₹ 5,450 ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ: ಕುಮಾರಸ್ವಾಮಿ ಆರೋಪ

0
1276

ಬೆಂಗಳೂರು: ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಪ್ರದೇಶದಲ್ಲಿ ₹ 5,450 ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಮೈಸೂರು ಮಿನರಲ್ಸ್‌ ಲಿಮೆಟೆಡ್(ಎಂಎಂಎಲ್‌) ಮೂಲಕ ಗಣಿಗಾರಿಕೆ ಗುತ್ತಿಗೆ ಪಡೆದಿರುವ ಕಂಪೆನಿಗಳು ಒಪ್ಪಂದದ ಪ್ರಕಾರ ವರ್ಷಕ್ಕೆ 30 ಲಕ್ಷ ಟನ್ ಅದಿರು ತೆಗೆಯಲು ಅನುಮತಿ ಪಡೆದಿವೆ. ಆದರೆ, 2014–15ರಿಂದ 2016–17ರವರೆಗೆ ಹೆಚ್ಚುವರಿಯಾಗಿ 60,56,440 ಟನ್ ಅದಿರು ತೆಗೆದು ಸಾಗಣೆ ಮಾಡಲಾಗಿದೆ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಎಂಎಂಎಲ್‌ ಅಧಿಕಾರಿಗಳ ತಂಡವೇ ಆಂತರಿಕವಾಗಿ ನಡೆಸಿರುವ ತನಿಖೆಯಿಂದ ಈ ಅಂಶ ಬಯಲಿಗೆ ಬಂದಿದೆ. ತನಿಖಾ ವರದಿಯ ಪ್ರತಿ ಪಡೆದುಕೊಂಡಿದ್ದೇನೆ. ಅದರಲ್ಲಿರುವ ಪ್ರಮುಖ 14 ಪುಟಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೆಪಮಾತ್ರಕ್ಕೆ ವಿನಯ ಕುಲಕರ್ಣಿ ಸಚಿವರಾಗಿದ್ದು, ಮುಖ್ಯಮಂತ್ರಿ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿನಾಥ್ ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಈ ಅಕ್ರಮಗಳಲ್ಲಿ ಅವರ ಪಾತ್ರವೂ ಇದೆ ಎಂದೂ ಆಪಾದಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಯಡಿಯೂರಪ್ಪ ಚೆಕ್‌ನಲ್ಲಿ ಹಣ ಪಡೆದ ಕಾರಣಕ್ಕೆ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಸಿದ್ದರಾಮಯ್ಯ ಬುದ್ದಿವಂತರಿದ್ದು, ತಾವು ಸಿಕ್ಕಿಕೊಳ್ಳದಂತೆ ಎಚ್ಚರಿಕೆಯಿಂದ ಈ ಅಕ್ರಮಗಳನ್ನು ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿಲ್ಲ. ನಿರಾಸೆಯಾಗಿರುವ ಕಾರಣ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಸಮಯ ವ್ಯರ್ಥ ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ ಎಂದರು.

‘ಆದರೆ, ಮುಖ್ಯಮಂತ್ರಿ ನನ್ನನ್ನು ಹಿಟ್ ಅಂಡ್ ರನ್‌ ಎಂದು ಪದೇ ಪದೇ ಟೀಕಿಸುತ್ತಿದ್ದಾರೆ. ಕಿಕ್‌ಬ್ಯಾಕ್ ಪಡೆದು ಸುಮ್ಮನಾಗಿದ್ದೇನೆ ಎಂದು ಬಿಜೆಪಿ ಬೆಂಬಲಿಗರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಣಕುತ್ತಿದ್ದಾರೆ. ಹೀಗಾಗಿ ದಾಖಲೆಗಳ ಸಹಿತ ಆರೋಪ ಮಾಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿ ಬಳ್ಳಾರಿ ತನಕ ಪಾದಯಾತ್ರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಬೇಕು. ಕೂಡಲೇ ತನಿಖೆಗೆ ಆದೇಶಿಸಬೇಕು, ಯಾವ ತನಿಖೆ ಎಂಬುದನ್ನು ಅವರೇ ತೀರ್ಮಾನಿಸಲಿ ಎಂದು ಆಗ್ರಹಿಸಿದರು.