆ ಶ್ರೀರಾಮನ ಕಥೆಯಿದೆ. ಅಯೋಧ್ಯೆಗೆ ಶ್ರೀರಾಮ ಮರಳಿ ಬರುವ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯು ಗಣೇಶನ ಜನ್ಮವನ್ನು ಆಚರಿಸುವ ಹಬ್ಬವಾಗಿದೆ. ಕೃಷ್ಣಾಷ್ಟಮಿಯಲ್ಲಿ ಕೃಷ್ಣನ ಜನ್ಮವನ್ನು ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ. ಸಾಮಾನ್ಯವಾಗಿ ದೊಡ್ಡಮಟ್ಟದಲ್ಲಿ ಸಾರ್ವಜನಿಕರು ಸೇರುವ ಸ್ವರೂಪದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯಲ್ಲಿ ಬೃಹತ್ ಗಣೇಶನ ಮೂರ್ತಿಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗುತ್ತದೆ ಮತ್ತು ಕೊನೆಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಮೂರ್ತಿಯ ಜಲಸಮಾಧಿಯೂ ನಡೆಯುತ್ತದೆ. ದೀಪಾವಳಿಯಲ್ಲಿ ರಸ್ತೆಗಳು ಮತ್ತು ಮನೆಗಳು ದೀಪಗಳಿಂದ ಅಲಂಕೃತಗೊಳ್ಳುತ್ತದೆ. ಪಟಾಕಿಗಳನ್ನು ಸಿಡಿಸಲಾಗುತ್ತದೆ. ಜನ್ಮಾಷ್ಟಮಿಯಲ್ಲಿ ರಾತ್ರಿಯಿಡೀ ಕೀರ್ತನೆ ಮತ್ತು ದಹಿ ಹಿಂಡಿ'ಯಂಥ ಸಾಮೂಹಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದಕ್ಕೆ ಹೋಲಿಸಿದರೆ, ಇಸ್ಲಾಮಿನ ಹಬ್ಬಗಳು ಆಹಾರ ಕೇಂದ್ರಿತ ಮತ್ತು ಕುಟುಂಬ ಕೇಂದ್ರಿತವಾಗಿ ಗುರುತಿಸಿಕೊಳ್ಳುತ್ತದೆ. ಇಸ್ಲಾಮ್ ವಿಗ್ರಹ ಕೇಂದ್ರಿತ ಧರ್ಮ ಅಲ್ಲದೇ ಇರುವುದರಿಂದ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಇರುವುದಿಲ್ಲ. ದೀಪಾಲಂಕಾರವಿಲ್ಲ. ಪಟಾಕಿಗಳಿಲ್ಲ. ಹಬ್ಬದ ಉದ್ದೇಶವೇ ಸ್ವಸಂಸ್ಕರಣೆಯಾಗಿರುವುದರಿಂದ ಮತ್ತು ಎರಡೂ ಹಬ್ಬಗಳು ದಾನ ಕೇಂದ್ರಿತ’ ಆಗಿರುವುದರಿಂದ ಮೈಕಾಸುರನ ಬಳಕೆಯೂ ಇರುವುದಿಲ್ಲ. ಇದರಿಂದಾಗಿ ಹಬ್ಬಾಚರಣೆಯು ಮನೆ ಮನೆಗೆ ಮಾತ್ರ ಸೀಮಿತಗೊಳ್ಳುತ್ತದೆ. ಈ ಎರಡೂ ಹಬ್ಬಗಳ ಆರಂಭವು ಬೆಳಿಗ್ಗೆ ಮಸೀದಿಯಲ್ಲಿ ಎಲ್ಲರೂ ಒಟ್ಟು ಸೇರುವಲ್ಲಿಂದ ಪ್ರಾರಂಭವಾಗುತ್ತದೆ. ನಮಾಝ್‌ನ ಬಳಿಕ ವಿದ್ವಾಂಸರು ಉಪನ್ಯಾಸ ನೀಡುತ್ತಾರೆ. ಬಹುತೇಕ ಉಪನ್ಯಾಸಗಳೆಲ್ಲ ಹಬ್ಬಾಚರಣೆಯ ಸುತ್ತಲೇ ಕೇಂದ್ರೀಕೃತಗೊಂಡಿರುತ್ತದೆ. ಹಬ್ಬವನ್ನು ಯಾಕೆ ಆಚರಿಸಬೇಕು ಮತ್ತು ಹೇಗೆ ಆಚರಿಸಬೇಕು ಎಂಬ ಕುರಿತಂತೆ ಮುಸ್ಲಿಮರಿಗೆ ಎಚ್ಚರಿಕೆಯನ್ನು ಮತ್ತು ತಿಳುವಳಿಕೆಯನ್ನು ನೀಡಲಾಗುತ್ತದೆ. ಕುರ್‌ಆನಿನ ವಚನಗಳು ಮತ್ತು ಪ್ರವಾದಿವರ್ಯರ(ಸ) ಆಚರಣೆಯ ವಿಧಾನವನ್ನು ಉಲ್ಲೇಖಿಸಿ ಮಾರ್ಗದರ್ಶನ ಮಾಡಲಾಗುತ್ತದೆ. ಪವಿತ್ರ ಕುರ್‌ಆನಿನಲ್ಲಿ, ತಿನ್ನಿರಿ, ಕುಡಿಯಿರಿ, ಆದರೆ ಅತಿಯಾಗಿ ವ್ಯಯ ಮಾಡಬೇಡಿ, ಅಲ್ಲಾಹನು ಅತಿಯಾಗಿ ಖರ್ಚು ಮಾಡುವವರನ್ನು ಪ್ರೀತಿಸುವುದಿಲ್ಲ' (7:31) ಎಂದಿರುವುದನ್ನು, ವ್ಯರ್ಥ ಮಾಡುವವರು ಸೈತಾನರ ಸಹೋದರರು’ (17:27) ಎಂದಿರುವುದನ್ನೂ ನೆನಪಿಸಲಾಗುತ್ತದೆ. ಪ್ರವಾದಿಯವರು(ಸ) ಮಾಲಿನ್ಯರಹಿತ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಹಬ್ಬ ಆಚರಿಸಿರುವುದನ್ನೂ ನೆನಪಿಸಲಾಗುತ್ತದೆ. ನೀವು ನದಿಯ ದಡದಲ್ಲಿದ್ದರೂ ನೀರು ಪೋಲು ಮಾಡಬೇಡಿ' ಎಂದು ಪ್ರವಾದಿ(ಸ) ಹೇಳಿರುವುದರ ಆಂತರ್ಯವನ್ನು ವಿವರಿಸಿ ಹೇಳಲಾಗುತ್ತದೆ. ಯುದ್ಧದಲ್ಲೂ ಮರಗಳನ್ನು ಕಡಿಯಬೇಡಿ, ಬೆಳೆಗಳನ್ನು ನಾಶ ಮಾಡಬೇಡಿ’ ಎಂದು ಪ್ರವಾದಿ ಹೇಳಿರುವುದನ್ನು ನೆನಪಿಸಲಾಗುತ್ತದೆ. `ನಾಳೆ ಪ್ರಳಯವಾಗುವುದು ಖಚಿತವಿದ್ದರೂ ನಿಮ್ಮ ಕೈಯಲ್ಲಿ ಸಸಿ ಇದ್ದರೆ ಅದನ್ನು ನೆಟ್ಟು ಬಿಡಿ’ ಎಂಬ ಪ್ರವಾದಿ(ಸ)ಯ ಪರಿಸರ ಸ್ನೇಹಿ ಸಂದೇಶವನ್ನು ಮಸೀದಿಯಲ್ಲಿ ಸೇರಿರುವ ಜನರಿಗೆ ಮುಟ್ಟಿಸಲಾಗುತ್ತದೆ. ಒಟ್ಟಿನಲ್ಲಿ,

ಈದ್ ಆಚರಣೆಯು ಸಂಪೂರ್ಣವಾಗಿ ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯಗಳಿಂದ ದೂರವಿದ್ದುಕೊಂಡು ಆಹಾರ ಮತ್ತು ಆರಾಧನಾ ಕೇಂದ್ರಿತವಾಗಿ ನಡೆಯುತ್ತಿದೆ. ಪ್ರಾಣಿಬಲಿಯನ್ನೂ ಅಧಿಕೃತ ವಧಾಗೃಹದಲ್ಲಿ ನಡೆಸುವುದರಿಂದ ಮತ್ತು ವಧಾಗೃಹಗಳಲ್ಲಿ ಮಾಲಿನ್ಯ ತಡೆ ವ್ಯವಸ್ಥೆಯನ್ನು ಸಹಜವಾಗಿ ಏರ್ಪಡಿಸಿರುವುದರಿಂದ, ಪರಿಸರಕ್ಕೆ ಹೆಚ್ಚುವರಿ ಹಾನಿ ಉಂಟಾಗುವುದೂ ತಪ್ಪುತ್ತದೆ. ಅಂದಹಾಗೆ,

ಮಿಲಾದುನ್ನಬಿ ಮತ್ತು ಮೊರ‍್ರಂ ಎಂಬ ಎರಡು ಆಚರಣೆಗಳು ಮುಸ್ಲಿಮ್ ಸಮುದಾಯದಲ್ಲಿವೆ. ಇವು ಇಸ್ಲಾಮಿನ ಅಧಿಕೃತ ಹಬ್ಬವಲ್ಲದಿದ್ದರೂ ಇವು ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಕಡೆ ಹಬ್ಬದ ಸ್ವರೂಪದಲ್ಲಿ ಆಚರಿಸಲ್ಪಡುತ್ತಿದೆ. ವಿಶೇಷ ಏನೆಂದರೆ, ಇಸ್ಲಾಮಿನ ಎರಡು ಹಬ್ಬಗಳಂತೆ ಈ ಎರಡರ ಆಚರಣೆಯು ಮಸೀದಿಯಲ್ಲಿ ನಮಾಝ್ ಮತ್ತು ಪ್ರವಚನದೊಂದಿಗೆ ಆರಂಭವಾಗುವುದಿಲ್ಲ. ಎರಡು ಅಧಿಕೃತ ಹಬ್ಬಗಳ ಹಿಂದೆ ದಾನದ ಪರಿಕಲ್ಪನೆ ಇರುವಂತೆ ಮತ್ತು ಕುಟುಂಬ ಸಂಬಂಧ ಏರ್ಪಡಿಸುವ ವಿಧಾನ ಇರುವಂತೆ ಇವುಗಳಿಗೆ ಇಂಥ ನಿರ್ಬಂಧವಿಲ್ಲ. ಇವುಗಳ ಆಚರಣೆಯ ವೇಳೆ, ಹಸಿರು ಧ್ವಜಗಳನ್ನು ಬಳಸುವುದಿದೆ. ಸಾರ್ವಜನಿಕ ಮೆರವಣಿಗೆಯ ವೇಳೆ ಶರಬತ್ತು, ಚಾಕಲೇಟು, ಇನ್ನಿತರ ಪಾನೀಯಗಳನ್ನು ವಿತರಿಸುವುದೂ ಇದೆ. ಇದೇವೇಳೆ, ಪ್ರವಾದಿ ಮೊಮ್ಮಗ ಇಮಾಮ್ ಹುಸೈನ್ ಅವರ ಹತ್ಯೆಯನ್ನು ಖಂಡಿಸಿ ಮತ್ತು ಶೋಕಿಸಿ ನಡೆಯುವ ಮೊರ‍್ರಂ ಆಚರಣೆಯು ಭಾರತದಲ್ಲಿ ಸ್ಥಳೀಯ ಆಚರಣಾ ಪದ್ಧತಿಯನ್ನೂ ಆವಾಹಿಸಿಕೊಂಡು ನಡೆಯುತ್ತಿದೆ. ಪಂಜಾ ಅಥವಾ ಡೋಲಿಯನ್ನು ಹೊತ್ತು ಮೆರವಣಿಗೆ ನಡೆಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಬೆಂಕಿ ನಡಿಗೆ ಮತ್ತು ಕುಣಿತದಂತಹ ಕಲೆಗಳ ಪ್ರದರ್ಶನವೂ ನಡೆಯುತ್ತದೆ. ಇವು ಏನೇ ಇದ್ದರೂ,

ಹಬ್ಬಾಚರಣೆ ಎಂಬುದು ಬಡವ-ಶ್ರೀಮಂತ ಎಂಬ ಭೇದ ಇಲ್ಲದೇ, ಸರ್ವರೂ ಸಾಮೂಹಿಕವಾಗಿ ಸಂತಸ ಪಡುವುದಕ್ಕಿರುವ ಒಂದು ಸಂದರ್ಭ. ಹಬ್ಬಗಳ ಚಾಲಕ ಶಕ್ತಿಯಾಗಿ ಧರ್ಮ ಕೆಲಸ ಮಾಡುವುದರಿಂದ, ಇವುಗಳ ಆಚರಣೆಯು ಪ್ರಕೃತಿನಿಷ್ಠವಾಗಿ ಅಥವಾ ಮಾಲಿನ್ಯ ರಹಿತವಾಗಿ ನಡೆಯಬೇಕಾದುದು ಬಹಳ ಅಗತ್ಯ. ಧರ್ಮ ಮತ್ತು ಪ್ರಕೃತಿ ಬೇರೆ ಬೇರೆ ಅಲ್ಲ. ಪರಿಸರ ನಾಶವನ್ನು ಧರ್ಮಗಳು ಬೋಧಿಸುವುದೂ ಇಲ್ಲ. ಡಿಜೆಗಳು, ಕಿವಿಗಡಚಿಕ್ಕುವ ಪಟಾಕಿಗಳು ಮತ್ತು ಕಣ್ಣು ಕೋರೈಸುವ ಲೈಟಿಂಗ್ಸ್‌ಗಳು ಹಬ್ಬದ ಭಾಗವೆಂದು ಯಾವ ಧರ್ಮಿಷ್ಠರೂ ಹೇಳಿಕೊಳ್ಳುತ್ತಿಲ್ಲ. ಇವೆಲ್ಲವನ್ನೂ ಜನರು ತಂತಮ್ಮ ಅಗತ್ಯ ಮತ್ತು ಆಸಕ್ತಿಯ ಅನುಸಾರ ಹಬ್ಬದ ನೆಪದಲ್ಲಿ ಚಾಲ್ತಿಗೆ ತಂದಿದ್ದಾರೆಯೇ ಹೊರತು ಹಬ್ಬಗಳು ಇವುಗಳನ್ನು ಅವಲಂಬಿಸಿಲ್ಲ. ದೀಪಗಳ ಸಾಲು ಎಂಬ ಅರ್ಥ ಕೊಡುವ ದೀಪಾವಳಿಗೆ ಪಟಾಕಿಯು ಹೊರಗಿನ ಹೇರಿಕೆಯೇ ಹೊರತು, ಒಳಗಿನ ಬೇಡಿಕೆಯಲ್ಲ. ಇಸ್ಲಾಮ್ ಅಂತೂ ತನ್ನ ಎರಡೂ ಅಧಿಕೃತ ಹಬ್ಬಗಳಿಂದ ಪಟಾಕಿಯನ್ನು, ಡಿಜೆಯನ್ನು, ಮೆರವಣಿಗೆಯನ್ನು ಮತ್ತು ಅದ್ದೂರಿ ಅಲಂಕಾರಗಳನ್ನು ನಿಷೇಧಿಸಿದೆ. ಸರಳ ಮತ್ತು ಪ್ರಕೃತಿನಿಷ್ಠ ಸಂಭ್ರಮಕ್ಕೆ ಒತ್ತು ನೀಡಿದೆ. ಬಹುತೇಕ ಮುಸ್ಲಿಮರು ಇವತ್ತಿಗೂ ಈ ನಿಯಮವನ್ನು ಪಾಲಿಸಿಕೊಂಡು ಹಬ್ಬಾಚರಿಸುತ್ತಿದ್ದಾರೆ.

ಕುಡಿಯುವ ನೀರು ಉಸಿರಾಡುವ ಗಾಳಿ ಮತ್ತು ತಿನ್ನುವ ಆಹಾರ ಎಲ್ಲವೂ ಕಲುಷಿತಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಹಬ್ಬಾಚರಣೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಧರ್ಮ ಕಲಿಸದ ಆಚರಣಾ ವಿಧಾನದಿಂದ ದೂರ ನಿಲ್ಲಬೇಕಾಗಿದೆ. ಶಬ್ದ, ವಾಯು ಮತ್ತು ನೀರು ಮಾಲಿನ್ಯದಿಂದ ಮುಕ್ತವಾದ ಹಬ್ಬಾಚರಣೆಯನ್ನು ಧಾರ್ಮಿಕ ವಿದ್ವಾಂಸರು ಪ್ರಚಾರ ಮಾಡ ಬೇಕಾಗಿದೆ.